ಮೂಳೆ ಸಮಸ್ಯೆ:ಆಕರಕೋಶ ಚಿಕಿತ್ಸೆ

7

ಮೂಳೆ ಸಮಸ್ಯೆ:ಆಕರಕೋಶ ಚಿಕಿತ್ಸೆ

Published:
Updated:
ಮೂಳೆ ಸಮಸ್ಯೆ:ಆಕರಕೋಶ ಚಿಕಿತ್ಸೆ

ಬೆಂಗಳೂರು: ಮೂಳೆಗಳಿಗೆ ರಕ್ತ ಪರಿಚಲನೆ ಸ್ಥಗಿತಗೊಳ್ಳುವುದರಿಂದ ಉಂಟಾಗುವ `ಅವಾಸ್ಕುಲರ್ ನೆಕ್ರೋಸಿಸ್~ ಎಂಬ ಆರೋಗ್ಯ ಸಮಸ್ಯೆಗೆ ರೋಗಿಯ ಆಕರಕೋಶದಿಂದಲೇ (ಸ್ಟೆಮ್ ಸೆಲ್) ಪರಿಹಾರ ಒದಗಿಸುವ ಪರಿಣಾಮಕಾರಿ ಚಿಕಿತ್ಸೆಯನ್ನು ನಗರದ `ಲೈವ್ 100 ಹಾಸ್ಪಿಟಲ್~ ಅಭಿವೃದ್ಧಿಪಡಿಸಿದೆ.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಆಕರಕೋಶ ಚಿಕಿತ್ಸೆಯ ವಿವರ ನೀಡಿದ ಆಸ್ಪತ್ರೆಯ ಅಧ್ಯಕ್ಷ ಡಾ.ಎಚ್.ಎನ್.ನಾಗರಾಜ್ ಅವರು, `ಈವರೆಗೆ ಆರು ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ಆಕರ ಕೋಶದ ಸುಧಾರಿತ ಚಿಕಿತ್ಸೆ ನೀಡುತ್ತಿರುವ ವಿಶ್ವದ ಮೊಟ್ಟ ಮೊದಲ ಆಸ್ಪತ್ರೆ ನಮ್ಮದು~ ಎಂದರು.`ಈ ಚಿಕಿತ್ಸೆ ಬಹಳ ಸರಳವಾಗಿದ್ದು, ರಕ್ತಸ್ರಾವ ಅಥವಾ ಗಾಯ ಉಂಟಾಗುವುದಿಲ್ಲ. ರೋಗಿಯ ಮೂಳೆ ಮಜ್ಜೆಯನ್ನು ಹೊರ ತೆಗೆದು, ಅದನ್ನು ವಿಶೇಷ ಪ್ರಯೋಗಾಲಯದಲ್ಲಿ ಸಂಸ್ಕರಿಸಲಾಗುವುದು. ಬಳಿಕ ಮೂಳೆ ಮಜ್ಜೆಯ ಆಕರ ಕೋಶಗಳನ್ನು ಕೆಂಪು ರಕ್ತ ಕಣಗಳು ಮತ್ತು ರಕ್ತದ ಪ್ಲಾಸ್ಮಾದಿಂದ ಬೇರ್ಪಡಿಸಲಾಗುವುದು. ಹೀಗೆ ಪ್ರತ್ಯೇಕಿಸಿದ ಆಕರ ಕೋಶಗಳನ್ನು ಸಮಸ್ಯಾತ್ಮಕ ಮೂಳೆಯ ಭಾಗಕ್ಕೆ ವಿಶೇಷ ಸಾಧನದಿಂದ ನೇರವಾಗಿ ಇಂಜೆಕ್ಟ್ ಮಾಡಲಾಗುವುದು~ ಎಂದು ಅವರು ತಿಳಿಸಿದರು.`ಆಕರ ಕೋಶಗಳಿಗೆ ಸ್ವಯಂ ನವೀಕರಣ ಮತ್ತು ಪ್ರತ್ಯೇಕಗೊಳ್ಳುವ ಗುಣಗಳಿವೆ. ಈ ಗುಣ ಸ್ವಭಾವದಿಂದಾಗಿ ಆಕರಕೋಶವು ಮೆದುಳಿನ ಜೀವಕೋಶ, ಕೆಂಪು ರಕ್ತ ಕಣ, ಸ್ನಾಯು ಜೀವ ಕೋಶ ಮತ್ತು ಇಡೀ ಅಂಗವನ್ನು ರೂಪಿಸಲು ಸಹಕಾರಿಯಾಗಿದೆ. ಆಕರ ಕೋಶದ ಚಿಕಿತ್ಸೆಯು ಯುವ ರೋಗಿಗಳಿಗೆ ಸೂಕ್ತ ಮತ್ತು ಸುರಕ್ಷಿತ ಪರ್ಯಾಯ ಚಿಕಿತ್ಸೆಯಾಗಿದೆ~ ಎಂದು ಅವರು ವಿವರಿಸಿದರು.ಚಿಕಿತ್ಸೆ ಪಡೆದ ಐಶ್ವರ್ಯ, ಜಯದೀಪ್ ಮೊದಲಾದವರು ಮಾತನಾಡಿ, `ನಮಗೆ ಕೀಲು ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಬೇರೆ ಆಸ್ಪತ್ರೆಗಳ ವೈದ್ಯರು ಸಲಹೆ ನೀಡಿದ್ದರು. ಆದರೆ ಈ ಆಕರ ಕೋಶದ ಚಿಕಿತ್ಸೆಯಲ್ಲಿ ಶಸ್ತ್ರಚಿಕಿತ್ಸೆ ಇಲ್ಲ. ಚಿಕಿತ್ಸೆಗೆ ಒಳಗಾದ ಮೇಲೆ ಕೀಲು ನೋವಿನಿಂದ ನಮಗೆ ಮುಕ್ತಿ ಸಿಕ್ಕಿದೆ~ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry