ಸೋಮವಾರ, ಮೇ 25, 2020
27 °C

ಮೂವತ್ತಾರನೆ ಕೊಠಡಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಅಪ್ಪನ ಜೊತೆಯಲ್ಲಿ ಬಾಲ್ಯದಲ್ಲಿ ಕಂಡ ಅನೇಕ ಚಲನ ಚಿತ್ರಗಳಲ್ಲಿ  36th Chamber of shaolin  ಎಂಬ ಚೀನಾದ ಆಂಗ್ಲ ಚಿತ್ರ ಅವಿಸ್ಮರಣೀಯವಾದದ್ದು. ನಾನಾಗ ಹತ್ತನೆಯ ತರಗತಿಯಲ್ಲಿದ್ದೆ. ಸುಮಾರು ಮೂವತ್ತೆರಡು ವರ್ಷಗಳ ಹಿಂದಿನ ಮಾತು. ಆದರೂ ಈ ಚಿತ್ರದ ಪ್ರತಿಯೊಂದು ಸೂಕ್ಷ್ಮ ವಿಷಯವೂ ನನ್ನ ನೆನಪಿನಲ್ಲಿ ಇನ್ನೂ ಅಚ್ಚಳಿಯದೆ ಹೀಗೇ ಉಳಿದಿದೆ ಎಂದರೆ ನಿನ್ನೆ - ಮೊನ್ನೆಯದನ್ನೆಲ್ಲ ಮರೆವಿನ ಶಿಕಾರಿಯನ್ನಾಗಿಸುತ್ತಿರುವ ಇಂದಿನ ನನಗೇ ಆಶ್ಚರ್ಯವಾಗುತ್ತದೆ! ಅಪ್ಪನ ಒಡನಾಟ ಆ ದಿನಗಳ ಚಿತ್ರಗಳ ಸೊಗಸು ಹಾಗೂ ಬಾಲ್ಯದ ಸವಿ ನೆನಪುಗಳೆಲ್ಲ ಹಳೆಯ ಬೆಂಗಳೂರಿನ ಹಾಗೆ - ಹಚ್ಚ ಹಸಿರು!ಚಿತ್ರದ ನಾಯಕ ಸಾನ್‌ದೆ ಕ್ರೂರಿಗಳಾದ ಮಂಚೂಸ್ ಆಡಳಿತಾಧಿಕಾರಿಗಳಿಂದ ತನ್ನ ಕುಟುಂಬದವರೆಲ್ಲ ಹತ್ಯೆಯಾಗುವುದನ್ನು ಕಂಡು ಕ್ರೋಧಿತನಾಗುತ್ತಾನೆ. ಆದರೆ, ಅವರೊಡನೆ ಹೋರಾಡಲು ಬರದ ಆತ ಅಷ್ಟೇ ಅಸಹಾಯಕ ಕೂಡ. ಶಾಲಿನ್ ಎಂಬಲ್ಲಿರುವ ದೇವಸ್ಥಾನವೊಂದರಲ್ಲಿ ಬೌದ್ಧ ಗುರುಗಳು ಕುಂಗ್‌ಫೂ ಹೇಳಿಕೊಡುತ್ತಾರೆಂದು ಬಲ್ಲ ಆತ ಆ ದೇವಸ್ಥಾನವನ್ನು ಕಳ್ಳತನದಿಂದ ಒಳಹೊಕ್ಕು ಅಲ್ಲಿಯ ವಿದ್ಯಾರ್ಥಿಯಾಗುತ್ತಾನೆ. ಕುಂಗ್‌ಫೂ ಕಲಿತು ತನ್ನ ಶತ್ರುಗಳನ್ನೆಲ್ಲ ದಮನಿಸಬೇಕೆಂಬ ಎಲ್ಲ ಚಿತ್ರಗಳ ನಾಯಕನ ಉದ್ದೇಶವೇ ಅವನದೂ ಕೂಡ.ಇಂತಹ ಮಿಕ್ಕೆಲ್ಲ ಚಿತ್ರಗಳಲ್ಲಿ ನಾಯಕನ ತರಬೇತಿ ದೃಶ್ಯಗಳು ಒಂದೆರಡು ಮಾತ್ರ. ಮಿಕ್ಕಂತೆ ಕಲಿಕೆಗೆ ವಿರುದ್ಧವಾಗಿ ಹಾಗೂ ಅವನ ದೇಹಭಾರಕ್ಕೆ ಒಗ್ಗದ ನಂಬಲಸಾಧ್ಯವಾದ ಹೋರಾಟದ ದೃಶ್ಯಗಳು ಜೊತೆಯಲ್ಲೇ ಕತೆಗೆ ಪೂರಕವಲ್ಲದಿದ್ದರೂ ತನ್ನ ಪ್ರೇಯಸಿಯ ಜೊತೆಗೂಡಿ ಅವನ ಮರ ಸುತ್ತುವ ಹಾಡುಗಳೇ ಪ್ರಾಮುಖ್ಯ! ಆದರೆ ನಮ್ಮ ಕಥಾ ಚಿತ್ರ ಇಲ್ಲೇ ಹೊರತಾಗಿ ನಿಲ್ಲುವುದು. ಶಾಲಿನ್ ದೇವಸ್ಥಾನದಲ್ಲಿ ಕುಂಗ್‌ಫೂ ಕಲಿಯುವುದೆಂದರೆ ನೇರವಾಗಿ ಕತ್ತಿ ಹಿಡಿದು ಹೋರಾಡುವುದಲ್ಲ.ಎಂಟನೇ ಮಹಡಿಯಂದ ಕೆಳಕ್ಕೆ ಜಿಗಿದು ಚೀರುವುದಲ್ಲ. ಅದೊಂದು ಸುದೀರ್ಘವಾದ ದೇಹ ಹಾಗೂ ಮನಸ್ಸುಗಳೆರಡರ ಪಕ್ವತೆಯ ಪಯಣ. ಅಲ್ಲಿರುವುದು ಒಟ್ಟಾರೆ ಮೂವತ್ತೈದು ಕೊಠಡಿಗಳು. ಒಂದೊಂದರಲ್ಲಿ ಒಂದೊಂದು ಪಾಠ. ಹಂತ ಹಂತವಾಗಿ ಅವನ ದೇಹ ಹಾಗೂ ಮನಸ್ಸು ಕುಂಗ್‌ಫೂ ಕಲಿಯುವತ್ತ ರೂಪುಗೊಂಡಾಗ ಮಾತ್ರವೇ ಅವನಿಗೆ ನಿಜವಾದ ಹೋರಾಟದ ಶಿಕ್ಷಣ. ವಿವಿಧ ಅಸ್ತ್ರಗಳ ಪರಿಚಯ.ದೇವಸ್ಥಾನ ಹೊಕ್ಕ ಸಾನ್‌ದೇ ಹಲವಾರು ತಿಂಗಳುಗಳ ಕಾಲ ಕೇವಲ ಅಲ್ಲಿಯ ಅಂಗಳ ಗುಡಿಸುತ್ತಾನೆ. ನೆಲ ಸಾರಿಸುತ್ತಾನೆ. ಅಡುಗೆ ಮನೆಯಲ್ಲಿ ಸಹಾಯಕನಾಗಿ ದುಡಿಯುತ್ತಾನೆ. ಇವೆಲ್ಲದರಿಂದ ತೃಪ್ತಿ ಹೊಂದಿದ, ಅವನ ಮನೋಇಂಗಿತವನ್ನು ಅಲ್ಲಿಯ ಗುರುಗಳು ಅರಿತಾಗಲೇ ಅವನಿಗೆ ಮೊದಲನೆಯ ಕೊಠಡಿಯಲ್ಲಿ ಪ್ರವೇಶ. ಉದ್ದೇಶ ದೃಢವಾದಾಗ ಮಾತ್ರವೇ ಷೇರು ಮಾರುಕಟ್ಟೆಯಲ್ಲಿ ಕಂಪೆನಿಗಳಿಗೆ ಪ್ರವೇಶ ಎಂಬಂತೆ!ಅಲ್ಲಿಂದ ಶುರುವಾಗುತ್ತದೆ ಅವನ ಪಯಣ. ಚಿತ್ರದುದ್ದಕ್ಕೂ ಅಲ್ಲಿನ ಅನೇಕ ಕೊಠಡಿಗಳ ಮಹತ್ವದ ಪರಿಚಯವಾಗುತ್ತದೆ. ಅಲ್ಲಿ ಅವನು ಕಲಿಯುವ ಪಾಠಕ್ಕೂ ಹಾಗೂ ಅವನ ಅಂತಿಮ ಹೋರಾಟದ ಧ್ಯೇಯಕ್ಕೂ ಮೇಲ್ನೋಟಕ್ಕೆ ಅಜಗಜಾಂತರವಾದರೂ, ಇವೆಲ್ಲ ಸೂಕ್ಷ್ಮವಾದ ಸ್ತರದಲ್ಲಿ ಒಂದಕ್ಕೊಂದು ಪೂರಕವೆಂಬುದು ಅವನು ಕಡೆಯಲ್ಲಿ ಹೋರಾಟಕ್ಕಿಳಿದಾಗಲೇ ಸ್ಪಷ್ಟವಾಗುವುದು. ಕಣ್ಣಿಗೆ ಕಾಣದ ಅಡಿಪಾಯದ ಬಲದ ಮೇಲೆಯೇ ವಿಶ್ವದ ಅತಿ ಎತ್ತರದ ಕಟ್ಟಡಗಳು ಅಲುಗಾಡದೆ ನಿಂತಿರುವುದೆಂಬುದು ಸುಲಭದಲ್ಲಿ ಗೋಚರಿಸದ ಸತ್ಯ!ಹೀಗೊಂದು ಪಾಠ. ಊಟದ ಮನೆಗೆ ಹೋಗುವ ಮುನ್ನ ಅಲ್ಲೊಂದು ನೀರಿನ ದೊಡ್ಡ ಹಳ್ಳವಿದೆ. ಆ ನೀರಿನಲ್ಲಿ ಅನೇಕ ಪುಟ್ಟ ಪುಟ್ಟ ಮರಗಳ ದಿಮ್ಮಿಗಳು ಹಗ್ಗದಿಂದ ಕಟ್ಟಿ ತೇಲಿಬಿಟ್ಟಿದ್ದಾರೆ. ವಿದ್ಯಾರ್ಥಿಗಳು ಊಟದ ಮನೆಗೆ ಹೋಗಬೇಕಾದರೆ ಆ ತೇಲುತ್ತಿರುವ ದಿಮ್ಮಿಗಳ ಮೇಲೆ ಕಾಲಿಟ್ಟು ಜಿಗಿದು ಹಳ್ಳದ ಆ ದಡ ಸೇರಬೇಕು. ದೇಹದ ಭಾರಕ್ಕೆ ಮರದ ದಿಮ್ಮಿ ನೀರಿನೊಳಕ್ಕೆ ಸರಿದಾಗ ಹಾಗೊಮ್ಮೆ ಜಾರಿ ನೀರಿನಲ್ಲಿ ಬಿದ್ದರೆ ಉಟ್ಟ ಬಟ್ಟೆಯೆಲ್ಲ ಒದ್ದೆ. ಹಾಗಾದಾಗ ಒದ್ದೆ ಬಟ್ಟೆಗಳನ್ನು ಒಣಗಿಸಿಕೊಂಡ ನಂತರವೇ ಅವನಿಗೆ ಊಟದ ಮನೆಯಲ್ಲಿ ಪ್ರವೇಶ. ಅಷ್ಟರ ಹೊತ್ತಿಗೆ ಊಟವೆಲ್ಲ ಖಾಲಿ. ಜಾರಿ ಬಿದ್ದವನಿಗೆ ರಾತ್ರಿಯೆಲ್ಲ ಉಪವಾಸವೇ ಗತಿ!ಊಟ ಬೇಕು ಎನ್ನುವುದಾದರೆ ಮೊದಲು ಈ ದಿಮ್ಮಿಗಳ ಮೇಲೆ ಕಾಲಿಟ್ಟು ವೇಗವಾಗಿ ಹಾಗೂ ಹಗುರವಾಗಿ ಹಾರುವುದನ್ನು ಕಲಿಯಬೇಕು. ಸೇನ್‌ದೇ ಇದರಲ್ಲಿ ಉತ್ತೀರ್ಣನಾಗುತ್ತಿದ್ದಂತೆಯೇ ಅಲ್ಲಿನ ಗುರುಗಳು ಈಗ ದಿಮ್ಮಿಗಳನ್ನು ಹಿಡಿದಿಟ್ಟಿರುವ ಹಗ್ಗವನ್ನು ಕತ್ತರಿಸುತ್ತಾರೆ. ಈಗ ನೀರಿನಲ್ಲಿ ಅನೇಕ ಸಣ್ಣಪುಟ್ಟ ದಿಮ್ಮಿಗಳು ತೇಲುತ್ತಿವೆ. ಇವುಗಳ ಮೇಲೆ ಕಾಲಿಟ್ಟು ನೀರಿನಲ್ಲಿ ಬೀಳದಂತೆ ಹಾರಬೇಕಾದರೆ ಸಾನ್‌ದೇ ಮತ್ತಷ್ಟೂ ಹಗುರವಾಗಬೇಕು. ಇನ್ನಷ್ಟೂ ಚುರುಕಾಗಬೇಕು. ಪಾಠ ಮುಂದುವರೆಯುತ್ತದೆ. ಕಡೆಯಲ್ಲಿ ಸಾನ್‌ದೇ ಇದರಲ್ಲಿ ಸಂಪೂರ್ಣ ಪರಿಣತಿ ಹೊಂದಿದ ಮೇಲೆಯೇ ಅವನಿಗೆ ಅಲ್ಲಿಂದ ಮುಕ್ತಿ. ಮುಂದಿನ ಕೊಠಡಿಗೆ ಬಡ್ತಿ.ಇನ್ನೊಂದು ಕೊಠಡಿಯಲ್ಲಿ ಸಾನ್‌ದೇ ನಿಂತಿದ್ದಾನೆ. ಅವನ ಎರಡೂ ಕೆನ್ನೆಗಳ ಪಕ್ಕದಲ್ಲೇ ಕೆಂಡ ಕಾರುತ್ತ ಹೊಗೆಯಾಡುತ್ತಿರುವ ಎರಡು ಕೊಳ್ಳಿಗಳನ್ನು ಇಟ್ಟಿದ್ದಾರೆ. ಸಾನ್‌ದೇ ಮುಂದೆಯೇ ಗುರುಗಳು ಕುಳಿತು ಕೈಯೊಳಗೆ ಹಿಡಿದ ದೀಪಸ್ತಂಭವನ್ನು ಅತ್ತಿಂದಿತ್ತ, ಇತ್ತಿಂದತ್ತ ಅಲ್ಲಾಡಿಸುತ್ತಿದ್ದಾರೆ. ಸಾನ್‌ದೇ ತನ್ನ ಕಣ್ಣುಗಳಿಂದ ತನ್ನ ಮುಂದೆ ಗುರುಗಳು ಅಲ್ಲಾಡಿಸುತ್ತಿರುವ ದೀಪವನ್ನೇ ಹಿಂಬಾಲಿಸುತ್ತಿರಬೇಕು.ಹಾಗೆ ಮಾಡುವಾಗ ಹಾಗೊಮ್ಮೆ ಅವನ ಮುಖವೂ ತಿರುಗಿದರೆ ಪಕ್ಕದಲ್ಲೇ ಇರುವ ಉರಿವ ಕೊಳ್ಳಿಗಳಿಂದ ಅವನ ಕೈಗಳು ಸುಡುತ್ತವೆ. ಗುರುಗಳು ಮನಸೋ ಇಚ್ಛೆ ದೀಪವನ್ನು ಅಲ್ಲಾಡಿಸುತ್ತಿದ್ದಾರೆ. ಒಮ್ಮೆ ಹೀಗೆ. ಒಮ್ಮೆ ಹಾಗೆ. ಒಮ್ಮೊಮ್ಮೆ ದಿಢೀರನೆ ಚಲನೆಯಲ್ಲೇ ಒಂದು ಕಡೆ ನಿಲ್ಲಿಸಿ ಬಿಡುತ್ತಾರೆ ಕೂಡ. ತಕ್ಷಣವೇ ಧಿಕ್ಕಂತ ಬಿರುಸಿನಲ್ಲಿ ಮತ್ತೆ ಅಲ್ಲಾಡಿಸುತ್ತಾರೆ. ಸಾನ್‌ದೇ ಮಾತ್ರ ತನ್ನ ಕತ್ತನ್ನು ತಿರುಗಿಸದೆ ಮುಖವನ್ನು ಹೊರಳಿಸದೆ ತನ್ನ ಕಣ್ಣಿನ ಗುಡ್ಡೆಗಳನ್ನು ಮಾತ್ರ ನಿಯಂತ್ರಿಸುತ್ತ ಮುಂದಿನ ಬೆಳಕನ್ನೇ ಅನುಸರಿಸಬೇಕು.ಇವೆಲ್ಲ ಕೆಲಸಕ್ಕೆ ಬಾರದ, ಲಾಭವನ್ನು ಹೆಚ್ಚಳಗೊಳಿಸದೆ ವ್ಯರ್ಥ ಕ್ರಮಗಳೆಂದು ಪರಿಗಣಿಸಬೇಡಿ. ಚಿತ್ರದ ಅಂತಿಮ ಸನ್ನಿವೇಶಗಳಲ್ಲೊಂದು ಮನೆಯ ಮುಂದಿರುವ ನೀರಿನ ತೊಟ್ಟಿಯ ಮೇಲಿರುವ ಬಿದಿರಿನ ಗಂಟೊಂದರ ಮೇಲೆ ಸಾನ್‌ದೇ ನಿಂತು ತನ್ನನ್ನು ಸುತ್ತುವರೆದ ಮಂಚೂಸ್ ಪಡೆಯೊಡನೆ ಸೆಣಸುತ್ತಿದ್ದಾನೆ.ವೈರಿಯೊಬ್ಬ ಈಗ ಬಿದರಿನ ಕಡ್ಡಿಗಳನ್ನು ಹಿಡಿದಿಟ್ಟಿರುವ ಹಗ್ಗವನ್ನು ತುಂಡರಿಸುತ್ತಾನೆ. ಸಾನ್‌ದೇ ತಕ್ಷಣವೇ ತನ್ನ ದೇಹ ಭಾರವನ್ನು ನಿಯಂತ್ರಿಸಿಕೊಳ್ಳುತ್ತ ಬಿಡಿಬಿಡಿಯಾದ ಸಪೂರವಾದ ಬಿದಿರಿನ ಕಡ್ಡಿಗಳ ಮೇಲೆಯೇ ನಿಂತು ಸಮತೋಲನ ಸಾಧಿಸುತ್ತಾನೆ. ಅವನು ಕೆಳಗೆ ಬೀಳಬಹುದೆಂದು ಎಣಿಸಿದ್ದ ವೈರಿ ಹೃದಯದಲ್ಲಿ ಈಗ ಸಣ್ಣದಾದ ಕಂಪನ ಕೇಳಿ ಬರುತ್ತಿದೆ. ಸಾನ್‌ದೇ ಮಾತ್ರ ತನ್ನನ್ನು ಸುತ್ತುವರೆಯುತ್ತಿರುವ ಒಬ್ಬೊಬ್ಬರನ್ನೂ ಹಾಗೂ ಅವರ ಚಟುವಟಿಕೆಗಳನ್ನೂ ತನ್ನ ಮುಖ ತಿರುಗಿಸದೆಯೇ ಕಣ್ಣು ಗುಡ್ಡೆಗಳನ್ನು ಹೊರಳಾಡಿಸುತ್ತ ಗೊತ್ತು ಮಾಡಿಕೊಳ್ಳುತ್ತಾನೆ. ಅವರ ಪ್ರಹಾರವನ್ನು ಎದುರಿಸುತ್ತಾನೆ. ಅವರನ್ನು ಸೋಲಿಸುತ್ತಾನೆ.ಈ ರೀತಿಯ ತರಬೇತಿ ಹೊಂದುವ ಸಾನ್‌ದೇ ಶಾಲಿನ್‌ನ ಮೂವತ್ತೈದು ಕೊಠಡಿಗಳನ್ನು ದಾಟಿ ನಿಂತಾಗ ತನ್ನದೇ ವೈಯಕ್ತಿಕವಾದ ಮೂವತ್ತಾರನೇ ಕೊಠಡಿಯೊಂದನ್ನು ಸೃಷ್ಟಿ ಮಾಡುತ್ತಾನೆ. ಹೊಸತೊಂದನ್ನು ಹುಟ್ಟು ಹಾಕುತ್ತಾನೆ. ತನ್ನನ್ನು ತಯಾರು ಮಾಡಿದ ಶಾಲಿನ್ ದೇವಸ್ಥಾನಕ್ಕೆ ತನ್ನದೇ ಸ್ವಂತ ಆವಿಷ್ಕಾರವನ್ನು ಉಡುಗೊರೆಯಾಗಿ ನೀಡಿ ತಾನೂ ಸಾರ್ಥಕತೆಯನ್ನು ಹೊಂದುತ್ತಾನೆ.ಯಾರೇ ಆಗಲಿ (ಕಂಪನಿ ಅಥವಾ ವ್ಯಕ್ತಿ) ತ(ನ್ನ)ಮ್ಮ ಉದ್ದೇಶಗಳನ್ನೂ ಹಾಗೂ ಧ್ಯೇಯವನ್ನು ಹಣಗಳಿಕೆಯ ಏಕಮೇವ ಚಟುವಟಿಕೆಯಲ್ಲಿ ಮಾತ್ರವೇ ಕೇಂದ್ರೀಕರಿಸದೆ ಅದಕ್ಕೆ ಪೂರಕವಾದ ಎಲ್ಲ ಆರೋಗ್ಯಕರ ವಿಷಯಗಳಲ್ಲೂ ತೊಡಗಿಸಿ ಕೊಳ್ಳುತ್ತಾರೋ, ಅವರಿಗೆಲ್ಲ ಹಣಗಳಿಕೆ ಕೇಳದೆಯೇ ಬಂದೊದಗುತ್ತದೆ. ಉದಾಹರಣೆಗೆ ನೌಕರರ ಸಂಪೂರ್ಣ ತರಬೇತಿ ಇರಬಹುದು ಅಥವಾ ತಂತ್ರಾಂಶವೊಂದನ್ನು ರಚಿಸುವ ಮುನ್ನ ಅದರ ಪ್ರಲೇಖನವನ್ನು (documentation) ಸಂಗ್ರಹಿಸಿಡುವಂತಹ ಮೂಲಭೂತ ಶ್ರದ್ಧೆ ಇರಬಹುದು. ಮೇಲ್ನೋಟಕ್ಕೆ ಇವೆಲ್ಲ ಕಾಲ ವ್ಯಯದ ಖರ್ಚಿನ ಚಟುವಟಿಕೆಗಳಂತೆ ತೋರಿಬಂದರೂ ಅಂತಿಮದಲ್ಲಿ ಇವುಗಳೇ ಪ್ರತಿಯೊಬ್ಬ ನೌಕರನನ್ನೂ ಸಾನ್‌ದೇನ ಹಾಗೆ ಕ್ರಿಯಾತ್ಮಕಗೊಳಿಸುತ್ತದೆ.ತಮ್ಮದೇ ಆದ ಮೂವತ್ತಾರನೇ ಕೊಠಡಿಯೊಂದನ್ನು ಸೃಷ್ಟಿಸುವತ್ತ ಪ್ರೇರೇಪಿಸುತ್ತದೆ ಕೂಡ. ಇವೆಲ್ಲವುಗಳಿಂದ ನೌಕರನಿಗಿಂತ ಲಾಭ ಕಂಪೆನಿಯದೇ ತಾನೆ? ಇದನ್ನು ಬೋರ್ಡ್‌ರೂಮಿನ ಮಂದಿ ಮೊದಲೇ ಅರಿತುಕೊಂಡುಬಿಟ್ಟರೆ ಅವರೆಲ್ಲ ಕಡೆಯಲ್ಲಿ ಜಾಣರಂತೆ ತೋರಿಬರುವುದಂತೂ ಖಂಡಿತ!ಅಂದ ಹಾಗೆ ನಿಮ್ಮಲ್ಲಿ ಯಾರಾದರೂ ಗಾರ್ಡನ್ ಲಿಯು ನಟಿಸಿರುವ ಈ ಅಮೋಘ ಚಲನ ಚಿತ್ರವನ್ನು ನೋಡಿಲ್ಲವಾದರೆ ಇಂದೇ ಇದರ ಪ್ರತಿ ತಂದು ಮನೆಯಲ್ಲಿ ಎಲ್ಲರೊಂದಿಗೆ ಕುಳಿತು ನೋಡಿ ಆನಂದಿಸಿ. ಬೋರ್ಡ್‌ರೂಮಿನ ಸುತ್ತಮುತ್ತಲಿನ ನಿಮ್ಮ ಸ್ನೇಹಿತರಿಗೂ ತೋರಿಸಿ. ಇದರಲ್ಲಿ ಎಲ್ಲರಿಗೂ ಒಂದೊಂದು ಪಾಠವಿರುವುದಂತೂ ಗ್ಯಾರಂಟಿ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.