ಮೂವರಿಗೂ ಸತ್ವ ಪರೀಕ್ಷೆ, ಸವಾಲು

7

ಮೂವರಿಗೂ ಸತ್ವ ಪರೀಕ್ಷೆ, ಸವಾಲು

Published:
Updated:
ಮೂವರಿಗೂ ಸತ್ವ ಪರೀಕ್ಷೆ, ಸವಾಲು

ಬಳ್ಳಾರಿ: ಇದೊಂದು ಸತ್ವಪರೀಕ್ಷೆ. ಪಕ್ಷದಲ್ಲಿ ಪ್ರಭಾವಿಯಾಗಿದ್ದರೂ ಕಡೆಗಣನೆಗೆ ಒಳಗಾದ ಮಾಜಿ ಸಚಿವ ಬಿ. ಶ್ರೀರಾಮುಲು, `ಸ್ವಾಭಿಮಾನ~ದ ಹೆಸರಿನಲ್ಲಿ ರಾಜೀನಾಮೆ ನೀಡಿ, ಇದೀಗ ಗೆದ್ದೇ ತೀರಬೇಕೆಂಬ ಛಲದೊಂದಿಗೆ ಉಪ ಚುನಾವಣೆಯ ಕಣಕ್ಕೆ ಧುಮುಕಿದ್ದಾರೆ.ಶ್ರೀರಾಮುಲು ಮತ್ತು ರೆಡ್ಡಿ ಸಹೋದರರಿಂದಾಗಿಯೇ ಜಿಲ್ಲೆಯಾದ್ಯಂತ ಆಳವಾಗಿ ಇಳಿದಿರುವ ತನ್ನ ಪ್ರಬಲ ಬೇರುಗಳು ಅವರ ನಿರ್ಗಮನದಿಂದಾಗಿ ಸಡಿಲವಾಗದಂತೆ ನೋಡಿಕೊಳ್ಳುವ ಉತ್ಕಟ ಇಚ್ಛೆಯೊಂದಿಗೆ ಬಿಜೆಪಿ ತನ್ನೆಲ್ಲ ಶಕ್ತಿಯನ್ನು ಈ ಚುನಾವಣೆಗೆ ವಿನಿಯೋಗಿಸಿದೆ. ಜೊತೆಗೆ, ಗೆಲುವಿಗೆ ಬೇಕಾದ ತಂತ್ರಗಾರಿಕೆಯೊಂದಿಗೆ ಯುದ್ಧಕ್ಕೆ ಸನ್ನದ್ಧವಾಗಿದೆ. ಆಡಳಿತಾರೂಢ ಬಿಜೆಪಿ ಮುಖಂಡರು ಕೆಲವು ದಿನಗಳಿಂದ ಕ್ಷೇತ್ರದಲ್ಲೇ ಬಿಡಾರ ಹೂಡಿ ಪ್ರತಿಷ್ಠೆಯನ್ನೇ ಪಣಕ್ಕಿಟ್ಟಿದ್ದಾರೆ.ಅಕ್ರಮ ಗಣಿಗಾರಿಕೆಯನ್ನು ಬೇರು ಸಮೇತ ಕಿತ್ತೆಸೆಯಬೇಕೆಂಬ ಕೂಗಿನೊಂದಿಗೆ,  ಕಳೆದ ವರ್ಷ ಬೆಂಗಳೂರಿನಿಂದ ಅಬ್ಬರದಲ್ಲೇ ಪಾದಯಾತ್ರೆ ಮಾಡಿ, ರಾಷ್ಟ್ರದ ಗಮನ ಸೆಳೆದ ಕಾಂಗ್ರೆಸ್‌ಗೆ ಇಲ್ಲಿ ಕಳೆದುಹೋಗಿರುವ ಅಧಿಪತ್ಯವನ್ನು ಪುನರ್ ಪ್ರತಿಷ್ಠಾಪಿಸುವ ಇರಾದೆ.ಮೂವರ ಪಾಲಿಗೆ ಇದು ಸತ್ವಪರೀಕ್ಷೆ. ಅಷ್ಟೇ ಅಲ್ಲ, ಪ್ರತಿಷ್ಠೆಯ ಪ್ರಶ್ನೆ. ಅನ್ಯ ಪಕ್ಷದವರಿಗೆ ಗಾಳ ಹಾಕಿ, ಉಪ ಚುನಾವಣೆಗಳನ್ನು ಎದುರಿಸುತ್ತ ಬಂದಿರುವ ಆಡಳಿತಾರೂಢ ಬಿಜೆಪಿ, ಆಲದ ಮರದಂತಿದ್ದರೂ ತನ್ನ ಬುಡದಲ್ಲಿ ಬೇರೊಬ್ಬರ ಸಾಮ್ರಾಜ್ಯದ ಮರ ಬೆಳೆಯಲು ಬಿಟ್ಟಿರುವ ಕಾಂಗ್ರೆಸ್, ಅಕ್ರಮ ಗಣಿಗಾರಿಕೆ  ಆರೋಪದ ಲೋಕಾಯುಕ್ತ ವರದಿ, ಸಿಬಿಐ ತನಿಖೆ, ಸ್ನೇಹಿತ ಜನಾರ್ದನರೆಡ್ಡಿಯ ಬಂಧನ, ವಿರೋಧಿಗಳ ಬತ್ತಳಿಕೆಯಿಂದ ಹೊರ ಬರುತ್ತಿರುವ ಆರೋಪದ ಬಾಣಗಳನ್ನು ಎದುರಿಸಿಯೂ ತನ್ನತನವನ್ನು ಮೆರೆಯುವ ಅನಿವಾರ್ಯತೆಗೆ ಒಳಗಾಗಿರುವ ಶ್ರೀರಾಮುಲು ನಡುವೆ `ಮಹಾ ಕದನ~ ಜಾರಿಯಲ್ಲಿದೆ.ನಗರದ ಒಂಬತ್ತು ವಾರ್ಡ್‌ಗಳು ಮತ್ತು ತಾಲ್ಲೂಕಿನ 64 ಗ್ರಾಮಗಳ ವ್ಯಾಪ್ತಿಯ ಬಳ್ಳಾರಿ (ಮೀಸಲು) ಕ್ಷೇತ್ರದ (`ಬಳ್ಳಾರಿ ಗ್ರಾಮೀಣ~ ಎಂದೇ ಪರಿಚಿತ) ಒಟ್ಟು 1.72 ಲಕ್ಷ ಮತದಾರರು ನ. 30ರಂದು ನಡೆಯಲಿರುವ ಮತದಾನದ ವೇಳೆ ಈ ಮೂವರ ಪ್ರತಿಷ್ಠೆಯ ಪ್ರಶ್ನೆಗೆ ಉತ್ತರಿಸಲಿದ್ದಾರೆ.ತ್ರಿಕೋನ ಸ್ಪರ್ಧೆ: ಕ್ಷೇತ್ರದಲ್ಲಿ ಸಹಜವಾಗಿಯೇ ಶ್ರೀರಾಮುಲು ವರ್ಚಸ್ಸು ಹೊಂದಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಗೆ ಅನುಭವ ಮತ್ತು ಅಧಿಕಾರವೇ ಬಂಡವಾಳ. ಈ ಎರಡೂ ಪಕ್ಷಗಳ ಅಭ್ಯರ್ಥಿಗಳು ಎದುರಾಳಿ ಸ್ಪರ್ಧಿಯಷ್ಟು ಖ್ಯಾತರೂ ಅಲ್ಲ, ಪರಿಚಿತರೂ ಅಲ್ಲ, ವ್ಯಕ್ತಿಗತವಾಗಿ ಹಣವಂತರೂ ಅಲ್ಲ.ಆದರೂ ಉಪ ಚುನಾವಣೆಗೆ ಮಹತ್ವ ಬಂದಿದೆ. ನಿಚ್ಚಳವಾಗಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಶ್ರೀರಾಮುಲುಗೆ ಇದು 4ನೇ ಚುನಾವಣೆಯಾದರೆ, ಹಿಂದೆ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಮಪ್ರಸಾದ್‌ಗೆ ಎರಡನೇ ಚುನಾವಣೆ ಇದು. ರಾಜಕೀಯ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿಲ್ಲದ ಗಾದಿಲಿಂಗಪ್ಪ ಚುನಾವಣೆಗೆ ಹೊಸಬರು.ಕ್ಷೇತ್ರ ಪುನರ್ ವಿಂಗಡಣೆಯಿಂದಾಗಿ 2008ರಲ್ಲಿ ಬಳ್ಳಾರಿ ನಗರ ಕ್ಷೇತ್ರ ಪ್ರತ್ಯೇಕಗೊಂಡಿದ್ದರಿಂದ, ಮೀಸಲು ಕ್ಷೇತ್ರವಾಗಿ ರೂಪುಗೊಂಡಿರುವ ಈ ಕ್ಷೇತ್ರಕ್ಕೆ ಇದು ಎರಡನೇ ಚುನಾವಣೆ.ಮೊದಲ ಬಾರಿಗೆ 1999ರಲ್ಲಿ ಬಳ್ಳಾರಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಎಂ.ದಿವಾಕರಬಾಬು ವಿರುದ್ಧ ಸೋತಿದ್ದ ಶ್ರೀರಾಮುಲು, 2004ರಲ್ಲಿ ಆ ಸೇಡನ್ನು ತೀರಿಸಿಕೊಂಡು ಮೊದಲ ಬಾರಿಗೆ ವಿಧಾನಸಭೆ ಮೆಟ್ಟಿಲೇರಿ, ಜೆಡಿಎಸ್ ಜತೆಗಿನ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರೂ ಆಗಿದ್ದರು. 2008ರಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸಿ, ಭಾರಿ ಅಂತರದಿಂದ (25716 ಮತಗಳು) ಗೆದ್ದು ಮತ್ತೆ ಸಚಿವರಾದರು. ಅವರದೀಗ ಹ್ಯಾಟ್ರಿಕ್ ಗೆಲುವಿನ ಪ್ರಯತ್ನ.ಯಡಿಯೂರಪ್ಪ ಪರ ಅಲೆ ಇದ್ದರೂ ಕಳೆದ ಬಾರಿ ನಡೆದ ಚುನಾವಣೆಯಲ್ಲಿ 36275 ಮತ ಪಡೆದಿದ್ದ ಕಾಂಗ್ರೆಸ್‌ನ ಬಿ. ರಾಮಪ್ರಸಾದ್, ಶೇ 33ರಷ್ಟು ಮತ ಪಡೆದು ಗಮನ ಸೆಳೆದಿದ್ದು, ಅವರಿಗೇ ಟಿಕೆಟ್ ನೀಡಿರುವ ಪಕ್ಷ ಅಕ್ರಮ ಗಣಿಗಾರಿಕೆ ಆರೋಪಗಳು ಮತ್ತು ಬಿಜೆಪಿಯ ಹಗರಣಗಳ ಲಾಭ ಪಡೆಯುವ ಹವಣಿಕೆಯಲ್ಲಿದೆ.

ಜಾತಿ ಲೆಕ್ಕಾಚಾರ: ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಮೀಸಲಾಗಿರುವ ಕ್ಷೇತ್ರದಲ್ಲಿ ಜಾತಿಯದ್ದೇ ದೊಡ್ಡ ಲೆಕ್ಕಾಚಾರ. ಮುಸ್ಲಿಮರು ಇಲ್ಲಿ ಬಹುಸಂಖ್ಯಾತರು (ಅಂದಾಜು 35 ಸಾವಿರ). ನಂತರದ ಸ್ಥಾನ ವಾಲ್ಮೀಕಿ (34 ಸಾವಿರ) ಸಮುದಾಯಕ್ಕೆ.ಬಿಜೆಪಿ ಸಖ್ಯವನ್ನು ತೊರೆದು ಹೊರಬಂದಿರುವ ಶ್ರೀರಾಮುಲು, ಕಾಂಗ್ರೆಸ್‌ನ `ಮತ ಬ್ಯಾಂಕ್~ ಎಂದೇ ಹೇಳಲಾಗುವ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮತಗಳನ್ನು ಗಳಿಸುವ ತವಕದಲ್ಲಿದ್ದಾರೆ.ಪರಿಶಿಷ್ಟ ಜಾತಿ ಮತ್ತು ಇತರೆ ಪಂಗಡದ ಮತಗಳು ತಮ್ಮ ಕಡೆ ಹರಿದು ಬಂದರೆ ವರದಾನವಾಗಲಿದೆ ಎಂಬ ಆಲೋಚನೆ ಬಿಜೆಪಿಯದು.`ಸಂಖ್ಯೆಗೆ ಸಂಬಂಧಿಸಿದಂತೆ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ಲಿಂಗಾಯತ ಹಾಗೂ ಕುರುಬ ಸಮುದಾಯದ ಮತಗಳಲ್ಲದೆ, ಬಲಿಜ ಸಮಾಜದ ಮತಗಳು ಬಿದ್ದರೆ ಸಾಕು ಗೆಲುವು ನಿಶ್ಚಿತ~ ಎಂಬ ಆಸೆಯನ್ನು ಬಿಜೆಪಿ ಹೊಂದಿದೆ. ಇತರೆ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯಲು ಅಗತ್ಯ ತಂತ್ರ ರೂಪಿಸಿ, ಆಯಾ ಜಾತಿಗೆ ಸೇರಿದ ಮುಖಂಡರನ್ನು (ಮುಖ್ಯವಾಗಿ ಸಚಿವರು) ಕ್ಷೇತ್ರದಾದ್ಯಂತ ಬಿಟ್ಟಿರುವ ಕಮಲ ಪಾಳೆಯಕ್ಕೆ ಗೆಲುವಿನ ದೂರದ ಆಸೆ ಮೂಡಿದೆ.ಕಡಿಮೆಯೇನಲ್ಲ: `ನಾವು ಯಾರಿಗೇನು ಕಡಿಮೆ~ ಎಂಬಂತೆ ಮುನ್ನುಗ್ಗಿರುವ ಕಾಂಗ್ರೆಸ್ ಸಹ, ಸಿದ್ದರಾಮಯ್ಯ, ಅಲ್ಲಂ ವೀರಭದ್ರಪ್ಪ ಅವರ ಮುಂದಾಳತ್ವದಲ್ಲೇ ಚುನಾವಣೆ ಎದುರಿಸುತ್ತಿದೆ. ಕೇಂದ್ರದ ಕಾಂಗ್ರೆಸ್ ನಾಯಕರೂ ಈ ಯುದ್ಧಕ್ಕೆ ತಮ್ಮ ಬೆಂಬಲ ಸೂಚಿಸಿ ಪ್ರಚಾರದಲ್ಲಿ ಪಾಲ್ಗೊಂಡು ತೆರಳಿದ್ದು, ತಮ್ಮೆಲ್ಲ ಶಕ್ತಿಯನ್ನೂ `ಧಾರೆ~ ಎರೆದಿದ್ದಾರೆ. ಪಕ್ಷದಲ್ಲಿರುವ ಎಲ್ಲ ಮುಖಂಡರೂ ತಮ್ಮಳಗಿನ ಭಿನ್ನಾಭಿಪ್ರಾಯ ಮರೆತು ಬಳ್ಳಾರಿ ಎಂಬ `ಉಕ್ಕಿನ ಕೋಟೆ~ಯನ್ನು ಭೇದಿಸಲು ಹರಸಾಹಸ ಮಾಡುತ್ತಿದ್ದಾರೆ.2008ರಲ್ಲಿ ನಗರ ಕ್ಷೇತ್ರದಲ್ಲಿ ಸೋಮಶೇಖರರೆಡ್ಡಿ ವಿರುದ್ಧ ಸೋತಿರುವ `ಗಣಿ ಧಣಿ~ ಅನಿಲ್ ಲಾಡ್, ಮೊದಲ ದಿನದಿಂದಲೇ ಸ್ವತಃ ತಾನೇ ಅಭ್ಯರ್ಥಿ ಎಂಬಂತೆ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಸಂತೋಷ್ ಲಾಡ್, ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರೂ ಬಳ್ಳಾರಿಯ ರಣಾಂಗಣದಲ್ಲಿ ಸೇನಾಧಿಪತಿಯಂತೆ ಅಬ್ಬರಿಸಿದ್ದಾರೆ.2009ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಅತ್ಯಲ್ಪ ಮತಗಳ ಅಂತರದ ಪರಾಭವ ಕಂಡರೂ ಒಟ್ಟಾರೆ ಫಲಿತಾಂಶದ ಬಗ್ಗೆ ತೃಪ್ತಿ ಹೊಂದಿರುವ ಕಾಂಗ್ರೆಸ್‌ಗೆ  ಇತ್ತೀಚೆಗಷ್ಟೇ ನಡೆದಿರುವ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಯ ಫಲಿತಾಂಶ `ಮತದಾರ ತನ್ನತ್ತ ವಾಲುತ್ತಿದ್ದಾನೆ~ ಎಂಬ ಸುಳಿವು ನೀಡಿದೆ.ಏಕಾಂಗಿ ಹೋರಾಟ: ಶಾಸಕರಾಗಿರುವ ಸೋಮಶೇಖರರೆಡ್ಡಿ, ಸುರೇಶಬಾಬು, ಬಿ.ನಾಗೇಂದ್ರ, ಮೃತ್ಯುಂಜಯ ಜಿನಗಾ, ಸಂಸದರಾದ ಜೆ.ಶಾಂತಾ, ಸಣ್ಣಫಕೀರಪ್ಪ ಅವರು ಶ್ರೀರಾಮುಲು ನೆರಳಡಿಯೇ ಇರುವವರಾದ್ದರಿಂದ ಶ್ರೀರಾಮುಲು ಅವರದ್ದು ಏಕಾಂಗಿ ಹೋರಾಟ.`ಅಭಿವೃದ್ಧಿಗೆ ಆದ್ಯತೆ ನೀಡಲಿಲ್ಲ~ ಎಂಬ ಜನರ ಆರೋಪಗಳ ನಡುವೆಯೇ ಅವರಲ್ಲಿ ವಿಶ್ವಾಸ ಮೂಡಿಸಲು ಹೆಣಗುತ್ತಲೇ, ಈವರೆಗೆ ದೊರೆತಿರುವ `ನಾಮಬಲ~ದೊಂದಿಗೆ ಮನೆಬಾಗಿಲಿಗೆ ಲಗ್ಗೆ ಇಟ್ಟು, ಮತದಾರನ ಮನದ ಬಾಗಿಲನ್ನೂ ತೆರೆಸಲು ಶ್ರಮಿಸುತ್ತಿದ್ದಾರೆ.ವಿರೋಧಿಗಳ ಕುರಿತು ಆರೋಪವನ್ನೇ ಮಾಡದೆ, ತನ್ನ ಶಕ್ತಿಯ ಬಲದೊಂದಿಗೆ ಪ್ರಚಾರದಲ್ಲಿ ಭಾಗಿಯಾಗಿರುವ ಶ್ರೀರಾಮುಲು ಪ್ರತಿಪಕ್ಷಗಳ ಅಬ್ಬರಕ್ಕೆ ಸಿಲುಕಿ ಅಧೀರರಾದಂತೆ ಕಂಡುಬಂದರೂ, ಇನ್ನಿತರ ಅಭ್ಯರ್ಥಿಗಳೆದುರು ವ್ಯಕ್ತಿಗತವಾಗಿ ತಾನೇ ಮುಂದೆ ಎಂಬ ನಂಬಿಕೆಯಿಂದ ಚುನಾವಣೆ ಎದುರಿಸುತ್ತಿದ್ದಾರೆ.ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯಲ್ಲಿ ಹೆಸರಿರುವುದರಿಂದ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂಬ ಕಾರಣ ಮುಂದಿಟ್ಟು ಉಪಚುನಾವಣೆಗೆ ಕಾರಣವಾಗಿರುವ ಶ್ರೀರಾಮುಲು `ಜನತಾ ನ್ಯಾಯಾಲಯ ನೀಡುವ ತೀರ್ಪು ಮುಖ್ಯ~ ಎಂದೇ ಘೋಷಿಸಿದ್ದು, ಫಲಿತಾಂಶದ ಆಧಾರದಲ್ಲೇ ಇವರ ರಾಜಕೀಯ ಭವಿಷ್ಯ ಅಡಗಿರುವುದು ಸ್ಪಷ್ಟ.ಪ್ರಮುಖ ಪಕ್ಷವಾದರೂ ಅಭ್ಯರ್ಥಿಯನ್ನು ಕಣಕ್ಕಿಳಿಸದೆ, ಪಕ್ಷೇತರರನ್ನು ಬೆಂಬಲಿಸುವ ನಿರ್ಧಾರ ಪ್ರಕಟಿಸಿರುವ ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಅವರ ನಿಲುವು, ಇಲ್ಲಿ ಯಾರಿಗೆ ವರವಾಗಲಿದೆ ಎಂಬುದು ಇನ್ನೂ ನಿಗೂಢವಾಗಿಯೇ ಇದೆ. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಸೂರ್ಯನಾರಾಯಣ ರೆಡ್ಡಿ ಅವರ `ಇಶಾರೆ~ಯನ್ನೂ ಫಲಿತಾಂಶ ಅವಲಂಬಿಸಿದೆ.

ಎಷ್ಟೇ ಅಧಿಕಾರ, ಅವಕಾಶ ನೀಡಿದರೂ ತೃಪ್ತರಾಗಿಲ್ಲ ಎಂಬ ಬಿಜೆಪಿ ಮುಖಂಡರ ಆರೋಪ, ಅದಕ್ಕೆ ಉತ್ತರಿಸದೇ ತಣ್ಣಗಿರುವ ಶ್ರೀರಾಮುಲು ನಿಲುವು ಕಾಂಗ್ರೆಸ್ ಪಾಳಯಕ್ಕೆ ಗೆಲುವಿನ ಆಸೆ ಮೂಡಿಸಿದೆ. ಇಬ್ಬರ (ಶ್ರೀರಾಮುಲು ಮತ್ತು ಬಿಜೆಪಿ) ನಡೆಯ ಬಗ್ಗೆ ಅನುಮಾನ, ಅಸಹನೆ ವ್ಯಕ್ತಪಡಿಸುತ್ತ, ಆರೋಪಗಳನ್ನು ಹೊರಿಸುತ್ತಿರುವ ಕಾಂಗ್ರೆಸ್, ಇಬ್ಬರ ನಡುವಿನ ವೈಮನಸ್ಯದ ಸಂಪೂರ್ಣ ಲಾಭವನ್ನು ಪಡೆಯುವ ಯತ್ನದೊಂದಿಗೆ ಗೆಲುವಿಗೆ ಅಗತ್ಯವಿರುವ ಪ್ರಯತ್ನಗಳನ್ನೂ ನಡೆಸುತ್ತಿದೆ. ಮಾಸಾಂತ್ಯಕ್ಕೆ ಮತದಾರನ ತೀರ್ಪು ಮತಯಂತ್ರ ಸೇರಿ, ಡಿ. 4ಕ್ಕೆ ಕುತೂಹಲಕ್ಕೆ ತೆರೆ ಬೀಳಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry