ಗುರುವಾರ , ಮೇ 19, 2022
20 °C
ಶಾಸಕ ಸಿ.ಎನ್. ಬಾಲಕೃಷ್ಣ ಕಿಡಿ: ಕ್ರಮಕ್ಕೆ ಸೂಚನೆ

ಮೂವರಿಗೆ ಪಡಿತರ ವಿತರಣೆ ಪರವಾನಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನರಾಯಪಟ್ಟಣ: ಜಂಬೂರು ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆಯಲ್ಲಿ ಲೋಪ ಎಸಗಲಾಗುತ್ತಿದೆ. ತಿಂಗಳಲ್ಲಿ ಕೆಲ ದಿನ ಮಾತ್ರ ಅಂಗಡಿ ತೆರೆದಿರುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎ. ರಂಗಸ್ವಾಮಿ ದೂರಿದರು.



ಶಾಸಕ ಸಿ.ಎನ್. ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ `ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಸಭೆ'ಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಪರವಾನಿಗೆ ಇರುವರನ್ನು ಬಿಟ್ಟು ಮೂರು ಜನರಿಗೆ ಪಡಿತರ ವಿತರಣೆ ಮಾಡುವ ಕೆಲಸವನ್ನು ಹಂಚಿರುವುದು ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣ. ನ್ಯಾಯಬೆಲೆ ಅಂಗಡಿಗೆ ನಾಮಫಲಕವಿಲ್ಲ ಎಂದು ದೂರಿದರು.



ಗ್ರಾಮಸ್ಥರೊಬ್ಬರು ಕಡಿಮೆ ಪಡಿತರ ನೀಡಲಾಗುತ್ತಿದೆ ಎಂದು ಆರೋಪಿಸಿ ಆಹಾರ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದರು. ಆದರೆ, ತಾಲ್ಲೂಕಿನ ಆಹಾರ ನಿರೀಕ್ಷಕ ಮಂಜುನಾಥ್ ಗ್ರಾಮಕ್ಕೆ ತೆರಳಿ ಸರಿಯಾಗಿ ಪಡಿತರ ವಿತರಣೆ ಮಾಡಲಾಗುತ್ತಿದೆ ಎಂದು ಸ್ವತಃ ಅರ್ಜಿ ಬರೆದು ಆ ವ್ಯಕ್ತಿಯಿಂದ ಒತ್ತಾಯವಾಗಿ ಸಹಿ ಮಾಡಿಸಲು ಪ್ರಯತ್ನಿಸಿದ್ದರು ಎಂದು ಅರ್ಜಿಯ ಪ್ರತಿಯನ್ನು ಸಭೆಯಲ್ಲಿ ಪ್ರದರ್ಶಿಸಿದರು.



ಬಡವರಿಗೆ ನ್ಯಾಯ ದೊರಕಿಸಿಕೊಡಬೇಕಾದ ಅಧಿಕಾರಿಗಳ ಇಂಥ ಕ್ರಮ ಸರಿಯಲ್ಲ. ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.



ಆಹಾರ ನಿರೀಕ್ಷಕ ಮಂಜುನಾಥ್ ಸಮರ್ಥನೆ ನೀಡಲು ಮುಂದಾದರಾದರೂ, ಅದನ್ನು ಪುನಃ  ಪ್ರಶ್ನಿಸಿದ ರಂಗಸ್ವಾಮಿ, ನ್ಯಾಯಬೆಲೆ ಅಂಗಡಿಯಲ್ಲಿ ಸಮರ್ಪಕ ಪಡಿತರ ವಿತರಣೆಗೆ ಕ್ರಮ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು.



ಶಾಸಕ ಸಿ.ಎನ್. ಬಾಲಕೃಷ್ಣ ಮಾತ ನಾಡಿ, ಬಾಗೂರು, ಕೆಂಬಾಳು ಗ್ರಾಮ ದಲ್ಲಿನ ನ್ಯಾಯ ಬೆಲೆ ಅಂಗಡಿಯವರು ಸರಿಯಾಗಿ ಪಡಿತರ ವಿತರಣೆ ಮಾಡು ತ್ತಿಲ್ಲ. 500 ಕಾರ್ಡ್‌ಗೆ ಒಂದರಂತೆ ತಾಲ್ಲೂಕಿನಲ್ಲಿ ಇನ್ನು ಹೊಸದಾಗಿ 20ಕ್ಕಿಂತ ಅಧಿಕ ನ್ಯಾಯಬೆಲೆ ಅಂಗಡಿ ತೆರೆಯಬೇಕು ಎಂದು ಹೇಳಿದರು.



ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ಎ. ರಂಗಸ್ವಾಮಿ, ಎ.ಬಿ. ನಂಜುಂಡೇಗೌಡ ಮಾತನಾಡಿ, ತಾಲ್ಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಚ್.ಎನ್. ಲೋಕೇಶ್, ಶಿಕ್ಷಕರಾಗಿ ಎಷ್ಟು ದಿನ ಮಕ್ಕಳಿಗೆ ಪಾಠ ಮಾಡಿದ್ದಾರೆ. ಎಷ್ಟುದಿನ ಶಾಲೆಗೆ ಹಾಜರಾಗಿದ್ದಾರೆ ಎಂಬುದನ್ನು ದಾಖಲೆ ನೀಡಬೇಕು. ಸಂಬಳಕ್ಕೆ ನಿಯತ್ತಾಗಿ ನೌಕರರು ಕೆಲಸ ಮಾಡಬೇಕು.



ರಾಜಕೀಯ ಪಕ್ಷದ ಪರ ಕೆಲಸ ಮಾಡಿಕೊಂಡು ಕಾಲ ಕಳೆಯುವ ಇವರ ವಿರುದ್ಧ ಶಿಕ್ಷಣ ಇಲಾಖೆ ಏನು ಕ್ರಮ ತೆಗೆದುಕೊಂಡಿದೆ ಎಂದು ಪ್ರಶ್ನಿಸಿದರು. ಇದನ್ನು ಬೆಂಬಲಿಸಿ ಮಾತನಾಡಿದ ಮತ್ತೊಬ್ಬ ಸದಸ್ಯ ಎನ್.ಡಿ. ಕಿಶೋರ್, ಅವರೊಬ್ಬರೆ ಅಲ್ಲ. ಇದೇ ರೀತಿ ಅನೇಕ ಮಂದಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ದೂರಿದರು.



ತಾಲ್ಲೂಕು ಪಂಚಾಯಿತಿಗೆ ಸರ್ಜರಿ ಮಾಡಬೇಕಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೌಚಾಲಯ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡದೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಇನ್ನು 15 ದಿನದಲ್ಲಿ ಹಣ ಬಿಡುಗಡೆ ಮಾಡಬೇಕು ಎಂದು ಅಧಿಕಾರಿಗಳ ಗಮನಕ್ಕೆ ತಂದರು.



ಮದ್ಯದ ಅಂಗಡಿಯನ್ನು ಪ್ರತಿದಿನ ಬೆಳಿಗ್ಗೆ 10ಕ್ಕೆ ತೆರೆದು ರಾತ್ರಿ 10ಕ್ಕೆ ವ್ಯವಹಾರ ಸ್ಥಗಿತಗೊಳಿಸಬೇಕು. ಬಾರ್, ರೆಸ್ಟೊರೆಂಟ್‌ಗಳು ಮಾತ್ರ ರಾತ್ರಿ 11.30 ವರೆಗೆ ತೆರೆಯಬೇಕು ಎಂದು ಅಬಕಾರಿ ಅಧಿಕಾರಿ ಹೇಳಿದರು.



ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅಂಬಿಕಾರಾಮಕೃಷ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹೇಮಾವತಿ ಕೃಷ್ಣನಾಯಕ್, ಉಪಾಧ್ಯಕ್ಷೆ ಶಿಲ್ಪಾ ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕುಸುಮ ಬಾಲಕೃಷ್ಣ, ದೇವಿಕಾ, ಶಿವಶಂಕರ್ ಕುಂಟೆ ಇದ್ದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಬಿ. ನಿಂಗರಾಜಪ್ಪ ಸ್ವಾಗತಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.