ಮೂವರಿಗೆ ಶಾಶ್ವತ ದೃಷ್ಟಿದೋಷ: ವೈದ್ಯರ ಹೇಳಿಕೆ

7

ಮೂವರಿಗೆ ಶಾಶ್ವತ ದೃಷ್ಟಿದೋಷ: ವೈದ್ಯರ ಹೇಳಿಕೆ

Published:
Updated:

ಬೆಂಗಳೂರು: ದೀಪಾವಳಿ ಸಂದರ್ಭದಲ್ಲಿ ಉಂಟಾದ ಪಟಾಕಿ ಅನಾಹುತದಿಂದಾಗಿ ನಗರದ ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ 60 ಮಂದಿಯ ಕಣ್ಣುಗಳಿಗೆ ಹಾನಿಯಾಗಿದೆ. ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿರುವ ಮೂವರಿಗೆ ಶಾಶ್ವತವಾಗಿ ದೃಷ್ಟಿ ದೋಷ ಕಾಣಿಸಿಕೊಳ್ಳಲಿದೆ ಎಂದು ವೈದ್ಯರು ತಿಳಿಸಿದ್ದಾರೆ.ಮಿಂಟೊ ಆಸ್ಪತ್ರೆಗೆ 18 ಮಂದಿ ನೂತನವಾಗಿ ಚಿಕಿತ್ಸೆ ಪಡೆಯುತ್ತಿದ್ದು ಆಸ್ಪತ್ರೆಗೆ ದಾಖಲಾದವರ ಒಟ್ಟು ಸಂಖ್ಯೆ 27ಕ್ಕೆ ಏರಿದೆ. ಇದುವರೆಗೆ ನಾರಾಯಣ ನೇತ್ರಾಲಯದ ವಿವಿಧ ಶಾಖೆಗಳಲ್ಲಿ 36 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಬೌರಿಂಗ್ ಆಸ್ಪತ್ರೆಯಲ್ಲಿ 18 ವಿಕ್ಟೋರಿಯಾದಲ್ಲಿ 14, ಮೋದಿ ಆಸ್ಪತ್ರೆಯಲ್ಲಿ 10 ಮಂದಿ, ಸಂಪ್ರತಿ ಕಣ್ಣಿನ ಆಸ್ಪತ್ರೆಯಲ್ಲಿ 4 ಮಂದಿ, ರಂಗಲಕ್ಷ್ಮಿ ನೇತ್ರಾಲಯದಲ್ಲಿ ಇಬ್ಬರು ಹಾಗೂ ವಿವಿಧ ಆಸ್ಪತ್ರೆಗಳಲ್ಲಿ 20 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನರಕ ಚತುರ್ದಶಿ ಮತ್ತು ಮರುದಿನ 24 ಜನರು ಗಾಯಗೊಂಡಿದ್ದರು.ಬುಧವಾರ ರಾತ್ರಿ ಆರ್.ಟಿ.ನಗರದ ಎಂಟು ವರ್ಷದ ಬಾಲಕ ಅತುಲ್‌ನ ಕಣ್ಣಿಗೆ ರಾಕೆಟ್ ಬಡಿಯಿತು. ಪಕ್ಕದ ಮನೆಯವರು ಪಟಾಕಿ ಹಚ್ಚುವುದನ್ನು ವೀಕ್ಷಿಸುತ್ತಿದ್ದ ಸರ್ಜಾಪುರದ  ಏಳು ವರ್ಷದ ಬಾಲಕಿ ಸಾಕ್ಷಿ ಹಾಗೂ ಯಲಹಂಕದ 32 ವರ್ಷದ ಯುವಕರೊಬ್ಬರಿಗೆ ಕಣ್ಣಿನ ಗುಡ್ಡೆಗೆ ತೀವ್ರ ಹಾನಿಯಾಗಿದೆ.ಇವರೆಲ್ಲರೂ ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು ಅತುಲ್ ಹಾಗೂ ಸಾಕ್ಷಿಯ ಕಣ್ಣಿನ ಪಾಪೆ ಸೀಳು ಬಿಟ್ಟಿದೆ. 32 ವರ್ಷದ ಯುವಕನ ಕಣ್ಣಿನ ಪಾಪೆ ಮುರುಟಿ ಹೋಗಿದೆ. ಇದಲ್ಲದೆ ಆಸ್ಪತ್ರೆಯಲ್ಲಿ ದಾಖಲಾದ ಇನ್ನೂ ಮೂವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಶಸ್ತ್ರಚಿಕಿತ್ಸೆ ಅನಿವಾರ್ಯ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.ಹನುಮಾರನಹಳ್ಳಿಯ 36 ವರ್ಷದ ಪುರುಷರೊಬ್ಬರಿಗೆ ಹಾಗೂ ನಂದಿನಿ ಬಡಾವಣೆಯ ಏಳು ವರ್ಷದ ಬಾಲಕ ಕಣ್ಣಿನಲ್ಲಿ ರಕ್ತಸ್ರಾವವಾಗುತ್ತಿದೆ. ತಮಿಳುನಾಡಿನ ಕಾವೇರಿ ಪಟ್ಟಣಂನ 11 ವರ್ಷದ ಬಾಲಕನ ಕಣ್ಣಿಗೆ ಆಳವಾದ ಗಾಯಗಳಾಗಿವೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.ಮಿಂಟೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ 18 ಮಂದಿಯಲ್ಲಿ 10 ಮಂದಿ ಮಕ್ಕಳೇ ಆಗಿದ್ದಾರೆ. ಇವರಲ್ಲಿ 11 ಮಂದಿ ಪಟಾಕಿ ಸಿಡಿಸುವುದನ್ನು ವೀಕ್ಷಿಸುತ್ತಿದ್ದರು.ನಾಲ್ಕು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ. `ಆಟಂ ಬಾಂಬ್~, ಹಾಗೂ ಲಕ್ಷ್ಮಿ ಪಟಾಕಿ ಸಿಡಿತದಿಂದಾಗಿ ಗಾಯಗೊಂಡವರೇ ಅಧಿಕ ಎಂದು ಆಸ್ಪತ್ರೆಯ ವೈದ್ಯೆ ಡಾ. ಚಿನ್ಮಯಿ ತಿಳಿಸಿದ್ದಾರೆ. ನ್ಯಾಯಮೂರ್ತಿ ಎಸ್.ಪಿ.ಮಜಗೆ ಹಾಗೂ ಡಿವೈಎಸ್‌ಪಿ ಸೈಯದ್ ರಿಯಾಜ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡವರ ಯೋಗಕ್ಷೇಮ ವಿಚಾರಿಸಿದರು.ಸುಟ್ಟ ಪಟಾಕಿಗಳನ್ನೇ ಮತ್ತೊಮ್ಮೆ ಸುಡಲು ಹೋಗಿ ಸಂಜಯ್ ಎಂಬ ಬಾಲಕನ ಮುಖಕ್ಕೆ ತೀವ್ರ ಹಾನಿಯಾಗಿದ್ದು ಪ್ಲಾಸ್ಟಿಕ್ ಸರ್ಜರಿ ಅನಿವಾರ್ಯತೆ ಇದೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry