ಮೂಷಿಕನಿಗಿಲ್ಲಿ ವಿಶೇಷ ಪೂಜೆ

7

ಮೂಷಿಕನಿಗಿಲ್ಲಿ ವಿಶೇಷ ಪೂಜೆ

Published:
Updated:
ಮೂಷಿಕನಿಗಿಲ್ಲಿ ವಿಶೇಷ ಪೂಜೆ

ಬರುವ ಸೋಮವಾರ ಗಣೇಶನ ಹಬ್ಬ ಅನ್ನೋದು ಎಲ್ಲರಿಗೂ ತಿಳಿದದ್ದೇ. ಆದರೆ ಮಂಗಳವಾರ ಒಂದು ವಿಶೇಷ ಹಬ್ಬ ಇದೆ. ಅದು ಏನು ಗೊತ್ತಾ? ಇಲಿ ಪಂಚಮಿ!ಅರೆ, ಇದೇನು ಇಲಿ ಪಂಚಮಿ, ಇಲಿಗೂ ಹಬ್ಬವೇ ಎಂದು ಅಚ್ಚರಿ ಪಡಬೇಡಿ. ಇಂಥದ್ದೊಂದು ವಿಶೇಷ ಹಬ್ಬ ವಿಜಾಪುರ ಸೇರಿದಂತೆ ಕೆಲವು ಕಡೆಗಳಲ್ಲಿ ಚಾಲ್ತಿಯಲ್ಲಿದೆ. ದರ್ಜಿಗಳು ಹಾಗೂ ಬಟ್ಟೆ ಅಂಗಡಿಯವರು ಈ ಹಬ್ಬ ಆಚರಿಸುತ್ತಾರೆ. ತಮ್ಮ ಬಟ್ಟೆಗಳನ್ನು ಇಲಿ ಹಾಳು ಮಾಡಬಾರದು ಎನ್ನೋದು ಇದಕ್ಕೆ ಮುಖ್ಯ ಕಾರಣವಂತೆ! ನಿಮ್ಮ ಹಾಗೆ ನನಗೂ ಇದನ್ನು ಕೇಳಿದಾಗ ಅಚ್ಚರಿಯಾಗಿತ್ತು.ಮೂರು ದಿನ ರಜೆ

ಕೆಲವು ದಿನಗಳ ಹಿಂದೆ ವಿಜಾಪುರದ ಪೊಲೀಸ್ ಹೊಲಿಗೆ ಕೇಂದ್ರಕ್ಕೆ ಭೇಟಿ ಕೊಟ್ಟಿದ್ದೆ. ಅಂದು ರವಿವಾರವಾಗಿದ್ದರೂ ಕೆಲಸ ಭರದಿಂದ ನಡೆದಿತ್ತು. ಪ್ರಧಾನ ದರ್ಜಿ ಮ್ಯಾಗೇರಿ ಅವರನ್ನು ಮಾತಾಡಿಸಿದಾಗ ತಿಳಿದದ್ದು ಅವರಿಗೆ ವರ್ಷದಲ್ಲಿ ಮೂರೇ ದಿನ ರಜೆ ಎಂದು. ಹೋಳಿ ಹುಣ್ಣಿಮೆ, ರಂಗ ಪಂಚಮಿ ಹಾಗೂ ಇಲಿ ಪಂಚಮಿ.ಮೊದಲಿನ ಎರಡೂ ಗೊತ್ತಿತ್ತು. `ಇಲಿ ಪಂಚಮಿ' ಕೇಳಿ ಅಚ್ಚರಿಯಿಂದ ಅವರಲ್ಲೇ ಪ್ರಶ್ನಿಸಿದಾಗಲೇ ತಿಳಿದದ್ದು ಇಂಥದ್ದೊಂದು ವಿಶೇಷ ಹಬ್ಬ ಇಲ್ಲಿದೆ ಎಂದು. `ಭಾದ್ರಪದ ಮಾಸದ ಚೌತಿಯಂದು ಗಣೇಶ ಹಬ್ಬ ಶುರು ಆಗುತ್ತದೆ. ಅದರ ಮರುದಿನ ಗಣಪತಿಯ ವಾಹನ ಇಲಿಯ ಹಬ್ಬ. ಆ ದಿನವೇ ಇಲಿ ಪಂಚಮಿ. ಅಂದು ನಾವು ಬೆಲ್ಲದ ಇಲಿಯನ್ನು ಮಾಡಿ ಪೂಜಿಸುತ್ತೇವೆ. ಅಂದು ಕತ್ತರಿಸುವ, ಹೊಲಿಯುವ ಯಾವ ಕೆಲಸವನ್ನೂ ಮಾಡುವುದಿಲ್ಲ. ತಪ್ಪಿ ಹಾಗೇನಾದರೂ ಮಾಡಿದರೆ ಇಲಿ ಮಹಾಶಯ ನಮ್ಮನ್ನು ಕ್ಷಮಿಸುವುದಿಲ್ಲ. ನಮ್ಮ ಬಟ್ಟೆಬರೆಗಳನ್ನೆಲ್ಲ ಕಡಿದು ತುಂಡು ಮಾಡಿ ಬಿಡುತ್ತಾನೆ. ಮರುದಿನ ಆ ಬೆಲ್ಲದ ಇಲಿಯನ್ನು ಮಾಳಿಗೆಯ ಮೇಲೆ ಇಟ್ಟು ಬಿಡುತ್ತೇವೆ' ಎಂದು ಹಬ್ಬದ ಹಿನ್ನೆಲೆ ಬಿಚ್ಚಿಟ್ಟರು ಮ್ಯಾಗೇರಿ.`ದರ್ಜಿಗಳು ಹಾಗೂ ವಸ್ತ್ರದ ಅಂಗಡಿಯ ವ್ಯಾಪಾರಸ್ಥರು ಅಂದು ಇಲಿಯನ್ನು ಪೂಜೆ ಮಾಡಿ, ಇಡೀ ವರ್ಷ ನಮ್ಮ ಬಟ್ಟೆಗಳನ್ನು ಕಡಿದು ಹಾಳು ಮಾಡಬೇಡ ಎಂದು ಮೂಷಿಕನನ್ನು ಪ್ರಾರ್ಥಿಸುತ್ತಾರೆ. ಅಂದು ಇಲಿಯ ಗೌರವಾರ್ಥ ಜವಳಿ ವ್ಯಾಪಾರಸ್ಥರೂ ಬಟ್ಟೆಯನ್ನು ಕತ್ತರಿಸುವುದಿಲ್ಲ' ಎಂದರು.ಇದಕ್ಕೆ ದನಿಗೂಡಿಸಿದರು ವಸ್ತ್ರದ ಮಳಿಗೆಯ ಮಾಲೀಕ ಭೋಜಣ್ಣ ಬೀಳಗಿ. `ಅಂದು, ಹೂರಣದ ಇಲಿ ಮಾಡಿ ಪೂಜಿಸುತ್ತೇವೆ. ಆಮೇಲೆ ದಿನಪೂರ್ತಿ ಅಂಗಡಿಯನ್ನು ಮುಚ್ಚಿ ಬಿಡುತ್ತೇವೆ. ಬಹಳ ವರ್ಷದ ಹಿಂದೆ ಇಲಿ ಪಂಚಮಿಯನ್ನು ಆಚರಿಸುವುದನ್ನು ಮರೆತಿದ್ದರಂತೆ. ಆ ವರ್ಷ ಇಲಿ ಕಡಿತದಿಂದ ಅನೇಕ ಬೆಲೆಬಾಳುವ ರೇಷ್ಮೆ ಸೀರೆ ಹಾಗೂ ಇತರ ವಸ್ತುಗಳು ಹಾಳಾದವು' ಎಂದರು ಬೀಳಗಿ.ಸಾಮಾನ್ಯವಾಗಿ ಎಲ್ಲ ಹಿಂದೂ ಸಿಂಪಿಗರು ಹಾಗೂ ಜವಳಿ ವ್ಯಾಪಾರಸ್ಥರು ಇಲಿ ಪಂಚಮಿಯನ್ನು ತಪ್ಪದೇ ಆಚರಿಸುತ್ತಾರೆ. ಕೆಲವರು ಬೆಲ್ಲ, ಕಡಲೆ ಬೇಳೆ ಹೂರಣಗಳಿಂದ ಇಲಿ ಮಾಡಿ ಪೂಜಿಸಿದರೆ, ಇನ್ನು ಕೆಲವರು ಮಣ್ಣಿನ ಇಲಿಗಳನ್ನೂ ಮಾಡುವುದುಂಟು. ಮತ್ತೆ ಕೆಲವರು ಕಂಚು, ಹಿತ್ತಾಳೆ, ಬೆಳ್ಳಿ ಇಲಿಗಳನ್ನೂ ಮಾಡಿಸಿಟ್ಟಿರುತ್ತಾರೆ. ಇಲಿ ಪಂಚಮಿಯ ದಿನ ಅವುಗಳನ್ನು ಪೂಜಿಸಿ ಮತ್ತೆ ಮುಂದಿನ ಇಲಿ ಪಂಚಮಿಗಾಗಿ ಕಾಯ್ದಿಟ್ಟುಕೊಂಡಿರುತ್ತಾರೆ. ಇಲಿ ಪೂಜೆಯಲ್ಲಿ ನಂಬಿಕೆ ಇರದವರು ಕೆಲವು ಪರಿಹಾರೋಪಾಯಗಳ ಮೊರೆ ಹೋಗುತ್ತಾರೆ.ಅವುಗಳಲ್ಲಿ ಇಲಿಗೆ ಊಟ ಮಾಡುವ ಎಣ್ಣೆ ಇಡುವುದೂ ಒಂದು. ಬಟ್ಟೆಗಳ ಮಧ್ಯೆ ಬಟ್ಟಲಲ್ಲಿ ಎಣ್ಣೆ ಇಟ್ಟರೆ ಇಲಿಗಳು ಎಣ್ಣೆ ಕುಡಿದು, ತಮ್ಮ ಹಸಿವು ಇಂಗಿಸಿಕೊಳ್ಳುತ್ತವೆ. ಬಟ್ಟೆಗಳಿಗೆ ಹಾನಿ ಮಾಡುವುದಿಲ್ಲ ಎಂದು ಇನ್ನೊಬ್ಬ ದರ್ಜಿ ಹೇಳಿದರು. ಇದನ್ನು ಬಿಟ್ಟು, ಇಲಿಗಳಿಗೆ ಬಲೆ ಇಡುವ-ವಿಷ ಹಾಕುವ ಅನೇಕ ಮಾರ್ಗಗಳನ್ನೂ ಕೆಲವರು ಅನುಸರಿಸುತ್ತಾರೆ.ಇನ್ನೊಮ್ಮೆ ಹಬ್ಬ

ಪ್ರತಿ ವರ್ಷ ಏಪ್ರಿಲ್ 4ರಂದು ವಿಶ್ವ ಇಲಿ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಇದು ಇಲಿಯ ಅಪಾಯದಿಂದ ಬಚಾವಾಗೊ ಆಚರಣೆ ಅಲ್ಲ. ಕೆಲವರು ನಾಯಿ ಬೆಕ್ಕುಗಳಂತೆ ಇಲಿಯನ್ನು ಪ್ರೀತಿಯಿಂದ ಸಾಕುತ್ತಾರೆ. ಸಾಕು ಪ್ರಾಣಿಗಳಲ್ಲಿಯೇ ಇಲಿ ಅತ್ಯಂತ ಅದ್ಭುತವಾದ ಜೀವಿ ಎಂದು ಅವರು ವಿವರಿಸುತ್ತಾರೆ. ತಮ್ಮ ನೆಚ್ಚಿನ ಇಲಿಗಳಿಗಾಗಿ ಅವರು 2002ರಿಂದ ಈ ದಿನಾಚರಣೆಯನ್ನು ಪ್ರತಿ ವರ್ಷವೂ ವೈವಿಧ್ಯಮಯವಾಗಿ ಆಚರಿಸುತ್ತಾರೆ. 2012ರಲ್ಲಿ ಈ ಆಚರಣೆಗೆ ದಶಮಾನೋತ್ಸವದ ಸಂಭ್ರಮ. ಇಲಿ ಪಂಚಮಿ ಆಚರಣೆಗೆ ಎಷ್ಟು ವರ್ಷವಾಯಿತೋ ಗೊತ್ತಿಲ್ಲ. ಬಹುಶಃ ಅದು ಗಣೇಶ ಚತುರ್ಥಿಯಷ್ಟೇ ಹಳೆಯದಾಗಿರಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry