ಶನಿವಾರ, ಫೆಬ್ರವರಿ 27, 2021
31 °C

ಮೃಗಾಲಯದಲ್ಲಿ ದತ್ತು ಪರ್ವ

ಲಕ್ಷ್ಮಣ ಟಿ. ನಾಯ್ಕ Updated:

ಅಕ್ಷರ ಗಾತ್ರ : | |

ಮೃಗಾಲಯದಲ್ಲಿ ದತ್ತು ಪರ್ವ

ಅವರು ಬೆಂಗಳೂರಿನ ಖಾಸಗಿ ಕಾಲೇಜಿನ ಉಪನ್ಯಾಸಕಿ. ತೀರಾ ಸರಳ, ಸಂಕೋಚ ಸ್ವಭಾವದ ಮಹಿಳೆ. ಹೆಸರು ಡಾ. ಭಾನುಪ್ರಾಂಜಿ. ಮೈಸೂರು ಚಾಮರಾಜೇಂದ್ರ ಮೃಗಾಲಯ ವೀಕ್ಷಿಸಿದವರೇ ಕಚೇರಿಗೆ ಬಂದು 1.90 ಲಕ್ಷ ರೂಗೆ ಚೆಕ್ ಬರೆದುಕೊಟ್ಟರು.ಸರಿಯಾಗಿ ಕಾಲೇಜಿನ ಹೆಸರನ್ನೂ ಹೇಳಲಿಲ್ಲ. ಏನೆಂದು ಕೇಳುವ ಮುನ್ನವೇ `ರೀಟಾ ನನ್ನ ಮನಸ್ಸು ಕದ್ದಿದ್ದಾಳೆ. ಅವಳನ್ನು ಜೀವನಪರ್ಯಂತ ನೀವೇ ಸಾಕಿ~ ಎಂದು ಅಮ್ಮನ ಕುಕ್ಕುಲತೆ ತೋರಿಸಿ ಸರಿಯಾದ ವಿಳಾಸ ಸಹ ನೀಡದೇ ಹೊರಟು ಹೋದರು. ಅವರ ಮನಸ್ಸು ಕದ್ದ ರೀಟಾ ಬೇರಾರೂ ಅಲ್ಲ. ಮೃಗಾಲಯದ ಬಿಳಿಹುಲಿ. ಈಗ ಭಾನುಪ್ರಾಂಜಿಯ ದತ್ತುಮಗಳು.ಇವರು ಹೆಸರಾಂತ ಯೋಗ ಗುರು ಡಾ. ಬಿ.ಕೆ.ಎಸ್. ಅಯ್ಯಂಗಾರ್. ಬೆಂಗಳೂರು ವಾಸಿ. ಹತ್ತಾರು ಸಾವಿರ ಮಂದಿಗೆ ಯೋಗ ಕಲಿಸಿದರೂ ಬ್ರಹ್ಮ ಹಾಗೂ ಅನಸೂಯಾ ಎಂಬ ಹುಲಿ ದಂಪತಿಯ ಜೀವನಪರ್ಯಂತ ಸಾಕು ತಂದೆ. ಇದಕ್ಕೆ ಅವರು ವ್ಯಯಿಸಿದ್ದು 20 ಲಕ್ಷ ರೂ. ಇವರಷ್ಟೇ ಅಲ್ಲ. ರಾಜಕೀಯ ಕ್ಷೇತ್ರದಲ್ಲಿ ಪಟ್ಟುಗಳನ್ನು ಹಾಕುತ್ತಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಡಿ.ಕೆ. ಶಿವಕುಮಾರ್ ಕೂಡ ಮೈಸೂರು ಮೃಗಾಲಯದ ಪ್ರಾಣಿಗಳ ಪೋಷಕರು.ಇವರೊಂದಿಗೆ ಭಾರತ ಕ್ರಿಕೆಟ್ ತಂಡದ ನಾಯಕ ಎಂ.ಎಸ್. ದೋನಿ, ಅನಿಲ್ ಕುಂಬ್ಳೆ, ಇನ್ಫೋಸಿಸ್ ನಾರಾಯಣಮೂರ್ತಿ, ನಟ ದರ್ಶನ್, ಸಂಕಲ್ಪ ಗ್ರೂಪ್ ಸೇರಿದಂತೆ ಸಾವಿರಾರು ಮಂದಿ, ಸಂಸ್ಥೆಗಳು ಇಲ್ಲಿನ ಪ್ರಾಣಿ, ಪಕ್ಷಿ, ಹಾವುಗಳಿಗೆ ಅನ್ನದಾತರು, ತಂದೆ-ತಾಯಿಗಳು.ಹೌದು. ಮೈಸೂರಿನ ಹೆಸರಾಂತ ಚಾಮರಾಜೇಂದ್ರ ಮೃಗಾಲಯದೊಳಗೆ ಆರಂಭವಾದ `ದತ್ತು~ ಪರ್ವ ಭೌಗೋಳಿಕ ಗಡಿ ದಾಟಿದೆ. ಬೇರೆ ರಾಜ್ಯದವರು ಸಹ ಪ್ರಾಣಿ, ಪಕ್ಷಿಯ ಪೋಷಕರಾಗುತ್ತಿದ್ದಾರೆ. ಮೃಗಾಲಯ ವೀಕ್ಷಿಸಿದ ಅನೇಕ ಸಹೃದಯರು ಸುಮ್ಮನೆ ಹೊರಹೋಗುತ್ತಿಲ್ಲ ಎಂಬುದು ಇಲ್ಲಿನ ವಿಶೇಷ.ದತ್ತು ಎಂದ ತಕ್ಷಣ ನೆನಪಾಗುವುದು ಮಕ್ಕಳು. ನಿರ್ಗತಿಕ ಮಕ್ಕಳನ್ನು ದತ್ತು ಪಡೆಯುವ ಹಾಗೂ ಆರ್ಥಿಕವಾಗಿ ತೀರಾ ಕೆಳಸ್ಥರದಲ್ಲಿರುವವರು ಮಕ್ಕಳನ್ನು ದತ್ತು ನೀಡುವ ಪದ್ಧತಿ ಸಮಾಜದಲ್ಲಿದೆ. ಅದು ಮೃಗಾಲಯದಲ್ಲೂ ಇದೆ. ಮೂಲೋದ್ದೇಶ ಒಂದೇ. ಆದರೆ ಇಲ್ಲಿ ಪ್ರಾಣಿ- ಪಕ್ಷಿಗಳಿಗೆ ದತ್ತು ಭಾಗ್ಯ.ಹೀಗಾಗಿ ಯಾರೇ ಆದರೂ ಪ್ರಾಣಿ- ಪಕ್ಷಿಗಳನ್ನು ಇಷ್ಟಪಟ್ಟು ಸಾಕಲು ಹಣ ನೀಡಬಹುದು. ಈ ವ್ಯವಸ್ಥೆ 1984ರಿಂದಲೇ ಚಾಲ್ತಿಯಲ್ಲಿದ್ದರೂ ಈಚೆಗಿನ ದಿನಗಳಲ್ಲಿ ದತ್ತು ಪಡೆದು ಪ್ರಾಣಿ- ಪಕ್ಷಿಗಳತ್ತ ಪ್ರೀತಿ ತೋರಿಸುತ್ತಿರುವವರ ಸಂಖ್ಯೆ ಹೆಚ್ಚುತ್ತ ನಡೆದಿದೆ. ಇದು ಆಶಾದಾಯಕ ಬೆಳವಣಿಯೂ ಹೌದು.ಶತಮಾನಗಳ ಇತಿಹಾಸ

ಅರಮನೆ ನಗರಿ ಮೈಸೂರಲ್ಲಿ ಮೃಗಾಲಯ ಆರಂಭವಾಗಿದ್ದು 1892ರ ಆಸುಪಾಸಿನಲ್ಲಿ. ಮೈಸೂರು ಅರಸರು ಈಗಿನ ಮೃಗಾಲಯದ ಪಕ್ಕದಲ್ಲಿಯೇ ಇದ್ದ ಲೋಕರಂಜನ್ ಮಹಲ್‌ಗೆ ಬರುವ ರೂಢಿ ಬೆಳೆಸಿಕೊಂಡಿದ್ದರು. ಅದನ್ನು ಸಮರ್ ಪ್ಯಾಲೇಸ್ (ಬೇಸಿಗೆ ಅರಮನೆ) ಎಂದೂ ಕರೆಯಲಾಗುತ್ತಿತ್ತು. ಇಲ್ಲಿಯೇ ಕ್ರೀಡಾ ಚಟುವಟಿಕೆಗಳೂ ನಡೆಯುತ್ತಿದ್ದವು.ಇದರ ಪಕ್ಕದಲ್ಲಿಯೇ ಇದ್ದ 250 ಎಕರೆ ಜಮೀನಿನಲ್ಲಿ ಚಾಮರಾಜೇಂದ್ರ ಒಡೆಯರ ಕನಸಿನಂತೆ ಮೃಗಾಲಯ ಆರಂಭವಾಯಿತು. ಆದರೆ 1916ರ ತನಕ ಈ ಮೃಗಾಲಯಕ್ಕೆ ಸಾರ್ವಜನಿಕರಿಗೆ ಪ್ರವೇಶ ಇರಲಿಲ್ಲ. ಒಡೆಯರ ವಂಶಸ್ಥರು ಹಾಗೂ ಇತರೆ ದೇಶಗಳಿಂದ ಬರುವ ರಾಜಾಧಿರಾಜರು, ಅವರ ಪರಿವಾರದವರು ಮಾತ್ರ ಪ್ರಾಣಿ ಪಕ್ಷಿ-ವೀಕ್ಷಿಸಿ ಆನಂದಿಸುತ್ತಿದ್ದರು. ನಂತರ ಮಹಾರಾಜರೇ ಆಸ್ಥೆ ವಹಿಸಿ ಸಾರ್ವಜನಿಕರ ಪ್ರವೇಶಕ್ಕೆ ಅನುವು ಮಾಡಿಕೊಟ್ಟರು ಎಂಬುದು ಇತಿಹಾಸ.ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಈ ಮೃಗಾಲಯ ರಾಜ್ಯ ಸರ್ಕಾರದ ಸುಪರ್ದಿಗೆ ಬಂತು. 1979 ತನಕವೂ ಸರ್ಕಾರದ ಉಸ್ತುವಾರಿಯಲ್ಲಿಯೇ ನಡೆಯಿತು. ನಂತರ ರಾಜ್ಯದ ಇತರೇ 8 ಮೃಗಾಲಯ ಸೇರಿಸಿ ರಾಜ್ಯ ಮೃಗಾಲಯ ಪ್ರಾಧಿಕಾರ ರಚಿಸಲಾಯಿತು. ಈಗ ಇದರ ಮೇಲ್ವಿಚಾರಣೆಯಲ್ಲಿ ಪ್ರಾಣಿ-ಪಕ್ಷಿಗಳಿಗೆ ಶಾಶ್ವತ ನೆಲೆ ಕಲ್ಪಿಸುವ ಕಾಯಕ ಯಶಸ್ವಿಯಾಗಿ ನಡೆದಿದೆ.ರಾಜ್ಯದಲ್ಲಿ ಮೈಸೂರು, ಬೆಂಗಳೂರಿನ ಬನ್ನೇರುಘಟ್ಟ, ಶಿವಮೊಗ್ಗದ ತಾವರೆಕೊಪ್ಪ, ಬಳ್ಳಾರಿ, ಗುಲ್ಬರ್ಗ, ಗದಗ, ದಾವಣಗೆರೆ ಹಾಗೂ ಬೆಳಗಾವಿಯಲ್ಲಿ (ಒಟ್ಟೂ 8) ಮೃಗಾಲಯಗಳಿವೆ. ಮೈಸೂರು ಹಾಗೂ ಬನ್ನೇರುಘಟ್ಟ ಬಿಟ್ಟರೆ ಉಳಿದವು ಮಿನಿ ಮೃಗಾಲಯಗಳು.ಅಲ್ಲಿ ಪ್ರಾಣಿ-ಪಕ್ಷಿ ಹಾಗೂ ಜಲಚರಗಳ ಸಂಖ್ಯೆಯೂ ಕಡಿಮೆ. ಆದರೆ ಮೈಸೂರಿನಲ್ಲಿ 171 ಜಾತಿಯ ಪ್ರಾಣಿ, ಪಕ್ಷಿ ಹಾಗೂ ಜಲಚರಗಳಿದ್ದು ಅವುಗಳ ಸಂಖ್ಯೆ ಬರೋಬ್ಬರಿ 1,450. ದೇಶದ ದೊಡ್ಡ ದೊಡ್ಡ ಮೃಗಾಲಯಗಳಿಗಿಂತಲೂ ಹೆಚ್ಚು ಹಾಗೂ ವೈವಿಧ್ಯ ತಳಿಗಳು ಇಲ್ಲಿರುವುದು ವಿಶೇಷ.ಇಲ್ಲಿ ಕಾರಂಜಿ ಕೆರೆ ಬದಿಯಿಂದ ಆಫ್ರಿಕನ್ ಆನೆ ಸದ್ದು ಮಾಡಿದರೆ, ಆರು ಸ್ನೇಹಿತರು ಸೇರಿ ದತ್ತು ಪಡೆದಿರುವ ಶ್ರೀಲಂಕಾ ಮೂಲದ ಮೂರು ಅನಕೊಂಡಾ ಹಾವಿನ ಮರಿಗಳು ಸದ್ದು ಮಾಡದೇ ಹೆದರಿಸಬಲ್ಲವು. ಅದರ ಜತೆಗೆ ಡಿ.ಕೆ. ಶಿವಕುಮಾರ್ ಜೀವನಪರ್ಯಂತ ದತ್ತು ಪಡೆದ ಕಾಳಿಂಗಸರ್ಪ ಹೆಡೆ ಎತ್ತದಿದ್ದರೂ ನೋಡಲು ಚೆಂದವೋ ಚಂದ.ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಪೋಷಣೆಯ ಆನೆ ಮತ್ತು ಜಿರಾಫೆ, ನಾಗಪುರದ ಜೈನ್ ಕ್ಲಬ್ ಪೋಷಣೆಯ ಗೊರಿಲ್ಲಾ, ಕುಂಬ್ಳೆಯವರ ಮುದ್ದು ಜಿರಾಫೆ ಮರಿ, ಏಷ್ಯಾದ ಶಂಕರ ಹೆಸರಿನ ಸಿಂಹ, ಬೆಂಗಳೂರಿನ ಕುಮಾರ್ ಆರ್ಗ್ಯಾನಿಕ್‌ನ ಆಸರೆಯಲ್ಲಿ ಬೆಳೆಯುತ್ತಿರುವ ಹುಲಿ, ಬೆಂಗಳೂರಿನ ಅಂತ್ರಾಸ್ ಸಿಸ್ಟಂ ಸಂಸ್ಥೆಯ ಕಾಳಿಂಗಸರ್ಪ, ಮೊಸಳೆ,ಕೋರಮಂಗಲದ ವಂದನಾ ಪೋಷಣೆಯಲ್ಲಿರುವ ಚಿರತೆ, ಶಿವಮೊಗ್ಗ ಕುಡ್ಲೂರು ಎಂ. ಶಾಂತಪ್ಪ ಅವರ ಜೀಬ್ರಾ, ಪುಣೆಯ ಮಿನಾಲ್ ಅವರ ಕಾಳಿಂಗಸರ್ಪ, ಸ್ನೇಹಾ ಮಂಜುನಾಥ್‌ರ ನವಿಲು, ಸಕಲೇಶಪುರದ ಸುಷ್ಮಾ ಅವರ ಲವ್‌ಬರ್ಡ್, ಬೆಂಗಳೂರಿನ ಎಂ.ಆರ್. ರಮೇಶ್ ದತ್ತು ಪಡೆದಿರುವ 10 ಪಕ್ಷಿಗಳೆಲ್ಲ ಸ್ವಚ್ಛಂದವಾಗಿ ನಲಿಯುತ್ತಿವೆ.ಇಷ್ಟೇ ಅಲ್ಲ. 171 ಜಾತಿಗಳಲ್ಲಿ 71 ಜಾತಿಯ ನೂರಾರು ಜೀವಿಗಳನ್ನು ಒಂದು ವರ್ಷಕ್ಕೆ, ಎರಡು, ಮೂರು ಹಾಗೂ ಎಂಟು ಬಾರಿ ದತ್ತು ಪಡೆದವರ, ಜೀವನಪರ್ಯಂತ ದತ್ತು ಪಡೆದು ಸಾಕುತ್ತಿರುವವರ ಹೆಸರುಗಳೂ ಆಯಾ ಪ್ರಾಣಿ ಪಕ್ಷಿಗಳ ಪಂಜರದ ಮುಂದೆ ಎದ್ದು ಕಾಣುತ್ತವೆ. ಬೆಂಗಳೂರಿನ ಕೆ.ಎಸ್. ಹಟ್ಟಂಗಡಿ ಅವರು ಮೊಸಳೆ, ಕಾಳಿಂಗಸರ್ಪವನ್ನು 8 ತಿಂಗಳು ದತ್ತು ಪಡೆದು ಸಾಕಿದರೆ, ಚೆನೈನ ಗೋಪಾಲ ರಾಮನಾಥ್ 2 ವರ್ಷ ಮೂರು ವಿವಿಧ ಪಕ್ಷಿ ದತ್ತು ಪಡೆದಿದ್ದಾರೆ.ಬೆಂಗಳೂರಿನ ರಮೇಶ್  ಸತತ 9ನೇ ಬಾರಿ ವರ್ಷಕ್ಕೆ 65,500 ರೂಪಾಯಿ ನೀಡಿ 10 ಜಾತಿಯ ಹಕ್ಕಿ, ಮೊಸಳೆ ಪೋಷಕರಾಗಿದ್ದಾರೆ. ಕುಂಬ್ಳೆ ಎರಡನೇ ಬಾರಿ ದತ್ತು ಪಡೆದಿದ್ದು, ಚೆನ್ನೈನ ರಂಗನಾಥ್ ಅವರು ಅನಕೊಂಡಾ ಹಾಗೂ ನವಿಲನ್ನು 13,500 ರೂಪಾಯಿ ನೀಡಿ ಸಾಕುತ್ತಿರುವುದು ವಿಶೇಷ.ವ್ಯಕ್ತಿಗಳಲ್ಲದೇ ಬ್ಯಾಂಕ್ ಆಫ್ ಮಹಾರಾಷ್ಟ್ರ ಏಕೈಕ ಚಿಂಪಾಜಿಯನ್ನು 4ನೇ ಬಾರಿಗೆ ದತ್ತು ತೆಗೆದುಕೊಂಡಿದೆ. ಮುಂಬೈನ ಶ್ರೀಧರ್ ಅಯ್ಯರ್ ಅವರು ನವಿಲು, ನಿಲಗಿರ್, ಲಂಗೂರ್, ಕಾಳಿಂಗಸರ್ಪ ಹಾಗೂ ಮೊಸಳೆಯನ್ನು 79,708 ರೂಪಾಯಿ ನೀಡಿ 3ನೇ ಬಾರಿಗೆ ದತ್ತು ಪಡೆದಿದ್ದಾರೆ.ಮೈಸೂರಿನ ಕೆ.ಟಿ. ಕರಿಯಪ್ಪ ಅವರು ಅಭಿಮನ್ಯು ಹೆಸರಿನ ಆನೆಯನ್ನು 2ನೇ ಬಾರಿ, ಬೆಂಗಳೂರಿನ ವೇದವಲೈ ಎಂಬುವವರು ಎರಡು ಆನೆಗಳನ್ನು 3ನೇ ಬಾರಿ, ನಟ ದರ್ಶನ್ ಆನೆ ಮರಿಯನ್ನು ಎರಡು ಬಾರಿ ದತ್ತು ತೆಗೆದುಕೊಂಡಿದ್ದಾರೆ.ಬ್ರಿಗೇಡ್ ಎಂಟರ್‌ಪ್ರೈಸಸ್ 4.69 ಲಕ್ಷ ರೂಪಾಯಿ ಕೊಟ್ಟು ಆನೆ, ಹುಲಿ, ಜಿರಾಫೆ ಹಾಗೂ ಗೋರಿಲ್ಲಾವನ್ನು ಪೋಷಿಸುತ್ತಿದೆ. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಹಿರಿಯ ಸ್ವಾಮೀಜಿಗಳ ನೆನಪಿನಲ್ಲಿ ಅವರ ಜನ್ಮದಿನಾಚರಣೆಯಂದು  ಮೃಗಾಲಯದ ಇಡೀ ಖರ್ಚು ಭರಿಸುತ್ತ ಬಂದಿದ್ದಾರೆ.ದತ್ತು ಸ್ವೀಕರಿಸಲು ಸಹಸ್ರ ಸಹಸ್ರ ರೂಪಾಯಿಯೇ ಇರಬೇಕೆಂದಿಲ್ಲ. ಅವರವರ ಶಕ್ತ್ಯಾನುಸಾರ ನೀಡುವ ಅವಕಾಶವೂ ಇದೆ. ಒಂದು ಸಾವಿರ ರೂಪಾಯಿ ನೀಡಿ ಒಂದು ನವಿಲನ್ನು ಅಥವಾ ಇಷ್ಟದ ಹಕ್ಕಿಯನ್ನು ಮಕ್ಕಳ ಹೆಸರಿಗೆ ದತ್ತು ಪಡೆದಿರುವವರ ದೊಡ್ಡ ಪಟ್ಟಿಯೇ ಇದೆ. ಅಪ್ಪನ ನೆನಪಿಗೆ, ಅಮ್ಮನ ಪ್ರೀತಿಗೆ, ಹುಟ್ಟುಹಬ್ಬಕ್ಕೆ, ಸ್ಮರಣೆಗೆ ಹಕ್ಕಿ- ಪ್ರಾಣಿ ಜಲಚರಗಳನ್ನು ದತ್ತು ಪಡೆದಿರುವವರ ಸಂಖ್ಯೆ ಗಣನೀಯವಾಗಿದೆ.ದತ್ತು ಪೋಷಕರ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಇದೆ. ಆದರೆ, ಈ ಯಾರನ್ನೂ ಮೈಸೂರು ಮೃಗಾಲಯ ಪ್ರಾಧಿಕಾರವಾಗಲಿ, ನಿರ್ದೇಶಕರಾಗಲಿ `ದತ್ತು ಪರ್ವಕ್ಕೆ~ ಮುಂದಾಗಿ ಎಂದು ಕೇಳಿಲ್ಲ. ಮೃಗಾಲಯದೊಳಗೆ ಯಾವುದೇ ಭಿತ್ತಿಪತ್ತ ಇಲ್ಲ. ಕರಪತ್ರ ಇಲ್ಲವೇ ಇಲ್ಲ. ಆದರೂ ಪೋಷಕರಾಗುವ ಹಂಬಲ ಜನರಲ್ಲಿದೆ ಎನ್ನುವುದೇ ಮೆಚ್ಚಬೇಕಾದ ಸಂಗತಿ.ಮೈಸೂರು ಮೃಗಾಲಯ ಪ್ರಾಣಿ, ಪಕ್ಷಿ, ಜಲಚರಗಳ ಕಲರವದ ನಡುವೆ ಸ್ವಚ್ಛಂದವಾಗಿದೆ. 3 ಕಿಲೋ ಮೀಟರ್ ಸುತ್ತಳತೆಯಲ್ಲಿರುವ ಇದರ ಪಕ್ಕದಲ್ಲಿಯೇ ಕಾರಂಜಿ ಕೆರೆಯೂ ಇದೆ. ಈ ಎರಡೂ ಪ್ರವಾಸಿಗಳಿಗೆ ಹಬ್ಬ. ಮೃಗಾಲಯ ವೀಕ್ಷಿಸಲು ಬ್ಯಾಟರಿ ಚಾಲಿತ ವಾಹನಗಳಿವೆ. ಅಂಗವಿಕಲರಿಗೆ ಉಚಿತ ಸೇವೆ ಲಭ್ಯ.ಅನಕೊಂಡಕ್ಕೆ ದುಂಬಾಲು

ಮೃಗಾಲಯಕ್ಕೆ ಶ್ರೀಲಂಕಾದಿಂದ ಅನಕೊಂಡಾ ಬಂದಿದ್ದು ಕಳೆದ ತಿಂಗಳ ಆಸುಪಾಸಿನಲ್ಲಿ. ನಾಲ್ಕು ಮರಿಗಳನ್ನು ಪ್ರಾಧಿಕಾರ ಕೊನೆಗೂ ತರಿಸಿತು. ಆದರೆ, ಅವುಗಳನ್ನು ದತ್ತು ಪಡೆಯಲು ಮುಗಿಬಿದ್ದವರು ಹಲವರು. ಹೇಳಿ ಕೇಳಿ ಅನಕೊಂಡ ಬೇರೆ. ಹೀಗಾಗಿ ಅದರ ಸಾಧಕ-ಬಾಧಕ, ವರ್ಷದ ಖರ್ಚು ವೆಚ್ಚ ಅಳೆದು ತೂಗಿದ ಪ್ರಾಧಿಕಾರ 20 ಸಾವಿರ ರೂ ನಿಗದಿಪಡಿಸಿತು. ಮೈಸೂರಿನ 6 ಆಪ್ತ ಸ್ನೇಹಿತರು ಈಗ ಅವುಗಳ ಪೋಷಕರು. 

ಪ್ರಾಣಿಪಕ್ಷಿಗಳ ರಕ್ಷಣೆಯ ಅರಿವು

`ಮೃಗಾಲಯ ಸ್ವಚ್ಛವಾಗಿದೆ ಎನ್ನುವುದಕ್ಕಿಂತ ಇಲ್ಲಿರುವ ಎಲ್ಲ ತಳಿಯ ಪ್ರಾಣಿ, ಪಕ್ಷಿಗಳು ಉಲ್ಲಸಿತವಾಗಿವೆ. ಅದನ್ನು ನೋಡಿ ಜನರು ದತ್ತುಪಡೆದು ಪೋಷಕರಾಗುವ ಹಂಬಲ ತೋರಿಸುತ್ತಿದ್ದಾರೆ. ಇದು ಮುಂದುವರಿಯಲಿ. ಜನರಲ್ಲಿ ಪ್ರಾಣಿಪಕ್ಷಿ ರಕ್ಷಣೆಯ ಅರಿವು ಹೆಚ್ಚಾಗಲಿ~.

 -ಮೃಗಾಲಯ ನಿರ್ದೇಶಕ ಬಿ.ಪಿ. ರವಿ. 1984ರಲ್ಲಿ ವಿಕ್ರಾಂತ್ ಟೈರ್ ಸಂಸ್ಥೆ ಮೊಟ್ಟಮೊದಲು ದತ್ತು ಪರ್ವಕ್ಕೆ ನಾಂದಿ ಹಾಡಿತು. ಆದರೆ, ಅದು ನಂತರ ಮುಂದು ವರಿಯದೇ ಅಲ್ಲಿಗೇ ನಿಂತಿತು. 1996 ನಂತರ ಮತ್ತೆ ಚಾಲ್ತಿ ಪಡೆಯಿತು. ಆದರೂ ಕುಂಟುತ್ತಲೇ ಸಾಗಿತ್ತು.

 

2001ರಲ್ಲಿ ಕೇವಲ ಎಂಟು ಮಂದಿ ಏಳು ಜಾತಿಯ ಪ್ರಾಣಿಗಳನ್ನು ದತ್ತು ಪಡೆದಿದ್ದರು. ಆಗ ಬಂದ ಹಣ 38,633 ರೂಪಾಯಿ. ಆದರೆ 2011-12ರಲ್ಲಿ ಪೋಷಕರ ಸಂಖ್ಯೆ 1,272. ಇವರಿಂದ  ಸಂಗ್ರಹವಾಗಿರುವ ಹಣ 1.46 ಕೋಟಿ ರೂಪಾಯಿ. ಪ್ರಾಣಿಪ್ರೀತಿ ಜಾಸ್ತಿಯಾಗಲಿ.

ಚಿತ್ರಗಳು: ಎಚ್.ಜಿ. ಪ್ರಶಾಂತ್

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.