ಸೋಮವಾರ, ಡಿಸೆಂಬರ್ 16, 2019
18 °C

ಮೃಗಾಲಯ ಪ್ರಾಣಿಗಳಿಗೆ ಅಲ್ಟ್ರಾಸೌಂಡ್ ಸ್ಕ್ಯಾನರ್

ಗಿರೀಶ ದೊಡ್ಡಮನಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೃಗಾಲಯ ಪ್ರಾಣಿಗಳಿಗೆ ಅಲ್ಟ್ರಾಸೌಂಡ್ ಸ್ಕ್ಯಾನರ್

ಮೈಸೂರು: ಶನಿವಾರ ಬೆಳಿಗ್ಗೆ ಮೈಸೂರು ಮೃಗಾಲಯದಲ್ಲಿ ಹಸಿರು ಅನಕೊಂಡ ಮರಿಯೊಂದು ಅಸುನೀಗುವುದರೊಂದಿಗೆ ಹಾವುಗಳಿಗೂ ಹೃದಯಾಘಾತ ಆಗುತ್ತದೆ ಎನ್ನುವ ಅಪರೂಪದ ಸಂಗತಿ ಬೆಳಕಿಗೆ ಬಂದಿದೆ.ಅನಕೊಂಡಕ್ಕೆ ಆದಂತಹ ಸಮಸ್ಯೆ ಬೇರೆ ಪ್ರಾಣಿಗಳಿಗೂ ಆಗಬಹುದಲ್ಲವೇ? ಅದಕ್ಕಾಗಿಯೇ ಪ್ರಾಣಿಗಳ ಆರೈಕೆ, ಆರೋಗ್ಯ ಪರೀಕ್ಷೆಗಾಗಿ ಅಲ್ಟ್ರಾಸೌಂಡ್ ಸ್ಕ್ಯಾನರ್ ಅಳವಡಿಸಲು ಸಿದ್ಧತೆ ನಡೆಸಿದೆ.ಸೂಟ್‌ಕೇಸ್ ಗಾತ್ರದ ಈ ಡಿಜಿಟಲ್ ಅಲ್ಟ್ರಾಸೌಂಡ್ ಸ್ಕ್ಯಾನರ್ ಅಳವಡಿಸಲು ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಮಂಜೂರಾತಿಯೂ ಸಿಕ್ಕಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಯಂತ್ರ ಮೃಗಾಲಯದಲ್ಲಿ ಕೆಲಸ ಶುರು ಮಾಡಲಿದೆ.ಅಪರೂಪದ ಅನಕೊಂಡ, ಹುಲಿ, ಚಿಂಪಾಂಜಿ, ಗೋರಿಲ್ಲಾ, ಸಿಂಹ, ಹಾವುಗಳು, ಆಮೆಗಳು, ಆನೆಗಳು, ಚೀತಾ, ಜಿರಾಫೆ, ಬಿಳಿ ನವಿಲು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಪ್ರಬೇಧಗಳ ಪ್ರಾಣಿ, ಪಕ್ಷಿ ಮತ್ತು ಸರೀಸೃಪಗಳು ಇಲ್ಲಿ ಇವೆ.ಮನುಷ್ಯರಿಗೆ ಹೃದಯಾಘಾತ ಆಗುವಂತಹ ಕಾರಣಗಳು ಪ್ರಾಣಿಗಳಿಗೂ ಇರಬೇಕೆಂದಿಲ್ಲ. ಅದಕ್ಕೆ ಬೇರೆ ಬೇರೆ ಕಾರಣಗಳು ಇರುತ್ತವೆ. ಮನುಷ್ಯರಿಗೆ ಹೃದಯ ಮತ್ತಿತರ ಅಂಗಗಳ ತೊಂದರೆಯಾದರೆ ಮಾತಿನ ಮೂಲಕ ಹೇಳಬಲ್ಲರು. ಆದರೆ ಮೂಕಪ್ರಾಣಿಗಳ ವೇದನೆ ಅರ್ಥವಾಗುವುದು ಅವುಗಳು ಆಹಾರ, ನೀರು ಬಿಟ್ಟು ನಿತ್ರಾಣವಾದಾಗಲೇ.ಆದ್ದರಿಂದ ಅವುಗಳ ರಕ್ತಪರೀಕ್ಷೆ, ಚರ್ಮಪರೀಕ್ಷೆಗಳು ಸೇರಿದಂತೆ ವಿವಿಧ ಆರೋಗ್ಯ ಪರೀಕ್ಷೆಯನ್ನು ನಿಯಮಿತವಾಗಿ ಮಾಡಲಾಗುತ್ತದೆ. ಆದರೆ, ಇದುವರೆಗೂ ಮೈಸೂರು ಮೃಗಾಲಯಕ್ಕೆ ಸ್ಕ್ಯಾನರ್ ಯಂತ್ರದ ಸೌಲಭ್ಯವಿರಲಿಲ್ಲ. ಅದಕ್ಕಾಗಿ ಹಾಸನದ ಪಶುವೈದ್ಯಕೀಯ ಮಹಾವಿದ್ಯಾಲಯ ಅಥವಾ ಬೆಂಗಳೂರಿನಲ್ಲಿರುವ ಸೌಲಭ್ಯಗಳನ್ನು ಅವಲಂಬಿಸಬೇಕಾಗುತ್ತಿತ್ತು. ಅದಕ್ಕಾಗಿಯೇ ಆ ತೊಂದರೆ ತಪ್ಪಿಸಲು ಈಗ ಸುಮಾರು 10-12 ಲಕ್ಷ ರೂಪಾಯಿ ವೆಚ್ಚದ ಸ್ಕ್ಯಾನಿಂಗ್ ಯಂತ್ರ ಅಳವಡಿಸಲಾಗುತ್ತಿದೆ. ಈ ಯಂತ್ರವು ಸೂಟ್‌ಕೇಸ್ ಗಾತ್ರದ್ದಾಗಿದ್ದರೂ ಆನೆಯ ದೊಡ್ಡ ದೇಹದ ಒಳಗಿನ ರಹಸ್ಯವನ್ನೂ ಬೇಧಿಸಬಲ್ಲದು. ನಾಯಿಮರಿಯ ಪುಟ್ಟ ದೇಹದ ಒಳಗೂ ಬೆಳಕು ಚೆಲ್ಲಬಲ್ಲದು.`ಈ ಯಂತ್ರವೂ ಸಾಮಾನ್ಯವಾಗಿರುವ ಅಲ್ಟ್ರಾಸೌಂಡ್ ಮೆಷೀನ್‌ನಂತೆಯೇ ಇರುತ್ತದೆ. ಆದರೆ ಪ್ರಾಣಿಗಳ ದೇಹದ ಸ್ಕ್ಯಾನಿಂಗ್‌ಗೆ ಅಗತ್ಯವಾಗಿರುವ ತಂತ್ರಾಂಶ ಮಾತ್ರ ವಿಭಿನ್ನ. ಮೃಗಾಲಯ ಪ್ರಾಧಿಕಾರವು ಈ ಸೌಲಭ್ಯವನ್ನು ಕೊಡಲು ಉತ್ಸುಕವಾಗಿದ್ದು ಟೆಂಡರ್ ಕೂಡ ಆಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಯಂತ್ರ ಬರಲಿದೆ~ ಎಂದು ಮೃಗಾಲಯದ ವೈದ್ಯ ಡಾ. ಸುರೇಶಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.ಪ್ರಾಣಿಗಳು ಗರ್ಭಧರಿಸಿದ ಸಂದರ್ಭದಲ್ಲಿ ಪರೀಕ್ಷೆ ಮಾಡಲು ಸ್ಕ್ಯಾನಿಂಗ್ ಯಂತ್ರದಿಂದ ಹೆಚ್ಚು ಸಹಕಾರಿಯಾಗಲಿದೆ. ಅದಲ್ಲದೇ ವಿದೇಶದಿಂದ ವಿನಿಮಯ ಮಾಡಿಕೊಂಡು ಬಂದ ಪ್ರಾಣಿ, ಪಕ್ಷಿಗಳ ಜಠರ, ಗರ್ಭಕೋಶ, ಕರುಳು, ಅನ್ನನಾಳ, ರೆಕ್ಕೆಗಳ ನರವ್ಯೆಹ, ಸ್ನಾಯುಗಳು ಮತ್ತಿತರ ಅಂಗಾಂಗಳನ್ನು ತಪಾಸಣೆ ಮಾಡಿ, ಅವುಗಳ ಆಹಾರ, ವಿಹಾರ ಅಭ್ಯಾಸ ಮಾಡಲು ಸಹಕಾರಿಯಾಗಲಿದೆ ಎಂದು ವೈದ್ಯರು ಹೇಳುತ್ತಾರೆ.

ಪ್ರತಿಕ್ರಿಯಿಸಿ (+)