ಭಾನುವಾರ, ಜೂನ್ 13, 2021
24 °C
ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಅಮಾನತು

ಮೃತನ ಖಾತೆಗೆ ಹಣ ಮಂಜೂರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಯಕೊಂಡ:  ಬಡತನದ ಬೇಗೆಯಿಂದ ಜನ ಕೂಲಿ ಅರಸಿ ದೂರದ ನಗರಗಳಿಗೆ ಗುಳೆ ಹೋಗು ವುದನ್ನು ತಪ್ಪಿಸಿ, ಗ್ರಾಮಗಳಲ್ಲಿಯೇ ಕೂಲಿ ನೀಡಿ ಬದುಕು ಹಸನಾಗಿಸಲು ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತಂದ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ’ ಗೊಂದಲದ ಗೂಡಾಗಿ ರುವುದು ಮಾತ್ರವಲ್ಲದೇ ಗುತ್ತಿಗೆದಾರ ರಿಗೆ ಮತ್ತು ಪಂಚಾಯ್ತಿ ಅಧಿಕಾರಿಗಳಿಗೆ ಜೇಬು ತುಂಬಿಸುವ ವ್ಯವಹಾರವಾಗಿದೆ ಎಂಬ ಆರೋಪ ಕೇಳಿ ಬಂದಿದೆ.ಇದಕ್ಕೆ ಪುಷ್ಠಿ ನೀಡುವ ಘಟನೆ ಸಮೀಪದ ಆಲೂರು ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ. ಜೀವಂತ ಇರುವವರಿಗೆ ಮಾತ್ರವಲ್ಲ ಮೃತಪಟ್ಟವರಿಗೂ ಎನ್‌ಎಂಆರ್‌ ಮಾಡಿ ಅವರ ಖಾತೆಗೆ ಹಣ ಜಮಾ ಮಾಡುವ ಮಟ್ಟಿಗೆ ಉದ್ಯೋಗ ಖಾತ್ರಿ ಯೋಜನೆ ತಲುಪಿದೆ.

ಉದ್ಯೋಗ ಖಾತ್ರಿ ಯೋಜನೆಯಡಿ ಮೃತಪಟ್ಟ ವ್ಯಕ್ತಿ ಹೆಸರಿನಲ್ಲಿ ಎನ್‌.ಎಂ.ಆರ್‌, ಎಂಐಎಸ್‌ ಮತ್ತಿತರ ದಾಖಲೆ ಸೃಷ್ಟಿಸಿ ಹಣಪಡೆದ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಸ್ವಾಮಿ ಲಿಂಗಪ್ಪ ಎಂಬುವವರನ್ನು ಅಮಾನತುಗೊಳಿಸಿದ ಪ್ರಕರಣ ಸಮೀಪದ ಆಲೂರು ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ.ಆಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಲ್ಲಾಪುರ ಗ್ರಾಮದ ಲಕ್ಷ್ಮೀ ಬಾಯಿ ಇವರ ಜಮೀನಿನಲ್ಲಿ ಜಮೀನು ಸಮತಟ್ಟು ಕಾಮಗಾರಿ ನಿರ್ವಹಿಸಲು 2009–10ರಲ್ಲಿ ಕ್ರಿಯಾ ಯೋಜನೆ ಅನುಮೋದನೆಯಾಗಿತ್ತು. 2010–11ರಲ್ಲಿ ಕಾಮಗಾರಿ ನಡೆಸಲಾಗಿತ್ತು. ರೈತ ಮುಖಂಡ ಮಲ್ಲಾಪುರದ ದೇವರಾಜ ಎಂಬುವವರು ಕಾಮಗಾರಿಯಲ್ಲಿ ಅಕ್ರಮ ನಡೆದಿವೆ ಎಂದು ಆರೋಪಿಸಿ ತನಿಖೆಗೆ  ಒತ್ತಾಯಿಸಿದ್ದರು. ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ತನಿಖೆ ನಡೆಸಿದ್ದರು. ಓಬಮ್ಮ ಎಂಬುವವರು 03–01–2011ರಂದು ಮೃತಪಟ್ಟಿದ್ದರೂ ಇವರ ಹೆಸರಿನಲ್ಲಿ ಸತತ 2 ವರ್ಷದವರೆಗೂ 12 ಬಾರಿ ಉದ್ಯೋಗ ಕೋರಿಕೆ ಅರ್ಜಿ ಪಡೆದು, ಎನ್‌ಎಂಆರ್‌ ಮಾಡಿ ಎಂಐಎಸ್‌ನಲ್ಲಿ ಅಳವಡಿಸಿ, ಇವರ ಖಾತೆಗೆ ₨ 8,045ನ್ನು ಜಮಾ ಮಾಡಿಕೊಂಡು  ಡ್ರಾ ಮಾಡಲಾಗಿದೆ!09–03–2010ರಂದು ಮೃತಪಟ್ಟ ಮಹೇಶ್ವರಪ್ಪ ಎಂಬುವವರ ಹೆಸರಿನಲ್ಲಿಯೂ ಅವರ ಮರಣಾ ನಂತರ  3 ಬಾರಿ ಎನ್ಎಂಆರ್‌ ಮಾಡಿ, ಎಂ.ಐ.ಎಸ್‌ನಲ್ಲಿ ಅಳವಡಿಸಿ₨ 1,200ನ್ನು ಡ್ರಾ ಮಾಡಲಾಗಿದೆ!

ತನಿಖೆ ವೇಳೆಯಲ್ಲಿ ಆಲೂರು ಗ್ರಾಮ ಪಂಚಾಯ್ತಿಯಲ್ಲಿ ಯೋಜನೆಯನ್ನು ಸೂಕ್ತರೀತಿಯಲ್ಲಿ ನಿರ್ವಹಿಸದಿರುವುದು ಕೂಡಾ ಕಂಡು ಬಂದಿದೆ. ಈ ಸಂಬಂಧಿಸಿದ ಪಂಚಾಯ್ತಿ ಸಿಬ್ಬಂದಿ ಮತ್ತು ಗಣಕಯಂತ್ರ ನಿರ್ವಾಹಕರ ಮೇಲೆ ಕ್ರಮ ಜರುಗಿಸಲು ಉಪ ಕಾರ್ಯದರ್ಶಿಗಳು ವರದಿ ನೀಡಿದ್ದರು. ಅಕ್ರಮ ಎಸಗಿದ ಕಾರ್ಯದರ್ಶಿ ಸ್ವಾಮಿ ಲಿಂಗಪ್ಪ ಎಂಬುವವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಮಚಂದ್ರ ಆದೇಶಿಸಿದ್ದಾರೆ.ಎನ್‌ಆರ್ಇಜಿ ಮತ್ತು ಬಿಆರ್‌ಜಿಎಫ್‌ ಯೋಜನೆಯಲ್ಲಿ ಇಂಥ ಪ್ರಕರಣಗಳು ಸಾಕಷ್ಟು ಪ್ರಮಾಣದಲ್ಲಿ ನಡೆದಿದ್ದು, ಹೆಚ್ಚಿನ ತನಿಖೆಗೆ ಹೋರಾಟ ಮಾಡುತ್ತೇವೆ ಎನ್ನುತ್ತಾರೆ ರೈತ ಮುಖಂಡ ಮಲ್ಲಾಪುರದ ದೇವರಾಜ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.