ಸೋಮವಾರ, ಮಾರ್ಚ್ 1, 2021
24 °C

ಮೃತರೊಂದಿಗೆ ಸಂವಾದ!

ವಿಶ್ವನಾಥ ಶರ್ಮಾ Updated:

ಅಕ್ಷರ ಗಾತ್ರ : | |

ಮೃತರೊಂದಿಗೆ ಸಂವಾದ!

ಸಾವು ಎಂಬುದು ದೇಹಕ್ಕೆ ಮಾತ್ರ, ಆತ್ಮಕ್ಕೆ ಅಲ್ಲ. ಆತ್ಮಕ್ಕೆ ಸಾವೇ ಇಲ್ಲ ಎಂಬ ನಂಬಿಕೆಗಳು ಎಲ್ಲಾ ದೇಶಗಳಲ್ಲಿ, ಎಲ್ಲಾ ಧರ್ಮಗಳಲ್ಲೂ ಇದೆ. ಈ ಕಾರಣಕ್ಕಾಗಿಯೇ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಂತಿಮ ಸಂಸ್ಕಾರ, ಶ್ರಾದ್ಧ, ಇತ್ಯಾದಿ ಕ್ರಿಯಾಕರ್ಮಗಳನ್ನು ನೆರವೇರಿಸುತ್ತಾರೆ.ಒಬ್ಬ ವ್ಯಕ್ತಿ ಹೇಗೆ ಹಳೆಯ ಮತ್ತು ಹರಿದ ಬಟ್ಟೆಗಳನ್ನು ತ್ಯಜಿಸಿ ಹೊಸ ಬಟ್ಟೆಗಳನ್ನು ಧರಿಸುತ್ತಾನೆಯೋ ಹಾಗೆ  ಆತ್ಮವು ಕೂಡಾ  ಹಳೆಯ ಶರೀರವನ್ನು ತೊರೆದು ಹೊಸ ಶರೀರವನ್ನು ಪ್ರವೇಶಿಸುತ್ತದೆ ಎಂದು ಭಗವದ್ಗೀತೆಯಲ್ಲಿ ಉಲ್ಲೇಖವಿದೆ. ಈಜಿಪ್ಟ್‌ನಲ್ಲಿ ಸಾವಿನ ನಂತರದ ನಂಬಿಕೆಗಳು ಆಳವಾಗಿ ಬೇರೂರಿವೆ. ಹೀಗಾಗಿ ಶವಗಳನ್ನು ಸಂರಕ್ಷಿಸಿಟ್ಟು ಅದರ ಜತೆ ಅವರು ಬಳಸುವ ವಸ್ತುಗಳನ್ನೂ ಹೂಳುವ ಆಚರಣೆ ಇದೆ.ಅಮೆರಿಕದ ಮನಃಶಾಸ್ತ್ರಜ್ಞ ಮತ್ತು ವೈದ್ಯ ರೇಮಂಡ್ ಎ.ಮೂಡಿ ಅವರು ‘ಲೈಫ್ ಆಫ್ಟರ್ ಲೈಫ್’ (Life After Life)ಎಂಬ ಪುಸ್ತಕದಲ್ಲಿ ಮೃತರೊಂದಿಗೆ ಸಂವಹನ ನಡೆಸುವ ಬಗ್ಗೆ ವಿವರಿಸಿದ್ದಾರೆ. ಆದರೆ ಮೃತರೊಂದಿಗೆ ಸಂವಾದ  ನಡೆಸಬಹುದು ಎಂಬುದನ್ನು ಒಪ್ಪಿಕೊಳ್ಳದೆ ಇರುವವರೇ ಹೆಚ್ಚು. ವೈಜ್ಞಾನಿಕವಾಗಿ ದೃಢಪಡದಿರು­ವುದೂ ನಿರಾಕರಣೆಗೆ ಬಹುಮುಖ್ಯ ಕಾರಣವಿರಬಹದು.ಅದೇನೇ ಇರಲಿ ಇದೀಗ ಮೃತರೊಂದಿಗೆ ಸಂವಾದ ನಡೆಸುವ ಪರಿಕಲ್ಪನೆಗೆ ಮೆಸಾಚುಸೆಟ್ಸ್ ತಂತ್ರಜ್ಞಾನ ಸಂಸ್ಥೆ (ಎಂಐಟಿ) ಹೊಸ ಅರ್ಥ ನೀಡಿದೆ.ಆಧುನಿಕ ತಂತ್ರಜ್ಞಾನ ಬಳಸಿ ಸತ್ತ ವ್ಯಕ್ತಿಯ ಡಿಜಿಟಲ್ ಪಾತ್ರ ಪುನರ್ ಸೃಷ್ಟಿಸುವ ಮೂಲಕ ಆತ್ಮೀಯರ ಜತೆ ಸಂವಾದ ಸಾಧ್ಯ ಎನ್ನುವುದು ‘ಎಂಐಟಿ’ ಸಂಶೋಧಕರ ಅಭಿಮತ.ಸತ್ತವರ ಜತೆ ಸಂವಾದ ನಡೆಸಲೆಂದೇ  ತಜ್ಞರು www.eterni.me ಎಂಬ ಜಾಲತಾಣವನ್ನು ರೂಪಿಸಿದ್ದಾರೆ. ಸಂಕೀರ್ಣವಾದ ಕೃತಕ ಬುದ್ಧಿಮತ್ತೆ  ಇರುವ ಕ್ರಮಾವಳಿಗಳ (ಅಲ್ಗಾರಿದಂ) ವ್ಯವಸ್ಥೆ ಮೂಲಕ  ಈ ಜಾಲತಾಣ ಕಾರ್ಯಾಚರಿಸುತ್ತದೆ.ಅಗತ್ಯ ಮಾಹಿತಿಗಳು

ವ್ಯಕ್ತಿ ಸತ್ತ ನಂತರವೂ ಆತನೊಂದಿಗೆ ಸಂವಾದ ನಡೆಸಲು ಈ ಜಾಲತಾಣಕ್ಕೆ ಅಗತ್ಯ ಮಾಹಿತಿಗಳನ್ನು ನೀಡಬೇಕು.ಮೊದಲು ವೆಬ್‌ಕ್ಯಾಮ್ ಬಳಸಿ ಆತ್ಮೀಯರ ಭಾವಚಿತ್ರವನ್ನು ತೆಗೆದು ಅದನ್ನು ಜಾಲತಾಣಕ್ಕೆ ಅಪ್‌ಲೋಡ್ ಮಾಡಬೇಕು. ಅದನ್ನು ಡಿಜಿಟಲ್ ಪಾತ್ರವಾಗಿ ಮರುಸೃಷ್ಟಿ ಮಾಡಲಾಗುತ್ತದೆ.ನಂತರ ಆತನ ಜೀವಿತಾವಧಿಯ ಪ್ರತಿಯೊಂದು ಮಹತ್ವದ ಅಂಶಗಳ ಮಾಹಿತಿಯನ್ನೂ ನೀಡಬೇಕು. ಮುಖ್ಯವಾಗಿ ಅಂತರ್ಜಾಲಕ್ಕೆ ಸಂಬಂಧಿಸಿದ ಕಾರ್ಯಚಟು­ವಟಿಕೆಗಳು ಅಂದರೆ, ಚಾಟಿಂಗ್, ಇ–ಮೇಲ್, ಸಾಮಾಜಿಕ ಜಾಲತಾಣಗಳಲ್ಲಿ ಇರುವ ಆತನ ನಡವಳಿಕೆ ಮತ್ತು ಮಾಹಿತಿಗಳನ್ನು ನೀಡಬೇಕು. ಈ ಎಲ್ಲಾ ಮಾಹಿತಿಗಳಿಂದಾಗಿ ಜಾಲತಾಣದಲ್ಲಿ ವ್ಯಕ್ತಿಯ ವ್ಯಕ್ತಿತ್ವದ ಸಂಪೂರ್ಣ ಮಾಹಿತಿ ಸಿದ್ಧಗೊಳ್ಳುತ್ತದೆ.ಅಂತಿಮವಾಗಿ ಡಿಜಿಟಲ್ ಭಾವಚಿತ್ರದೊಂದಿಗೆ ವ್ಯಕ್ತಿಯ  ವ್ಯಕ್ತಿತ್ವಕ್ಕೆ ಸಂಬಂಧಿತ ಮಾಹಿತಿಗಳನ್ನು ಸೇರಿಸಲಾಗುತ್ತದೆ. ಈ ಜಾಲತಾಣಕ್ಕೆ ಭೇಟಿ ನೀಡಿ ಕುಟುಂಬದವರು ಅಥವಾ ಸ್ನೇಹಿತರು ಮೃತರೊಂದಿಗೆ ಸಂವಾದ ನಡೆಸಬಹುದು ಎನ್ನುತ್ತಾರೆ ತಜ್ಞರು.ಹೇಗೆ ಸಾಧ್ಯ?

ಕಂಪ್ಯೂಟರಿನಲ್ಲಿ ಆನ್‌ಲೈನ್ ಚಾಟಿಂಗ್ (Skype) ನಡೆಸುವಂತೆಯೇ ಸತ್ತ ವ್ಯಕ್ತಿಯ ಜತೆ ಸಂವಾದಿ­ಸಬಹುದು. ವ್ಯಕ್ತಿಯ ಜೀವಿತಾವಧಿಯ ಎಲ್ಲಾ ಮಾಹಿತಿಗಳ ಜತೆಗೆ ಹಾವ–ಭಾವ ಸಂಗ್ರಹಿಸುವು­ದರಿಂದ ಆತ ಒಂದು ನಿರ್ದಿಷ್ಟ ವಿಷಯಕ್ಕೆ ಹೇಗೆ ಪ್ರತಿಕ್ರಿಯೆ ನೀಡುತ್ತಾನೆ ಎಂಬುದನ್ನು ಗ್ರಹಿಸುವಂತೆ ಈ ಜಾಲತಾಣದಲ್ಲಿ ಪ್ರೋಗ್ರಾಂ ರೂಪಿಸಲಾಗಿದೆ.ಜಾಲತಾಣಕ್ಕೆ ಲಾಗಿನ್ ಆಗುತ್ತಿದ್ದಂತೆಯೇ ವ್ಯಕ್ತಿಯ ಡಿಜಿಟಲ್ ಭಾವಚಿತ್ರ ಕಂಪ್ಯೂಟರಿನ ಪರದೆ ಮೇಲೆ ಕಾಣಿಸಿಕೊಳ್ಳುತ್ತದೆ. ಆ ಕ್ಷಣದಿಂದ  ಸಂವಾದ ನಡೆಸಬಹುದು.ಹಾವ–ಭಾವ, ಯೋಚನಾ ಕ್ರಮದಿಂದ ನಿಜವಾಗಿಯೂ ಸತ್ತ ವ್ಯಕ್ತಿಯೇ ನಮ್ಮ ಜತೆ ಸಂವಾದ ನಡೆಸುತ್ತಿದ್ದಾನೆ ಎಂಬ ಭಾವನೆ ಮೂಡುತ್ತದೆ.

ಇಷ್ಟೇ ಅಲ್ಲದೆ, ಮುಂದಿನ ಪೀಳಿಗೆಗೆ ನಮ್ಮ ಜೀವಿತದ ಪ್ರಮುಖ ಘಟನೆಗಳು, ಸಾಹಸ ಮತ್ತು ಯೋಚನೆಗಳನ್ನು ತಿಳಿಸಲು, ಮಕ್ಕಳು ಅಥವಾ ಮೊಮ್ಮಕ್ಕಳಿಗೆ ತಮ್ಮ ಜೀವನದ ಬಗ್ಗೆ ತಿಳಿಸಲು ಸಹ ಈ ಜಾಲತಾಣ ಉಪಯುಕ್ತವಾಗಲಿದೆ ಎಂದು  ತಜ್ಞರು ಅಭಿಪ್ರಾಯಪಡುತ್ತಾರೆ.

ಈ ಜಾಲತಾಣ ಇನ್ನೂ ಬಳಕೆಗೆ ಮುಕ್ತವಾಗಿಲ್ಲ. ಹೀಗಿದ್ದೂ ಇದನ್ನು ವಿನ್ಯಾಸಗೊಳಿಸಿದ ಕೇವಲ 24 ಗಂಟೆಗಳಲ್ಲಿ 36 ಸಾವಿರ ಜನರು ಈ ಜಾಲತಾಣಕ್ಕೆ ಭೇಟಿ ನೀಡಿದ್ದು, 1, 300 ಮಂದಿ ನೋಂದಾಯಿಸಿಕೊಂಡಿದ್ದಾರೆ ಎಂದು ‘ಎಂಐಟಿ’ ಮಾಹಿತಿ ನೀಡಿದೆ.ಒಂದೊಮ್ಮೆ ತಂತ್ರಜ್ಞರು ಹೇಳುವಂತೆ ಇದು ಸಾಧ್ಯವಾದಲ್ಲಿ ಇನ್ನುಮುಂದೆ ಆತ್ಮೀಯರ ಅಗಲಿಕೆ ನೋವು ಕಾಡುವುದಿಲ್ಲ. ಅಲ್ಲದೆ ಒಂದು ಕುಟುಂಬದ ಸಂಪೂರ್ಣ ಮಾಹಿತಿ ಸಹ ಈ ಜಾಲತಾಣದಲ್ಲಿ ಲಭ್ಯವಾಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.