ಮೃತಳ ಕುಟುಂಬಕ್ಕೆ ರೂ2 ಲಕ್ಷ ಪರಿಹಾರ

7

ಮೃತಳ ಕುಟುಂಬಕ್ಕೆ ರೂ2 ಲಕ್ಷ ಪರಿಹಾರ

Published:
Updated:

ಬೆಂಗಳೂರು: ಗ್ರಾಮ ಪಂಚಾಯಿತಿ ರಾಜಕೀಯದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಗುಲ್ಬರ್ಗ ಜಿಲ್ಲೆಯ ಸಣ್ಣೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮಂದಾಕಿನಿ ಕುಟುಂಬಕ್ಕೆ ಸರ್ಕಾರ ರೂ 2 ಲಕ್ಷ ಪರಿಹಾರ ನೀಡಲಿದೆ ಎಂದು ಪಂಚಾಯತ್‌ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ್ ಘೋಷಿಸಿದರು.ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಮಂದಾಕಿನಿ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಕೆಲಸ ನೀಡಲಾಗುವುದು. ಪಿಡಿಒಗಳಿಗೆ ಕಿರುಕುಳ ನೀಡದಂತೆ ಚುನಾಯಿತ ಪ್ರತಿನಿಧಿಗಳಿಗೆ ತಾಕೀತು ಮಾಡಲಾಗುವುದು~ ಎಂದು ತಿಳಿಸಿದರು.ಪಿಡಿಒಗಳ ಮೇಲೆ ನಡೆದಿರುವ ಹಲ್ಲೆ ಪ್ರಕರಣಗಳ ಕುರಿತು ಸರ್ಕಾರ ಗಂಭೀರ ಕ್ರಮ ಜರುಗಿಸುತ್ತಿಲ್ಲ ಎಂದು ಆರೋಪಿಸಿ ಗುಲ್ಬರ್ಗ ಜಿಲ್ಲೆ 69 ಪಿಡಿಒಗಳು ಸಾಮೂಹಿಕ ರಾಜೀನಾಮೆ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, `ರಾಜೀನಾಮೆ ನೀಡಿರುವ ಪಿಡಿಒಗಳ ಜೊತೆ ಅಲ್ಲಿನ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಂಪರ್ಕದಲ್ಲಿದ್ದಾರೆ. ಮನವೊಲಿಕೆ ಪ್ರಯತ್ನ ನಡೆದಿದೆ, ಅವರು ರಾಜೀನಾಮೆ ಹಿಂಪಡೆಯುತ್ತಾರೆ ಎಂಬ ವಿಶ್ವಾಸವಿದೆ~ ಎಂದರು.ಪಿಡಿಒ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರ ನಡುವೆ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳಿವೆ. ಪಿಡಿಒಗಳಿಗೆ ಯಾವ ರೀತಿ ರಕ್ಷಣೆ ನೀಡಬೇಕು ಎಂಬ ಕುರಿತು ಇಲಾಖೆ ಚಿಂತನೆ ನಡೆಸಿದೆ. ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಪಿಡಿಒಗಳ ಜೊತೆ ಹೇಗೆ ವರ್ತಿಸಬೇಕು ಎಂಬ ಕುರಿತೂ ತರಬೇತಿ ನೀಡಲಾಗಿದೆ ಎಂದರು.ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಾದರಿಯಲ್ಲಿ ಬೆಂಗಳೂರು ಮತ್ತು ಧಾರವಾಡಗಳಲ್ಲಿ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು. ಆಗ ಹೆಚ್ಚಿನ ಸಂಖ್ಯೆಯಲ್ಲಿ ಜನಪ್ರತಿನಿಧಿಗಳಿಗೆ ತರಬೇತಿ ನೀಡಲು ಸಾಧ್ಯ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಿಡಿಒಗಳ ಸಭೆಯನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಸಿದ ಮಾದರಿಯಲ್ಲೇ ಪ್ರತಿ ಜಿಲ್ಲೆಯಲ್ಲೂ ನಡೆಸಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry