ಸೋಮವಾರ, ನವೆಂಬರ್ 18, 2019
27 °C
ಜಗತ್ತಿನಲ್ಲೇ ಮೊತ್ತಮೊದಲ ಪ್ರಕರಣ

ಮೃತ ಮಹಿಳೆ ಗರ್ಭಕೋಶ ಪಡೆದಿದ್ದ ಮಹಿಳೆ ಈಗ ಗರ್ಭಿಣಿ

Published:
Updated:

ಇಸ್ತಾನ್‌ಬುಲ್ (ಎಎಫ್‌ಪಿ): ಮೃತ ಮಹಿಳೆಯ ಗರ್ಭಕೋಶವನ್ನು ದಾನ ವಾಗಿ ಪಡೆದಿದ್ದ  ಮಹಿಳೆ ಈಗ ಎರಡು ವಾರದ ಗರ್ಭಿಣಿ!

22 ವರ್ಷದ ಯುವತಿ ದೆರ್ಯಾ ಸೆರ್ತ್‌ಗೆ ಮೃತ ಮಹಿಳೆಯಿಂದ ದಾನವಾಗಿ ಪಡೆದ ಗರ್ಭಕೋಶವನ್ನು 2011ರ ಆಗಸ್ಟ್‌ನಲ್ಲಿ ಕಸಿ ಮಾಡಲಾಗಿತ್ತು. ಈಗ ಅವರು ಪ್ರನಾಳ ಶಿಶು ತಂತ್ರಜ್ಞಾನದ ನೆರವಿನಿಂದ ಗರ್ಭಿಣಿಯಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ಟರ್ಕಿಯ ದಕ್ಷಿಣ ಪ್ರಾಂತ್ಯದ ಅಕ್‌ದೆನಿಜ್ ವಿಶ್ವವಿದ್ಯಾಲಯ ಆಸ್ಪತ್ರೆಯ ವೈದ್ಯ ಮುಸ್ತಾಫ ಉನಾಲ್ ತಿಳಿಸಿದ್ದಾರೆ.ಜಗತ್ತಿನಲ್ಲಿ ಮೊತ್ತಮೊದಲ ಬಾರಿಗೆ, ಮೃತ ಮಹಿಳೆಯ ಗರ್ಭಕೋಶ ದಾನವಾಗಿ ಪಡೆದು ದೆರ್ಯಾ ಸೆರ್ತ್ ಅವರಿಗೆ ಯಶಸ್ವಿಯಾಗಿ ಕಸಿ ಮಾಡಿದ ಸಂದರ್ಭದಲ್ಲಿ ಅದನ್ನು `ವೈದ್ಯಕೀಯ ಪವಾಡ'ವೆಂದೇ ಬಣ್ಣಿಸಲಾಗಿತ್ತು.ವಿಶ್ವದಲ್ಲಿ ಪ್ರತಿ ಐದು ಸಾವಿರ ಮಹಿಳೆಯರಲ್ಲಿ ಒಬ್ಬರಿಗೆ ಹುಟ್ಟಿನಿಂದಲೇ  ಗರ್ಭಕೋಶ ರಹಿತವಾಗಿರುತ್ತಾರೆ. ದೆರ್ಯಾ ಕೂಡ ಅಂತಹವರಲ್ಲಿ ಒಬ್ಬರಾಗಿದ್ದರು. ಅವರಿಗೆ ಗರ್ಭಕೋಶ ಕಸಿ ಮಾಡಿದ ನಂತರ, ಅದು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಖಾತ್ರಿ ಪಡಿಸಿಕೊಳ್ಳಲು 18 ತಿಂಗಳು ಕಾದಿದ್ದ ವೈದ್ಯರು ನಂತರ ಭ್ರೂಣವನ್ನು ಆಕೆಗೆ ವರ್ಗಾಯಿಸಿದ್ದರು.ದೆರ್ಯಾಗೆ ಗರ್ಭಕೋಶ ಅಳವಡಿಸಿದ ಕೆಲವು ತಿಂಗಳ ನಂತರ ನಿಯಮಿತ ಋತುಸ್ರಾವ ಆರಂಭವಾಗಿತ್ತು. ಇದರಿಂದ ಗರ್ಭಕೋಶ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬ ತೀರ್ಮಾನಕ್ಕೆ ವೈದ್ಯರು ಬಂದಿದ್ದರು. ಈಗ ದೆರ್ಯಾ ಗರ್ಭಿಣಿಯಾಗಿರುವುದು ಜಗತ್ತಿನಲ್ಲಿ ಮಕ್ಕಳನ್ನು ಹೊಂದಿರದ ಸಾವಿರಾರು ಮಹಿಳೆಯರಲ್ಲಿ ಆಶಾಕಿರಣ ಮೂಡಿಸಿದೆ. ಈ ಮುನ್ನ,  2000ನೇ ಸಾಲಿನಲ್ಲಿ  ಸೌದಿ ಅರೇಬಿಯಾದಲ್ಲಿ ಜೀವಂತ ಮಹಿಳೆಯಿಂದ ದಾನವಾಗಿ ಪಡೆದಿದ್ದ ಗರ್ಭಕೋಶವನ್ನು ಬೇರೊಬ್ಬ ಮಹಿಳೆಗೆ ಕಸಿ ಮಾಡಲಾಗಿತ್ತು. ಆದರೆ ಈ ಗರ್ಭಕೋಶ 99 ದಿನಗಳ ನಂತರ ನಿಷ್ಕ್ರಿಯಗೊಂಡಿತ್ತು. ಹೀಗಾಗಿ ವೈದ್ಯರು ಅದನ್ನು ತೆಗೆದು ಹಾಕಿದ್ದರು.ವೈದ್ಯರ ಪ್ರಕಾರ, ಈಗಿನ ಯಶಸ್ಸಿನ ನಡುವೆಯೂ ಆತಂಕ ತಪ್ಪಿಲ್ಲ. ಗರ್ಭಧಾರಣೆಗಾಗಿ ಬಳಸಿರುವ ಔಷಧಿಗಳ ಅಡ್ಡಪರಿಣಾಮದಿಂದಾಗಿ ದೆರ್ಯಾ ಹಾಗೂ ಹುಟ್ಟಲಿರುವ ಮಗುವಿಗೆ ಹಲವು ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಭವಿಷ್ಯದ ಅಪಾಯದಿಂದ ಪಾರಾಗುವ ಸಲುವಾಗಿ  ದೆರ್ಯಾ ದೇಹದಿಂದ ಗರ್ಭಕೋಶವನ್ನು ತೆಗೆದು ಹಾಕುವುದು ಕೂಡ  ಅನಿವಾರ್ಯವಾಗುವ ಸಾಧ್ಯತೆಗಳೂ ಇವೆ.

ಪ್ರತಿಕ್ರಿಯಿಸಿ (+)