ಮೆಕ್ಕೆಜೋಳ ಖರೀದಿ ಕೇಂದ್ರ ತಾತ್ಕಾಲಿಕ ಸ್ಥಗಿತ

7

ಮೆಕ್ಕೆಜೋಳ ಖರೀದಿ ಕೇಂದ್ರ ತಾತ್ಕಾಲಿಕ ಸ್ಥಗಿತ

Published:
Updated:

ಹೂವಿನಹಡಗಲಿ: ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಖರೀದಿಯಾಗುವ ಮೆಕ್ಕೆಜೋಳ ದಾಸ್ತಾನಿಗೆ ಗೋದಾಮು ಸಮಸ್ಯೆ ಉಂಟಾಗಿರುವುದರಿಂದ ಇಲ್ಲಿ ತೆರೆಯಲಾಗಿದ್ದ ಖರೀದಿ ಕೇಂದ್ರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.ಪಟ್ಟಣದಲ್ಲಿ  ಗೋದಾಮು ವ್ಯವಸ್ಥೆ ಇಲ್ಲದೇ ಇರುವುದರಿಂದ  ಇಲ್ಲಿ ಖರೀದಿಯಾಗುವ  ಮೆಕ್ಕೆಜೋಳವನ್ನು  ನೆರೆಯ ಹಗರಿ ಬೊಮ್ಮನಹಳ್ಳಿಯ ಗೋದಾಮಿಗೆ ಸಾಗಿಸಬೇಕಿದೆ. ದಿನಂಪ್ರತಿ ಖರೀದಿಯಾಗುವ ಧಾನ್ಯವನ್ನು ಸಾಗಿಸಲು ತೊಂದರೆ ಉಂಟಾಗಿರುವುದರಿಂದ ಪ್ರಾಂಗಣಕ್ಕೆ ತಂದು ಹಾಕಿರುವ ರೈತರ ಮೆಕ್ಕೆಜೋಳವನ್ನು ಮಾತ್ರ ತೂಕ ಮಾಡಲಾಗುತ್ತಿದ್ದು, ಖರೀದಿಯಾಗಿರುವ ಎಲ್ಲ ದಾಸ್ತಾನು ಸಾಗಾಣಿಕೆ ಆಗುವರೆಗೆ ರೈತರು ಖರೀದಿ ಕೇಂದ್ರಕ್ಕೆ ಮೆಕ್ಕೆಜೋಳ ತರಬಾರದು ಎಂದು ಅಧಿಕಾರಿಗಳು  ನೋಟಿಸ್‌ ಅಂಟಿಸಿದ್ದಾರೆ.ಇಲ್ಲಿಯವರೆಗೆ 9,840 ಕ್ವಿಂಟಲ್ ಮೆಕ್ಕೆಜೋಳ  ಖರೀದಿಸ ಲಾಗಿದ್ದು, ಪ್ರಾಂಗಣದಲ್ಲಿ ಇನ್ನೂ 3 ಸಾವಿರ ಕ್ವಿಂಟಲ್ ಮೆಕ್ಕೆಜೋಳ ತೂಕ ಆಗಬೇಕಿದೆ. ಎಲ್ಲ ದಾಸ್ತಾನನ್ನು ಹಗರಿಬೊಮ್ಮನಹಳ್ಳಿಗೆ ಸಾಗಿಸುವ ಪ್ರಕ್ರಿಯೆ ಮುಗಿಯು ವವರೆಗೆ  ಕೇಂದ್ರ ಸ್ಥಗಿತಗೊಳಿಸುವಂತೆ ಮೇಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ  ಎಂದು ಖರೀದಿ ಕೇಂದ್ರದ ವ್ಯವಸ್ಥಾಪಕ ಕರಿಕಟ್ಟಿ  ಹೇಳಿದರು.ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಬೆಲೆ ಕುಸಿದಿರುವುದರಿಂದ  ತಾಲ್ಲೂಕಿನ ರೈತರು ಖರೀದಿ ಕೇಂದ್ರವನ್ನು  ಅವಲಂಬಿಸಿದ್ದಾರೆ. ಇನ್ನೂ 60 ರಿಂದ 70 ಸಾವಿರ ಕ್ವಿಂಟಲ್ ಮೆಕ್ಕೆಜೋಳ ಬೆಳೆ  ಒಕ್ಕಣೆಯ ಹಂತದಲ್ಲಿದ್ದು, ಇದೀಗ ಖರೀದಿ ಪ್ರಕ್ರಿಯೆ  ನಿಲ್ಲಿಸಿರುವುದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ. ಗುರುವಾರ  ಕೇಂದ್ರಕ್ಕೆ  ಭೇಟಿ ನೀಡಿದ ತಹಶೀಲ್ದಾರ್ ವಿಜಯಕುಮಾರ, ಖರೀದಿಯಾಗಿರುವ ಮೆಕ್ಕೆಜೋಳ ಸಾಗಿಸಿ, ತೂಕ ಆರಂಭಿಸುವಂತೆ ಖರೀದಿ ಕೇಂದ್ರದ ವ್ಯವಸ್ಥಾಪಕರಿಗೆ ಸೂಚಿಸಿದ್ದರಿಂದ ಬೆಳಿಗ್ಗೆಯಿಂದ ಮತ್ತೆ ಖರೀದಿ ಪ್ರಕ್ರಿಯೆ ನಡೆದಿತ್ತು. ಏತನ್ಮಧ್ಯೆ ಖರೀದಿ ಕೇಂದ್ರದ ಜಿಲ್ಲಾ ವ್ಯವಸ್ಥಾಪಕರು, ಪ್ರಾಂಗಣಕ್ಕೆ ತಂದಿರುವ ಧಾನ್ಯವನ್ನು ಮಾತ್ರ ತೂಕ ಮಾಡಿ, ಕೇಂದ್ರವನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸುವಂತೆ  ಸೂಚನೆ ನೀಡಿದರು.ರೈತರಿಗೆ ಯಾವುದೇ ರೀತಿ ತೊಂದರೆಯಾಗದಂತೆ  ಕ್ರಮ ಕೈಗೊಳ್ಳಿ ಎಂದು ಖರೀದಿ ಕೇಂದ್ರಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದ ಕಾರ್ಮಿಕ ಸಚಿವರು  ನಂತರ ಇತ್ತ  ಗಮನಹರಿಸದಿರುವುದರಿಂದ ಖರೀದಿ ಕೇಂದ್ರ ಅವ್ಯವಸ್ಥೆಯ ಆಗರವಾಗಿದ್ದು  ಯಾವ ವ್ಯವಸ್ಥೆಯೂ ಇಲ್ಲದೇ ರೈತರು  ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry