ಸೋಮವಾರ, ಮೇ 17, 2021
23 °C

ಮೆಗಾ ಟ್ರೋಪಿಕ್ಸ್ ಉಪಗ್ರಹ:ಶೀಘ್ರ ನಭಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:ಹವಾಮಾನ ಮುನ್ಸೂಚನೆ ಕುರಿತ ಅಧ್ಯಯನಕ್ಕೆ ನೆರವಾಗುವ `ಮೆಗಾ ಟ್ರೋಪಿಕ್ಸ್~ ಉಪಗ್ರಹವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಕ್ಟೋಬರ್ 12ರಂದು ನಭಕ್ಕೆ ಹಾರಿಬಿಡಲಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಉಡಾವಣೆಗೊಳ್ಳಲಿರುವ `ಮೆಗಾ ಟ್ರೋಪಿಕ್ಸ್~ ಅನ್ನು ಉಪಗ್ರಹ ಉಡಾವಣಾ ವಾಹನ `ಪಿಎಸ್‌ಎಲ್‌ವಿ - ಸಿ18~ ಬಾಹ್ಯಾಕಾಶಕ್ಕೆ ಹೊತ್ತೊಯ್ಯಲಿದೆ.ಇಲ್ಲಿನ ಇಸ್ರೊ ಉಪಗ್ರಹ ಕೇಂದ್ರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಡಾ.ಕೆ. ರಾಧಾಕೃಷ್ಣನ್, `ಎಲ್ಲವೂ ಅಂದುಕೊಂಡಂತೆ ನಡೆದರೆ ಮೆಗಾ ಟ್ರೋಪಿಕ್ಸ್ ಉಪಗ್ರಹವನ್ನು ಅಕ್ಟೋಬರ್ 12ರಂದು ಬೆಳಿಗ್ಗೆ 11 ಗಂಟೆಯ ವೇಳೆಗೆ ಉಡಾವಣೆ ಮಾಡಲಾಗುವುದು.ಪ್ರಪಂಚದ ಉಷ್ಣವಲಯದ ಹವಾಮಾನದ ಅಧ್ಯಯನ ನಡೆಸುವ ಮುಖ್ಯ ಉದ್ದೇಶದಿಂದ ಈ ಉಪಗ್ರಹವನ್ನು ಅಭಿವೃದ್ಧಿಪಡಿಸಲಾಗಿದೆ~ ಎಂದು ತಿಳಿಸಿದರು.ಒಂದು ಟನ್ ತೂಕದ ಈ ಉಪಗ್ರಹ ಭೂಮಿಯಿಂದ 870 ಕಿಲೋ ಮೀಟರ್ ಎತ್ತರದ ಕಕ್ಷೆಯಲ್ಲಿ ನೆಲೆಯಾಗಲಿದೆ. ಉಡಾವಣೆಗೊಂಡ 30 ನಿಮಿಷಗಳಲ್ಲಿ ಇದು ತನ್ನ ಕಕ್ಷೆ ತಲುಪಲಿದ್ದು, 9 ತಿಂಗಳಿನಲ್ಲಿ ಪೂರ್ಣ ಪ್ರಮಾಣದ ಕಾರ್ಯಾಚರಣೆಗೆ ಸಿದ್ಧವಾಗಲಿದೆ.ಇದರ ಆಯಸ್ಸು 5 ವರ್ಷ. ಈ ಉಪಗ್ರಹ ಕಳುಹಿಸಲಿರುವ ಹವಾಮಾನ ಸಂಬಂಧಿ ಮಾಹಿತಿಗಳನ್ನು ಹಂಚಿಕೊಳ್ಳಲು ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳು ಮುಂದೆ ಬಂದಿವೆ ಎಂದು ಡಾ. ರಾಧಾಕೃಷ್ಣನ್ ಹೇಳಿದರು.ಮೆಗಾ ಟ್ರೋಪಿಕ್ಸ್ ಉಪಗ್ರಹ ನಿರ್ಮಾಣಕ್ಕೆ ಸುಮಾರು 80 ಕೋಟಿ ರೂಪಾಯಿ ಖರ್ಚಾಗಿದೆ. ಇದರ ಜೊತೆಗೆ `ಪಿಎಸ್‌ಎಲ್‌ವಿ~ ಉಡಾವಣಾ ವಾಹನ ಕಾನ್ಪುರದ ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ), ಚೆನ್ನೈನ ಎಸ್‌ಆರ್‌ಎಂ ವಿಶ್ವವಿದ್ಯಾಲಯದ ಉಪಗ್ರಹ ಸೇರಿದಂತೆ ಇತರ ನಾಲ್ಕು ಉಪಗ್ರಹಗಳನ್ನು ಹೊತ್ತೊಯ್ಯಲಿದೆ ಎಂದರು.ಜಿಎಸ್‌ಎಲ್‌ವಿ ಮಾರ್ಕ್-3 ಉಪಗ್ರಹ ಉಡಾವಣಾ ವಾಹನಗಳಲ್ಲಿ ಬಳಸುವ ಉದ್ದೇಶದಿಂದ ಅಭಿವೃದ್ಧಿ ಮಾಡಲಾದ ಘನೀಕೃತ ಇಂಧನದ ಪರೀಕ್ಷೆ ಯಶಸ್ವಿಯಾಗಿದೆ. 2012-13ನೇ ಸಾಲಿನಲ್ಲಿ ಮೂರು ಜಿಎಸ್‌ಎಲ್‌ವಿ ವಾಹನಗಳ ಪರೀಕ್ಷೆ ನಡೆಯಲಿದೆ ಎಂದು ಹೇಳಿದರು.ಚಂದ್ರಯಾನ: ಚಂದ್ರಯಾನ-2 ಯೋಜನೆಯ ಕಾರ್ಯ ಪ್ರಗತಿಯಲ್ಲಿವೆ. ಚಂದ್ರನ ಮೇಲ್ಮೈನಲ್ಲಿ ಸಂಚರಿಸಲು ಅಗತ್ಯವಿರುವ ಪುಟ್ಟ ವಾಹನವೊಂದರ ವಿನ್ಯಾಸ ಕಾರ್ಯ ಪೂರ್ಣಗೊಂಡಿದೆ. ಇದರ ಎಂಜಿನಿಯರಿಂಗ್ ಕಾರ್ಯ ಆರಂಭವಾಗಬೇಕಿದೆ ಎಂದು ಹಾಸನದ ಇಸ್ರೊ ಉಪಗ್ರಹ ನಿಯಂತ್ರಣ ಕೇಂದ್ರದ ನಿರ್ದೇಶಕ ಟಿ.ಕೆ. ಅಲೆಕ್ಸ್ ತಿಳಿಸಿದರು. ಲೇಸರ್ ತಂತ್ರಜ್ಞಾನ ಬಳಸಿ ಚಂದ್ರನ ಮಣ್ಣಿನ ಕುರಿತ ಅಧ್ಯಯನ ನಡೆಸುವುದು ಈ ಯೋಜನೆಯ ಮುಖ್ಯ ಉದ್ದೇಶಗಳಲ್ಲಿ ಒಂದು ಎಂದರು.ಆಯಂಟ್ರಿಕ್ಸ್ ಒಪ್ಪಂದ: ಆ್ಯಂಟ್ರಿಕ್ಸ್, ದೇವಾಸ್ ಮತ್ತು ಇಸ್ರೊ ನಡುವಿನ ಒಪ್ಪಂದದ ಕುರಿತು ಪ್ರಶ್ನಿಸಿದಾಗ, `ಆಯಂಟ್ರಿಕ್ಸ್‌ನ ಅಧ್ಯಕ್ಷರು (ವಿ.ಎಸ್. ಹೆಗಡೆ) ಇಲ್ಲಿಲ್ಲ. ಅಲ್ಲದೆ ಈ ಒಪ್ಪಂದದ ಕುರಿತ ಕಾನೂನು ಪ್ರಕ್ರಿಯೆ ಜಾರಿಯಲ್ಲಿದೆ. ನಾನು ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ~ ಎಂದು ಡಾ. ರಾಧಾಕೃಷ್ಣನ್ ಹೇಳಿದರು. `ಇದು ಆಯಂಟ್ರಿಕ್ಸ್ ಒಪ್ಪಂದದ ಕುರಿತು ಮಾತನಾಡುವ ಸಮಯ ಅಲ್ಲ. ಈ ಸಂದರ್ಭದಲ್ಲಿ ಇಸ್ರೊ ಸಾಧನೆಗಳ ಕುರಿತು ಮಾತನಾಡಬೇಕು~ ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.