`ಮೆಟ್ರೊದಿಂದ ಮಾಲಿನ್ಯ ಪ್ರಮಾಣ ಕಡಿಮೆ'

7

`ಮೆಟ್ರೊದಿಂದ ಮಾಲಿನ್ಯ ಪ್ರಮಾಣ ಕಡಿಮೆ'

Published:
Updated:

ಬೆಂಗಳೂರು: `ಮೆಟ್ರೊ ಕಾಮಗಾರಿಯಿಂದಾಗಿ ನಗರದಲ್ಲಿ ಪರಿಸರ ಮಾಲಿನ್ಯ ಹೆಚ್ಚಿದೆ ಎಂಬ ಆರೋಪ ಇದೆ. ಈ ಆರೋಪದಲ್ಲಿ ಹುರುಳಿಲ್ಲ. ಮೆಟ್ರೊ ಕಾಮಗಾರಿ ಪೂರ್ಣಗೊಂಡ ಎಂ.ಜಿ.ರಸ್ತೆ ಮತ್ತಿತರ ಕಡೆಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಪರಿಸರಮಾಲಿನ್ಯ ಪ್ರಮಾಣ ಗಣನೀಯವಾಗಿ ಕಡಿಮೆ ಆಗಿದೆ' ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ನಿರ್ದೇಶಕ (ಯೋಜನೆ) ಬಿ.ಎಸ್. ಸುಧೀರ್‌ಚಂದ್ರ ತಿಳಿಸಿದರು.ಸಂವಾದ ಟ್ರಸ್ಟ್ ಹಾಗೂ ಜಯರಾಮ ಸೇವಾ ಮಂಡಳಿಯ ಆಶ್ರಯದಲ್ಲಿ ಜಯನಗರದ ಜಯರಾಮ ಸೇವಾ ಮಂಡಳಿಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ `ಮೆಟ್ರೊ ರೈಲು- ಸವಾಲುಗಳು' ಕುರಿತು ಉಪನ್ಯಾಸ ನೀಡಿದರು.`ಮೆಟ್ರೊ ಕಾಮಗಾರಿಯ ಸಂದರ್ಭದಲ್ಲಿ ನಾನಾಬಗೆಯ ಸವಾಲುಗಳು ಎದುರಾಗಿವೆ. ಭೂಸ್ವಾಧೀನ, ಒಳಚರಂಡಿಗಳ ಸ್ಥಳಾಂತರ, ವಾಹನಗಳ ಸಂಚಾರ ಮಾರ್ಗಗಳ ಬದಲಾವಣೆ, ತಿರುವು ಮುರುವಾದ ರಸ್ತೆಗಳು, ರಸ್ತೆಗಳ ದುರಸ್ತಿ ಮತ್ತಿತರ ವಿಚಾರಗಳು ಕಾಮಗಾರಿಯ ವೇಳೆಗೆ ಎದುರಾದ ಸವಾಲುಗಳು. ಈ ಎಲ್ಲ ಸವಾಲುಗಳಿಂದಾಗಿ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ' ಎಂದು ಸ್ಪಷ್ಟಪಡಿಸಿದರು.`ಮೆಟ್ರೊ ರೀಚ್-1ರ ಕಾಮಗಾರಿ ಪ್ರಸ್ತುತ ಶೇ 60ರಷ್ಟು ಪೂರ್ಣಗೊಂಡಿದ್ದು, ಕಾಮಗಾರಿಗೆ ಹಣಕಾಸಿನ ತೊಂದರೆ ಎದುರಾಗಿಲ್ಲ. ಅಲ್ಲದೆ ಮೆಟ್ರೊ ನಿಲ್ದಾಣಗಳು ಪ್ರಯಾಣಿಕ ಸ್ನೇಹಿಗಳಾಗಿವೆ. ಮೆಟ್ರೊ ಟಿಕೆಟ್ ದರವೂ ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿದೆ' ಎಂದರು.

ಸೇವಾ ಮಂಡಳಿ ಗೌರವಾಧ್ಯಕ್ಷ ವಿ.ಆರ್. ಕುಲಕರ್ಣಿ, ಗೌರವ ಕಾರ್ಯದರ್ಶಿ ಪ್ರಭಾಮೂರ್ತಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry