ಭಾನುವಾರ, ಮೇ 9, 2021
20 °C

ಮೆಟ್ರೊ ಎರಡನೇ ಹಂತ: ಪಥ ಬದಲಾವಣೆಯ ತಳಮಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಆಸ್ಪತ್ರೆಯನ್ನೇ ನುಂಗಿಬಿಡುತ್ತಿದ್ದ 2 ಮೆಟ್ರೊ ನಿಲ್ದಾಣಗಳು'

ಪ್ರಜಾವಾಣಿ ವಾರ್ತೆ/ಎನ್.ಸಿದ್ದೇಗೌಡ

ಬೆಂಗಳೂರು: `ನಮ್ಮ ಮೆಟ್ರೊ'ದ ಎರಡನೇ ಹಂತದ ಯೋಜನೆಯನ್ನು ಮೊದಲು ಉದ್ದೇಶಿಸಿದಂತೆ ಜಾರಿ ಮಾಡಿದ್ದರೆ ಮೆಟ್ರೊದ ಎರಡು ನಿಲ್ದಾಣಗಳು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು ಸಂಪೂರ್ಣವಾಗಿ ನುಂಗಿ ಬಿಡುತ್ತಿದ್ದವು ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹೇಳಿದರು.ಮೆಟ್ರೊ ಪಥ ಬದಲಾವಣೆ ಮತ್ತು ನಿಲ್ದಾಣ ಸ್ಥಳಾಂತರದ ಬಗ್ಗೆ ಉಂಟಾಗಿರುವ ವಿವಾದದ ಹಿನ್ನೆಲೆಯಲ್ಲಿ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಅವರು, `ಸಂಸ್ಥೆಯ ಬಳಿ ಎತ್ತರಿಸಿದ ಮಾರ್ಗಗಳ ಜತೆಗೆ ಒಂದಲ್ಲ, ಎರಡು ನಿಲ್ದಾಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಅವುಗಳ ನಿರ್ಮಾಣ ಕಾರ್ಯ ಆರಂಭಿಸಿದರೆ ಸಂಸ್ಥೆಯ ದೈನಂದಿನ ಚಟುವಟಿಕೆಗಳನ್ನು ಬಂದ್ ಮಾಡಬೇಕಾಗುತ್ತಿತ್ತು' ಎಂದರು.`ಮೆಟ್ರೊದಂತಹ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವಾಗ ಯಾರಾದರೂ ಜಮೀನು ಅಥವಾ ಕಟ್ಟಡಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಅದು ಸಹಜ. ಆದರೆ ಕಡು ಬಡ ರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆ, ಬಡ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸೆ ನೀಡುವ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದುನಿಂತಿರುವ ಸರ್ಕಾರದ ಒಂದು ಸಂಸ್ಥೆಯನ್ನು ಕಳೆದುಕೊಳ್ಳುವುದು ಸರಿಯೇ' ಎಂದು ಪ್ರಶ್ನಿಸಿದರು.`13 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಸಂಸ್ಥೆಯ ಕಟ್ಟಡಗಳು ತಲೆ ಎತ್ತಿವೆ. ಮೂಲ ಯೋಜನೆ ಪ್ರಕಾರ ಸಂಸ್ಥೆಯು ಎರಡೂವರೆ ಎಕರೆ ಜಮೀನನ್ನು ಮೆಟ್ರೊ ನಿಗಮಕ್ಕೆ ಬಿಟ್ಟುಕೊಡ ಬೇಕಾಗಿತ್ತು. ಇಲ್ಲಿ ಜಮೀನು ಕೊಡುವು ದೊಂದೇ ಸಮಸ್ಯೆಯಲ್ಲ. ಉದ್ದೇಶಿತ ಎರಡು ಮೆಟ್ರೊ ನಿಲ್ದಾಣಗಳ ನಿರ್ಮಾಣದಿಂದ ಸಂಸ್ಥೆಯ ಕಾರ್ಯ ನಿರ್ವಹಣೆಗೆ ಭಾರಿ ತೊಂದರೆ ಆಗುತ್ತಿತ್ತು' ಎಂದು ತಿಳಿಸಿದರು.ಮೆಟ್ರೊ ಕಾಮಗಾರಿ ಪೂರ್ಣ ಗೊಳ್ಳಲು ಕನಿಷ್ಠ ಮೂರು ವರ್ಷಗಳು ಬೇಕಾಗುತ್ತವೆ. ಕಾಮಗಾರಿ ಅವಧಿ ಮಾತ್ರವಲ್ಲ; ಮೆಟ್ರೊ ರೈಲುಗಳ ಓಡಾಟ ಪ್ರಾರಂಭವಾದ ಮೇಲೂ ಸಂಸ್ಥೆಯು ಎದುರಿಸಬೇಕಾದ ಅಡ್ಡಿ ಆತಂಕಗಳ ಬಗ್ಗೆ ಅವರು ಮಾಡಿದ ಪಟ್ಟಿ ಇಲ್ಲಿದೆ;ಪೇಸ್‌ಮೇಕರ್, ಶಬ್ದ ತರಂಗಗಳಿಗೆ ಅತಿಯಾಗಿ ಪ್ರತಿಕ್ರಿಯಿಸುವ ಅತ್ಯಂತ ಸೂಕ್ಷ್ಮ ಸಾಧನ. ಕೆಲವು ಹೃದ್ರೋಗಿಗಳಿಗೆ ಈ ಪೇಸ್‌ಮೇಕರ್ ಸಾಧನಗಳನ್ನು ಅಳವಡಿಸಲಾಗಿರುತ್ತದೆ. ಈ ಸಾಧನವು ಎಷ್ಟರಮಟ್ಟಿಗೆ ಸೂಕ್ಷ್ಮ ಎಂದರೆ, ಅದನ್ನು ಅಳವಡಿಸಿಕೊಂಡ ಕೆಲವು ರೋಗಿಗಳು ಹೆಚ್ಚು ಶಬ್ದದಿಂದ ಮೃತಪಟ್ಟ ಉದಾಹರಣೆಗಳೂ ಉಂಟು. ಇನ್ನು ಮೆಟ್ರೊ ರೈಲುಗಳ ಓಡಾಟ, ಎರಡು ನಿಲ್ದಾಣಗಳಿಗೆ ಬಂದು ಹೋಗಬಹುದಾದ ಜನಸಂದಣಿಯ ಗೌಜು ಗದ್ದಲವು ಪೇಸ್‌ಮೇಕರ್ ಅಳವಡಿಸಿಕೊಂಡ ರೋಗಿಗಳ ಪಾಲಿಗೆ ಮರಣ ಮೃದಂಗವೇ ಆಗಿಬಿಡಬಹುದು.ಕಾಮಗಾರಿಗೆ ಬಳಸುವ ದೈತ್ಯ ಯಂತ್ರೋಪಕರಣ ಗಳ ಕಾರ್ಯಾಚರಣೆಯಿಂದ ಉಂಟಾಗುವ ಕಂಪನ ದಿಂದ ಸಂಸ್ಥೆಯ ಕಟ್ಟಡಗಳ ಗೋಡೆಗಳು ಬಿರುಕು ಬಿಡುವ ಅಪಾಯ ಇಲ್ಲದಿಲ್ಲ. ಈಗಾಗಲೇ ವಾಣಿ ವಿಲಾಸ ಆಸ್ಪತ್ರೆಯ ಗೋಡೆ ಬಿರುಕು ಬಿಟ್ಟಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಸಂಸ್ಥೆಯ ಶಸ್ತ್ರಚಿಕಿತ್ಸಾ ಕೊಠಡಿಗಳಿಗೆ ಅತಿ ಸನಿಹದಲ್ಲೇ ಕಾಮಗಾರಿ ನಡೆದರೆ, ಅಲ್ಲಿ ಉಂಟಾಗುವ ಶಬ್ದ ಮತ್ತು ಕಂಪನವು ಶಸ್ತ್ರಚಿಕಿತ್ಸೆ ಮೇಲೆ ಪರಿಣಾಮ ಬೀರುವ ಅಪಾಯ ಇದೆ. ಅಂದರೆ ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಳ್ಳುವ ತಜ್ಞರು ಮತ್ತು ಸಿಬ್ಬಂದಿಯ ಏಕಾಗ್ರತೆಗೆ ಭಂಗಪಡಿಸಬಹುದು.ಸೂಕ್ಷ್ಮ ದೂಳು ಕಣಗಳಿಂದ ಉಂಟಾಗಬಹುದಾದ ಸೋಂಕು ಮತ್ತೊಂದು ಸಮಸ್ಯೆ. ಅಂತಹ ಸೂಕ್ಷ್ಮ ದೂಳು ಕಣಗಳು ಪ್ರಸಾರವಾಗದಂತೆ ತಡೆಯಲು ಮೆಟ್ರೊ ನಿಗಮಕ್ಕೆ ಸಾಧ್ಯವಿಲ್ಲ. ಸೂಕ್ಷ್ಮ ದೂಳಿನ ಮಾಲಿನ್ಯ ತಡೆಗಟ್ಟುವ ತಂತ್ರಜ್ಞಾನ ಇನ್ನೂ ಬಂದಿಲ್ಲ.ಸಂಸ್ಥೆಯ ದಕ್ಷಿಣ ದಿಕ್ಕಿನಲ್ಲಿ ಹೊರ ರೋಗಿಗಳ ವಿಭಾಗ, ಪೂರ್ವ ದಿಕ್ಕಿನಲ್ಲಿ ತುರ್ತು ಚಿಕಿತ್ಸಾ ವಿಭಾಗ ಇದೆ. ವಾಹನ ನಿಲುಗಡೆಗೆ ಮೀಸಲಿರಿಸಿದ ಜಾಗದ ಕೆಳಗೆ ನೆಲದಡಿಯಲ್ಲಿ ಆಮ್ಲಜನಕ ಘಟಕ ಮತ್ತು ಡೀಸೆಲ್ ಟ್ಯಾಂಕರ್‌ಗಳನ್ನು ಹುದುಗಿಸಿಡಲಾಗಿದೆ. ಇವು ಕಾಮಗಾರಿ ವೇಳೆಯೇ ನಾಶವಾಗುವ ಸಾಧ್ಯತೆ ಹೆಚ್ಚು.ಈಗಾಗಲೇ ಸಂಸ್ಥೆಗೆ ಬಂದು ಹೋಗುವ ವಾಹನಗಳ ಸಂಖ್ಯೆ ವಿಪರೀತವಾಗಿದೆ. ಬೆಳಿಗ್ಗೆಯಿಂದಲೇ ವಾಹನ ನಿಲುಗಡೆ ಸ್ಥಳವು ವಾಹನಗಳಿಂದ ತುಂಬಿ ತುಳುಕುತ್ತಿದೆ. ಈ ಸಮಸ್ಯೆಯನ್ನು ನಿರ್ವಹಿಸಲು ಸಂಸ್ಥೆಯ ಆಡಳಿತಕ್ಕೆ ಈಗಲೇ ಸಾಧ್ಯವಾಗುತ್ತಿಲ್ಲ. ಇನ್ನು ವಾಹನ ನಿಲುಗಡೆ ಜಾಗವನ್ನೇ ಆಪೋಶನ ತೆಗೆದುಕೊಳ್ಳುವ ಮೆಟ್ರೊ ನಿಲ್ದಾಣ ನಿರ್ಮಾಣವಾದರೆ ರೋಗಿಗಳು, ಅವರೊಂದಿಗೆ ಬರುವವರು ವಾಹನಗಳನ್ನು ಎಲ್ಲಿ ನಿಲ್ಲಿಸಬೇಕೋ?

ಬದಲಾವಣೆ, ಸ್ಥಳಾಂತರಕ್ಕೆ ಸಮ್ಮತಿ

ಉದ್ದೇಶಿತ ಮೆಟ್ರೊ ಮಾರ್ಗ ಮತ್ತು ನಿಲ್ದಾಣಗಳ ನಿರ್ಮಾಣದಿಂದ ಸಂಸ್ಥೆಗೆ ಆಗುತ್ತಿದ್ದ ಅಪಾಯಗಳ ಬಗ್ಗೆ ಮಾರ್ಚ್ 7ರಂದು ನಗರದಲ್ಲಿ ನಡೆದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ನೇತೃತ್ವದ ಉನ್ನತಾಧಿಕಾರ ಸಮಿತಿ (ಎಚ್‌ಪಿಸಿ) ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.ಅಂತಿಮವಾಗಿ ಆಸ್ಪತ್ರೆಯ ಒಳ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಎರಡು ಮಾರ್ಗಗಳ ಪಥವನ್ನು ಬದಲಾಯಿಸಲು ಮತ್ತು ಎರಡು ನಿಲ್ದಾಣಗಳನ್ನು ಹೊರ ಭಾಗಕ್ಕೆ ಸ್ಥಳಾಂತರಿಸಲು ತೀರ್ಮಾನಿಸಲಾಯಿತು.

ಎರಡನೇ ಹಂತದ ಯೋಜನೆ: ಇಂದು ಪ್ರಾತ್ಯಕ್ಷಿಕೆ

ಬೆಂಗಳೂರು: `ನಮ್ಮ ಮೆಟ್ರೊ' ಎರಡನೇ ಹಂತದ ಯೋಜನೆಯ ಬಗ್ಗೆ ಚರ್ಚಿಸಲು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಮೆಟ್ರೊ ನಿಗಮದ ಅಧಿಕಾರಿಗಳ ಸಭೆ ಹಾಗೂ ಪ್ರಾತ್ಯಕ್ಷಿಕೆ ಶನಿವಾರ ನಿಗಮದ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ.ಎರಡನೇ ಹಂತದ ಯೋಜನೆಗೆ ಕೇಂದ್ರ ಸಾರ್ವಜನಿಕ ಹೂಡಿಕೆ ಸಮಿತಿ (ಪಿಐಬಿ)ಯಿಂದ ಇದೇ 25ರಂದು ಅನುಮೋದನೆ ಸಿಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಯೋಜನೆಯ ಬಗ್ಗೆ ನೂತನ ಸರ್ಕಾರಕ್ಕೆ ಸಮಗ್ರ ಮಾಹಿತಿ ನೀಡಲು ಈ ಸಭೆಯನ್ನು ಆಯೋಜಿಸಲಾಗಿದೆ ಎಂದು ಮೆಟ್ರೊ ಅಧಿಕಾರಿಗಳು ಹೇಳುತ್ತಾರೆ.ಜಯದೇವ ವೃತ್ತದ ಬಳಿ ಪಥ ಬದಲಾವಣೆಯಿಂದ ಉಂಟಾಗಿರುವ ವಿವಾದಗಳ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಪಥ ಬದಲಾವಣೆಯಿಂದ ಸಮಸ್ಯೆಗೆ ಸಿಲುಕಿರುವ ಸಂತ್ರಸ್ತರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಎರಡು ಬಾರಿ ಮನವಿ ಸಲ್ಲಿಸಿದ್ದರು. `15ರ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂಬುದಾಗಿ ಸಚಿವರು ಭರವಸೆ ನೀಡಿದ್ದಾರೆ' ಎಂದು ಸಂತ್ರಸ್ತರು ತಿಳಿಸಿದ್ದಾರೆ.

ಜಯದೇವ: ಇದು ಸರ್ಕಾರಿ ಆಸ್ಪತ್ರೆ

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಎಂದಾಕ್ಷಣ ಇದೊಂದು ಖಾಸಗಿ ಆಸ್ಪತ್ರೆ ಇರಬೇಕು ಎಂದು ಭಾವಿಸುವವರು ಕೆಲವರಿದ್ದಾರೆ. ಇದೊಂದು ಸರ್ಕಾರದ ಆಸ್ಪತ್ರೆ. ಆದರೆ ಸ್ವಾಯತ್ತ ಆಡಳಿತ ವ್ಯವಸ್ಥೆ ಇರುವ ಸಂಸ್ಥೆ.1984ರಲ್ಲಿ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು 2001ರಿಂದ ಜಯನಗರ 9ನೇ ಬ್ಲಾಕ್‌ನಲ್ಲಿ ಬನ್ನೇರುಘಟ್ಟ ರಸ್ತೆಯಲ್ಲಿರುವ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಆಸ್ಪತ್ರೆಗೆ ಕಳೆದ ವರ್ಷ ಬಂದು ಹೋಗಿರುವ ರೋಗಿಗಳ ಸಂಖ್ಯೆ ಎರಡೂವರೆ ಲಕ್ಷ.ದೆಹಲಿಯ ಏಮ್ಸಗೆ ಮಾದರಿ

ಜಯದೇವ ಆಸ್ಪತ್ರೆಯ ಪ್ರಗತಿ ಮತ್ತು ಕಾರ್ಯನಿರ್ವಹಣೆ ಬಗ್ಗೆ ಬೆಂಗಳೂರಿನ ಭಾರತೀಯ ಮ್ಯಾನೇಜ್‌ಮೆಂಟ್ ಸಂಸ್ಥೆಯು (ಐಐಎಂಬಿ) ವಿಶೇಷ ಅಧ್ಯಯನವನ್ನೇ ನಡೆಸಿದೆ. ಬಡವರ ಪಾಲಿನ ಪಂಚತಾರಾ ಆಸ್ಪತ್ರೆಯಾಗಿ ಬೆಳೆದು ಬಂದ ಪರಿಯ ಬಗ್ಗೆ ಅಧ್ಯಯನದಲ್ಲಿ ಪ್ರಶಂಸಿಸಲಾಗಿದೆ.ಇದಲ್ಲದೇ ದೆಹಲಿಯಲ್ಲಿರುವ ಅಖಿಲ ಭಾರತ ವೈದ್ಯಕೀಯ ಸಂಸ್ಥೆಯ (ಏಮ್ಸ) ತಜ್ಞರ ತಂಡವು ಕಳೆದ ವರ್ಷ ಜಯದೇವ ಆಸ್ಪತ್ರೆಗೆ ಭೇಟಿ ನೀಡಿತ್ತು. ಸಂಸ್ಥೆಯ ಆಡಳಿತ ವ್ಯವಸ್ಥೆ ಹಾಗೂ ಆಸ್ಪತ್ರೆಯ ಕಾರ್ಯನಿರ್ವಹಣೆಯನ್ನು ಕಣ್ಣಾರೆ ಕಂಡ ಏಮ್ಸ ತಂಡವು ಜಯದೇವ ಮಾದರಿಯನ್ನು ದೆಹಲಿಯಲ್ಲಿ ಅಳವಡಿಸಿಕೊಳ್ಳುವುದಾಗಿ ಘೋಷಿಸಿದೆ.ಈಗಲೂ 1 ಎಕರೆ ಸ್ವಾಧೀನ

ಪಥ ಬದಲಾವಣೆ ಮತ್ತು ನಿಲ್ದಾಣಗಳ ಸ್ಥಳಾಂತರ ತೀರ್ಮಾನವಾದ ಮೇಲೂ ಜಯದೇವ ಆಸ್ಪತ್ರೆಯು ಭೂ ಸ್ವಾಧೀನದ ಬಲೆಯಿಂದ ಪಾರಾಗಿಲ್ಲ. ಪರಿಷ್ಕೃತ ನಕ್ಷೆ ಪ್ರಕಾರ ಕಾಮಗಾರಿ ಕೈಗೊಳ್ಳಲು ಜಯದೇವ ಸಂಸ್ಥೆಯ ಒಂದು ಎಕರೆ ಜಾಗವನ್ನು ಮೆಟ್ರೊ ನಿಗಮಕ್ಕೆ ಬಿಟ್ಟುಕೊಡಬೇಕಾಗುತ್ತದೆ ಎಂದು ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.

ಆಸ್ಪತ್ರೆ ಉಳಿಸಲು ಆಗ್ರಹ

ಪ್ರಜಾವಾಣಿ ವಾರ್ತೆ

ಬೆಂಗಳೂರು: `ರೋಗಿಗಳ ಹಿತದೃಷ್ಟಿಯಿಂದ ಮೆಟ್ರೊ ಉನ್ನತಾಧಿಕಾರ ಸಮಿತಿಯು ತೆಗೆದುಕೊಂಡ ನಿರ್ಣಯದಂತೆ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಕೇಂದ್ರದ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಮೆಟ್ರೊ ರೈಲು ನಿಲ್ದಾಣವನ್ನು ಸ್ಥಳಾಂತರಿಸಬೇಕು' ಎಂದು ಶಿಕ್ಷಣ ತಜ್ಞ ಪ್ರೊ.ಕೆ.ಇ.ರಾಧಾಕೃಷ್ಣ ಮತ್ತು ರಂಗಚೇತನ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ನಂಜುಂಡಸ್ವಾಮಿ ತೊಟ್ಟವಾಡಿ ಒತ್ತಾಯಿಸಿದರು.ಶುಕ್ರವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಕಾಯಿಲೆಗೆ  ಸಾವಿರಾರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯ ಆವರಣದಲ್ಲಿ ಮೆಟ್ರೊ ನಿಲ್ದಾಣ ನಿರ್ಮಣವಾದರೆ ರೋಗಿಗಳಿಗೆ ತೊಂದರೆಯಾಗುತ್ತದೆ. ಆಸ್ಪತ್ರೆಯ ಕಟ್ಟಡಕ್ಕೂ ಹಾನಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.ಮೆಟ್ರೊ ನಿಲ್ದಾಣದ ಕಾಮಗಾರಿ ಪೂರ್ಣಗೊಳ್ಳಲು 4-5 ವರ್ಷಗಳು ಬೇಕಾಗುತ್ತದೆ. ವಾಣಿವಿಲಾಸ ಆಸ್ಪತ್ರೆಯ ಬಳಿ ನಡೆಯುತ್ತಿರುವ ಮೆಟ್ರೊ ಕಾಮಗಾರಿಯಿಂದಾಗಿ ಆಸ್ಪತ್ರೆಯ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಮಾಗಡಿ ರಸ್ತೆಯಲ್ಲಿರುವ ಕುಷ್ಠರೋಗಿಗಳ ಆಸ್ಪತ್ರೆಯ ಬಳಿ ಮೆಟ್ರೊ ಕಾಮಗಾರಿಗಾಗಿ ಕೈಗೆತ್ತಿಕೊಂಡಿರುವ ರಸ್ತೆ ವಿಸ್ತರಣೆ ಪ್ರಕ್ರಿಯೆ ಎರಡು ವರ್ಷವಾದರೂ ಪೂರ್ಣಗೊಂಡಿಲ್ಲ.ಇದರಿಂದ ಸಾಮಾನ್ಯ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ ಎಂದರು. ಬಡ ಮತ್ತು ಮಧ್ಯಮ ವರ್ಗದ ರೋಗಿಗಳು ಹೆಚ್ಚಾಗಿ ಜಯದೇವ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಆಸ್ಪತ್ರೆಯಿಂದ 20 ಅಡಿ ಅಂತರದಲ್ಲಿ ಮೆಟ್ರೊ ನಿಲ್ದಾಣ ನಿರ್ಮಾಣವಾದರೆ ಆಸ್ಪತ್ರೆಯ ಬಳಿ ದೂಳು, ಶಬ್ಧ ಮಾಲಿನ್ಯ ಹೆಚ್ಚುತ್ತದೆ. ಇದರಿಂದ ರೋಗಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಹೇಳಿದರು.

ಆಸ್ಪತ್ರೆಯ ಬಳಿಯೇ ಕಾಮಗಾರಿ ನಡೆಯುವುದಿಂದ ಆಸ್ಪತ್ರೆಯ ಕಟ್ಟಡಕ್ಕೂ ಹಾನಿಯಾಗುವ ಸಂಭವವಿದೆ. ಆದ್ದರಿಂದ ಆಸ್ಪತ್ರೆಯ ಆವರಣದಲ್ಲಿ ಮೆಟ್ರೊ ನಿಲ್ದಾಣವನ್ನು ನಿರ್ಮಿಸಬಾರದು ಎಂದರು. ಸಾಹಿತಿ ಕೆ.ಟಿ.ಚಿಕ್ಕಣ್ಣ ಉಪಸ್ಥಿತರಿದ್ದರು.

ಕಣ್ಣೆದುರೇ `ಕನಸಿನ ಸೌಧ' ನೆಲಸಮ

ಪಥ ಬದಲಾವಣೆಯಿಂದ ಸ್ಥಳೀಯ ನಿವಾಸಿಗಳಲ್ಲಿ ನಾನಾ ಬಗೆಯ ಸಂಕಷ್ಟ ತಂದೊಡ್ಡಿದೆ. ಇತ್ತೀಚೆಗೆ ಇಲ್ಲಿ ಜಾಗ ಖರೀದಿಸಿ ನೂತನ ಮನೆ ನಿರ್ಮಿಸಿರುವ ಉದ್ಯಮಿ ಶ್ರೀಪ್ರಕಾಶ್ ಅವರಿಗೆ ಈಗ ದಿಕ್ಕೇ ತೋಚದಂತಾಗಿದೆ.ಈ ಹಿಂದೆ ಶ್ರೀಪ್ರಕಾಶ್ ಅವರು ಜಯನಗರದ ಟಿ.ಬ್ಲಾಕ್‌ನಲ್ಲಿ ನೆಲೆಸಿದ್ದರು. ತಮ್ಮದೇ ಸೂರು ಕಟ್ಟಿಕೊಳ್ಳುವ ಉದ್ದೇಶದಿಂದ ಆಸ್ಪತ್ರೆಯ ದಕ್ಷಿಣ ಭಾಗದಲ್ಲಿ 2012ರಲ್ಲಿ ಜಾಗ ಖರೀದಿ ಮಾಡಿದ್ದರು. ಇದಕ್ಕೂ ಮುನ್ನ ಮೆಟ್ರೊ ಕಾಮಗಾರಿಯ ಬಗ್ಗೆ ಖಚಿತಪಡಿಸಿಕೊಂಡಿದ್ದರು.ಕಳೆದ ವರ್ಷ ಮನೆ ಕಟ್ಟಲು ಆರಂಭಿಸಿದ್ದರು. ಅಂದಾಜು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಿಸಿ ಇದೇ 27ರಂದು ಗೃಹಪ್ರವೇಶ ನಡೆಸಲು ಉದ್ದೇಶಿಸಿದ್ದರು. ನಿಲ್ದಾಣ ಸ್ಥಳಾಂತರ ವಿಷಯ ತಿಳಿದ ಕೂಡಲೇ ಕಂಗೆಟ್ಟ ಅವರು 40 ದಿನಗಳ ಕಾಲ ಮನೆ ನಿರ್ಮಾಣದ ಕಾಮಗಾರಿಯನ್ನು ನಿಲ್ಲಿಸಿದ್ದರು. ಈಗ ಮತ್ತೆ ಮನೆ ನಿರ್ಮಾಣದ ಕೆಲಸಗಳು ನಡೆಯುತ್ತಿವೆ. ಗೃಹಪ್ರವೇಶವನ್ನು ಸದ್ಯಕ್ಕೆ ಮುಂದೂಡಿದ್ದಾರೆ. `ನಿಲ್ದಾಣ ಸ್ಥಳಾಂತರದಿಂದ ದಿಗ್ಬ್ರಮೆಯಾಗಿದೆ. ಕಟ್ಟಿರುವ ಕನಸಿನ ಸೌಧ ಕಣ್ಣೆದುರೇ ನೆಲಸಮ ಆಗಲಿರುವುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ' ಎಂಬುದು ಅವರ ನೋವಿನ ನುಡಿ.

`ಭವಿಷ್ಯದ ದೃಷ್ಟಿಯಿಂದ ಆಸ್ಪತ್ರೆಯನ್ನೇ ಸ್ಥಳಾಂತರಿಸಿ'

ಜಯದೇವ ಆಸ್ಪತ್ರೆಯಿಂದ 20 ಮೀಟರ್ ದೂರಕ್ಕೆ ಮೆಟ್ರೊ ನಿಲ್ದಾಣವನ್ನು ಸ್ಥಳಾಂತರ ಮಾಡುವುದರಿಂದ ವಾಯುಮಾಲಿನ್ಯ ಕಡಿಮೆಯಾಗುವುದಿಲ್ಲ. ವಾಣಿ ವಿಲಾಸ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆಯ ಬಳಿ ಉದ್ಭವಿಸಿರುವ ಸಮಸ್ಯೆಯೇ ಇದಕ್ಕೆ ಸಾಕ್ಷಿ.ಆಸ್ಪತ್ರೆಯೊಳಗೆ ಮೆಟ್ರೊ ನಿಲ್ದಾಣ ಸ್ಥಾಪಿಸಿದರೆ ದೂಳು ಹೆಚ್ಚುತ್ತದೆ ಎಂದು ಆಸ್ಪತ್ರೆಯ ನಿರ್ದೇಶಕರು ಹೇಳುತ್ತಿದ್ದಾರೆ. ಮೆಟ್ರೊ ಕಾಮಗಾರಿ ಮುಗಿಯುವರೆಗೂ ಸಾಕಷ್ಟು ಪ್ರಮಾಣದ ದೂಳು ಏಳುತ್ತದೆ. ಕಾಮಗಾರಿ ಮುಗಿಯುವುದು 3-5 ವರ್ಷಗಳು ಆಗಬಹುದು. ಈ ಭಾಗದಲ್ಲಿ ಸಂಚಾರ ದಟ್ಟಣೆಯಿಂದ ಈಗಾಗಲೇ ಸಾಕಷ್ಟು ಸಮಸ್ಯೆ ಸೃಷ್ಟಿಯಾಗಿದೆ. ಮಾಲಿನ್ಯ ಪ್ರಮಾಣವೂ ಹೆಚ್ಚಿದೆ. ಭವಿಷ್ಯದ ಹಿತದೃಷ್ಟಿಯಿಂದ ಆಸ್ಪತ್ರೆಯನ್ನೇ ಸ್ಥಳಾಂತರ ಮಾಡುವುದು ಸೂಕ್ತ.

ಡಾ.ಟಿ.ಎನ್.ವೆಂಕಟೇಶ್, ಸಂತ್ರಸ್ತ ನಿವಾಸಿ

`ನಿಲ್ದಾಣ ಸ್ಥಳಾಂತರ' ಸಂತ್ರಸ್ತರ ಅಳಲು

`ಅಭಿವೃದ್ಧಿ ಯೋಜನೆ: ದೂರದೃಷ್ಟಿ ಇಲ್ಲದ ತೀರ್ಮಾನ'

ಪ್ರಜಾವಾಣಿ ವಾರ್ತೆ/ಮಂಜುನಾಥ ಹೆಬ್ಬಾರ್

ಬೆಂಗಳೂರು: `ಸರ್ಕಾರದ ಬಹುತೇಕ ಅಭಿವೃದ್ಧಿ ಯೋಜನೆಗಳು ಭವಿಷ್ಯದ ದೃಷ್ಟಿಕೋನ ಇಟ್ಟುಕೊಳ್ಳದೆ ಅನುಷ್ಠಾನಗೊಳ್ಳುತ್ತಿವೆ. 50 ವರ್ಷಗಳ ಹಿಂದೆ ಭವಿಷ್ಯದ ದೃಷ್ಟಿಯಿಲ್ಲದೆ ಕೈಗೊಂಡ ಯೋಜನೆಯಿಂದಾಗಿ ಚಿಕ್ಕಪೇಟೆ, ಬಳೆಪೇಟೆ ಮತ್ತಿತರ ಕಡೆಗಳಲ್ಲಿ ನಿತ್ಯ ಸಮಸ್ಯೆ ಎದುರಿಸುತ್ತಿದ್ದೇವೆ. ಮೆಟ್ರೊ ಯೋಜನೆಯ ಅನುಷ್ಠಾನದಲ್ಲೂ ಭವಿಷ್ಯದ ನೋಟ ಇಲ್ಲ'.ಇದು 81 ವರ್ಷಗಳಿಂದ `ಬೆಂಗಳೂರಿನ ನಾಗಾಲೋಟ'ವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿರುವ ತಜ್ಞ ಎಂ.ಆರ್.ಪಾರ್ಥಸಾರಥಿ ಅವರ ಸ್ಪಷ್ಟ ನುಡಿ. ಜಯದೇವ ಹೃದ್ರೋಗ ಹಾಗೂ ಸಂಶೋಧನಾ ಸಂಸ್ಥೆಯ ಬಳಿಯಲ್ಲೂ ಪೂರ್ವಾಲೋಚನೆ ಮಾಡದೆ `ನಮ್ಮ ಮೆಟ್ರೊ' ಎರಡನೇ ಹಂತದ ಪಥ ಬದಲಾವಣೆ ಮಾಡಲಾಗಿದೆ ಎಂದು ಅವರು ನೋವಿನಿಂದ ನುಡಿಯುತ್ತಾರೆ. ಸ್ಟ್ರಕ್ಚರಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಪರಿಣತರಾಗಿರುವ ಅವರು ಬೆಂಗಳೂರು, ಕಾನ್ಪುರ ಮತ್ತಿತರ ಕಡೆಗಳ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಸದ್ಯ ಜಯದೇವ ವೃತ್ತದ ಬಳಿ ನೆಲೆಸಿದ್ದಾರೆ. 17 ವರ್ಷಗಳಿಂದ ಇಲ್ಲಿ ನೆಲೆಸಿರುವ ಅವರು `ನಿಲ್ದಾಣ ಸ್ಥಳಾಂತರ'ದಿಂದ ಸಂತ್ರಸ್ತರಾಗಲಿದ್ದಾರೆ.`ಜಯದೇವ ಆಸ್ಪತ್ರೆ ಹಾಗೂ ಸ್ಥಳೀಯರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸಲು ಸಾಧ್ಯವಿದೆ. ಜಯದೇವ ವೃತ್ತದ ಬಳಿ ಈಗಾಗಲೇ ಸಂಚಾರ ದಟ್ಟಣೆ ತೀವ್ರವಾಗಿದೆ. ಮೇಲ್ಸೇತುವೆ ನಿರ್ಮಾಣದಿಂದಲೂ ಪರಿಸ್ಥಿತಿ ಬದಲಾವಣೆ ಆಗಿಲ್ಲ. ಎತ್ತರಿಸಿದ ಮಾರ್ಗದಲ್ಲಿ ಮೆಟ್ರೊ ಮಾರ್ಗ ನಿರ್ಮಿಸುವುದರಿಂದ ಸಮಸ್ಯೆ ದ್ವಿಗುಣವಾಗಲಿದೆ. ಮುಂದಿನ 30-40 ವರ್ಷಗಳ ದೃಷ್ಟಿಕೋನ ಇಟ್ಟುಕೊಂಡು ಸುರಂಗ ಮಾರ್ಗದ ಮೂಲಕವೇ ಮೆಟ್ರೊ ಕಾಮಗಾರಿ ನಡೆಸುವುದು ಅತ್ಯುತ್ತಮ ಪರಿಹಾರ' ಎಂದು ಅವರು ಕಿವಿಮಾತು ಹೇಳುತ್ತಾರೆ.`ಪಥ ಬದಲಾವಣೆ ಸುದ್ದಿ ನಮಗೆಲ್ಲ ಬರಸಿಡಿಲಿನಂತೆ ಬಂದು ಅಪ್ಪಳಿಸಿದೆ. ಇದನ್ನು ಅರಗಿಸಿಕೊಳ್ಳಲೇ ಸಾಧ್ಯವಾಗುತ್ತಿಲ್ಲ. `ಸೂಕ್ತ ಪರಿಹಾರ ಕೊಡುತ್ತೇವೆ, ಮನೆ ಬಿಟ್ಟುಕೊಡಿ' ಎಂದು ಮೆಟ್ರೊ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಇಲ್ಲಿ ದುಡ್ಡಿನ ಪ್ರಶ್ನೆ ಪ್ರಮುಖ ಅಲ್ಲ. ಈ ಮನೆಯೊಂದಿಗೆ ಭಾವನಾತ್ಮಕ ಸಂಬಂಧ ಇದೆ. ಈ ಇಳಿವಯಸ್ಸಿನಲ್ಲಿ ಬೇರೆ ಕಡೆ ಹೋಗುವುದು ಕನಸಿನ ಮಾತು. ಇಲ್ಲಿನ ವಾತಾವರಣ ಹಾಗೂ ನೆರೆಹೊರೆಯವರು ಬೇರೆ ಕಡೆಯಲ್ಲಿ ಸಿಗಲು ಸಾಧ್ಯವೇ' ಎಂದು ಅವರು ನೋವಿನಿಂದ ಪ್ರಶ್ನಿಸುತ್ತಾರೆ.`ಮನೆ ನೆಲಸಮವಾಗುವ ಸಂಗತಿ ಕೇಳಿದ ಕ್ಷಣದಿಂದ ನೆಮ್ಮದಿ ಮಾಯವಾಗಿದೆ. ಪತ್ನಿಯ ಸ್ಥಿತಿ ಇದಕ್ಕಿಂತ ವಿಷಮವಾಗಿದೆ. ಆಕೆಗೆ ಉತ್ತರ ಕೊಡಲು ಸಾಧ್ಯವಾಗುತ್ತಿಲ್ಲ. ಪರ್ಯಾಯ ಮಾರ್ಗೋಪಾಯಗಳು ಇದ್ದರೂ ಮೆಟ್ರೊ ಅಧಿಕಾರಿಗಳು ಹಠಮಾರಿ ಧೋರಣೆ ತಳೆದು ಹಿರಿಯ ಜೀವಗಳನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ' ಎಂದು ಅವರು ದೂರಿದರು.`ಕಾಮಗಾರಿ ಸ್ಥಳಾಂತರದಿಂದ ಈಸ್ಟ್ ಎಂಡ್ ವೃತ್ತದ ಬಳಿ, ಬನ್ನೇರುಘಟ್ಟ ರಸ್ತೆ ಭಾಗದಲ್ಲಿ, ಬಿಟಿಎಂ ಲೇಔಟ್ ಕಡೆಯ 98 ಕಟ್ಟಡಗಳು ನೆಲಸಮ ಆಗಲಿವೆ. ಕಾಸ ಅನ್ಸಾಲ್ ಅಪಾರ್ಟ್‌ಮೆಂಟ್‌ನಲ್ಲಿ 160ಕ್ಕೂ ಅಧಿಕ ಕುಟುಂಬಗಳು ನೆಲೆಸಿವೆ. ಇಲ್ಲಿ ಸುಮಾರು 54 ಹಿರಿಯ ನಾಗರಿಕರ ಮನೆಗಳು ಇವೆ. ಪಥ ಬದಲಾವಣೆ ಮೂಲಕ ಹಿರಿಯ ಜೀವಗಳ ಬದುಕಿನೊಂದಿಗೆ ಮೆಟ್ರೊ ನಿಗಮ ಚೆಲ್ಲಾಟ ಆಡುತ್ತಿದೆ' ಎಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.ನಿವೃತ್ತ ಬ್ಯಾಂಕ್ ಅಧಿಕಾರಿ ರಾಮ್ ಕುಮಾರ್ ಕುಟುಂಬವೂ ಯೋಜನೆಯಿಂದ ಸಂತ್ರಸ್ತವಾಗುವ ಭೀತಿ ಎದುರಿಸುತ್ತಿದೆ. ಈ ಕುಟುಂಬ ಬಿಟಿಎಂ ಬಡಾವಣೆಯ ವೈಶ್ಯ ಬ್ಯಾಂಕ್ ಕಾಲೊನಿಯಲ್ಲಿ ನೆಲೆಸಿದೆ. ಮನೆಯ ಸಮೀಪದಲ್ಲೇ ಮಗನ ಮೆಡಿಕಲ್ ಶಾಪ್ ಇದೆ. ಕುಟುಂಬಕ್ಕೆ ಈ ಅಂಗಡಿಯೇ ದಿಕ್ಕು. `ನಮ್ಮ ಮೆಟ್ರೊದಿಂದ ಮನೆ ಹಾಗೂ ಅಂಗಡಿಯನ್ನು ಕಳೆದುಕೊಳ್ಳಲ್ದ್ದಿದೇವೆ. 30 ವರ್ಷಗಳಿಂದ ಇಲ್ಲಿ ನೆಲೆಸಿರುವ ನಾವು ಇಳಿ ವಯಸ್ಸಿನಲ್ಲಿ ಎಲ್ಲಿಗೆ ಹೋಗುವುದು' ಎಂದು ರಾಮ್ ಕುಮಾರ್ ಪ್ರಶ್ನಿಸುತ್ತಾರೆ.`ಸುರಂಗ ಮಾರ್ಗಕ್ಕೆ ಈಗ ಸ್ವಲ್ಪ  

ಹೆಚ್ಚು ಹಣ ಖರ್ಚಾಹಬಹುದು. ಭವಿಷ್ಯದ ದೃಷ್ಟಿಯಿಂದ ಸುರಂಗಮಾರ್ಗವೇ ಉತ್ತಮ. ಮುಂಬೈ ಹಾಗೂ ನವದೆಹಲಿಗಳಲ್ಲಿ ಸುರಂಗ ಮಾರ್ಗ ಯಶಸ್ಸು ಕಂಡಿದೆ. ಇದರಿಂದ ಮೆಟ್ರೊ ವೇಗವೂ ಜಾಸ್ತಿ ಆಗಲಿದೆ. ಭೂ ಒತ್ತುವರಿ ಪ್ರಮಾಣ ಸಹ ಕಡಿಮೆಯಾಗಲಿದೆ. ನಗರದಲ್ಲಿ ಡೇರಿ ವೃತ್ತದ ವರೆಗೆ ಸುರಂಗ ಮಾರ್ಗದಲ್ಲೇ ಮೆಟ್ರೊ ಬರಲಿದೆ. ಒಂದು ಕಿ.ಮೀ. ವಿಸ್ತರಿಸಿದರೆ ಎಲ್ಲ ಸಮಸ್ಯೆಗಳು ಪರಿಹಾರ ಆಗಲಿವೆ' ಎಂದು ಅವರು ಕಿವಿಮಾತು ಹೇಳುತ್ತಾರೆ.`ಆಸ್ಪತ್ರೆಯ ದಕ್ಷಿಣ ದಿಕ್ಕಿನಲ್ಲಿ ಫರ್ನಿಚರ್ ಅಂಗಡಿ ಇಟ್ಟುಕೊಂಡಿದ್ದೇನೆ. ಅದೇ ಆದಾಯದ ಮೂಲ. ಏಕಾಏಕಿ ನಿರ್ಧಾರದಿಂದ ದಿಕ್ಕೇ ತೋಚುತ್ತಿಲ್ಲ. ನಾವು ಎಲ್ಲಿಗೆ ಹೋಗಬೇಕು ಎಂಬುದನ್ನು ನಿಗಮದ ಅಧಿಕಾರಿಗಳೇ ಹೇಳಬೇಕು. ನಮ್ಮ ಪರಿಸ್ಥಿತಿ ಅವರಿಗೇ ಬಂದರೆ ಅವರೇನು ಮಾಡುತ್ತಾರೆ' ಎಂದು ವ್ಯಾಪಾರಿ ಇಮ್ರಾನ್ ಆಕ್ರೋಶದಿಂದ ನುಡಿಯುತ್ತಾರೆ.`ಚುನಾವಣೆ ಘೋಷಣೆಯಾಗುವ ಸಂದರ್ಭದಲ್ಲಿ ಚುನಾಯಿತ ಸರ್ಕಾರ ಸಕ್ರಿಯವಾಗಿ ಇಲ್ಲದ ಸಮಯದಲ್ಲಿ ಅಧಿಕಾರಿಗಳು ಪಥ ಬದಲಾವಣೆಯ ನಿರ್ಧಾರ ತೆಗೆದುಕೊಂಡಿದ್ದಾರೆ. ಪಥ ಬದಲಾವಣೆಯಿಂದ 125 ಕೋಟಿ ಹೆಚ್ಚುವರಿ ವೆಚ್ಚ ಆಗಲಿದೆ ಎಂದು ನಿಗಮದ ಅಧಿಕಾರಿಗಳು ಹೇಳಿದ್ದಾರೆ. ಭೂಮಿ ಒತ್ತುವರಿ ಹಾಗೂ ಪರಿಹಾರ ನೀಡುವುದು ಸೇರಿದಂತೆ ಕಾಮಗಾರಿ ನಡೆಸುವಾಗ ಈ ವೆಚ್ಚ 1,000 ಕೋಟಿ ದಾಟಲಿದೆ. ಅಧಿಕಾರಿಗಳ ಹಠಮಾರಿ ಧೋರಣೆಯಿಂದ ಈ ಸ್ಥಿತಿ ನಿರ್ಮಾಣವಾಗಿದೆ. ಈ ಸಂಗತಿಯನ್ನು ನಿಗಮದ ಅಧಿಕಾರಿಗಳು ಪ್ರತಿಷ್ಠೆಯ ಸಂಗತಿಯನ್ನಾಗಿ ತೆಗೆದುಕೊಂಡಿದ್ದಾರೆ' ಎಂದು ಜಯದೇವ ಇಂಟರ್‌ಚೇಂಜ್ ಮೆಟ್ರೊ ವಿಕ್ಟಿಮ್ಸ ಫೋರಂ ಸಂಚಾಲಕ ಕೆ. ರಮೇಶ್ ಕಿಡಿಕಾರುತ್ತಾರೆ.`ಬಿಜೆಪಿ ಸರ್ಕಾರ ಇದ್ದಾಗ ಆರೋಗ್ಯ ಸಚಿವರಾಗಿದ್ದ ಅರವಿಂದ ಲಿಂಬಾವಳಿ ಪತ್ರ ಬರೆದು ಒಂದು ನಿಲ್ದಾಣವನ್ನೇ ರದ್ದುಪಡಿಸಿದರು. ಆದರೆ, ಈಗ ಎಲ್ಲ ಜನಪ್ರತಿನಿಧಿಗಳು ಅಸಹಾಯಕರಂತೆ ವರ್ತಿಸುತ್ತಿದ್ದಾರೆ. ಇದರಿಂದ ಉತ್ತೇಜಿತರಾದ ಅಧಿಕಾರಿಗಳು ಜನವಿರೋಧಿ ಯೋಜನೆಗಳನ್ನು ರೂಪಿಸುತ್ತಿದ್ದಾರೆ' ಎಂದು ಆರೋಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.