ಮೆಟ್ರೊ ಪ್ರಯಾಣಿಕರ ಸಂಖ್ಯೆ ದಾಟಿತು 2 ಲಕ್ಷ
ಬೆಂಗಳೂರು: ಕೇವಲ ಮೂರೂವರೆ ದಿನಗಳಲ್ಲಿ `ನಮ್ಮ ಮೆಟ್ರೊ~ದಲ್ಲಿ ಪ್ರಯಾಣಿಸಿದವರ ಸಂಖ್ಯೆ ಎರಡು ಲಕ್ಷ ದಾಟಿದೆ; 40 ಲಕ್ಷ ರೂಪಾಯಿಗೂ ಹೆಚ್ಚಿನ ಆದಾಯ ಸಂಗ್ರಹವಾಗಿದೆ.
ಶನಿವಾರ 75 ಸಾವಿರ ಮಂದಿ ಹಾಗೂ ಭಾನುವಾರ ಸಂಜೆ 7ರವರೆಗೆ 70 ಸಾವಿರ ನಾಗರಿಕರು ಮೆಟ್ರೊ ರೈಲಿನಲ್ಲಿ ಸಂಚರಿಸಿದ್ದಾರೆ.
ಸಂಗ್ರಹವಾದ ದೈನಿಕ ಆದಾಯದ ವಿವರ (ರೂಪಾಯಿಗಳಲ್ಲಿ): ಗುರು ವಾರ- 7.8 ಲಕ್ಷ, ಶುಕ್ರ- 9.7 ಲಕ್ಷ, ಶನಿ- 12.7 ಲಕ್ಷ, ಭಾನುವಾರ ಸಂಜೆ 7ರವರೆಗೆ- 11.2 ಲಕ್ಷ.
ಮಹಾತ್ಮ ಗಾಂಧಿ ರಸ್ತೆ ನಿಲ್ದಾಣದಿಂದಲೇ ಭಾರಿ ಸಂಖ್ಯೆಯ ಜನರು ಮೆಟ್ರೊ ರೈಲಿನ ಪ್ರಯಾಣದ ಸಂತೋಷ ಸವಿಯುತ್ತಿದ್ದು, ಎಂ.ಜಿ.ರಸ್ತೆ ನಿಲ್ದಾಣವು ಪ್ರವಾಸಿ ತಾಣವಾಗಿ ಬದಲಾಗಿದೆ. ಶನಿವಾರದಂತೆ ಭಾನುವಾರವೂ ಸಹ ಗಂಟೆಗಟ್ಟಲೇ ಸಾಲುಗಟ್ಟಿ ನಿಂತು ಟಿಕೆಟ್ಗಳನ್ನು ಖರೀದಿಸಿದರು.
ಬೆಳಿಗ್ಗೆಯಿಂದಲೇ ಮೆಟ್ರೊ ರೈಲಿನ ವಿವಿಧ ನಿಲ್ದಾಣಗಳ ಮೂಲಕ ಪ್ರವೇಶಿಸಿ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚತೊಡಗಿದೆ. ಭಾನುವಾರ ಬೈಯಪ್ಪನಹಳ್ಳಿ ಕಡೆಯಿಂದ ಎಂ.ಜಿ.ರಸ್ತೆಗೆ ಬರುವವರ ಸಂಖ್ಯೆಯಲ್ಲಿಯೂ ಹೆಚ್ಚಳ ಕಂಡು ಬಂದಿತು.
ಇಲ್ಲಿನ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ವಿಹರಿಸಿ ಮತ್ತೆ ತೆರಳುವ ಉದ್ದೇಶದಿಂದಲೂ ಹಲವು ಪ್ರಯಾಣಿಕರು ಬಂದಿದ್ದರು.
ಎಂ.ಜಿ.ರಸ್ತೆಯಲ್ಲಿ ವಾಡಿಕೆಗಿಂತ ಅಧಿಕ ಪ್ರಮಾಣದ ಜನದಟ್ಟಣೆ ಕಂಡು ಬಂತು. ಇದರಿಂದ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳಿಗೂ ಪ್ರಯಾಣಿಕರ ಬಿಸಿ ತಟ್ಟಿತು. ಪಾದಚಾರಿಗಳು ರಸ್ತೆ ದಾಟಲು ಅನುಕೂಲ ಮಾಡಿಕೊಡಲು ಮೆಟ್ರೊ ನಿಲ್ದಾಣದ ಬಳಿ ಸಿಗ್ನಲ್ ಕಂಬವನ್ನು ಅಳವಡಿಸುವ ಕಾರ್ಯವೂ ನಡೆಯಿತು.
ನಿಲ್ದಾಣದಿಂದ ಎದುರಿನ ಪಾದಚಾರಿ ಮಾರ್ಗಕ್ಕೆ ಬರುವ ಪ್ರಯಾಣಿಕರಿಗಾಗಿ ಝೀಬ್ರಾ ಕ್ರಾಸಿಂಗ್ಗಾಗಿ ಬಿಳಿ ಬಣ್ಣವನ್ನು ಬಳಿಯಲಾಗಿದೆ.
ಜನ ಜಂಗುಳಿ ನಿಯಂತ್ರಿಸುವ ಸಲುವಾಗಿ ಸಂಚಾರ ಪೊಲೀಸರು, ಗೃಹರಕ್ಷಕದಳದ ಸಿಬ್ಬಂದಿ ಬಂದೋಬಸ್ತ್ ವ್ಯವಸ್ಥೆಯನ್ನು ಕೈಗೊಂಡಿದ್ದರು.
ಬೇಡಿಕೆ ಬಂದರೆ ಹೆಚ್ಚುವರಿ ಫೀಡರ್ ಬಸ್
ಎಂ.ಜಿ. ರಸ್ತೆಯಿಂದ ಬೈಯಪ್ಪನಹಳ್ಳಿವರೆಗೆ ಆರಂಭಗೊಂಡಿರುವ ಮೆಟ್ರೊ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಬಸ್ ಸಂಪರ್ಕ (ಫೀಡರ್) ಸೇವೆ ಕಲ್ಪಿಸಲು ಸಿದ್ಧವಿರುವುದಾಗಿ ಬಿಎಂಟಿಸಿ ತಿಳಿಸಿದೆ.
ಈಗಾಗಲೇ 60 ಸಂಪರ್ಕ ಸೇವೆ ಬಸ್ಗಳನ್ನು ಮೆಟ್ರೊದ 6 ನಿಲ್ದಾಣಗಳಲ್ಲಿ ನಿಯೋಜಿಸಿರುವ ಸಂಸ್ಥೆಯ ಪ್ರಧಾನ ಸಂಚಾರ ವ್ಯವಸ್ಥಾಪಕ (ಕಾರ್ಯಾಚರಣೆ ವಿಭಾಗ) ಎಂ.ಪಿ.ಪ್ರಭುದಾಸ್ ಅವರು ಈ ಬಗ್ಗೆ ಮಾತನಾಡಿ, `ಈವರೆಗೆ ಅಷ್ಟಾಗಿ ಪ್ರಯಾಣಿಕರ ಒತ್ತಡವಿರಲಿಲ್ಲ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಹೆಚ್ಚುವರಿ ಬಸ್ ಸೇವೆ ಒದಗಿಸುವುದರ ಕುರಿತು ಚಿಂತನೆ ನಡೆಸಲಾಗುವುದು~ ಎಂದರು.
`ಈಗಿರುವ ಪ್ರಯಾಣಿಕರ ಸಂಖ್ಯೆಯು ಮೂರು ಪಟ್ಟು ಹೆಚ್ಚಳಗೊಂಡರೆ ಮಾತ್ರ 60 ಬಸ್ ಸೇವೆಯನ್ನು ನೀಡುವ ಬಗ್ಗೆ ಯೋಚಿಸಲಾಗುವುದು. ಸದ್ಯಕ್ಕೆ ಹೆಚ್ಚುವರಿ ಸೇವೆಯ ಬಗ್ಗೆ ಪ್ರಶ್ನೆಯೇ ಇಲ್ಲ. ಆದರೂ ಈ ಬಗ್ಗೆ ಸೋಮವಾರ ನಡೆಯಲಿರುವ ಸಂಸ್ಥೆಯ ಅಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗುವುದು~ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.