ಶುಕ್ರವಾರ, ಜೂನ್ 25, 2021
22 °C

ಮೆಟ್ರೊ: ಮಾಹಿತಿ ಆಯೋಗ ಆದೇಶ ಉಲ್ಲಂಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡಲು ವಿಫಲವಾಗಿ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಮಾಹಿತಿ ಆಯೋಗದಿಂದ ಮೂವತ್ತು ಸಾವಿರ ರೂಪಾಯಿ ದಂಡ ಹಾಕಿಸಿಕೊಂಡ ನಂತರವೂ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್) ಮಾಹಿತಿ ನೀಡಲು ಮುಂದಾಗುತ್ತಿಲ್ಲ.ದಂಡ ಮತ್ತು ಮಾಹಿತಿ ಆಯೋಗದ ಕಟು ಟೀಕೆಯ ಹೊರತಾಗಿಯೂ ಬಿಎಂಆರ್‌ಸಿಎಲ್ ಪ್ರಧಾನ ವ್ಯವಸ್ಥಾಪಕ (ಯೋಜನೆಗಳು) ಯು.ಎ.ವಸಂತ್‌ರಾವ್ ಮಾಜಿ ಮೇಯರ್ ಪಿ.ಆರ್.ರಮೇಶ್ ಅವರಿಗೆ ಮಾಹಿತಿ ಒದಗಿಸಿಲ್ಲ. ಮಾಹಿತಿಗಾಗಿ ರಮೇಶ್ ಅವರು ಈಗಲೂ ನಿಗಮದ ಕಚೇರಿಗೆ ಎಡತಾಕುತ್ತಿದ್ದಾರೆ.2010 ಏ. 21ರಂದು ರಮೇಶ್  ಪ್ರತ್ಯೇಕ ಮಾಹಿತಿಗಾಗಿ ಮೂರು ಅರ್ಜಿ ಸಲ್ಲಿಸಿದ್ದರು. ಸ್ವಸ್ತಿಕ್ ಮೆಟ್ರೊ ರೈಲು ನಿಲ್ದಾಣಕ್ಕೆ ಸಂಬಂಧಿಸಿದಂತೆ ಒಪ್ಪಂದದ ದಾಖಲೆ, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಸ್ವಸ್ತಿಕ್ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಒಂದು ಅರ್ಜಿಯಲ್ಲಿ ಕೇಳಿದ್ದರು.ಮೆಟ್ರೊ ರೈಲು ನಿಲ್ದಾಣ ನಿರ್ಮಾಣವಾಗುವ ಕಸಬಾ ಹೋಬಳಿ ಜಕ್ಕಸಂದ್ರ ಗ್ರಾಮದ ಸರ್ವೆ ಸಂಖ್ಯೆ 20, 21 ಮತ್ತು 25ರ ಟೈಟಲ್ ಡೀಡ್ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೇಳಿ, ಜಮೀನಿನ ಮಾಲೀಕರು ಯಾರು ಎಂದು ಪ್ರಶ್ನಿಸಿ ರಮೇಶ್ ಎರಡನೇ ಅರ್ಜಿ ಸಲ್ಲಿಸಿದ್ದರು. ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದ ಕಾಮಗಾರಿಗಳ ಬಗ್ಗೆ 2009ರ ಮಾರ್ಚ್ 4 ಮತ್ತು 2010ರ ಏ.21ರಂದು ನಡೆದಿದ್ದ ನಿರ್ದೇಶಕ ಮಂಡಳಿ ಸಭೆಯ ವಿವರಗಳನ್ನು ಕೇಳಿ ಅವರು ಮೂರನೇ ಅರ್ಜಿ ಸಲ್ಲಿಸಿದ್ದರು.ಅರವತ್ತು ದಿನಗಳ ನಂತರವೂ ಮಾಹಿತಿ ನೀಡದ ಕಾರಣ ಅವರು ಮಾಹಿತಿ ಆಯೋಗಕ್ಕೆ ಮೇಲ್ಮನವಿಯನ್ನು ಸಲ್ಲಿಸಿದ್ದರು. 2011ರ ಆಗಸ್ಟ್ 24ರಂದು ಮೇಲ್ಮನವಿ ಅರ್ಜಿಯ ಮೊದಲನೇ ವಿಚಾರಣೆ ನಡೆದಿತ್ತು. ಮಾಹಿತಿ ಒದಗಿಸಿ ಅಥವಾ ವಿಳಂಬಕ್ಕೆ ಪ್ರತಿ ದಿನ 250 ರೂಪಾಯಿ ದಂಡ ಪಾವತಿಸಿ (ಗರಿಷ್ಠ 25 ಸಾವಿರ ರೂಪಾಯಿವರೆಗೆ) ಎಂದು ಸೂಚಿಸಲಾಗಿತ್ತು. ಆದರೂ ಮಾಹಿತಿ ನೀಡಲಿಲ್ಲ.2012ರ ಫೆ.22ರಂದು ಮುಂದಿನ ವಿಚಾರಣೆ ನಡೆಯಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ಮಾಹಿತಿ ಆಯೋಗದ ಆಯುಕ್ತ ಜೆ.ಎಸ್.ವಿರೂಪಾಕ್ಷಯ್ಯ ಅವರು ಮೂವತ್ತು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಐದು ಸಮಾನ ಕಂತುಗಳಲ್ಲಿ ದಂಡದ ಮೊತ್ತ ವಸೂಲಿ ಮಾಡುವಂತೆ ಅವರು ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ.ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶೈಲಂ ಅವರನ್ನು ಸಂಪರ್ಕಿಸಿ ಎರಡು ವರ್ಷ ಆದರೂ ನಿಗಮದ ಅಧಿಕಾರಿ ಮಾಹಿತಿ ನೀಡದ ಬಗ್ಗೆ ಕೇಳಿದರೆ ಪತ್ರಿಕೆ ಅಧಿಕಾರವನ್ನೇ ಅವರು ಪ್ರಶ್ನಿಸಿದರು.

`ಈ ಪ್ರಕರಣ ಇಬ್ಬರು ವ್ಯಕ್ತಿಗಳಿಗೆ ಸಂಬಂಧಿಸಿದ್ದು. ಅವರೇ ಈ ಬಗ್ಗೆ ಉತ್ತರಿಸಬೇಕು. ಈ ಬಗ್ಗೆ ಪತ್ರಿಕೆಯ ಪ್ರತಿನಿಧಿ ಪ್ರಶ್ನಿಸುವ ಔಚಿತ್ಯವೇನು~ ಎಂದು ಅವರು ಹೇಳಿದರು.`ಪತ್ರಿಕಾ ಸಮೂಹದವರಾದ ನೀವು ಈ ಪ್ರಶ್ನೆಯನ್ನು ಕೇಳುವಂತಿಲ್ಲ. ಇನ್ನೊಮ್ಮೆ ಈ ಪ್ರಶ್ನೆ ಕೇಳಿದರೆ ಈ ವಿಷಯವನ್ನು ಭಾರತೀಯ ಪತ್ರಿಕಾ ಮಂಡಳಿಗೆ ದೂರು ನೀಡುತ್ತೇನೆ. ಈ ಪ್ರಶ್ನೆ ಕೇಳಲು ನೀವು ಯಾರು? ಪತ್ರಕರ್ತ ಎಂದು ಪರಿಚಯಿಸಿಕೊಂಡ ಮಾತ್ರಕ್ಕೆ ಉತ್ತರಿಸುವ ಅಗತ್ಯವಿಲ್ಲ. ಪ್ರಶ್ನೆಗಳನ್ನು ಕಳುಹಿಸುವಂತೆ ಸಂಪಾದಕರಿಗೆ ಹೇಳಿ. ಆ ನಂತರ ನಾನು ಉತ್ತರಿಸುತ್ತೇನೆ~ ಎಂದು ಶಿವಶೈಲಂ ತಿಳಿಸಿದರು.`ಶಿವಶೈಲಂ ಅವರ ಉತ್ತರ ನನಗೆ ಆಶ್ಚರ್ಯ ಉಂಟು ಮಾಡಿಲ್ಲ. ಇದು ಬಿಎಂಆರ್‌ಸಿಎಲ್ ಕಾರ್ಯವೈಖರಿಯನ್ನು ತೋರಿಸುತ್ತದೆ. ಮಾಹಿತಿ ಹಕ್ಕು ಆಯೋಗದ ಆದೇಶವನ್ನೇ ಉಲ್ಲಂಘಿಸುವ ಅವರು ಮಾಧ್ಯಮ ಪ್ರತಿನಿಧಿಗಳನ್ನು ಪ್ರಶ್ನಿಸುವುದರಲ್ಲಿ ಆಶ್ಚರ್ಯವಿಲ್ಲ~ ಎಂದು ರಮೇಶ್ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.