ಸೋಮವಾರ, ಜೂನ್ 21, 2021
29 °C

ಮೆಟ್ರೊ: ಮೆಜೆಸ್ಟಿಕ್‌ನಿಂದ ಸೆಂಟ್ರಲ್ ಕಾಲೇಜಿಗೆ ಬಂತು ಸುರಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಮ್ಮ ಮೆಟ್ರೊ~ದ ಸುರಂಗ ಮಾರ್ಗ ಕಾಮಗಾರಿಯಲ್ಲಿ ಶನಿವಾರ ಮಹತ್ವದ ದಿನ. ಇದೇ ಪ್ರಥಮ ಬಾರಿಗೆ ರಾಜಧಾನಿಯಲ್ಲಿ ಪ್ರಗತಿಯಲ್ಲಿರುವ ಸುರಂಗ ಮಾರ್ಗ ನಿರ್ಮಾಣ ಕಾರ್ಯವು ಎರಡು ನಿಲ್ದಾಣಗಳ ನಡುವೆ ಸಂಪರ್ಕ ಕಲ್ಪಿಸುವುದರೊಂದಿಗೆ ಮುಖ್ಯ ಘಟ್ಟವನ್ನು ತಲುಪಿದೆ.ಮೆಜೆಸ್ಟಿಕ್ ಪ್ರದೇಶದಲ್ಲಿ ಜೂನ್ ಕೊನೆಯ ವಾರದಿಂದ ಸುಮಾರು 60 ಅಡಿ ಆಳದಲ್ಲಿ ನೆಲ ಕೊರೆದು ಸುರಂಗ ನಿರ್ಮಿಸುವ ಕಾರ್ಯವನ್ನು ಪ್ರಾರಂಭಿಸಿದ `ಹೆಲೆನ್~ ಹೆಸರಿನ ಟನೆಲ್ ಬೋರಿಂಗ್ ಮೆಷಿನ್ (ಟಿಬಿಎಂ)  ಶನಿವಾರ ಬೆಳಿಗ್ಗೆ 11ಕ್ಕೆ ಸರಿಯಾಗಿ ಸೆಂಟ್ರಲ್ ಕಾಲೇಜಿನ ನೆಲದಡಿಯ ನಿಲ್ದಾಣದ ಕಾಮಗಾರಿ ಸ್ಥಳದಲ್ಲಿ ಹೊರ ಬಂದಿತು.

ಇದರೊಂದಿಗೆ ಮೆಜೆಸ್ಟಿಕ್‌ನಿಂದ ಸೆಂಟ್ರಲ್ ಕಾಲೇಜು ನಿಲ್ದಾಣದವರೆಗಿನ 925 ಮೀಟರ್ ಉದ್ದದ ಸುರಂಗ ಮಾರ್ಗ ಸಂಪೂರ್ಣ ಸಿದ್ಧವಾದಂತಾಗಿದೆ.ಟಿಬಿಎಂ ಹೊರ ಬರುವ ಕಾತರ, ಸಂಭ್ರಮದ ಕ್ಷಣಕ್ಕೆ ಬೆಂಗಳೂರು ಮೆಟ್ರೊ ರೈಲು ನಿಗಮದ ಅಧ್ಯಕ್ಷ ಡಾ.ಸುಧೀರ್ ಕೃಷ್ಣ, ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಎಂ.ಶಿವಕುಮಾರ್, ಹುಡ್ಕೊ ವ್ಯವಸ್ಥಾಪಕ ನಿರ್ದೇಶಕ ವಿ.ಪಿ.ಬಳಿಗಾರ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಎ.ಎಸ್.ಸದಾಶಿವಯ್ಯ, ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಶೈಲಂ ಮೊದಲಾದವರು ಸಾಕ್ಷಿಯಾದರು.ನಿರ್ಮಾಣ ಕಾರ್ಯದ ಉಸ್ತುವಾರಿ ನೋಡಿಕೊಳ್ಳುತ್ತಿರುವ ನಿಗಮದ ಮುಖ್ಯ ಎಂಜಿನಿಯರ್ ಎನ್.ಪಿ.ಶರ್ಮ, ಉಪ ಮುಖ್ಯ ಎಂಜಿನಿಯರ್ ಸುಬ್ರಹ್ಮಣ್ಯ ಗುಡ್ಗೆ, ಜನರಲ್ ಕನ್ಸಲ್ಟೆಂಟ್‌ನ ಸ್ಥಾನಿಕ ಎಂಜಿನಿಯರ್ ಬಾಲಸುಬ್ರಮಣ್ಯಂ, ಗುತ್ತಿಗೆದಾರ ಸಂಸ್ಥೆಯ ಮುಖ್ಯ ಎಂಜಿನಿಯರ್ ಥಾಯ್ಲೆಂಡ್‌ನ ಆನನ್ ಮೊದಲಾದವರನ್ನು ನಿಗಮದ ಅಧ್ಯಕ್ಷರು ಅಭಿನಂದಿಸಿದರು.ಎರಡನೇ ಸುರಂಗ: ಒಂದನೇ ಸುರಂಗಕ್ಕೆ ಸಮನಾಂತರವಾಗಿ ಸರಾಸರಿ 30 ಅಡಿಗಳಷ್ಟು ದೂರದಲ್ಲಿ ನಿರ್ಮಾಣಗೊಳ್ಳುತ್ತಿರುವ ಎರಡನೇ ಸುರಂಗ ಮಾರ್ಗವು ಮಂಗಳವಾರದ (ಮಾ. 6) ವೇಳೆಗೆ ಸಿದ್ಧವಾಗುವ ನಿರೀಕ್ಷೆ ಇದೆ. ಎರಡನೇ ಸುರಂಗ ಕೊರೆಯುತ್ತಿರುವ `ಮಾರ್ಗರಿಟಾ~ ಹೆಸರಿನ ಯಂತ್ರವು ಮಂಗಳವಾರ ಹೊರ ಬರಲಿದೆ.ಹೊರ ಬರುವ ಟಿಬಿಎಂಗಳನ್ನು ನಿಲ್ದಾಣದ ಇನ್ನೊಂದು ಬದಿಯಲ್ಲಿ ಇರಿಸಿ ವಿಧಾನಸೌಧದ ಕಡೆಗೆ ಸುರಂಗ ಕೊರೆಯುವ ಕಾರ್ಯ ನಡೆಯಬೇಕಿದೆ. ಈ ಯಂತ್ರಗಳನ್ನು ಒಂದು ಬದಿಯಿಂದ ಇನ್ನೊಂದು ಬದಿಗೆ ಜೋಡಿಸಲು ಕನಿಷ್ಠ ಎರಡು ತಿಂಗಳ ಸಮಯ ಹಿಡಿಯಲಿದೆ ಎಂದು ತಂತ್ರಜ್ಞರೊಬ್ಬರು ತಿಳಿಸಿದರು.ಸೆಂಟ್ರಲ್ ಕಾಲೇಜಿನಿಂದ ವಿಧಾನಸೌಧದವರೆಗೆ 650 ಮೀಟರ್, ನಂತರ ಅಲ್ಲಿಂದ ಮಿನ್ಸ್ಕ್ ಚೌಕದವರೆಗೆ 400 ಮೀಟರ್, ಮೆಜೆಸ್ಟಿಕ್‌ನಿಂದ ನಗರ ರೈಲು ನಿಲ್ದಾಣದವರೆಗೆ 375 ಮೀಟರ್ ಉದ್ದದ ಸುರಂಗ ಕೊರೆದು ನಿರ್ಮಿಸುವ ಕಾರ್ಯ ಇನ್ನಷ್ಟೇ ನಡೆಯಬೇಕಿದೆ.ಈಗ ಸಿದ್ಧವಾಗಿರುವ ಸುರಂಗದಲ್ಲಿ ಹಳಿ ಅಳವಡಿಕೆ ಕಾರ್ಯ ಸದ್ಯದಲ್ಲೇ ಪ್ರಾರಂಭವಾಗಲಿದೆ.ಜಪಾನ್‌ನಿಂದ ಆಮದು ಮಾಡಿಕೊಂಡಿರುವ ಟಿಬಿಎಂ ಕಾರ್ಯಾಚರಣೆ ಪ್ರಾರಂಭಕ್ಕೆ ಮೇ 20ರಂದು ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದ್ದರು. ಅವರು ಚಾಲನೆ ನೀಡಿದ ತಿಂಗಳ ಬಳಿಕ ಕೊರೆಯುವ ಕಾರ್ಯ ಆರಂಭವಾಯಿತು. ಆಗಿನ ಲೆಕ್ಕಾಚಾರದ ಪ್ರಕಾರ ನವೆಂಬರ್ 15ರ ಹೊತ್ತಿಗೆ ಮೆಜೆಸ್ಟಿಕ್‌ನಿಂದ ಸೆಂಟ್ರಲ್ ಕಾಲೇಜುವರೆಗಿನ ಜೋಡಿ ಸುರಂಗ ಮಾರ್ಗ ಸಂಪೂರ್ಣವಾಗಿ ಸಿದ್ಧವಾಗಬೇಕಿತ್ತು.ಸುರಂಗ ಕೊರೆಯುವ ಕಾರ್ಯಾಚರಣೆ ವೇಳೆ ಅನಿರೀಕ್ಷಿತವಾಗಿ ಎದುರಾದ ಅಡೆತಡೆಗಳಿಂದಾಗಿ ಮೂರುವರೆ ತಿಂಗಳಷ್ಟು ತಡವಾಗಿ ಕಾಮಗಾರಿ ಪೂರ್ಣಗೊಂಡಿದೆ.

ಇನ್ನು ನಾಲ್ಕು ಯಂತ್ರಗಳು

ಸದ್ಯ ಪೂರ್ವ- ಪಶ್ಚಿಮ ಕಾರಿಡಾರ್‌ನಲ್ಲಿ ಎರಡು ಸುರಂಗ ಕೊರೆಯುವ ಯಂತ್ರಗಳು ಕಾರ್ಯಾಚರಣೆಯಲ್ಲಿವೆ. ಮಿನ್ಸ್ಕ್ ಚೌಕದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ 200 ಮೀಟರ್‌ಗಳಷ್ಟು ಸುರಂಗ ಕೊರೆಯಲು ದೆಹಲಿಯಿಂದ ಒಂದು ಯಂತ್ರವನ್ನು ನಗರಕ್ಕೆ ತರಿಸಿಕೊಳ್ಳುವ ಸಿದ್ಧತೆ ನಡೆದಿದೆ.ಇನ್ನು ಉತ್ತರ- ದಕ್ಷಿಣ ಕಾರಿಡಾರ್‌ನಲ್ಲಿ ಜಕ್ಕರಾಯನಕೆರೆ ಮೈದಾನದಿಂದ ಕೆಆರ್ ರಸ್ತೆ ಪ್ರವೇಶದ್ವಾರದವರೆಗೆ ಸುರಂಗ ಕೊರೆಯಲು ಮೂರು ಯಂತ್ರಗಳು ಮಾರ್ಚ್ ಅಂತ್ಯದ ವೇಳೆಗೆ ನಗರಕ್ಕೆ ಬರಲಿವೆ. ಎರಡು ಯಂತ್ರಗಳು ಚೀನಾದಿಂದ ಹಾಗೂ ಮತ್ತೊಂದು ಯಂತ್ರ ಜರ್ಮನಿಯಿಂದ ಬರಲಿದೆ. ಒಂದು ಯಂತ್ರದ ಬೆಲೆ 90ರಿಂದ 95 ಕೋಟಿ ರೂಪಾಯಿ ಎಂದು ಮೂಲಗಳು ತಿಳಿಸಿವೆ.

ಎಲ್ಲೆಲ್ಲಿ ಸುರಂಗ?

ಪೂರ್ವ- ಪಶ್ಚಿಮ ಕಾರಿಡಾರ್‌ನಲ್ಲಿ ಮಿನ್ಸ್ಕ್ ಚೌಕದಿಂದ ಮಾಗಡಿ ರಸ್ತೆ ಪ್ರವೇಶ ದ್ವಾರದವರೆಗೆ 4.8 ಕಿ.ಮೀ. ಉದ್ದದ ಮಾರ್ಗವು ನೆಲದಡಿಯಲ್ಲಿ ನಿರ್ಮಾಣಗೊಳ್ಳಲಿದೆ. ಉತ್ತರ- ದಕ್ಷಿಣ ಕಾರಿಡಾರ್‌ನಲ್ಲಿ ಸಂಪಿಗೆ ರಸ್ತೆಯಿಂದ ಕೆ.ಆರ್.ರಸ್ತೆ ಪ್ರವೇಶ ದ್ವಾರದವರೆಗೆ 4 ಕಿ.ಮೀ. ಉದ್ದದ ಸುರಂಗ ಮಾರ್ಗ ಸಿದ್ಧವಾಗಬೇಕಿದೆ.ಒಟ್ಟು 8 ನಿಲ್ದಾಣಗಳು ನೆಲದಡಿಯಲ್ಲಿ ನಿರ್ಮಾಣಗೊಳ್ಳಲಿವೆ. ಒಂದೊಂದು ನಿಲ್ದಾಣದ ಉದ್ದ 250 ಮೀಟರ್‌ಗಳಷ್ಟಿರುತ್ತದೆ. ನಿಲ್ದಾಣಗಳನ್ನು ನೆಲ ಅಗೆದು ನಿರ್ಮಿಸಲಾಗುತ್ತದೆ. ಎತ್ತರಿಸಿದ ಮಾರ್ಗ ಮತ್ತು ಸುರಂಗ ಮಾರ್ಗದ ನಡುವಿನ ರ‌್ಯಾಂಪ್‌ಗಳ ನಿರ್ಮಾಣಕ್ಕೆ ಸುರಂಗ ಕೊರೆಯುವ ಯಂತ್ರದ ಅಗತ್ಯ ಉಂಟಾಗುವುದಿಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.