ಮೆಟ್ರೊ: ರಸ್ತೆಗಳ ಗುಂಡಿ ಮುಚ್ಚಲು ಸೂಚನೆ

7

ಮೆಟ್ರೊ: ರಸ್ತೆಗಳ ಗುಂಡಿ ಮುಚ್ಚಲು ಸೂಚನೆ

Published:
Updated:

ಬೆಂಗಳೂರು: `ಬೈಯಪ್ಪನಹಳ್ಳಿಯಿಂದ ಮಹಾತ್ಮಗಾಂಧಿ ರಸ್ತೆವರೆಗಿನ `ನಮ್ಮ ಮೆಟ್ರೊ~ದ ರೀಚ್- 1ರ ಮಾರ್ಗದ ಕೆಳಭಾಗದ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಬೇಕು;  ಡಾಂಬರೀಕರಣ ಮಾಡಬೇಕು; ಪಾದಚಾರಿ ಮಾರ್ಗ ಅಚ್ಚುಕಟ್ಟಾಗಿರುವಂತೆ ನೋಡಿಕೊಳ್ಳಬೇಕು; ಪರಿಸರ ಸುಂದರವಾಗಿರುವಂತೆ ಕ್ರಮ ಕೈಗೊಳ್ಳಬೇಕು~-

ಇದು ನಗರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ ಅವರು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೋಮವಾರ ನೀಡಿದ ಸ್ಪಷ್ಟ ಸೂಚನೆ.ಈ ತಿಂಗಳ 20ರಂದು `ನಮ್ಮ ಮೆಟ್ರೊ~ ರೈಲಿನ ಸಂಚಾರದ ಉದ್ಘಾಟನಾ ಸಮಾರಂಭದ ಹಿನ್ನೆಲೆಯಲ್ಲಿ ಮೆಟ್ರೊದ ಎಂ.ಜಿ. ರಸ್ತೆ ನಿಲ್ದಾಣದಿಂದ ಬೈಯಪ್ಪನಹಳ್ಳಿವರೆಗಿನ ರಸ್ತೆ, ಪಾದಚಾರಿ ಮಾರ್ಗದಲ್ಲಿ ಸಚಿವರು ಸಂಚರಿಸಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, `ಮೆಟ್ರೊ ಸಂಚಾರ ಪ್ರಾರಂಭವಾಗುವುದರೊಂದಿಗೆ ಬೆಂಗಳೂರಿಗರ ಬಹುವರ್ಷಗಳ ಕನಸು ನನಸಾಗಲಿದೆ. 6.7 ಕಿ.ಮೀ. ಉದ್ದದ ರೀಚ್- 1ರ ಮಾರ್ಗದ ಕೆಳಭಾಗದ ರಸ್ತೆಯಲ್ಲಿಯೂ ವಾಹನ ಸವಾರರು ಸುಗಮವಾಗಿ ಸಂಚರಿಸಲು ಅನುವಾಗುವಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು~ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.`ಮೆಟ್ರೊ ಮಾರ್ಗದ ಪಿಲ್ಲರ್‌ಗಳು ಮತ್ತು ಕಮಾನುಗಳ ಮೇಲೆ ಯಾವುದೇ ಪೋಸ್ಟರ್‌ಗಳು, ಬ್ಯಾನರ್‌ಗಳು, ಫ್ಲೆಕ್ಸ್‌ಗಳನ್ನು ಹಾಕದಂತೆ ಕಟ್ಟೆಚ್ಚರ ವಹಿಸಬೇಕು. ಸುಂದರವಾದ ಪಿಲ್ಲರ್‌ಗಳ ವಿನ್ಯಾಸಕ್ಕೆ ಹೊಂದುವಂತೆ ಜಾಹೀರಾತುಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು~ ಎಂದು ಅವರು ಸಲಹೆ ನೀಡಿದರು.ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶೈಲಂ, `ಎಂ.ಜಿ. ರಸ್ತೆಯಲ್ಲಿ ಮೆಟ್ರೊ ಮಾರ್ಗದುದ್ದಕ್ಕೂ ಸುಂದರವಾದ ಪಾದಚಾರಿ ಮಾರ್ಗ,  ಬಯಲು ರಂಗಮಂದಿರ, ಕಲಾ ಪ್ರದರ್ಶನಾಂಗಣ ಮೊದಲಾದವುಗಳನ್ನು ಒಳಗೊಂಡ ಸುಂದರವಾದ ಬುಲೇವಾರ್ಡ್ ಕಾಮಗಾರಿ ಪ್ರಗತಿಯಲ್ಲಿದೆ~ ಎಂದು ವಿವರಿಸಿದರು.`ಮಳೆ ನೀರು ಸಂಗ್ರಹಕ್ಕೂ ಮೆಟ್ರೊ ನಿಗಮ ಆದ್ಯತೆ ನೀಡಿದೆ ಎಂದು ಮಾಹಿತಿ ನೀಡಿದರು.

ಮೇಯರ್ ಪಿ.ಶಾರದಮ್ಮ, ಉಪ ಮೇಯರ್ ಎಸ್.ಹರೀಶ್, ಆಡಳಿತ ಪಕ್ಷದ ನಾಯಕ ಬಿ.ಆರ್.ನಂಜುಂಡಪ್ಪ, ಪಾಲಿಕೆ ಆಯುಕ್ತ ಸಿದ್ದಯ್ಯ, ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಎಂ.ಎ.ಸಲೀಂ, ಬಿಎಂಆರ್‌ಸಿಎಲ್ ನಿರ್ದೇಶಕ ಬಿ.ಎಸ್.ಸುಧೀರ್ ಚಂದ್ರ, ವಕ್ತಾರ ಬಿ.ಎಲ್.ವೈ.ಚವಾಣ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry