ಮೆಟ್ರೊ ರೈಲು ಮಾರ್ಗದ ವಿಸ್ತರಣೆಗೆ ನಿರ್ಧಾರ

7

ಮೆಟ್ರೊ ರೈಲು ಮಾರ್ಗದ ವಿಸ್ತರಣೆಗೆ ನಿರ್ಧಾರ

Published:
Updated:

ಬೆಂಗಳೂರು: ನಗರ ಮತ್ತು `ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ~ದ (ಬಿಐಎಎಲ್) ನಡುವೆ ತ್ವರಿತ ಸಂಪರ್ಕ ಕಲ್ಪಿಸುವ ಉದ್ದೇಶದಿಂದ `ನಮ್ಮ ಮೆಟ್ರೊ~ ರೈಲು ಮಾರ್ಗದ ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.ಇದರೊಂದಿಗೆ ತಜ್ಞರು, ಗಣ್ಯರು ಮತ್ತು ಸಾರ್ವಜನಿಕರಿಂದ `ಭಾರಿ ವೆಚ್ಚದ ಅನಗತ್ಯ ಯೋಜನೆ~ ಎಂದು ಟೀಕೆಗೆ ಗುರಿಯಾಗಿರುವ ಅತಿವೇಗದ ರೈಲು ಸಂಪರ್ಕ ಕಲ್ಪಿಸುವ ಯೋಜನೆಯನ್ನು (ಎಚ್‌ಎಸ್‌ಆರ್‌ಎಲ್) ಕೈಬಿಟ್ಟಂತಾಗಿದೆ.ನಗರದ ಹೃದಯ ಭಾಗದಲ್ಲಿನ ಬಿಆರ್‌ವಿ ಪೆರೇಡ್ ಮೈದಾನ ಹಾಗೂ `ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ~ದ (ಬಿಐಎಎಲ್) ನಡುವೆ `ನಮ್ಮ ಮೆಟ್ರೊ~ ರೈಲು ಮಾರ್ಗದ ವಿಸ್ತರಣೆ ಮಾಡಲು ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್) ಸರ್ಕಾರ ಸೂಚಿಸಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶೈಲಂ ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಹೆಬ್ಬಾಳ ಹಾಗೂ ಯಲಹಂಕ ರೈಲು ನಿಲ್ದಾಣಗಳ ಮೂಲಕ ಹಾದು ಹೋಗುವ ಈ ಮಾರ್ಗದಲ್ಲಿ ಪ್ರಯಾಣಿಕರು ಬಿಆರ್‌ವಿ ಮೈದಾನದಿಂದ ವಿಮಾನ ನಿಲ್ದಾಣವನ್ನು 30 ನಿಮಿಷಗಳ ಒಳಗೆ ತಲುಪುವ ರೀತಿಯಲ್ಲಿ ಯೋಜನೆ ರೂಪಿಸುವಂತೆ ಸರ್ಕಾರ ಸೂಚಿಸಿದೆ~ ಎಂದರು.`ಸುಮಾರು 35 ಕಿ.ಮೀ.ನಷ್ಟು ಉದ್ದದ ಅತಿ ವೇಗದ ರೈಲು ಸಂಪರ್ಕ ಕಲ್ಪಿಸಲು ಸುಮಾರು 5,800 ಕೋಟಿ ರೂಪಾಯಿ ಖರ್ಚಾಗಬಹುದು ಎಂದು ಅಂದಾಜು ಮಾಡಲಾಗಿದೆ~ ಎಂದು ಅವರು ಹೇಳಿದರು.

`ಈ ಯೋಜನೆಗೆ ಒಟ್ಟು 66 ಹೆಕ್ಟೇರ್ ಜಾಗದ ಅಗತ್ಯವಿದೆ.ಇದರಲ್ಲಿ 13 ಹೆಕ್ಟೇರ್ ಸರ್ಕಾರಿ ಜಾಗ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಒಂಬತ್ತು ಹೆಕ್ಟೇರ್ ಹಾಗೂ 44 ಹೆಕ್ಟೇರ್ ಖಾಸಗಿ ಜಾಗವೂ ಸೇರಿದೆ. ರಾಜ್ಯ ಸರ್ಕಾರವು ಸ್ಯಾಂಕಿ ರಸ್ತೆ, ರಮಣ ಮಹರ್ಷಿ ರಸ್ತೆ ಹಾಗೂ ಬಳ್ಳಾರಿ ರಸ್ತೆಯಲ್ಲಿ ಜಾಗ ನೀಡಲು ಮುಂದೆ ಬಂದಿದೆ.ಮಾರುಕಟ್ಟೆ ದರದಲ್ಲಿ ಖಾಸಗಿ ಜಾಗದ ಬೆಲೆ 532 ಕೋಟಿ ರೂಪಾಯಿಗಳಾಗಬಹುದು. ಯೋಜನೆಯ ಶೇ 20ರಷ್ಟು ಮೊತ್ತವನ್ನು ಕೇಂದ್ರ ಸರ್ಕಾರ ಭರಿಸಲಿದೆ~ ಎಂದು ಅವರು ವಿವರಿಸಿದರು.`ಈ ಯೋಜನೆ ಬಗ್ಗೆ ಆಸಕ್ತಿ ವ್ಯಕ್ತಪಡಿಸಿರುವ ಐವರು ಅಂತರರಾಷ್ಟ್ರೀಯ ಬಿಡ್‌ದಾರರ ಪೈಕಿ ಅರ್ಹ ಗುತ್ತಿಗೆದಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ನಿಗಮವು ಪ್ರಾರಂಭಿಸಿದೆ~ ಎಂದು ಅವರು ಹೇಳಿದರು.ವಿಶೇಷವಾಗಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಪ್ರಯಾಣಿಕರ ಅನುಕೂಲಕ್ಕಾಗಿಯೇ `ನಮ್ಮ ಮೆಟ್ರೊ~ ರೈಲು ಸಂಪರ್ಕವನ್ನು ವಿಸ್ತರಿಸಲಾಗುತ್ತಿದೆಯೇ ಅಥವಾ ಅದು ಸಾಮಾನ್ಯ ಮೆಟ್ರೊ ರೈಲು ಮಾದರಿಯಲ್ಲಿರುತ್ತದೋ ಎಂಬ ಪ್ರಶ್ನೆಗೆ, `ಬಂಡವಾಳ ಹೂಡುವಂತಹ ಖಾಸಗಿ ವ್ಯಕ್ತಿಗಳು ಕೂಡ ಸಹಜವಾಗಿ ಯೋಜನೆಯಿಂದ ಲಾಭ ನಿರೀಕ್ಷಿಸಲಿರುವುದರಿಂದ ನಂತರದ ದಿನಗಳಲ್ಲಿ ಇದರ ರೂಪುರೇಷೆಗಳನ್ನು ನಿರ್ಧರಿಸಲಾಗುತ್ತದೆ~ ಎಂದು ಅವರು ಪ್ರತಿಕ್ರಿಯಿಸಿದರು.ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಮೆಟ್ರೊ ರೈಲುಗಳು ಹಾಗೂ ಮಾರ್ಗದ ನಿಲ್ದಾಣಗಳ ನಡುವೆ ಸಂಚರಿಸಲಿರುವ ಸಾಮಾನ್ಯ ಮೆಟ್ರೊ ರೈಲುಗಳ ಪ್ರಯಾಣ ದರದ ಬಗ್ಗೆ ಯೋಜನೆ ಪೂರ್ಣಗೊಂಡ ಬಳಿಕವೇ ತೀರ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry