ಮೆಟ್ರೊ ವಿಸ್ತರಣೆ ಅತ್ಯಂತ ಸೂಕ್ತ: ಹೆಚ್ಚು ಉಪಯುಕ್ತ

7

ಮೆಟ್ರೊ ವಿಸ್ತರಣೆ ಅತ್ಯಂತ ಸೂಕ್ತ: ಹೆಚ್ಚು ಉಪಯುಕ್ತ

Published:
Updated:

ಬೆಂಗಳೂರು: ಇನ್ನೆರಡು ವರ್ಷಗಳಲ್ಲಿ ರಾಜಧಾನಿಯ ನಾಲ್ಕು ದಿಕ್ಕುಗಳಲ್ಲೂ ‘ನಮ್ಮ ಮೆಟ್ರೊ’ದ ರೈಲುಗಳು  ಸಂಚಾರ ಆರಂಭಿಸಲಿವೆ. ಹೀಗಾಗಿ ‘ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ಕ್ಕೂ (ಬಿಐಎಎಲ್) ಮೆಟ್ರೊ ಮಾರ್ಗವನ್ನು ವಿಸ್ತರಿಸುವುದು ಅತ್ಯಂತ ಸೂಕ್ತ ಎಂಬುದು ತಜ್ಞರು ಮತ್ತು ಸಾರ್ವಜನಿಕರ ಒಮ್ಮತಾಭಿಪ್ರಾಯ.ಅತಿ ವೇಗದ ರೈಲು ಯೋಜನೆಗೆ ಹೋಲಿಸಿದರೆ ಮೆಟ್ರೊ ಮಾರ್ಗ ಬಹು ಉಪಯೋಗಿ; ಹೆಚ್ಚು ಅನುಕೂಲಗಳನ್ನು ಹೊಂದಿದೆ.ಸಾರ್ವಜನಿಕ ಸ್ವಾಮ್ಯದ್ದು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜತೆಗೂಡಿ ಕೈಗೊಂಡಿರುವ ಮೆಟ್ರೊ ಯೋಜನೆಯು ಸರ್ಕಾರಿ ಸ್ವಾಮ್ಯದ್ದಾಗಿರುವುದರಿಂದ ಅದರಲ್ಲಿ ಲಾಭ ಗಳಿಕೆಯು ಪ್ರಧಾನ ಉದ್ದೇಶವಾಗಿರುವುದಿಲ್ಲ; ಎಲ್ಲ ವರ್ಗದ ಜನರಿಗೂ ಅನುಕೂಲವಾಗುವ ಹಾಗೆ ಸೌಕರ್ಯ ಒದಗಿಸುವ ಹೊಣೆಗಾರಿಕೆಯನ್ನು ಹೊಂದಿರುತ್ತದೆ. ಸರ್ಕಾರಿ ಸ್ವಾಮ್ಯದ ಯೋಜನೆಯೇ ಸೂಕ್ತ ಎಂಬುದು ಜನಪರ ಸಂಘಟನೆಗಳ ಬೇಡಿಕೆ.ಆದರೆ ಖಾಸಗಿ ಮಾಲೀಕತ್ವದ ಯಾವುದೇ ಯೋಜನೆಯಲ್ಲಿ ಲಾಭ ಗಳಿಸುವುದೇ ಪರಮ ಉದ್ದೇಶ. ಹೆಚ್ಚು ಹೆಚ್ಚು ಲಾಭ ಮಾಡಲು ಅತಿ ವೇಗದ ರೈಲನ್ನೇ ಬಳಸುವಂತೆ ಏಕಸ್ವಾಮ್ಯದ ವಾತಾವರಣವನ್ನು ನಿರ್ಮಿಸಬಹುದು. ವಿಮಾನ ನಿಲ್ದಾಣ ತಲುಪಲು ರಸ್ತೆ, ರೈಲ್ವೆ, ಮೆಟ್ರೊದಂತಹ ಬದಲಿ ವ್ಯವಸ್ಥೆಗಳನ್ನು ಬಳಸಲು ಸಾಧ್ಯವಾಗದ ಹಾಗೆ ಹುನ್ನಾರ ನಡೆಸಬಹುದು ಎಂಬುದು ಅನೇಕ ನಾಗರಿಕ ಸಂಘಟನೆಗಳ ಆತಂಕ.ಹೆಚ್ಚು ಉಪಯುಕ್ತ:
ಅತಿ ವೇಗದ ರೈಲು ಹಿಡಿಯಬೇಕಾದರೆ ವಿಮಾನ ಪ್ರಯಾಣಿಕರು ಬಿಆರ್‌ವಿ ಮೈದಾನ ಅಥವಾ ಹೆಬ್ಬಾಳಕ್ಕೇ ಬರಬೇಕು. ವಿಮಾನ ನಿಲ್ದಾಣದಿಂದ ನಗರದ ಕಡೆಗೆ ಬರುವವರು ಈ ಎರಡು ಸ್ಥಳಗಳ ಪೈಕಿ ಒಂದರಲ್ಲಿ ಇಳಿದು, ಅಲ್ಲಿಂದ ತಮ್ಮ ಮನೆ ಅಥವಾ ಕಚೇರಿಗಳಿಗೆ ತೆರಳಲು ಪ್ರಯಾಸ ಪಡಬೇಕು.ಆದರೆ ಮೆಟ್ರೊ ಸಂಪರ್ಕ ಜಾಲದ ಮೂಲಕ ನಗರದ ಹಲವು ಬಡಾವಣೆಗಳಿಂದ ನೇರ ವಿಮಾನ ನಿಲ್ದಾಣ ತಲುಪುವಂತೆ ಸೌಕರ್ಯ ಕಲ್ಪಿಸಬಹುದು.ಉತ್ತರ ಭಾಗಕ್ಕೆ ವಂಚನೆ: ರಾಜರಾಜೇಶ್ವರಿ ನಗರದ ನಿವಾಸಿ ಲೋಕೇಶ್ ಅವರು, ‘ಹೈಸ್ಪೀಡ್ ರೈಲು ಯೋಜನೆ ಕಾರ್ಯಗತವಾಗಿ ಬಿಟ್ಟರೆ ನಗರದ ಉತ್ತರ ಭಾಗಕ್ಕೆ ಮೆಟ್ರೊ ರೈಲು ಮಾರ್ಗದ ವಿಸ್ತರಣೆಯನ್ನು ಶಾಶ್ವತವಾಗಿ ಕೈ ಬಿಟ್ಟಂತಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ.‘ಭವಿಷ್ಯದಲ್ಲಿ ಏರ್‌ಪೋರ್ಟ್ ಸುತ್ತಮುತ್ತ ಅನೇಕ ಟೌನ್‌ಷಿಪ್‌ಗಳು, ಎಸ್‌ಇಜಡ್‌ಗಳು ನಿರ್ಮಾಣವಾಗಲಿವೆ. ಅವುಗಳಿಗೆ ನಗರದ ಉಳಿದ ಕಡೆಗಳಿಂದ ಮೆಟ್ರೊ ರೈಲು ಸಂಪರ್ಕ ಬೇಡವೇ? ಮೆಟ್ರೊ ಮಾರ್ಗವನ್ನೇ ಮುಂದುವರೆಸಿದರೆ ಅದನ್ನು ಏರ್‌ಪೋರ್ಟ್‌ಗೂ ಬಳಸಬಹುದು. ಒಂದು ಏರಿಯಾದಿಂದ ಮತ್ತೊಂದು ಏರಿಯಾಗೆ ಹೋಗುವವರೂ ಉಪಯೋಗಿಸಬಹುದು’ ಎಂದು ಅವರು ವಾದಿಸುತ್ತಾರೆ.‘ಕೆಂಗೇರಿ ಅಥವಾ ನೆಲಮಂಗಲದಿಂದ ಏರ್‌ಪೋರ್ಟ್‌ಗೆ ಹೋಗುವವರು ಹೈಸ್ಪೀಡ್ ರೈಲು ಹತ್ತಲು ಎಂ.ಜಿ ರೋಡ್ ಅಥವಾ ಹೆಬ್ಬಾಳಕ್ಕೆ ಯಾಕೆ ಹೋಗಬೇಕು. ಅದೇ ಮೆಟ್ರೊ ಇದ್ದರೆ ಯಾವುದೇ ಭಾಗದಿಂದಲಾದರೂ ಒಂದೇ ಟಿಕೆಟ್ ಮೂಲಕ ಏರ್‌ಪೋರ್ಟ್‌ಗೆ ಹೋಗಬಹುದು’ ಎಂದು ಅವರು ಅಭಿಪ್ರಾಯಪಡುತ್ತಾರೆ.‘ನಗರದಿಂದ ಏರ್‌ಪೋರ್ಟ್‌ಗೆ ಮೆಟ್ರೊದಲ್ಲಿ ಹೈಸ್ಪೀಡ್ ರೈಲಿಗಿಂತ 15ರಿಂದ 20 ನಿಮಿಷ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಅಷ್ಟು ಸಮಯ ಉಳಿಸಲು ಸಾವಿರಾರು ಕೋಟಿ ಖರ್ಚು ಮಾಡುವ ಅಗತ್ಯವಿದೆಯೇ?’ ಎಂದು ಅವರು ಪ್ರಶ್ನಿಸುತ್ತಾರೆ.ಎಲ್ಲೆಲ್ಲಿಂದ ವಿಸ್ತರಣೆ ಸಾಧ್ಯ?: ‘ನಮ್ಮ ಮೆಟ್ರೊ’ದ ಮೊದಲ ಹಂತದಲ್ಲಿ ಬೈಯಪ್ಪನಹಳ್ಳಿ, ಸಿ.ಎಂ.ಎಚ್ ರಸ್ತೆ, ಹಲಸೂರು, ಎಂ.ಜಿ ರಸ್ತೆ, ಮಿನ್ಸ್ಕ್ ಚೌಕ, ಸ್ವಸ್ತಿಕ್ ವೃತ್ತ (ಶೇಷಾದ್ರಿಪುರ), ಯಶವಂತಪುರ, ಪೀಣ್ಯ, ಹೆಸರಘಟ್ಟ ಕ್ರಾಸ್- ಗಳಲ್ಲಿ ನಿರ್ಮಾಣವಾಗುವ ನಿಲ್ದಾಣಗಳ ಪೈಕಿ ಯಾವುದಾದರೂ ಒಂದು ನಿಲ್ದಾಣದಿಂದ ಉತ್ತರ ದಿಕ್ಕಿಗೆ ಬಿಐಎಎಲ್‌ವರೆಗೆ ಮೆಟ್ರೊ ಮಾರ್ಗ ನಿರ್ಮಿಸಬಹುದು.ಎರಡನೇ ಹಂತದಲ್ಲಿ ಬನ್ನೇರುಘಟ್ಟದಿಂದ ನಾಗವಾರದವರೆಗೆ ನಿರ್ಮಾಣವಾಗಲಿರುವ ಮೆಟ್ರೊ ಮಾರ್ಗವನ್ನು ಬಿಐಎಎಲ್ ತನಕ ವಿಸ್ತರಿಸಬಹುದು. ಅಥವಾ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ ಮಾರ್ಗವಾಗಿ ಬಿಐಎಎಲ್ ವರೆಗೆ ನೇರ ಮೆಟ್ರೊ ಮಾರ್ಗ ನಿರ್ಮಿಸುವುದು.ಇನ್ನೂ ಒಂದು ಸಾಧ್ಯತೆಯ ಬಗ್ಗೆ ಚಿಂತನೆ ನಡೆದಿದೆ. ಅದು ಯಶವಂತಪುರದಿಂದ ಯಲಹಂಕ ಮಾರ್ಗವಾಗಿ ಬಿಐಎಎಲ್‌ಗೆ ಮೆಟ್ರೊ ಮಾರ್ಗ ನಿರ್ಮಿಸುವುದು.ಸಂಭವನೀಯ ಮಾರ್ಗ ಹೀಗಿದೆ: ಯಶವಂತಪುರ ಮೆಟ್ರೊ ನಿಲ್ದಾಣ- ಯಶವಂತಪುರ ರೈಲು ನಿಲ್ದಾಣ- ಮತ್ತಿಕೆರೆಯಿಂದ ಬಿಇಎಲ್ ವೃತ್ತ (ಸುರಂಗ ಮಾರ್ಗ)- ಯಲಹಂಕ (ಎತ್ತರಿಸಿದ ಮಾರ್ಗ)- ಕಣ್ಣೂರು (ಸುರಂಗ)- ವಿಮಾನ ನಿಲ್ದಾಣ (ಎತ್ತರಿಸಿದ ಮಾರ್ಗ).ಪ್ರಾಥಮಿಕ ಅಂದಾಜಿನ ಪ್ರಕಾರ ಸುಮಾರು 33 ಕಿಲೋ ಮೀಟರ್ ಉದ್ದದ ಈ ಮೆಟ್ರೊ ಮಾರ್ಗಕ್ಕೆ ಸುಮಾರು `7500 ಕೋಟಿ  ವೆಚ್ಚವಾಗಬಹುದೆಂದು ಲೆಕ್ಕ ಹಾಕಲಾಗಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶೈಲಂ ಇತ್ತೀಚೆಗೆ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ತಿಳಿಸಿದ್ದರು.ಹೀಗೆ ನಗರದ ಎಲ್ಲ ದಿಕ್ಕುಗಳಲ್ಲಿ ಮೆಟ್ರೊ ಸಂಪರ್ಕ ಜಾಲ ನಿರ್ಮಾಣವಾದರೆ ಎಲ್ಲ ಬಡಾವಣೆಗಳ ನಾಗರಿಕರು ತಮಗೆ ಹತ್ತಿರದ ಮೆಟ್ರೊ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಹೋಗಿಬರಲು ಅವಕಾಶವಾಗಲಿದೆ.ನಿಗಮದ  ಈಗಿನ  ಮಾಹಿತಿ ಪ್ರಕಾರ ಮೆಟ್ರೊ ರೈಲು, ಪೂರ್ವ ಭಾಗದ ಬೈಯಪ್ಪನಹಳ್ಳಿಯಿಂದ  ಪಶ್ಚಿಮ ಭಾಗದ ಮೈಸೂರು  ರಸ್ತೆವರೆಗಿನ  18.10 ಕಿ.ಮೀ. ದೂರವನ್ನು 33 ನಿಮಿಷಗಳಲ್ಲಿ ಹಾಗೂ ಉತ್ತರ ಭಾಗದ ಹೆಸರುಘಟ್ಟ ಕ್ರಾಸ್‌ನ ನಾಗಸಂದ್ರದಿಂದ ದಕ್ಷಿಣ ಭಾಗದ ಪುಟ್ಟೇನಹಳ್ಳಿವರೆಗಿನ 24.20 ಕಿ.ಮೀ. ದೂರವನ್ನು 44 ನಿಮಿಷಗಳಲ್ಲಿ ಕ್ರಮಿಸಲಿದೆ. ಪೂರ್ವ- ಪಶ್ಚಿಮ ಕಾರಿಡಾರ್‌ನಲ್ಲಿ ಒಟ್ಟು 17 ಹಾಗೂ ಉತ್ತರ- ದಕ್ಷಿಣ ಕಾರಿಡಾರ್‌ನಲ್ಲಿ  24 ನಿಲ್ದಾಣಗಳು ಇರಲಿವೆ.ಬಿಐಎಎಲ್‌ಗೆ ವಿಶೇಷವಾಗಿ ಓಡಿಸುವ ರೈಲುಗಳ ನಿಲುಗಡೆ ಸಂಖ್ಯೆಯನ್ನು ಕಡಿಮೆ ಮಾಡಿ, ವೇಗವಾಗಿ ಓಡುವಂತೆ ನೋಡಿಕೊಂಡರೆ 30ರಿಂದ 40 ನಿಮಿಷಗಳಲ್ಲಿ ನಗರದ ಕೇಂದ್ರ ಭಾಗದಿಂದ ವಿಮಾನ ನಿಲ್ದಾಣದವರೆಗಿನ ದೂರವನ್ನು ತಲುಪಬಹುದು. ಈ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಉದ್ದೇಶಿತ ಹೈ ಸ್ಪೀಡ್ ರೈಲಿಗೆ ಹೋಲಿಸಿದರೆ ಮೆಟ್ರೊ ರೈಲಿನಲ್ಲಿ ಪ್ರಯಾಣದ ಅವಧಿ 10ರಿಂದ 20 ನಿಮಿಷಗಳು ಹೆಚ್ಚಾಗಬಹುದು. ಹೆಬ್ಬಾಳ ಅಥವಾ ಯಲಹಂಕದಿಂದ ಯಾವುದೇ ನಿಲುಗಡೆ ಇಲ್ಲದಿದ್ದರೆ ಮೆಟ್ರೊದಲ್ಲೂ ಹೈಸ್ಪೀಡ್ ರೈಲಿನಷ್ಟೇ ವೇಗವಾಗಿ ವಿಮಾನ ನಿಲ್ದಾಣವನ್ನು ತಲುಪಿಕೊಳ್ಳಬಹುದು.ಒಟ್ಟಾರೆ ಮೆಟ್ರೊ ಯೋಜನೆಯ ವಿಸ್ತರಣೆಯಿಂದ ಆಗುವ ಅನುಕೂಲಗಳು ಬಹಳ; ನಗರದ ಹೆಚ್ಚು ಸ್ಥಳಗಳಿಂದ ವಿಮಾನ ಪ್ರಯಾಣಿಕರು ಹೋಗಿ ಬರಲು ಅವಕಾಶವಾಗಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry