ಸೋಮವಾರ, ಡಿಸೆಂಬರ್ 16, 2019
18 °C

ಮೆಟ್ರೊ: ಸಂಕ್ರಾಂತಿ ವೇಳೆಗೆ ಒಂದನೇ ಸುರಂಗ ಸಿದ್ಧ

ಎನ್.ಸಿದ್ದೇಗೌಡ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಟ್ರೊ: ಸಂಕ್ರಾಂತಿ ವೇಳೆಗೆ ಒಂದನೇ ಸುರಂಗ ಸಿದ್ಧ

ಬೆಂಗಳೂರು: ಮೆಜೆಸ್ಟಿಕ್‌ನಿಂದ ಸೆಂಟ್ರಲ್ ಕಾಲೇಜುವರೆಗೆ ನೆಲದಡಿಯಲ್ಲಿ ಸದ್ದಿಲ್ಲದೇ ಸಾಗಿರುವ `ನಮ್ಮ ಮೆಟ್ರೊ~ದ ಜೋಡಿ ಸುರಂಗ ಮಾರ್ಗದ ನಿರ್ಮಾಣ ಕಾರ್ಯ ಮುಖ್ಯ ಘಟ್ಟದಲ್ಲಿದೆ. ಒಂದನೇ ಸುರಂಗದ ನಿರ್ಮಾಣ ಕಾರ್ಯ ಇನ್ನೆರಡು ವಾರಗಳಲ್ಲಿ ಪೂರ್ಣಗೊಳ್ಳಲಿದ್ದು, ಎರಡನೇ ಸುರಂಗವು ಅರ್ಧದಷ್ಟು ಸಿದ್ಧಗೊಂಡಿದೆ.ಶನಿವಾರ ಸಂಜೆವರೆಗೆ ಮೆಜೆಸ್ಟಿಕ್‌ನಿಂದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವೃತ್ತದ ಬಳಿ ಇರುವ ಮಾರುತಿ ದೇವಸ್ಥಾನದದ ಕೆಳಭಾಗದವರೆಗೆ ಅಂದರೆ 825 ಮೀಟರ್‌ಗಳಷ್ಟು ಉದ್ದದ ಸುರಂಗ ಸಿದ್ಧವಾಗಿದೆ. ಸೆಂಟ್ರಲ್ ಕಾಲೇಜು ಮುಂಭಾಗದ ನೆಲದಡಿಯ ನಿಲ್ದಾಣವನ್ನು ಸೇರಿಕೊಳ್ಳಲು ಇನ್ನು 150 ಮೀಟರ್ ದೂರವಷ್ಟೆ ಬಾಕಿ ಇದೆ.ಒಂದನೇ ಸುರಂಗಕ್ಕೆ ಸುಮಾರು 30 ಅಡಿಗಳಷ್ಟು ಸಮನಾಂತರ ದೂರದಲ್ಲಿ ನಿರ್ಮಾಣಗೊಳ್ಳುತ್ತಿರುವ ಎರಡನೇ ಸುರಂಗವು ಭೂಮಿಕಾ ಚಿತ್ರಮಂದಿರದ ಕೆಳಭಾಗದವರೆಗೆ ಅಂದರೆ 450 ಮೀಟರ್‌ಗಳಷ್ಟು ಪೂರ್ಣಗೊಂಡಿದೆ.ಜಪಾನ್‌ನಿಂದ ಆಮದು ಮಾಡಿಕೊಂಡಿರುವ `ಟನೆಲ್ ಬೋರಿಂಗ್ ಮೆಷಿನ್~ನ (ಟಿಬಿಎಂ) ಕಾರ್ಯಾಚರಣೆ ಪ್ರಾರಂಭಕ್ಕೆ ಮೇ 20ರಂದು ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದ್ದರು. ಅವರು ಚಾಲನೆ ನೀಡಿದ ತಿಂಗಳ ಬಳಿಕ ಕೊರೆಯುವ ಕಾರ್ಯ ಆರಂಭವಾಯಿತು. ಆಗಿನ ಲೆಕ್ಕಾಚಾರದ ಪ್ರಕಾರ ನವೆಂಬರ್ 15ರ ಹೊತ್ತಿಗೆ ಮೆಜೆಸ್ಟಿಕ್‌ನಿಂದ ಸೆಂಟ್ರಲ್ ಕಾಲೇಜುವರೆಗಿನ ಜೋಡಿ ಸುರಂಗ ಮಾರ್ಗ ಸಂಪೂರ್ಣವಾಗಿ ಸಿದ್ಧವಾಗಬೇಕಿತ್ತು.ಸುರಂಗ ಕೊರೆಯುವ ಕಾಮಗಾರಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬೆಂಗಳೂರು ಮೆಟ್ರೊ ರೈಲು ನಿಗಮದ ಎಂಜಿನಿಯರ್‌ರೊಬ್ಬರು ಸುರಂಗ ನಿರ್ಮಾಣ ಕಾರ್ಯ ವಿಳಂಬವಾಗಿರುವುದನ್ನು ಒಪ್ಪಿಕೊಳ್ಳುತ್ತಾರೆ.

ಜಗತ್ತಿನ ಯಾವ ಭಾಗದಲ್ಲಿಯೂ ಸುರಂಗ ನಿರ್ಮಾಣ ಕಾರ್ಯ ನಿರೀಕ್ಷೆಯಂತೆ ನಡೆದಿಲ್ಲ ಎಂದು ಹೇಳುವ ಅವರು, ಕೊರೆಯುವ ಕಾಮಗಾರಿ ಆರಂಭಿಸುವ ಮುನ್ನ ಮಾಡಿರುವ ಅಂದಾಜುಗಳು ಕಾರ್ಯಾಚರಣೆ ವೇಳೆ ಕೈಕೊಡುವ ಸಾಧ್ಯತೆಗಳೇ ಹೆಚ್ಚು ಎಂದು ನುಡಿದರು.`ಕಾಮಗಾರಿ ಪೂರ್ವದಲ್ಲಿ ನಾವು ಪ್ರತಿ 50 ಮೀಟರ್‌ಗೆ ಒಂದರಂತೆ ಆರು ಅಂಗುಲ ಸುತ್ತಳತೆಯ ಕೊಳವೆ ಬಾವಿ ಕೊರೆದು ಮಣ್ಣಿನ ಸಂರಚನೆಯ ಮಾದರಿಯನ್ನು ವಿಶ್ಲೇಷಿಸುತ್ತೇವೆ. ವಾಸ್ತವವಾಗಿ ಒಂದು ಸುರಂಗದ ಸುತ್ತಳತೆ 6.4 ಮೀಟರ್‌ಗಳಷ್ಟು. ಪರೀಕ್ಷೆ ಸಂದರ್ಭದಲ್ಲಿ ಅಂದಾಜು ಮಾಡಿದ ಮಣ್ಣಿನ ಸಂರಚನೆಗೂ ಕೊರೆಯುವ ಕಾರ್ಯ ನಡೆಯುವಾಗ ಸಿಗುವ ಮಣ್ಣಿನ ಸಂರಚನೆಗೂ ವ್ಯತ್ಯಾಸವಾದಂತೆಲ್ಲ ಕಾಮಗಾರಿಯ ವೇಗ ಕುಂಠಿತಗೊಳ್ಳುತ್ತದೆ~ ಎಂದು ಅವರು ವಿವರಿಸಿದರು.`ಕಲ್ಲು ಹೆಚ್ಚಾಗಿ ಸಿಗಬಹುದು ಎಂದುಕೊಂಡು ಅದಕ್ಕೆ ತಕ್ಕಂತೆ ಯಂತ್ರಕ್ಕೆ ಡಿಸ್ಕ್‌ಗಳನ್ನು ಜೋಡಿಸಿರುತ್ತೇವೆ. ಅಲ್ಲಿ ಮೆದು ಮಣ್ಣು ಸಿಕ್ಕರೆ ಯಂತ್ರವನ್ನು ಸ್ಥಗಿತಗೊಳಿಸಿ ಮತ್ತೆ ಬೇರೆ ತೆರನಾದ ಡಿಸ್ಕ್ ಅನ್ನು ಜೋಡಿಸಬೇಕು. ಅದೇ ರೀತಿ ಬರೇ ಮಣ್ಣು ಸಿಗುತ್ತದೆಂಬ ಕಡೆ ಬರೇ ಕಲ್ಲು ಅಥವಾ ನೀರು ಸಿಕ್ಕಿರುವ ನಿದರ್ಶನವೂ ಉಂಟು. ಇಂತಹ ಅನಿಶ್ಚಿತ ಸನ್ನಿವೇಶಗಳೇ ಕಾಮಗಾರಿಯ ವಿಳಂಬಕ್ಕೆ ಕಾರಣ~ ಎಂದು ಅವರು ಅಭಿಪ್ರಾಯಪಟ್ಟರು.`ಎಲ್ಲವೂ ಅಂದುಕೊಂಡಂತೆ ನಡೆದಾಗ ಒಂದೊಂದು ದಿನ 18 ಮೀಟರ್‌ಗಳಷ್ಟು ಸುರಂಗವನ್ನು ಸಿದ್ಧಪಡಿಸಿದ್ದೇವೆ. ಕೆಲವು ದಿನ ಒಂದೇ ಒಂದು ಮೀಟರ್ ಸುರಂಗವನ್ನು ಸಿದ್ಧಪಡಿಸಲಾಗದ ಅಸಹಾಯಕತೆಯನ್ನೂ ಅನುಭವಿಸಿದ್ದೇವೆ~ ಎಂದು ಅವರು ಸುರಂಗ ಕೊರೆಯುವಿಕೆಯ ಕಷ್ಟ ಸುಖವನ್ನು ಹಂಚಿಕೊಂಡರು.`ಈಗ ವಿಳಂಬವಾಗಿದೆ ಎಂದಾಕ್ಷಣ ಚಿಂತೆ ಮಾಡಬೇಕಾದ ಅಗತ್ಯವೇನೂ ಅಲ್ಲ. ನೆಲದಡಿಯ ನಿಲ್ದಾಣಗಳು ಸೇರಿದಂತೆ ಒಟ್ಟು 8.82 ಕಿ.ಮೀ. ಉದ್ದದ ಸುರಂಗ ಮಾರ್ಗದ ನಿರ್ಮಾಣ ಕಾರ್ಯವನ್ನು 2014ರ ಮಾರ್ಚ್ ವೇಳೆಗೆ ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಆ ಅಂತಿಮ ಗಡುವಿಗೆ ಮುಂಚೆ ಸುರಂಗ ಮಾರ್ಗ ಸಿದ್ಧವಾಗಲಿದೆ. ಅದರ ಬಗ್ಗೆ ಯಾರಿಗೂ ಸಂಶಯ ಬೇಡ~ ಎಂದು ಅವರು ಭರವಸೆ ವ್ಯಕ್ತಪಡಿಸುತ್ತಾರೆ.ಯಂತ್ರ ಬಲು ಸೂಕ್ಷ್ಮ

ಸುರಂಗ ಕೊರೆಯುವ ಯಂತ್ರವಾದ `ಟನೆಲ್ ಬೋರಿಂಗ್ ಮೆಷಿನ್~ (ಟಿಬಿಎಂ) ಬಲು ಸೂಕ್ಷ್ಮ. ನೆಲದಡಿಯಲ್ಲಿ ಕೊರೆಯುತ್ತಾ ಸಾಗುವ ಈ ಯಂತ್ರ ಕೆಟ್ಟರೆ ಕಷ್ಟ ಕಷ್ಟ. ಯಂತ್ರ ಕೆಟ್ಟು ನಿಂತಿರುವ ಕಡೆಯೇ ರಿಪೇರಿ ಮಾಡಲು ಸಾಧ್ಯವಾಗುವುದಿಲ್ಲ. ನೆಲವನ್ನು ಅಗೆದು ಯಂತ್ರವನ್ನು ಹೊರ ತೆಗೆದು ರಿಪೇರಿ ಮಾಡಬೇಕಾಗುತ್ತದೆ. ಅದಕ್ಕೆ ತಿಂಗಳುಗಟ್ಟಲೆ ಹಿಡಿಯುತ್ತದೆ. ಹೀಗಾಗಿ ಯಂತ್ರ ಕೆಡದಂತೆ ನಿಗಾ ವಹಿಸುವುದು ಬಹಳ ಮುಖ್ಯ.

 ಯಂತ್ರದ ಮೇಲೆ ಹೆಚ್ಚಿನ ಒತ್ತಡ ಹಾಕದಂತೆ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಸುರಂಗ ತಜ್ಞರು ತಿಳಿಸಿದರು.ಇನ್ನು ನಾಲ್ಕು ಕೊರೆಯುವ ಯಂತ್ರಗಳು

ಸದ್ಯ ಪೂರ್ವ- ಪಶ್ಚಿಮ ಕಾರಿಡಾರ್‌ನಲ್ಲಿ ಎರಡು ಸುರಂಗ ಕೊರೆಯುವ ಯಂತ್ರಗಳು ಕಾರ್ಯಾಚರಣೆಯಲ್ಲಿವೆ. ಮಿನ್ಸ್ಕ್ ಚೌಕದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ 200 ಮೀಟರ್‌ಗಳಷ್ಟು ಸುರಂಗ ಕೊರೆಯಲು ದೆಹಲಿಯಿಂದ ಒಂದು ಯಂತ್ರವನ್ನು ಈ ತಿಂಗಳಾಂತ್ಯಕ್ಕೆ ನಗರಕ್ಕೆ ತರಿಸಿಕೊಳ್ಳುವ ಸಿದ್ಧತೆ ನಡೆದಿದೆ.ಇನ್ನು ಉತ್ತರ- ದಕ್ಷಿಣ ಕಾರಿಡಾರ್‌ನಲ್ಲಿ ಜಕ್ಕರಾಯನಕೆರೆ ಮೈದಾನದಿಂದ ಕೆಆರ್ ರಸ್ತೆ ಪ್ರವೇಶದ್ವಾರದವರೆಗೆ ಸುರಂಗ ಕೊರೆಯಲು ಮೂರು ಯಂತ್ರಗಳು ಮಾರ್ಚ್ ಅಂತ್ಯದ ವೇಳೆಗೆ ನಗರಕ್ಕೆ ಬರಲಿವೆ.

ಎರಡು ಯಂತ್ರಗಳು ಚೀನಾದಿಂದ ಹಾಗೂ ಮತ್ತೊಂದು ಯಂತ್ರ ಜರ್ಮನಿಯಿಂದ ಬರಲಿದೆ. ಒಂದು ಯಂತ್ರದ ಬೆಲೆ 90ರಿಂದ 95 ಕೋಟಿ ರೂಪಾಯಿ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)