ಮೆಟ್ರೊ ಸುರಂಗ ಮಾರ್ಗ ಕಾಮಗಾರಿ: ಚೆನ್ನೈ ತಲುಪಿದ ಜಪಾನ್ ಯಂತ್ರ
ಬೆಂಗಳೂರು: ನಗರದ ಮಿನ್ಸ್ಕ್ ಚೌಕದಿಂದ ಮಾಗಡಿ ರಸ್ತೆ ಪ್ರವೇಶ ದ್ವಾರದವರೆಗೆ ‘ನಮ್ಮ ಮೆಟ್ರೊ’ದ ಸುರಂಗ ಮಾರ್ಗ ನಿರ್ಮಿಸಲು ಜಪಾನ್ನಿಂದ ತರಿಸಲಾಗುತ್ತಿರುವ ದೈತ್ಯ ಗಾತ್ರದ ಸುರಂಗ ಕೊರೆಯುವ ಯಂತ್ರವನ್ನು (ಟನೆಲ್ ಬೋರಿಂಗ್ ಮೆಷಿನ್- ಟಿಬಿಎಂ) ಹೊತ್ತ ಹಡಗು ಸುರಕ್ಷಿತವಾಗಿ ಚೆನ್ನೈ ಬಳಿಗೆ ಬಂದಿದೆ.
ಪೂರ್ವ- ಪಶ್ಚಿಮ ಕಾರಿಡಾರ್ನ ಸುರಂಗ ಮಾರ್ಗ ನಿರ್ಮಾಣದ ಗುತ್ತಿಗೆ ಪಡೆದಿರುವ ತೈವಾನ್ನ ಕಾಂಟಿನೆಂಟಲ್ ಎಂಜಿನಿಯರಿಂಗ್ ಕಾರ್ಪೋರೇಷನ್ ಮತ್ತು ಭಾರತದ ಸೋಮ ಕನ್ಸ್ಟ್ರಕ್ಷನ್ನ ಜಂಟಿ ಸಹಭಾಗಿತ್ವದ ಕಂಪೆನಿಗಾಗಿ ಜಪಾನ್ನ ಹಿಟಾಚಿ ಕಂಪೆನಿಯು ಈ ಯಂತ್ರವನ್ನು ನಿರ್ಮಿಸಿದೆ. ‘ಫೆಬ್ರುವರಿ ಮೂರನೇ ವಾರದಲ್ಲಿ ಈ ಯಂತ್ರವನ್ನು ಹೊತ್ತ ಹಡಗು ಜಪಾನ್ನಿಂದ ಹೊರಟಿತು.
ಇದೀಗ ಚೆನ್ನೈ ಹತ್ತಿರಕ್ಕೆ ಬಂದಿರುವ ಈ ಹಡಗು, ಬಂದರಿನಲ್ಲಿ ನಿಲುಗಡೆಗಾಗಿ ಸಿಗ್ನಲ್ಗಾಗಿ ಕಾಯುತ್ತಿದೆ. ಹೀಗಾಗಿ ಈ ಹಡಗು ಮತ್ತು ಅದರಲ್ಲಿರುವ ಯಂತ್ರಕ್ಕೆ ಜಪಾನ್ ಅಣುವಿಕಿರಣ ದುರಂತದ ಪರಿಣಾಮ ಆಗಿರುವ ಯಾವುದೇ ಸಾಧ್ಯತೆಯಿಲ್ಲ’ ಎಂದು ಮೆಟ್ರೊ ರೈಲು ನಿಗಮದ ಮೂಲಗಳು ತಿಳಿಸಿವೆ.
ಚೆನ್ನೈನಲ್ಲಿ ಅನ್ಲೋಡ್ ಆದ ಮೇಲೆ ಈ ಯಂತ್ರವನ್ನು ಹತ್ತಿಪ್ಪತ್ತು ಲಾರಿಗಳಲ್ಲಿ ಬೆಂಗಳೂರಿಗೆ ತರಲಾಗುತ್ತದೆ. ಹಲವು ಭಾಗಗಳಲ್ಲಿರುವ ಆ ಯಂತ್ರವನ್ನು ಜೋಡಿಸಿ, ಮೆಜೆಸ್ಟಿಕ್ ಕಡೆಯಿಂದ ವಿಧಾನಸೌಧದ ಕಡೆಗೆ ಸುರಂಗ ಕೊರೆಯಲು ಬಳಸಲಾಗುವುದು. ಮತ್ತೊಂದು ಟಿಬಿಎಂ ಯಂತ್ರ ಜಪಾನ್ನಿಂದ ಬರಬೇಕಿದ್ದು, ಅದರ ಸ್ಥಿತಿಗತಿ ಗೊತ್ತಾಗಿಲ್ಲ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.