ಸೋಮವಾರ, ಜೂನ್ 14, 2021
26 °C

ಮೆಟ್ರೊ ಹತ್ರ ಸೈಕಲ್ ಬೆಲ್!

ಸುಮಾ ಬಿ. Updated:

ಅಕ್ಷರ ಗಾತ್ರ : | |

ಮಹಾನಗರಿಯಲ್ಲಿ ಒಂದೆಡೆ ಮೆಟ್ರೊ ರೈಲಿನ ಧಾವಂತ. ಮತ್ತೊಂದೆಡೆ ಸೈಕಲ್‌ಗಳ ಸ್ದ್ದದಿಲ್ಲದ ಕಾರ್ಯಾಚರಣೆ...! ಮೆಟ್ರೊಗೆ ಧಾವಿಸಲು ಸೈಕಲ್ ಸವಾರಿಯ ಸಹಾಯ. ಈಗ ಇವೆರಡೂ ಒಟ್ಟೊಟ್ಟಿಗೆ ಆರಂಭವಾಗಿ ಜನರ ಮನಗೆದ್ದಿರುವುದಂತೂ ಸತ್ಯ.

ಆಧುನಿಕತೆಗೆ ತೆರೆದುಕೊಳ್ಳುತ್ತಿರುವ ಜನತೆ, ಹಳೆಯ ಸೊಗಡನ್ನು ಬಿಟ್ಟುಕೊಡಲು ಇಷ್ಟಪಡುತ್ತಿಲ್ಲ. ಅಭಿವೃದ್ಧಿಯ ಸಂಕೇತದಂತೆ ಬಿಂಬಿತವಾಗುವ `ನಮ್ಮ ಮೆಟ್ರೊ~ವನ್ನು ಎಷ್ಟು ಬೇಗ ಒಪ್ಪಿಕೊಂಡಿರುವರೋ ಅಷ್ಟೇ ಮನಪೂರ್ವಕವಾಗಿ ಪರಿಸರ ಸ್ನೇಹಿ ಸೈಕಲ್ಲನ್ನೂ ಒಪ್ಪಿಕೊಳ್ಳುತ್ತಿದ್ದಾರೆ. ಜಾಗತೀಕರಣದ ನಾಗಾಲೋಟಕ್ಕೆ ಒಳಗಾಗಿ ಸೈಕಲ್‌ಗಳು ಮೂಲೆಗುಂಪಾದವು ಎನ್ನುವ ವಾದ ಈಗ ಪೂರ್ತಿ ಸತ್ಯವಲ್ಲ.

ಸೈಕಲ್‌ಗೂ ಮೆಟ್ರೊಗೂ ಎತ್ತಣಿಂದೆತ್ತ ಸಂಬಂಧ ಎಂದು ಯೋಚಿಸುತ್ತಿದ್ದೀರಾ? ಕಳೆದ ವರ್ಷ ಅಕ್ಟೋಬರ್ 20ರಂದು `ನಮ್ಮ ಮೆಟ್ರೊ~ ಎಂ.ಜಿ.ರಸ್ತೆ-ಬೈಯಪ್ಪನಹಳ್ಳಿ ನಡುವೆ ಸದ್ದಿಡಲು ಶುರುವಿಟ್ಟರೆ, ಅದಕ್ಕಿಂತ ಎರಡು ದಿನಗಳ ಮುಂಚೆಯಷ್ಟೇ (ಅ.18) ಸೈಕಲ್‌ಗಳ ಕಾರುಬಾರು ಆರಂಭವಾಯಿತು.

ಮೆಟ್ರೊ ರೈಲು ಹತ್ತಲು ಬರುವವರಿಗೆ ವಾಹನ ನಿಲುಗಡೆಯ ಸಮಸ್ಯೆ. ಕಾರು, ಬೈಕುಗಳ ನಿಲ್ದಾಣಕ್ಕೆ ಪರದಾಡಬೇಕಾದ ಸ್ಥಿತಿ ಇಲ್ಲಿನ ಸುತ್ತಮುತ್ತಲ ಉದ್ಯೋಗಿಗಳದ್ದು. ಈ ಸಮಸ್ಯೆಯನ್ನು ಅಲ್ಪಮಟ್ಟಿಗೆ ಸೈಕಲ್‌ಗಳು ನೀಗಿಸಬಲ್ಲವು. ಜೊತೆಗೆ ಒಂದಷ್ಟು ದೂರ ತಲುಪಲು (2-3 ಕಿ.ಮೀ.) ಬಸ್ಸು, ಆಟೊಗಳನ್ನು ಅವಲಂಬಿಸುವ ಬದಲು ಸೈಕಲ್ ಬಳಸಬಹುದು. ಇದರಿಂದ ಪೆಟ್ರೋಲ್ ಬಳಕೆಯೂ ಅಲ್ಪ ಮಟ್ಟಿಗೆ ತಗ್ಗಿದಂತಾಗುತ್ತದೆ ಎನ್ನುವುದು ಉದ್ದೇಶ.

ಸೈಕ್ಲಿಂಗ್‌ನಿಂದ ನಮ್ಮ ಆರೋಗ್ಯವನ್ನೂ ಉತ್ತಮವಾಗಿಟ್ಟುಕೊಳ್ಳಬಹುದು. ಇಲ್ಲಿನ ಜನತೆಗೆ ಡಾಕ್ಟರ್‌ಗಳು ಸಲಹೆ ನೀಡುವುದೂ ಅದನ್ನೇ ಅಲ್ಲವೇ? ಸಾರ್ವಜನಿಕರು ಸೈಕಲ್ಲನ್ನು ಹೆಚ್ಚು ಹೆಚ್ಚು ಬಳಸುವಂತಾಗಲಿ ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಬಿಬಿಎಂಪಿ ಸಹಯೋಗದೊಂದಿಗೆ `ಕಾರ್ಬನ್ ಆಟೊಮೇಶನ್ ಪ್ರೈವೇಟ್ ಕಂಪೆನಿ~ ಸ್ವಯಂಚಾಲಿತ ಸಾರ್ವಜನಿಕ ಸೈಕಲ್‌ಗಳನ್ನು ಬೆಂಗಳೂರಿಗರಿಗೆ  ಪರಿಚಯಿಸಿದೆ. ಈ ಯೋಜನೆಯನ್ನು ಆರಂಭಿಸಿದ ಮೊದಲ ತಿಂಗಳಲ್ಲೇ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದು ವಾರದಲ್ಲೇ 100 ಜನರು ಇದರ ಸದಸ್ಯತ್ವ ಪಡೆದಿದ್ದರು. ಈಗ 300 ಜನರು ಸೈಕಲ್‌ನ ಸದಸ್ಯತ್ವ ಪಡೆದಿದ್ದಾರೆ. ಪ್ರತಿ 500 ಮೀಟರ್‌ಗೆ ಒಂದು ಸೈಕಲ್ ನಿಲ್ದಾಣವನ್ನು ನಿರ್ಮಿಸಬೇಕೆಂಬ ಉದ್ದೇಶ ಇದರ ಸ್ಥಾಪಕರದ್ದು. ಕಮರ್ಷಿಯಲ್ ಏರಿಯಾಗಳಲ್ಲಿ ನಿಲ್ದಾಣಗಳನ್ನು ಸ್ಥಾಪಿಸಲು ಹೆಚ್ಚು ಬೇಡಿಕೆಗಳು ಬರುತ್ತಿವೆಯಂತೆ. ಯುವಕರಿಂದ ಹಿಡಿದು ವೃದ್ಧರಾದಿಯಾಗಿ ಸೈಕಲ್ ಕಡೆ ಹೆಚ್ಚು ಒಲವು ತೋರಿಸುತ್ತಿದ್ದಾರಂತೆ. ವಯೋವೃದ್ಧರ ಆರೋಗ್ಯದ ಸ್ಥಿತಿ ಸುಧಾರಿಸಲು ಬೆಳಿಗಿನ ಜಾಗಿಂಗ್‌ಗೆ ಮುಂಚೆ ಸೈಕಲ್‌ನ ಹಂಗು. 

ಸೈಕಲ್ ಬಳಕೆ ಹೇಗೆ?

ಆಟೊಮೆಟಿಕ್ ಟ್ರ್ಯಾಕಿಂಗ್ ಅಂಡ್ ಕಂಟ್ರೋಲ್ ಆಫ್ ಗ್ರೀನ್ ಅಸೆಟ್ಸ್ (ಠ್ಚಿಜ)ನ ಸೈಕಲ್‌ಗಳು ರಿಮೋಟ್ ಕಂಟ್ರೋಲ್ ಮೂಲಕ ಕೆಲಸ ಮಾಡುತ್ತವೆ. ನಿಲ್ದಾಣದ ಬಳಿ ಅಥವಾ ಡಿಡಿಡಿ.ಠ್ಚಿಜ.ಜ್ಞಿಗೆ ಲಾಗ್ ಆನ್ ಆಗಿ ಇದರ ಸದಸ್ಯತ್ವ ಹೊಂದಬಹುದು. ಸರ್ಕಾರದ ಯಾವುದೇ ಗುರುತಿನ ಪತ್ರ ಹಾಗೂ ವಿಳಾಸ ಪತ್ರದ ಜೊತೆಗೆ 500 ರೂಪಾಯಿ ಹಣ ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕು.

ಆಗ ಕಂಪೆನಿ ಸ್ಮಾರ್ಟ್ ಕಾರ್ಡ್‌ನ್ನು ನೀಡುತ್ತದೆ. ನಿಲ್ದಾಣದ ಬಳಿ ಇರುವ ಯಂತ್ರಕ್ಕೆ ಆ ಕಾರ್ಡ್ ಸ್ವೈಪ್ ಮಾಡಿದರೆ ಲಾಕ್ ಆಗಿರುವ ಸೈಕಲ್ ತಂತಾನೇ ಅನ್‌ಲಾಕ್ ಆಗುತ್ತದೆ. ಆಗ ಸೈಕಲ್ಲನ್ನು ಬಳಸಬಹುದು. ಪ್ರತಿದಿನ ಒಂದು ಗಂಟೆ ಉಚಿತ ಸೇವೆ. ಆನಂತರ ಗಂಟೆಗೆ 10 ರೂ.ನಂತೆ ಶುಲ್ಕ ವಿಧಿಸಲಾಗುತ್ತದೆ. ಬೆಳಿಗ್ಗೆ 6ರಿಂದ ರಾತ್ರಿ 8ರವರೆಗೆ ಇದರ ಸೇವೆ ಲಭ್ಯ.

ಅನಿಲ್ ಕುಂಬ್ಳೆ ಸರ್ಕಲ್, ಎಂ.ಜಿ ರಸ್ತೆಯಲ್ಲಿರುವ ಯುಟಿಲಿಟಿ ಬಿಲ್ಡಿಂಗ್ ಹಾಗೂ ಕಾರಿಯಪ್ಪ ರಸ್ತೆಯಲ್ಲಿರುವ ವಾರ್ ಮೆಮೋರಿಯಲ್ ಪಾರ್ಕ್ ಬಳಿ ಸೈಕಲ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ.

ಪ್ರತಿ ನಿಲ್ದಾಣದಲ್ಲೂ 6 ಸೈಕಲ್ಲುಗಳನ್ನು ನಿಲ್ಲಿಸಲು ಅವಕಾಶವಿದೆ. ಒಂದು ನಿಲ್ದಾಣದಿಂದ ಸೈಕಲ್ ತೆಗೆದುಕೊಂಡು ಹೋದರೆ ಮತ್ತೆ ಅದೇ ನಿಲ್ದಾಣಕ್ಕೆ ವಾಪಸ್ಸು ತಂದು ನಿಲ್ಲಿಸುವ ಅಗತ್ಯವಿಲ್ಲ. ಆ ಸೈಕಲ್ಲನ್ನು ಇನ್ನೊಂದು ನಿಲ್ದಾಣದಲ್ಲಿ ನಿಲ್ಲಿಸಬಹುದು. ಸಾರ್ವಜನಿಕರ ಅನುಕೂಲಕ್ಕೆಂದು ಇರುವ ಈ ಸೈಕಲ್ ಬೆಲೆ 12,000 ರೂಪಾಯಿ. ಫ್ರಾನ್ಸ್‌ನಿಂದ ಇವನ್ನು ಆಮದು ಮಾಡಿಕೊಳ್ಳಲಾಗಿದೆ. ಇಂಥದ್ದೊಂದು ಸೌಕರ್ಯ ಇದೆ ಎನ್ನುವುದು ಇನ್ನೂ ಅನೇಕರಿಗೆ ಗೊತ್ತಾಗಿಲ್ಲ. ಎಲ್ಲೋ ಕಾರು ನಿಲ್ಲಿಸಿ ಆಟೊ ಹತ್ತಿ, ಒನ್‌ವೇನಲ್ಲಿ ಸುತ್ತುಹಾಕಿ ಹಣ ತೆರುವ ಬದಲು ಸೈಕಲ್ ಹತ್ತುವುದೇ ಲೇಸಲ್ಲವೇ?

ವಿದ್ಯಾರ್ಥಿಗಳಿಗೆ ಮೆಚ್ಚು

ಸದ್ಯಕ್ಕೆ ಕಾಲೇಜು ವಿದ್ಯಾರ್ಥಿಗಳು ಇದರ ಪ್ರಯೋಜನ ಹೆಚ್ಚು ಪಡೆಯುತ್ತಿದ್ದಾರೆ. ವಾರಾಂತ್ಯದ ದಿನಗಳಲ್ಲಿ ಹೆಚ್ಚು ಬೇಡಿಕೆ. ಕೆಲವೊಮ್ಮೆ ಇರುವ ಸೈಕಲ್‌ಗಳು ಸಾಕಾಗುವುದಿಲ್ಲ. ಭಾರತದಲ್ಲಿ ಈ ರೀತಿಯ ಯೋಜನೆ ಇದೇ ಮೊದಲು. ಆರಂಭದಲ್ಲಿ ಸಾರ್ವಜನಿಕರಿಂದ ಯಾವ ರೀತಿ ಪ್ರತಿಕ್ರಿಯೆ ಬರುತ್ತದೋ ಎಂಬ ಆತಂಕ ಎದುರಾಗಿತ್ತು. ಆದರೆ ಜನತೆ ಇದನ್ನು ಸ್ವೀಕರಿಸಿದ್ದಾರೆ. ಯೂರೋಪ್ ದೇಶಗಳಲ್ಲಿ ಈ ವ್ಯವಸ್ಥೆ ಸಾಮಾನ್ಯವೆಂಬಂತೆ ಹಾಸುಹೊಕ್ಕಾಗಿದೆ. ಅಲ್ಲಿ ಸೈಕಲ್‌ಗಳ ಓಡಾಟಕ್ಕೆಂದೇ ಪ್ರತ್ಯೇಕ ಮಾರ್ಗಗಳಿವೆ. ಆ ಮಾರ್ಗಗಳಲ್ಲಿ ಬಸ್ಸು, ಕಾರುಗಳ ಸುಳಿವಿರುವುದಿಲ್ಲ. ಈ ರೀತಿಯ ವ್ಯವಸ್ಥೆ ನಮ್ಮಲ್ಲೂ ಜಾರಿಯಾದರೆ ಅಲ್ಪಮಟ್ಟಿನ ಸುಧಾರಣೆ ಸಾಧ್ಯವೆನ್ನುತ್ತಾರೆ ತಾಂತ್ರಿಕ ಮುಖ್ಯಾಧಿಕಾರಿ ಶ್ರೀನಿಧಿ.

ಮುಖ್ಯರಸ್ತೆಗಳಿಗಷ್ಟೇ ಬಸ್‌ಗಳ ಸೌಲಭ್ಯವಿದೆ. ಒಳದಾರಿಗಳಲ್ಲಿ ಬಹುದೂರ ನಡೆದುಕೊಂಡು ಹೋಗಲು ತುಂಬಾ ಸಮಯ ಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಸೈಕಲ್ ಉಪಯೋಗಕಾರಿಯಾಗಿದೆ. ಸಮಯದ ಉಳಿತಾಯದ ಜೊತೆಗೆ ದೇಹಕ್ಕೊಂದಿಷ್ಟು ವ್ಯಾಯಾಮ ಸಿಗುತ್ತದೆ ಎನ್ನುವುದು ಕಾಲೇಜು ವಿದ್ಯಾರ್ಥಿ ಜಯಂತ್ ಅವರ ಮಾತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.