ಭಾನುವಾರ, ಜೂನ್ 13, 2021
22 °C

ಮೆಟ್ರೋ ಕಾಮಗಾರಿಗೆ ರೈಲ್ವೆ ಇಲಾಖೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಟ್ರೋ ಕಾಮಗಾರಿಗೆ ರೈಲ್ವೆ ಇಲಾಖೆ ಸೂಚನೆ

ಬೆಂಗಳೂರು: ನಗರ ರೈಲು ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ `ನಮ್ಮ ಮೆಟ್ರೊ~ ಕಾಮಗಾರಿ ಕೈಗೊಳ್ಳಲು ಅನುಮತಿ ನೀಡುವಂತೆ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ರೈಲ್ವೆ ಸಚಿವಾಲಯವು ಸೂಚನೆ ನೀಡಿದೆ.ರೈಲ್ವೆ ಮಂಡಳಿಯ ಔಪಚಾರಿಕ ಒಪ್ಪಿಗೆಗಾಗಿ ಕಾಯಲಾಗುತ್ತಿದೆ ಎಂದು ತಿಳಿಸಿರುವ ಬೆಂಗಳೂರು ಮೆಟ್ರೊ ರೈಲು ನಿಗಮವು `ಅನುಮತಿ ನೀಡುವುದು ವಿಳಂಬವಾಗಿರುವುದರಿಂದ ಈ ಪ್ರದೇಶದ ಕಾಮಗಾರಿಗಳು 8 ತಿಂಗಳಷ್ಟು ತಡವಾಗಿ ಪೂರ್ಣಗೊಳ್ಳಲಿವೆ~ ಎಂದು ಹೇಳಿದೆ.`ನಗರ ರೈಲು ನಿಲ್ದಾಣದ ಮುಂಭಾಗದ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಪಾಕೆಟ್ ಟ್ರಾಕ್, ನಗರ ರೈಲು ನಿಲ್ದಾಣದ ಕೆಳಗೆ ಸುರಂಗ ಹಾಗೂ ಉತ್ತರ ಪ್ಲಾಟ್‌ಫಾರಂ ರಸ್ತೆಯಲ್ಲಿ ಸುರಂಗ ಮಾರ್ಗದ ರ‌್ಯಾಂಪ್ ನಿರ್ಮಿಸಲು ರೈಲ್ವೆ ಮಂಡಳಿಯ ಅನುಮತಿಗಾಗಿ ಕಾಯಲಾಗುತ್ತಿತ್ತು. ಇತ್ತೀಚೆಗೆ ಪರಿಶೀಲನಾ ಸಭೆ ನಡೆಸಿದ ರೈಲ್ವೆ ಸಚಿವಾಲಯದ ಅಧಿಕಾರಿಗಳು ಮೆಟ್ರೊ ಕಾಮಗಾರಿಗೆ ಅನುಮತಿ ನೀಡಲು ಒಪ್ಪಿಗೆ ನೀಡಿದ್ದಾರೆ~ ಎಂದು ನಿಗಮವು ತಿಳಿಸಿದೆ.ವಿಧಾನಸೌಧದ ಮುಂಭಾಗ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸ್ಥಳಾಂತರ ಆಗದೇ ಇರುವ ಹಿನ್ನೆಲೆಯಲ್ಲಿ ವಿಧಾನಸೌಧದ ನೆಲದಡಿಯ ನಿಲ್ದಾಣ ಕಾಮಗಾರಿ ಕೂಡ ತಡವಾಗಿ ಮುಗಿಯಲಿದೆ ಎಂದು ನಿಗಮವು ತಿಳಿಸಿದೆ.

`ಇನ್ನು ಭೂಸ್ವಾಧೀನದ ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿದ್ದರಿಂದ ಮಿನ್ಸ್ಕ್ ಚೌಕ ಹಾಗೂ ಸಾಬೂನು ಕಾರ್ಖಾನೆ ಬಳಿಯ ನಿಲ್ದಾಣಗಳ ನಿರ್ಮಾಣ ಕಾರ್ಯವು ವಿಳಂಬವಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸ್ವಾಧೀನಪಡಿಸಿಕೊಂಡ ಜಾಗಕ್ಕೆ ಪರಿಹಾರ ನೀಡುವುದಕ್ಕೆ ಸಂಬಂಧಿಸಿದ ಪ್ರಕರಣ ಕೋರ್ಟ್‌ನಲ್ಲಿ ಇರುವುದರಿಂದ ಪೀಣ್ಯದಲ್ಲಿ ವಯಾಡಕ್ಟ್ ಅಳವಡಿಸುವ ಕಾರ್ಯ ನಡೆಸಲು ಸಾಧ್ಯವಾಗುತ್ತಿಲ್ಲ~ ಎಂದು ನಿಗಮವು ವಾರ್ತಾಪತ್ರದಲ್ಲಿ ವಿಷಾದ ವ್ಯಕ್ತಪಡಿಸಿದೆ.ಜೂನ್‌ನಲ್ಲಿ ಕಾಮಗಾರಿ: ಸಂಪಿಗೆ ರಸ್ತೆಯಿಂದ ಕೆ.ಆರ್.ರಸ್ತೆ ಪ್ರವೇಶ ದ್ವಾರದವರೆಗೆ ಉತ್ತರ- ದಕ್ಷಿಣ ಕಾರಿಡಾರ್‌ನಲ್ಲಿ ಸುರಂಗ ನಿರ್ಮಿಸಲು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿರುವ ಮೂರು `ಟನೆಲ್ ಅರ್ಥ್ ಪ್ರೆಷರ್ ಬ್ಯಾಲೆನ್ಸ್ ಬೋರಿಂಗ್ ಮೆಷಿನ್~ಗಳ ಪೈಕಿ ಎರಡು ಯಂತ್ರಗಳು ಏಪ್ರಿಲ್ ಎರಡನೇ ವಾರದಲ್ಲಿ ನಗರಕ್ಕೆ ಬರಲಿವೆ. ಇನ್ನೊಂದು ಆಗಸ್ಟ್ ವೇಳೆಗೆ ಬರಲಿದೆ.ಎರಡು ಯಂತ್ರಗಳು ಜೂನ್‌ನಲ್ಲಿ ಸುರಂಗ ಕೊರೆಯುವ ಕಾರ್ಯಾಚರಣೆಯನ್ನು ಪ್ರಾರಂಭಿಸಲಿವೆ. ಮೂರನೆಯ ಯಂತ್ರ ಅಕ್ಟೋಬರ್‌ನಲ್ಲಿ ಕಾರ್ಯಾರಂಭ ಮಾಡಲಿದೆ.ಸಂಪಿಗೆ ರಸ್ತೆಯ ಮಂತ್ರಿ ಮಾಲ್‌ನಿಂದ ಜಕ್ಕರಾಯನಕೆರೆ ಮೈದಾನದವರೆಗೆ, ಕೆ.ಆರ್ ರಸ್ತೆಯಲ್ಲಿ ನ್ಯಾಷನಲ್ ಕಾಲೇಜಿನಿಂದ ಶಿವಶಂಕರ್ ವೃತ್ತದವರೆಗೆ ರ‌್ಯಾಂಪ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಈ ರ‌್ಯಾಂಪ್‌ಗಳು  ಎತ್ತರಿಸಿದ ಮಾರ್ಗದಿಂದ ಸುರಂಗ ಮಾರ್ಗದ ನಡುವಿನ ಕೊಂಡಿಗಳಾಗಿರಲಿವೆ.

ಈ ಕಾರಿಡಾರ್‌ನ ಚಿಕ್ಕಪೇಟೆ ಮತ್ತು ಸಿಟಿ ಮಾರ್ಕೆಟ್ ನೆಲದಡಿಯ ನಿಲ್ದಾಣ ನಿರ್ಮಾಣಕ್ಕೆ ಸಿದ್ಧತಾ ಕಾರ್ಯಗಳು ಈಗಾಗಲೇ ಪ್ರಾರಂಭವಾಗಿವೆ.ಭೂಮಿಪೂಜೆ: `ಮೆಜೆಸ್ಟಿಕ್‌ನಲ್ಲಿ ಕೆಂಪೇಗೌಡ ನಿಲ್ದಾಣ ನಿರ್ಮಾಣ ಕಾರ್ಯಕ್ಕೆ ಇತ್ತೀಚೆಗೆ ಭೂಮಿ ಪೂಜೆ ನೆರವೇರಿಸಲಾಯಿತು. ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆಯ (ಜೈಕಾ) ಭಾರತದ ಮುಖ್ಯ ಪ್ರತಿನಿಧಿಗಳಾದ ಅಕಿಹಿಕೊ ಟಣಕ, ಶಿನಿಚಿ ಯಮನಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ  ಎನ್ ಶಿವಶೈಲಂ ಮತ್ತು ಅಧಿಕಾರಿಗಳು ಮತ್ತು ತಂತ್ರಜ್ಞರು ಹಾಜರಿದ್ದರು

 

              

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.