ಮೆತ್ತಗಾದ ಕಮಲ್

7

ಮೆತ್ತಗಾದ ಕಮಲ್

Published:
Updated:
ಮೆತ್ತಗಾದ ಕಮಲ್

ಚೆನ್ನೈ (ಪಿಟಿಐ): ನಟ ಕಮಲಹಾಸನ್ ಅವರ  `ವಿಶ್ವರೂಪಂ' ಚಿತ್ರದ ಸುತ್ತ ಎದ್ದಿರುವ ವಿವಾದ ಗುರುವಾರ ತಣ್ಣಗಾಗುವ ಲಕ್ಷಣ ಕಂಡುಬಂದಿದೆ. ಚಿತ್ರ ಪ್ರದರ್ಶನಕ್ಕೆ ಮದ್ರಾಸ್ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುವ ವಿಚಾರ ಕೈಬಿಟ್ಟಿರುವುದಾಗಿ ಸ್ವತಃ ಕಮಲಹಾಸನ್ ತಿಳಿಸಿದ್ದಾರೆ.`ತಮಿಳುನಾಡು ತೊರೆಯುವುದಾಗಿ' ಬುಧವಾರ ಚೆನ್ನೈನಲ್ಲಿ ಭಾವೋದ್ವೇಗದಿಂದ ಹೇಳಿದ್ದ ಅವರ ನಿಲುವು, ಮುಖ್ಯಮಂತ್ರಿ ಜಯಲಲಿತಾ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ನಂತರ ಮೃದುವಾಯಿತು.ಚಿತ್ರದ ಪ್ರದರ್ಶನ ನಿಷೇಧಿಸಿ ತಮ್ಮ ಸರ್ಕಾರ ಕೈಗೊಂಡ ಕ್ರಮವನ್ನು ಜಯಲಲಿತಾ ಗುರುವಾರ ಬೆಳಿಗ್ಗೆ ಮಾಧ್ಯಮದ ಜತೆ ಮಾತನಾಡಿ ಸಮರ್ಥಿಸಿಕೊಂಡರು.ಒಂದು ವಾರದ ನಂತರ ಮೌನ ಮುರಿದ ಅವರು, `ಕಮಲಹಾಸನ್ ಬಗ್ಗೆ ನನಗೆ ಯಾವುದೆ ವೈಯಕ್ತಿಕ ದ್ವೇಷವಿಲ್ಲ ಹಾಗೂ ಚಿತ್ರ ನಿಷೇಧಿಸುವಲ್ಲಿ ಯಾವುದೆ ವೈಯಕ್ತಿಕ ಹಿತಾಸಕ್ತಿ ಇಲ್ಲ' ಎಂದು ಸ್ಪಷ್ಟಪಡಿಸಿದರು. ಕಮಲಹಾಸನ್ ಮತ್ತು ಮುಸ್ಲಿಂ ಸಂಘಟನೆಗಳು ಮುಖಾಮುಖಿ ಮಾತನಾಡುವುದಾದರೆ ಅಗತ್ಯ ಸಹಕಾರದ ಭರವಸೆ ನೀಡಿದರು.`ಮುಸ್ಲಿಂ ಸಂಘಟನೆಗಳ ಕೆಲವು ಪ್ರತಿನಿಧಿಗಳಿಗೆ ವಿಶ್ವರೂಪಂ ಚಿತ್ರವನ್ನು ತೋರಿಸುವಂತೆ ಸರ್ಕಾರ ನೀಡಿದ್ದ ಸಲಹೆಯನ್ನು ಕಮಲ್ ಪಾಲಿಸಿದ್ದರೆ ಸಮಸ್ಯೆಯೇ ಉದ್ಭವಿಸುತ್ತಿರಲಿಲ್ಲ. ಆದರೆ ಅವರು ಸರ್ಕಾರದ ಮಾತಿಗೆ ಬೆಲೆ ಕೊಡದೆ ತಪ್ಪು ಮಾಡಿದರು' ಎಂದು ಜಯಲಲಿತಾ ಅಭಿಪ್ರಾಯಪಟ್ಟರು.ಮುಸ್ಲಿಂ ಸಂಘಟನೆಗಳು ಮತ್ತು ಕಮಲಹಾಸನ್ ಅವರು ಒಟ್ಟಿಗೆ ಕುಳಿತು ಚಿತ್ರದಲ್ಲಿಯ ಆಕ್ಷೇಪಾರ್ಹ ಸನ್ನಿವೇಶಗಳನ್ನು ಕೈಬಿಡಲು ಸಹಮತಕ್ಕೆ ಬಂದರೆ ರಾಜ್ಯದಲ್ಲಿ ಚಿತ್ರ ಪ್ರದರ್ಶನಕ್ಕೆ ಇರುವ ಅಡ್ಡಿ ನಿವಾರಣೆಯಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.ಮುಸ್ಲಿಂ ಮುಖಂಡರ ಸಮ್ಮತಿ: ಚಿತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಶಾಸಕ ಎಂ. ಎಚ್. ಜವಾಹಿರುಲ್ಲಾ ಅವರು ಜಯಾ ಅವರ ಈ ಪ್ರಸ್ತಾವವನ್ನು ಒಪ್ಪಿಕೊಂಡ್ದ್ದಿದಾರೆ.  ತಾವು ಮತ್ತು ಇತರ 23 ಮುಸ್ಲಿಂ ಸಂಘಟನೆಗಳ ಪ್ರತಿನಿಧಿಗಳು ಕಮಲಹಾಸನ್ ಜತೆ ಮಾತುಕತೆಗೆ ಸಿದ್ಧ ಎಂದು ತಿಳಿಸಿದ್ದಾರೆ.ಧನ್ಯವಾದ: ಗುರುವಾರ ಸಂಜೆ ಮುಂಬೈನಲ್ಲಿ ವಿಶ್ವರೂಪಂ ಹಿಂದಿ ಅವತರಣಿಕೆ ಬಿಡುಗಡೆಗೆ ಸಂಬಂಧಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಮಲಹಾಸನ್, ವಿಶ್ವರೂಪಂ ವಿವಾದಕ್ಕೆ ಅಂತ್ಯ ಹೇಳಲು ಜಯಲಲಿತಾ ನೀಡಿದ ಸಲಹೆಯ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿದರು. ಮದ್ರಾಸ್ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುವ ವಿಚಾರವನ್ನು ಕೈಬಿಟ್ಟಿರುವುದಾಗಿ ತಿಳಿಸಿದರು.`ಮುಖ್ಯಮಂತ್ರಿ ಅವರು ವಿವಾದ ಬಗೆಹರಿಸಲು ಸಹಾಯ ಹಸ್ತ ಚಾಚಿರುವುದರಿಂದ ನಾನೇಕೆ ಸುಪ್ರೀಂಕೋರ್ಟ್‌ಗೆ ಹೋಗಲಿ' ಎಂದು ಕಮಲ್ ಪ್ರಶ್ನಿಸಿದರು. ಆದರೆ, ಜಯಲಲಿತಾ ಅವರ ಸಲಹೆಯಂತೆ ಮುಸ್ಲಿಂ ಸಂಘಟನೆಗಳ ಜತೆ ಮಾತುಕತೆ ನಡೆಸುವ ಕುರಿತು ಸ್ಪಷ್ಟವಾಗಿ ಏನನ್ನೂ ಹೇಳಲಿಲ್ಲ.`ತೀವ್ರ ಭಾವೋದ್ವೇಗಕ್ಕೆ ಒಳಗಾಗಿದ್ದ ನಾನು ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದು ನಿಜ. ಆದರೆ ಅದು ನನ್ನ ಉದ್ದೇಶ ಅಲ್ಲ' ಎಂದು ತಿಳಿಸಿದರು.ವಿವಾದದಿಂದ ಚಿತ್ರ ಇನ್ನಷ್ಟು ಹಣ ಮಾಡಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಯಿಂದ ಅಸಮಾಧಾನಗೊಂಡ ಅವರು, `ಚಿತ್ರದ ಜತೆಗೆ ದೇಶದ ಹೆಸರನ್ನು ತಳಕು ಹಾಕಿರುವುದರಿಂದ ಇಂತಹ ಪ್ರಚಾರ, ಹುಡುಗಾಟಿಕೆ ನನಗೆ ಇಷ್ಟವಿಲ್ಲ. ವಾಸ್ತವವಾಗಿ ಬಿಡುಗಡೆ ವಿಳಂಬವಾಗಿದ್ದರಿಂದ 30 ರಿಂದ 60 ಕೋಟಿ ರೂಪಾಯಿ ನಷ್ಟವಾಗಿದೆ' ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry