ಮೆದು ಕಬ್ಬಿಣ ಘಟಕಗಳಿಂದ ಸಮಸ್ಯೆ

7

ಮೆದು ಕಬ್ಬಿಣ ಘಟಕಗಳಿಂದ ಸಮಸ್ಯೆ

Published:
Updated:

ಬಳ್ಳಾರಿ: ಮೆದು ಕಬ್ಬಿಣ ಘಟಕಗಳು ಹೊರ ಸೂಸುವ ದೂಳಿನಿಂದ ಆರೋಗ್ಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಕೃಷಿ ಚಟುವಟಿಕೆಗಳೂ ಸ್ಥಗಿತಗೊಂಡಿದ್ದು, ಸೂಜ್ತ ರೀತಿಯ ಪರಿಹಾರೋಪಾಯ ಕಂಡು ಇಡಿಯಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಹಲಕುಂದಿ ಗ್ರಾಮದ ಜನತೆ ಮನವಿ ಮಾಡಿಕೊಂಡಿದ್ದಾರೆ.ಗ್ರಾಮಸ್ಥರ ಮನವಿಯ ಮೇರೆಗೆ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ನಡೆದ ಗ್ರಾಮಸ್ಥರ ಹಾಗೂ ಕಾರ್ಖಾನೆ ಪ್ರತಿನಿಧಿಗಳ ಸಭೆಯಲ್ಲಿ ತಮ್ಮ ಸಮಸ್ಯೆಗಳನ್ನು ತಿಳಿಸಿದ ಜನತೆ, ಗ್ರಾಮದ ಸುತ್ತ ಒಟ್ಟು 10 ಮೆದು ಕಬ್ಬಿಣ ಘಟಕಗಳಿದ್ದು ಇವುಗಳಿಂದ ಗ್ರಾಮದಲ್ಲೆಲ್ಲ ದೂಳು ಆವರಿಸುತ್ತಿದೆ ಎಂದು ಅಳಲು ತೋಡಿಕೊಂಡರು.ನಾಲ್ಕು ವರ್ಷಗಳ ಹಿಂದೆ ಆರಂಭವಾಗಿರುವ ಬಾಲಾಜಿ ಸ್ಟೀಲ್ಸ್, ರಂಗಿನೇನಿ ಸ್ಟೀಲ್ಸ್, ಹೋತೂರ್ ಸ್ಟೀಲ್ಸ್, ಮಾಸ್ಟಿಕ್ ಸ್ಟೀಲ್ಸ್. ಪಪ್ಪೂರಿ ಸ್ಟೀಲ್ಸ್, ಶಿರಡಿಸಾಯಿ ಸ್ಟೀಲ್ಸ್, ಬನಶಂಕರಿ ಸ್ಟೀಲ್ಸ್, ವೆಂಕಟೇಶ್ವರ ಸ್ಟೀಲ್ಸ್, ಯಶಸ್ವಿನಿ ಸ್ಟೀಲ್ಸ್, ಬಳ್ಳಾರಿ ಇಸ್ಪಾತ್ ಸ್ಟೀಲ್ಸ್ ಎಂಬ ಮೆದು ಕಬ್ಬಿಣ ತಯಾರಿಕೆ ಘಟಕಗಳಿದ್ದು, ಕೃಷಿ ಭೂಮಿಯಲ್ಲಿ ಇವುಗಳ ದೂಳು ಬಿದ್ದಿರುವುದರಿಂದ ಬೇಸಾಯ ಅಸಾಧ್ಯ ಎಂಬ ಕಾರಣದಿಂದ ಪ್ರತಿ ಎಕರೆಗೆ ವಾರ್ಷಿಕ ರೂ 3 ಸಾವಿರ ಪರಿಹಾರವನ್ನೂ, ಗ್ರಾಮದ ಪ್ರತಿ ಮನೆಗೆ ವಾರ್ಷಿಕ ರೂ 10 ಸಾವಿರ ಪರಿಹಾರವನ್ನೂ ನೀಡುವಂತೆ ಕೋರಲಾಗಿದೆ. ಆದರೆ, ಈ ಬೇಡಿಕೆಗೆ ಕಾರ್ಖಾನೆಗಳ ಮಾಲೀಕರು ಒಪ್ಪುತ್ತಿಲ್ಲ ಎಂದು ಅವರು ಆರೋಪಿಸಿದರು.ಗ್ರಾಮದಲ್ಲಿ ಆಸ್ಪತ್ರೆ ಸ್ಥಾಪಿಸಲಾಗುವುದು, ಶಾಲೆ ತೆರೆಯಲಾಗುವುದು, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುವುದು ಎಂಬ ಭರವಸೆ ನೀಡಿದ್ದ ಕಾರ್ಖಾನೆಗಳ ಮಾಲೀಕರು ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಸೌಲಭ್ಯ ಕೇಳಿದರೆ,ಗ್ರಾಮದ ಕೆಲವರನ್ನು ಎತ್ತಿಕಟ್ಟಿ ವೈಮನಸ್ಯ ಮೂಡಿಸಲಾಗುತ್ತಿದೆ  ಎಂದು ಗ್ರಾಮಸ್ಥರು ದೂರಿದರು.ಕಾರ್ಖಾನೆಗಳ ಪ್ರತಿನಿಧಿಗಳೂ ಸಭೆಯಲ್ಲಿ ಭಾಗವಹಿಸಿ, ತಹಶೀಲ್ದಾರ್ ಶಶಿಧರ ಬಗಲಿ ಅವರಿಗೆ ಮನವಿ ಸಲ್ಲಿಸಿದರಲ್ಲದೆ, ಗ್ರಾಮಸ್ಥರಿಗೆ ಸೂಕ್ತ ಸೌಲಭ್ಯ, ಪರಿಹಾರ ನೀಡುವ ಭರವಸೆ ನೀಡಿದರು.ಅಲ್ಲದೆ, ನಷ್ಟದಲ್ಲಿರುವ ಮೆದು ಕಬ್ಬಿಣ ಘಟಕಗಳಿಂದ ಗ್ರಾಮಸ್ಥರು ಕೋರಿದ ಪರಿಹಾರ ಮೊತ್ತ ನೀಡಲಾಗುವುದಿಲ್ಲ ಎಂದೂ ಅವರು ತಿಳಿಸಿದರು. ತಾಲ್ಲೂಕು ಪಂಚಾಯ್ತಿ ಸದಸ್ಯ ಆಲಂ ಭಾಷಾ, ಭೀಮನಗೌಡ, ಶಿವಶಂಕರ  ಉಪಸ್ಥಿತರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry