ಶನಿವಾರ, ಡಿಸೆಂಬರ್ 7, 2019
24 °C

ಮೆಮೊರಿ ಚಿಪ್‌ಗಳ ಅಕ್ರಮ ಸಾಗಣೆ: ದೆಹಲಿಯ ಮಹಿಳೆ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಮೊರಿ ಚಿಪ್‌ಗಳ ಅಕ್ರಮ ಸಾಗಣೆ: ದೆಹಲಿಯ ಮಹಿಳೆ ಸೆರೆ

ಬೆಂಗಳೂರು: ಮೆಮೊರಿ ಚಿಪ್‌ಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ದೆಹಲಿ ಮೂಲದ ಮಹಿಳೆಯನ್ನು ವಾಯುಯಾನ ಗುಪ್ತಚರ (ಏರ್ ಇಂಟಲಿಜೆನ್ಸ್) ಅಧಿಕಾರಿಗಳು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ನಸುಕಿನಲ್ಲಿ ಬಂಧಿಸಿದ್ದಾರೆ.ದೆಹಲಿ ಮೂಲದ ರೋಸಿ ಭಾಟಿಯಾ (40) ಬಂಧಿತ ಆರೋಪಿ. ಸೀಮಾ ಸುಂಕ ಕಾಯ್ದೆ ಸೆಕ್ಷನ್ 108ರ ಅನ್ವಯ ಅವರ  ವಿರುದ್ಧ ಪ್ರರಕಣ ದಾಖಲಿಸಲಾಗಿದೆ. ಒಟ್ಟು 63.04 ಲಕ್ಷ ರೂಪಾಯಿ ಮೌಲ್ಯದ 31,520 ಮೆಮೊರಿ ಚಿಪ್‌ಗಳನ್ನು ಜಪ್ತಿ ಮಾಡಲಾಗಿದೆ. ಚಿಪ್‌ಗಳ ಮೇಲೆ `ಮೇಡ್ ಇನ್ ತೈವಾನ್~ ಎಂದು ನಮೂದಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಜಾಮೀನಿನ ಮೇಲೆ ಅವರು ಬಿಡುಗಡೆಯಾಗಿದ್ದಾರೆ ಎಂದು ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.ಡ್ರಾಗನ್ ಏರ್‌ವೇಸ್ ವಿಮಾನದಲ್ಲಿ ಹಾಂಗ್‌ಕಾಂಗ್‌ನಿಂದ ಬೆಂಗಳೂರಿಗೆ ನಸುಕಿನ ಎರಡು ಗಂಟೆ ಸುಮಾರಿಗೆ ಬಂದಾಗ ಆಕೆಯನ್ನು ಬಂಧಿಸಲಾಯಿತು. ಚಿಪ್‌ಗಳನ್ನು ಸಣ್ಣ ಸಣ್ಣ ಪೊಟ್ಟಣದಲ್ಲಿ ತುಂಬಿದ್ದ ರೋಸಿ ಅದನ್ನು ಕಾಲು ಚೀಲದಲ್ಲಿ ಇಟ್ಟುಕೊಂಡಿದ್ದರು. ಈ ಬಗ್ಗೆ ದೆಹಲಿ ಅಧಿಕಾರಿಗಳು ಖಚಿತ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅವರನ್ನು ತಪಾಸಣೆ ನಡೆಸಿದಾಗ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದದ್ದು ಗೊತ್ತಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ರೋಸಿ ಬೆಂಗಳೂರಿಗೆ ಬಂದು ಚಿಪ್‌ಗಳನ್ನು ಸಾಗಿಸಿ ಬೆಳಗಿನ ಜಾವ ಮತ್ತೆ ದೆಹಲಿಗೆ ಹೋಗುವ ಸಾಧ್ಯತೆ ಇತ್ತು. ಬೆಂಗಳೂರಿನ ಮೂಲಕ ದೆಹಲಿಗೆ ಮೊದಲ ಬಾರಿಗೆ ಪ್ರಯಾಣಿಸುತ್ತಿರುವುದಾಗಿ ರೋಸಿ ವಿಚಾರಣೆ ವೇಳೆ ತಿಳಿಸಿದ್ದಾರೆ.ಅವರ ವಿರುದ್ಧ ಅಕ್ರಮ ಸಾಗಣೆಯ ಯಾವುದೇ ಪ್ರಕರಣ ಈ ಹಿಂದೆ ದಾಖಲಾಗಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ ಅವರ ಪಾಸ್‌ಪೋರ್ಟ್ ಪರಿಶೀಲನೆ ನಡೆಸಿದಾಗ ಈ ಹಿಂದೆ ಹತ್ತು ಬಾರಿ ಹಾಂಗ್‌ಕಾಂಗ್‌ಗೆ ಹೋಗಿ ಬಂದಿದ್ದು ಗೊತ್ತಾಗಿದೆ. ಏಷ್ಯಾದ ಹಲವು ದೇಶಗಳಿಗೂ ಅವರು ಹೋಗಿ ಬಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮೆಮೊರಿ ಚಿಪ್‌ಗಳಿಗೆ ಭಾರತದಲ್ಲಿ ಭಾರಿ ಬೇಡಿಕೆ ಇದೆ. ಬೆಂಗಳೂರು, ಮುಂಬೈ ಮತ್ತು ದೆಹಲಿಯ ಕೆಲ ನಿರ್ದಿಷ್ಟ ಮಾರುಕಟ್ಟೆಗಳಲ್ಲಿ ಚಿಪ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ರೋಸಿ ಬೆಂಗಳೂರಿನಲ್ಲಿ ಮಾರಾಟ ಮಾಡಲು ಚಿಪ್‌ಗಳನ್ನು ತಂದಿರುವ ಸಾಧ್ಯತೆ ಇದೆ. ಈ ಬಗ್ಗೆ ವಿಸ್ತೃತ ತನಿಖೆ ನಡೆಸಲಾಗುತ್ತಿದೆ.

 

ಮೆಮೊರಿ ಚಿಪ್‌ಗಳಂತಹ ವಸ್ತುಗಳಿಗೆ ಶೇ27ರಷ್ಟು ಸೀಮಾ ಸುಂಕ ವಿಧಿಸಲಾಗುತ್ತದೆ. ಆದರೆ ಸುಂಕವನ್ನು ವಂಚಿಸಿ ಇದನ್ನು ತರಲಾಗಿತ್ತು. ಈ ಹಿಂದೆ ಕೋಲ್ಕತ್ತ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಿದ್ದ ಕೇಂದ್ರ ಕಂದಾಯ ನಿರ್ದೇಶನಾಲಯದ ಅಧಿಕಾರಿಗಳು ಮೆಮೊರಿ ಚಿಪ್‌ಗಳನ್ನು ವಶಪಡಿಸಿಕೊಂಡಿದ್ದರು ಎಂದು ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)