ಮೆರವಣಿಗೆ ರಂಗಿನಲ್ಲಿ ಕುಣಿದರು... ಕುಪ್ಪಳಿಸಿದರು...

7

ಮೆರವಣಿಗೆ ರಂಗಿನಲ್ಲಿ ಕುಣಿದರು... ಕುಪ್ಪಳಿಸಿದರು...

Published:
Updated:

ಬೆಂಗಳೂರು: ಅದೊಂದು ಬಣ್ಣದ ನದಿ. ಅಲ್ಲಿ ಹಾಡು- ಹಸೆಯ ಸುಂದರ ಯಾನ, ಹೊಂಗನಸುಗಳ ಭರಪೂರ ಪಯಣ. ಕರುನಾಡ ಹಕ್ಕಿಗಳ ಮಾರ್ದನಿಸುವ ಗಾನ...

 ಶುಕ್ರವಾರದ ಬೆಳಗಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆಯ ಅದ್ಭುತ ದೃಶ್ಯಗಳು ಕಂಡು ಬಂದದ್ದು ಹೀಗೆ. ಬಿಳಿ ಜುಬ್ಬ, ಕಡುನೀಲಿ ಕೋಟು, ಅದೇ ಬಣ್ಣದ ಪ್ಯಾಂಟ್ ಧರಿಸಿದ ಚಿರಯುವಕ ಪ್ರೊ.ಜಿ.ವೆಂಕಟಸುಬ್ಬಯ್ಯ ಬಿಬಿಎಂಪಿ ಕಚೇರಿಯ ಎದುರಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಸಂಸದ ಅನಂತಕುಮಾರ್, ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ಅವರ ಸಮ್ಮುಖದಲ್ಲಿ ಮೇಯರ್ ಎಸ್.ಕೆ.ನಟರಾಜ್ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.ಸಮ್ಮೇಳನಾಧ್ಯಕ್ಷರ ಸಾರೋಟು ತಾಮ್ರಮಿಶ್ರಿತ ಬಂಗಾರದ ಬಣ್ಣದಲ್ಲಿ ಕಂಗೊಳಿಸುತ್ತಿತ್ತು. ಸುತ್ತಲೂ ಸಮ್ಮೇಳನದ ಲಾಂಛನ ಹಾಗೂ ರಾಜಲಾಂಛನಗಳ ಒಡ್ಡೋಲಗವಿತ್ತು.ವೆಂಕಟಸುಬ್ಬಯ್ಯ ಅವರೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಮೆರವಣಿಗೆಯುದ್ದಕ್ಕೂ ಜೊತೆಗೂಡಿದರು. ಅಭಿಮಾನಿಗಳು ನೀಡಿದ ಹಾರ ತುರಾಯಿಯ ಜತೆಗೆ ಎಳನೀರು ಕುಡಿದು ದಣಿವಾರಿಸಿಕೊಂಡರು. ಸಾರೋಟಿನ ಮುಂಭಾಗದಲ್ಲಿದ್ದ ನಾಲ್ಕು ಕುದುರೆಗಳು ಭಗವದ್ಗೀತೆಯ ಅರ್ಜುನನ ರಥವನ್ನು ನೆನಪಿಸಿದವು.ಬಿಬಿಎಂಪಿ ಕಚೇರಿ ಮುಂಭಾಗದಿಂದ, ಜೆ.ಸಿ.ರಸ್ತೆ, ಮಿನರ್ವ ವೃತ್ತ, ಕಿಮ್ಸ್ ಸಂಸ್ಥೆ ವೃತ್ತ ಮಾರ್ಗವಾಗಿ ಮೆರವಣಿಗೆ ಮಕ್ಕಳಕೂಟ ಚೌಕವನ್ನು ಪ್ರವೇಶಿಸಿತು. ನಂತರ ಎಡಭಾಗಕ್ಕೆ ತಿರುಗಿ ಮಹಿಳಾ ಸಮಾಜದ ಮಾರ್ಗದಲ್ಲಿ ಸಮ್ಮೇಳನ ಸಭಾಂಗಣದತ್ತ ಚಲಿಸಿತು. ಬೆಳಿಗ್ಗೆ 9.30ರ ಸುಮಾರಿಗೆ ಆರಂಭವಾದ ಮೆರವಣಿಗೆ ಸಭಾಂಗಣ ತಲುಪಿದಾಗ ಮಧ್ಯಾಹ್ನ 2 ಗಂಟೆಯಾಗಿತ್ತು.ನಾದ- ನರ್ತನ: ನಗಾರಿ ಕುಣಿತ, ಕರಡಿ ಮಜಲು, ಪೂಜಾ ಕುಣಿತ, ಗೊರವರ ಕುಣಿತ, ಕಂಸಾಳೆ, ವೀರಗಾಸೆ, ಡೊಳ್ಳು ಕುಣಿತ, ನಂದಿ ಕುಣಿತ, ಹುಲಿವೇಷ, ಕೀಲುಕುದುರೆ, ಭೂತಕೋಲ ಹೀಗೆ ಸುಮಾರು ಮೂವತ್ತಕ್ಕೂ ಹೆಚ್ಚು ಜಾನಪದ ತಂಡಗಳು ಮೆರವಣಿಗೆಯ ರಂಗು ಹೆಚ್ಚಿಸಿದವು. ಆರು ಒಂಟೆಗಳು, ಹತ್ತು ಕುದುರೆಗಳು ಹಾಗೂ ನಾಲ್ಕು ಆನೆಗಳು ಮೆರವಣಿಗೆಗೆ ರಾಜಕಳೆ ತಂದವು. ಸುಮಾರು ಎರಡು ಕಿ.ಮೀ ಉದ್ದದ ಮೆರವಣಿಗೆಯಲ್ಲಿ ಹತ್ತರಿಂದ 15 ಸಾವಿರ ಮಂದಿ ಪಾಲ್ಗೊಂಡರು.ಕನ್ನಡದ ಮಹಿಳಾ ಪರಂಪರೆಯನ್ನು ಬಿಂಬಿಸುವ ಧೀಮಂತ ವನಿತೆಯರು ಅಲ್ಲಿದ್ದರು. ಬೆಳವಡಿ ಮಲ್ಲಮ್ಮ, ಕಿತ್ತೂರು ರಾಣಿ ಚೆನ್ನಮ್ಮ, ಕೆಳದಿಯ ಚೆನ್ನಮ್ಮ , ಒನಕೆ ಓಬವ್ವ, ಅಕ್ಕಮಹಾದೇವಿ ನೋಡುಗರನ್ನು ಬೇರೊಂದು ಲೋಕಕ್ಕೆ ಕೊಂಡೊಯ್ದರು. ಮತ್ತೊಂದೆಡೆ ಯುವಕರು ದೇಹ ದಂಡಿಸಿ ಜನರನ್ನು ಬಗೆಬಗೆಯಲ್ಲಿ ರಂಜಿಸಿದರು. ರಸ್ತೆಯ ತುಂಬ ಗಿರಗಿರ ತಿರುಗುತ್ತ, ಒಬ್ಬರ ಮೇಲೆ ಒಬ್ಬರು ಹಾರುತ್ತ ಸಾಹಸ ಪ್ರದರ್ಶನ ಮಾಡುತ್ತ ರಸ್ತೆಗಳಲ್ಲಿ ನೆರೆದವರನ್ನು ನಿಬ್ಬೆರಾಗಾಗಿ ನೋಡುವಂತೆ ಮಾಡಿದರು.ರಾರಾಜಿಸಿದ ನಾಡಧ್ವಜ: ಮೆರವಣಿಗೆಯುದ್ದಕ್ಕೂ ನಾಡಧ್ವಜದ್ದೇ ಕಾರುಬಾರು. ಎಲ್ಲಿ ನೋಡಿದರೂ ಕೆಂಪು ಹಳದಿ ಬಣ್ಣದ ಪತಾಕೆಗಳು ಸಾರ್ವಜನಿಕರ ಕಣ್ಮನ ಸೆಳೆದವು. ಆನೆ ಕುದುರೆಗಳ ಮೇಲೆ ಕುಳಿತ ಧ್ವಜಧಾರಿಗಳು ನಾಡಧ್ವಜವನ್ನು ಅತ್ತಿತ್ತ ಬೀಸಿ ಗಮನ ಸೆಳೆದರು. ಕುಂಭಗಳನ್ನು ಹೊತ್ತು 77 ಮಂದಿ ಮಹಿಳೆಯರು ಸಮ್ಮೇಳನ ಮೆರವಣಿಗೆಯ ಶೋಭೆ ಹೆಚ್ಚಿಸಿದರು. ಮಕ್ಕಳು ವೃದ್ಧರು ಎನ್ನದೆ ಎಲ್ಲರೂ ಮೆರವಣಿಗೆಯಲ್ಲಿ ಪಾಲ್ಗೊಂಡರು. ಕೆಂಪು ಅರಿಶಿನದ ಟೋಪಿ ತೊಟ್ಟವರು, ಕನ್ನಡ ಧ್ವಜವನ್ನೇ ಮೈತುಂಬ ಹೊದ್ದು ನಿಂತವರು ಮೆರವಣಿಗೆಯ ಬಗೆಗಿನ ಕುತೂಹಲ ಹೆಚ್ಚಿಸಿದರು.ಸ್ತಬ್ಧಚಿತ್ರಗಳು: ಪುಣ್ಯಕೋಟಿ ಸ್ತಬ್ಧಚಿತ್ರ ಬಿಬಿಎಂಪಿ ತಯಾರಿಸಿದ ಕೆಂಪೇಗೌಡ ಕಾವಲು ಗೋಪುರ, ರಾಜ್ಯದ ಪರಂಪರೆ ಸಾರುವ ಪ್ರವಾಸೋದ್ಯಮ ಇಲಾಖೆಯ ಸ್ತಬ್ಧಚಿತ್ರಗಳು, ಓದು ಬರಹದ ಮಹತ್ವ ಸಾರಿದ ಸರ್ವಶಿಕ್ಷಣ ಅಭಿಯಾನ, ಬಿಎಂಟಿಸಿ ಕನ್ನಡ ಕ್ರಿಯಾ ಸಮಿತಿ ರಚಿಸಿದ ಕುವೆಂಪು ಅವರ ಕಟೌಟ್ ಹಾಗೂ ಕನ್ನಡ ಸಾಹಿತ್ಯ ಲೋಕದ ಬೆಳವಣಿಗೆಗೆ ಶ್ರಮಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಏಳು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪ್ರತಿಮೆಗಳನ್ನು ಹೊಂದಿದ್ದ ಸ್ತಬ್ಧಚಿತ್ರಗಳು ‘ಮತ್ತೊಮ್ಮೆ ನೋಡಬೇಕು’ ಎನ್ನುವ ಭಾವನೆ ಮೂಡಿಸಿತ್ತು. ತಾಯಿ ಭುವನೇಶ್ವರಿ ಚಿತ್ರವಿದ್ದ ವಾಹನ ಭವ್ಯವಾಗಿ ಕಂಗೊಳಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry