ಶನಿವಾರ, ಮೇ 28, 2022
27 °C

ಮೆರವಣಿಗೆ: ಸಂಚಾರ ಅಸ್ತವ್ಯಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಯ ಸಂದರ್ಭದಲ್ಲಿ ಬಿಬಿಎಂಪಿ ಕಚೇರಿ ಸುತ್ತಮುತ್ತ, ಮೆಜೆಸ್ಟಿಕ್ ಮತ್ತು ಚಾಮರಾಜಪೇಟೆ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು.ಬೆಳಿಗ್ಗೆ ಒಂಬತ್ತು ಗಂಟೆ ಸುಮಾರಿಗೆ ಮೆರವಣಿಗೆ ಆರಂಭವಾಯಿತು. ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಆಯಿತು. ವಾಹನಗಳು ಗಂಟೆಗಟ್ಟಲೆ ಸಾಲುಗಟ್ಟಿ ನಿಂತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು.ಹಡ್ಸನ್ ವೃತ್ತ, ಆರ್.ಆರ್.ಎಂ.ಆರ್ ರಸ್ತೆ, ಕಸ್ತೂರಬಾ ರಸ್ತೆ, ಆರ್.ವಿ.ರಸ್ತೆ, ನೃಪತುಂಗ ರಸ್ತೆ, ಕೆಂಪೇಗೌಡ ರಸ್ತೆ, ಎನ್.ಆರ್.ರಸ್ತೆ, ಪಿ.ಕಾಳಿಂಗರಾವ್ ರಸ್ತೆ, ಲಾಲ್‌ಬಾಗ್ ರಸ್ತೆ, ಆರ್.ವಿ.ರಸ್ತೆ,  ಲಾಲ್‌ಬಾಗ್ ಫೋರ್ಟ್ ರಸ್ತೆ, ಸಿಟಿ ಮಾರುಕಟ್ಟೆ ರಸ್ತೆ, ವಾಣಿವಿಲಾಸ ರಸ್ತೆ, ಟಿ.ಮರಿಯಪ್ಪ ರಸ್ತೆ, ಬುಲ್ ಟೆಂಪಲ್ ರಸ್ತೆ, ಕೊಂಡಜ್ಜಿ ಬಸಪ್ಪ ರಸ್ತೆ, ಕೆ.ಆರ್.ರಸ್ತೆ, ಚಾಮರಾಜಪೇಟೆ ಐದನೇ ಮುಖ್ಯರಸ್ತೆ, ಪಂಪ ಮಹಾಕವಿ ರಸ್ತೆ, ಗಾಂಧಿ ಬಜಾರ್‌ನಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಕೆ.ಎಚ್.ರಸ್ತೆ, ಹೊಸೂರು ರಸ್ತೆ, ಡೇರಿ ವೃತ್ತದಿಂದ ಲಾಲ್‌ಬಾಗ್ ಮುಖ್ಯರಸ್ತೆವರೆಗೂ ಸಂಚಾರ ದಟ್ಟಣೆ ಉಂಟಾದ ಪರಿಣಾಮ ವಾಹನ ಸವಾರರು ಕಿರಿಕಿರಿ ಅನುಭವಿಸಿದರು.ಮಧ್ಯಾಹ್ನ ಒಂದು ಗಂಟೆಯವರೆಗೂ ಟ್ರಾಫಿಕ್ ಜಾಮ್ ಸಮಸ್ಯೆ ಮುಂದುವರೆದಿತ್ತು. ಅನಂತರ ಪೊಲೀಸರು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರಿಂದ ಸಹಜವಾಗಿಯೇ ಸಂಚಾರಕ್ಕೆ ಅಡ್ಡಿಯಾಯಿತು. ಸುಮಾರು 300ಕ್ಕೂ ಹೆಚ್ಚು ಸಂಚಾರ ಪೊಲೀಸರನ್ನು ಮೆರವಣಿಗೆ ಮಾರ್ಗದಲ್ಲಿ ನಿಯೋಜಿಸಲಾಗಿತ್ತು. ಆದರೂ ದಟ್ಟಣೆ ಉಂಟಾಯಿತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.‘ಹಡ್ಸನ್ ವೃತ್ತದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚರಿಸುವವರು ಪರ್ಯಾಯ ಮಾರ್ಗ ಬಳಸುವಂತೆ ಮಾಧ್ಯಮಗಳ ಮೂಲಕ ವಾಹನ ಸವಾರರಿಗೆ ಮನವಿ ಮಾಡಲಾಗಿತ್ತು. ಆದರೂ ಹೆಚ್ಚಿನ ಮಂದಿ ಈ ರಸ್ತೆಗಳಲ್ಲೇ ಬಂದಿದ್ದರಿಂದ ಸಮಸ್ಯೆ ಆಯಿತು. ಸಿಬ್ಬಂದಿ ಉತ್ತಮ ಕೆಲಸ ಮಾಡಿ ಬಹುಬೇಗನೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು’ ಎಂದು ಹಲಸೂರು ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಪ್ರಭಾಕರ ಬಯರಿ ಹೇಳಿದರು.ಕಲಾಪ ತಡ: ಸಂಚಾರ ದಟ್ಟಣೆಯ ಪ್ರಭಾವ ಹೈಕೋರ್ಟ್ ಕಲಾಪದ ಮೇಲೂ ಬೀರಿತ್ತು. ಕೆಲ ನ್ಯಾಯಮೂರ್ತಿಗಳು ಬೆಳಿಗ್ಗೆ ದಟ್ಟಣೆಯಲ್ಲಿ ಸಿಲುಕಿದ ಕಾರಣ, ಕಲಾಪ ಸುಮಾರು ಒಂದು ಗಂಟೆ ವಿಳಂಬವಾಗಿ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.