ಮಂಗಳವಾರ, ನವೆಂಬರ್ 12, 2019
28 °C

ಮೆರಿಟ್ ಜಂತು ಮತ್ತು ಮೀಸಲಾತಿಯ ಆದರ್ಶ

Published:
Updated:

ಎಲ್ಲರಿಗೂ ಶಿಕ್ಷಣವನ್ನೊದಗಿಸದೆ ಆಧುನಿಕ ಸಮಾಜವನ್ನು ಕಟ್ಟಲಾಗುವುದಿಲ್ಲ. ಮೀಸಲಾತಿಯ ಬಗ್ಗೆ ನಡೆಯುವ ಚರ್ಚೆಗಳಲ್ಲಿನ ದೊಡ್ಡ ತಕರಾರು ಶಿಕ್ಷಣಕ್ಕೆ ಸಂಬಂಧಿಸಿದ್ದು. ಶಿಕ್ಷಣದಲ್ಲಿ ಮೀಸಲಾತಿ ಇರುವುದು ಒಳ್ಳೆಯದೋ ಅಲ್ಲವೋ ಎಂದು ಚರ್ಚಿಸುವ ಮೊದಲು ನಾವು ಶಿಕ್ಷಣವೆಂದರೆ ಏನು ಎಂಬುದರ ಬಗ್ಗೆ ಯೋಚಿಸೋಣ.`ಎಜುಕೇಟ್' ಎಂಬ ಇಂಗ್ಲಿಷ್ ಪದದ ಮೂಲ ಇರುವುದು ಲ್ಯಾಟಿನ್‌ನಲ್ಲಿ. ಈ ಪದಕ್ಕೆ ಹೊರ ತರುವುದು, ತರಬೇತಿ ನೀಡುವುದು,   ಪೋಷಿಸುವುದು ಮುಂತಾದ ಅರ್ಥಗಳಿವೆ. ಶಿಕ್ಷಣ ಎಂಬ ಪದದ ಮೂಲ ಸಂಸ್ಕತದ ಪದ `ಶಿಕ್ಷಾ'. ಇದನ್ನೂ ಕೂಡ ಹಲವು ಅರ್ಥಗಳಲ್ಲಿ ಬಳಸಲಾಗಿದೆ. ವೇದಾಂಗಗಳಲ್ಲಿ ಅಂದರೆ ವೇದವನ್ನು ಅರ್ಥ ಮಾಡಿಕೊಳ್ಳಲು ಅವಶ್ಯಕವಾದ ಆರು ವಿಷಯಗಳಲ್ಲಿ ಶಿಕ್ಷಾ ಕೂಡ ಒಂದಾಗಿತ್ತು. ಇಲ್ಲಿ ಶಿಕ್ಷಾ ಧ್ವನಿಶಾಸ್ತ್ರಕ್ಕೆ ಸಂಬಂಧಿಸಿದ್ದು. ಸ್ಪಷ್ಟ ಉಚ್ಚಾರಣೆಯನ್ನು ಕಲಿಸುವುದು ಇದರ ಉದ್ದೇಶ. ಉಪನಿಷತ್ತುಗಳಲ್ಲಿ ಶಿಕ್ಷಾ ಎಂದರೆ ವಿನಯ ಮುಂತಾದ ಗುಣಗಳನ್ನು ರೂಢಿಸಿಕೊಳ್ಳುವುದು. ಈ ಪದಗಳ ಲ್ಯಾಟಿನ್ ಮತ್ತು ಸಂಸ್ಕೃತ ಮೂಲಗಳ ಅರ್ಥದಲ್ಲಿ ಮತ್ತು ಹಲವು ಚಿಂತಕರು ತಮ್ಮ ಬರವಣಿಗೆಗಳಲ್ಲಿ ಹೇಳಿರುವಂತೆ ಶಿಕ್ಷಣ ಎಂದರೆ ಕಲಿಯುವ ವ್ಯಕ್ತಿಯಲ್ಲಿರುವ ಸಾಮರ್ಥ್ಯಗಳನ್ನು ಹೊರತರುವುದು ಮತ್ತು ಅದಕ್ಕೆ ಮಾರ್ಗದರ್ಶಿಯಾಗುವುದು. ಅಂದರೆ ಶಿಕ್ಷಣಕ್ಕೆ ಬೆಳೆಸುವುದು ಮತ್ತು ಪೋಷಿಸುವುದು ಎಂಬ ಅರ್ಥಗಳೂ ಇವೆ.ಶಿಕ್ಷಣ ಏನನ್ನು ಬೆಳೆಸಬೇಕು? ಅದು ಕೆಲವು ಸ್ವಭಾವಗಳನ್ನು ಮಾತ್ರ ಪೋಷಿಸಿ ಉಳಿದವನ್ನು ಕಡೆಗಣಿಸಬೇಕೇ? ಉದಾಹರಣೆಗೆ, ಮಗುವೊಂದರಲ್ಲಿ ಸಿಟ್ಟು, ಅಸೂಯೆ ಮುಂತಾದ ಹೀನ ಸ್ವಭಾವಗಳಿದ್ದರೆ ಶಿಕ್ಷಣವು ಅವುಗಳನ್ನೂ ಪೋಷಿಸಬೇಕೇ? ಶಿಕ್ಷಣವು ಒಳ್ಳೆಯ ಮತ್ತು ಅಪೇಕ್ಷಣೀಯ ಸ್ವಭಾವಗಳನ್ನು ಮಾತ್ರ ಬೆಳೆಸಬೇಕು ಎಂದು ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ. ಆದರೆ ಈ ಅಪೇಕ್ಷಣೀಯ ಸ್ವಭಾವಗಳು ಯಾವುವು?ಮಾನವೀಯ ಗುಣಗಳನ್ನು ಬೆಳೆಸುವುದೇ ಶಿಕ್ಷಣದ ಮುಖ್ಯ ಗುರಿಗಳಲ್ಲೊಂದು ಎಂಬುದನ್ನು ಸಮಕಾಲೀನ ಮತ್ತು ಪ್ರಾಚೀನ ಶಿಕ್ಷಣ ತಜ್ಞರೆಲ್ಲರೂ ಮತ್ತೆ ಮತ್ತೆ ಹೇಳುತ್ತಾರೆ. ಆದರೆ ಇಂದು ಶಿಕ್ಷಣವನ್ನು ಎಷ್ಟು ಸಂಕುಚಿತವಾಗಿ ಅರ್ಥೈಸಲಾಗುತ್ತದೆ ಎಂದರೆ ಅದು ಕೆಲವೇ ಕೌಶಲ (ಸ್ಕಿಲ್)ಗಳ ಕಲಿಸುವಿಕೆಗೆ ಸೀಮಿತವಾಗಿಬಿಡುತ್ತದೆ ಎಂಬುದನ್ನು ನಾವು ಗಮನಿಸಬೇಕು.ಮಾನವರಾಗಿ ನಮಗೆ ಹಲವು ಬಗೆಯ ಸಾಮರ್ಥ್ಯಗಳಿವೆ. ಉದಾಹರಣೆಗೆ, ಲೆಕ್ಕ ಮಾಡುವುದು, ಭಾಷೆಯನ್ನು ಉಪಯೋಗಿಸುವುದು, ಹಾಡುವುದು, ನರ್ತಿಸುವುದು, ಚಿತ್ರಿಸುವುದು, ತಾರ್ಕಿಕವಾಗಿ ವಾದ ಮಾಡುವುದು ಮುಂತಾದವು. ಕೆಲವು ಮಕ್ಕಳು ಕೆಲವು ಸಾಮರ್ಥ್ಯಗಳನ್ನು ಹೆಚ್ಚು ಹೊಂದಿರುತ್ತಾರೆ. ಕೆಲವು ಮಕ್ಕಳು ಗಣಿತವನ್ನು ಸಮರ್ಥವಾಗಿ ಮಾಡಿದರೆ ಕೆಲವರು ಸಮರ್ಥವಾಗಿ ಹಾಡಬಹುದು. ಹಾಗಿದ್ದಾಗ, ಈ ಮಕ್ಕಳಿಗೆ ಶಿಕ್ಷಣವನ್ನು ನೀಡುವುದು ಎಂಬುದರ ಅರ್ಥವೇನು? ಮಾನವೀಯ ಶಿಕ್ಷಣವೆಂದರೆ ಆ ಮಕ್ಕಳಲ್ಲಿರುವ ಸಾಮರ್ಥ್ಯವನ್ನು ವರ್ಧಿಸುವುದು ಮತ್ತು ಅವರನ್ನು ಹೆಚ್ಚು ಸೂಕ್ಷ್ಮ ಸಂವೇದನೆಯ ಮನುಷ್ಯರನ್ನಾಗಿ ಮಾಡುವುದು. ಅವರ ಸುತ್ತಮುತ್ತಲಿನ ಆಗುಹೋಗುಗಳಿಗೆ, ತಮ್ಮ ಜೊತೆಗಿರುವ ಇತರ ಮನುಷ್ಯರಿಗೆ ಸೂಕ್ಷ್ಮವಾಗಿ ಸ್ಪಂದಿಸಲು ಅವರಿಗೆ ಸಾಧ್ಯವಾಗಬೇಕು. ಮಾನವೀಯ ಮತ್ತು ಯೋಗ್ಯ ಸಮಾಜವನ್ನು ರೂಪಿಸುವುದೇ ಶಿಕ್ಷಣದ ಮೊದಲ ಕೆಲಸ. ಆದರೆ ಇವತ್ತು ಶಿಕ್ಷಣದ ಅರ್ಥವನ್ನು ಎಷ್ಟು ಸಂಕುಚಿತಗೊಳಿಸಿದ್ದೇವೆಂದರೆ, ಅದು ನಮಗೆ ಕೆಲಸ ಕೊಡಿಸಬೇಕು, ಯಾವ ಕೆಲಸವನ್ನಾದರೂ ಕೊಡಿಸಲೇಬೇಕು!ಶಿಕ್ಷಣದ ಮೂಲ ಉದ್ದೇಶ ಸತ್ಪ್ರಜೆಗಳನ್ನು ರೂಪಿಸುವುದು ಎಂಬ ಒಂದೇ ಕಾರಣಕ್ಕೆ ಇಂದು ಸರ್ಕಾರವು ಶಿಕ್ಷಣ ಕ್ಷೇತ್ರದಲ್ಲಿ ಇರುವುದು. ಶಿಕ್ಷಣಕ್ಕಾಗಿ ಸರ್ಕಾರವು ಹಲವು ಸಾವಿರ ಕೋಟಿ ರೂಪಾಯಿಗಳನ್ನು ಯಾಕೆ ವ್ಯಯಿಸಬೇಕು? ಎಲ್ಲಾ ಸರಕಾರೀ ವಿದ್ಯಾ ಸಂಸ್ಥೆಗಳೂ ಸಬ್ಸಿಡೈಸ್ ಆಗಿರುವುದು ಏಕೆ? ನಮ್ಮ ಎಲ್ಲಾ ವಿಶ್ವವಿದ್ಯಾಲಯಗಳ ಶುಲ್ಕವೂ ಸಬ್ಸಿಡೈಸ್ ಆಗಿರುವಂಥದ್ದೇ ಮತ್ತು ಅಲ್ಲಿ ಕಲಿಯುವವರ ವೆಚ್ಚಕ್ಕೆ ಬಳಕೆಯಾಗುವುದು ದೇಶದ ಪ್ರಜೆಗಳ ಹಣ. ಹಾಗಾಗಿ ಈ ದೇಶದ ಪ್ರಜೆಗಳಿಂದ ರೂಪಿತವಾದ ಬೃಹತ್ ಸಾಮಾಜಿಕ ನಿಧಿಯಿಂದ ಲಾಭ ಪಡೆದವರಲ್ಲಿ ವಿದ್ಯಾರ್ಥಿಗಳೂ ಇರುತ್ತಾರೆ. ಇದು ಸಾರ್ವಜನಿಕ ಹಣವೆಂದ ಮೇಲೆ ಇದರಿಂದ ಲಾಭ ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳು ಯಾರು ಎಂಬ ಪ್ರಶ್ನೆಯನ್ನೂ ಕೇಳಬೇಕಾಗುತ್ತದೆ. ಅವರಲ್ಲಿ ಹೆಚ್ಚಿನವರು ಮಧ್ಯಮ ಮತ್ತು ಮೇಲ್ವರ್ಗದವರೇ? ಅವರು ಮುಂದುವರಿದ ಜಾತಿಯವರೇ?ಶಿಕ್ಷಣಕ್ಕಾಗಿ ವೆಚ್ಚ ಮಾಡುವ ಹಣವನ್ನು ಸರ್ಕಾರ ಹೇಗೆ ಸಂಗ್ರಹಿಸುತ್ತದೆ? ಈ ವಿಚಾರದ ಬಗ್ಗೆ ಪ್ರಚಲಿತವಾದ ಮಿಥ್ಯೆಯೊಂದಿದೆ. ಅದೇನೆಂದರೆ ಈ ಹಣವು ಕೆಲವೇ ಜನರು ನೀಡುವ ವರಮಾನ ತೆರಿಗೆಯಿಂದ ದೊರೆಯುವಂಥದ್ದು, ಮತ್ತು ಈ ತೆರಿಗೆಯನ್ನು ನೀಡುವ ಹೆಚ್ಚಿನ ಜನರು ಮೀಸಲಾತಿಯ ಪರಿಧಿಯಲ್ಲಿ ಬರದವರು ಎಂಬುದು. ಆದರೆ ಸರ್ಕಾರಕ್ಕೆ ಆದಾಯದ ಹಲವು ಮೂಲಗಳಿವೆ. ವರಮಾನ ತೆರಿಗೆಯನ್ನು ಬಿಟ್ಟರೂ ವಾಣಿಜ್ಯ ತೆರಿಗೆಗಳಂತಹ ಹಲವು ಆದಾಯಗಳು ಸರ್ಕಾರಕ್ಕಿವೆ. ಈ ಮೂಲಗಳಿಂದ ಸರ್ಕಾರಕ್ಕೆ ಭಾರೀ ಪ್ರಮಾಣದ ಹಣ ದೊರೆಯುತ್ತದೆ. ಮದ್ಯದ ಮೇಲೆ ವಿಧಿಸಿದ ತೆರಿಗೆಯೂ ಇವುಗಳಲ್ಲೊಂದು. ಹಾಗಾಗಿ ದೇಶದ ಎಲ್ಲ ರೀತಿಯ ಜನರೂ ಸರ್ಕಾರದ ಸಾಮಾಜಿಕ ನಿಧಿಗೆ ಕೊಡುಗೆ ನೀಡುತ್ತಾರೆ. ಇಲ್ಲಿರುವ ವ್ಯಂಗ್ಯವನ್ನು ಗಮನಿಸಿ. ಯಾರಿಗೆ ತಮ್ಮ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳುಹಿಸಲು ಸಾಧ್ಯವಾಗುವುದಿಲ್ಲವೋ ಅಂಥವರು ನೀಡುವ ಹಣವನ್ನು ಕೂಡಾ, ಅದು ಸಣ್ಣ ಮೊತ್ತವೇ ಆಗಿದ್ದರೂ, ಉಳ್ಳವರಿಗೆ ಕಡಿಮೆ ದರದಲ್ಲಿ ಶಿಕ್ಷಣವನ್ನೊದಗಿಸಲು ಉಪಯೋಗಿಸಲಾಗುತ್ತದೆ!ಎಲ್ಲ ಮಕ್ಕಳಿಗೂ ಶಿಕ್ಷಣವು ದೊರೆಯುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ಒಳ್ಳೆಯ ಶಿಕ್ಷಣದ ಮೂಲಕ ಒಳ್ಳೆಯ ಪ್ರಜೆಗಳನ್ನು ರೂಪಿಸಬಹುದು. ಶಿಕ್ಷಣದ ಕೆಲಸ ಓದು, ಬರಹ, ಲೆಕ್ಕ ಮುಂತಾದ ಕೌಶಲಗಳನ್ನು ಮಾತ್ರ ಕಲಿಸುವುದಲ್ಲ. ಅದು ಸಮಾನತೆ ಮತ್ತು ನ್ಯಾಯಪರತೆಯ ಬೀಜಗಳನ್ನೂ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬಿತ್ತಬೇಕು. ಶಾಲೆಯ ತರಗತಿಗಳಲ್ಲಿ ಮೇಲ್ವರ್ಗ ಮತ್ತು ಮೇಲ್ಜಾತಿಯವರೇ ಹೆಚ್ಚಿನ ಸಂಖ್ಯೆಯಲ್ಲಿ ಇರದೆ, ಸಮಾಜದ ಎಲ್ಲಾ ಕಡೆಗಳಿಂದಲೂ ಬರುವ ವಿದ್ಯಾರ್ಥಿಗಳಿಗೆ ಸಮಾನ ಪ್ರಾತಿನಿಧ್ಯವನ್ನು ಕೊಡುವ ವಾತಾವರಣ ಶಾಲೆಗಳಲ್ಲಿ ಉಂಟಾದಾಗ ಮಾತ್ರ ಇದು ಸಾಧ್ಯವಾಗುತ್ತದೆ.ಸರ್ಕಾರವು ಸಬ್ಸಿಡಿ ನೀಡದಿದ್ದರೆ ಭಾರತದಲ್ಲಿ ಉನ್ನತ ಶಿಕ್ಷಣ ಸಾಧ್ಯವೇ ಆಗುವುದಿಲ್ಲ. ಆಗ ವಿಶ್ವವಿದ್ಯಾಲಯಗಳು, ಐಐಟಿಗಳು ಯಾವುದೂ ಇರುವುದಿಲ್ಲ. ಒಬ್ಬ ವ್ಯಕ್ತಿಗೆ ಶಿಕ್ಷಣ ಕೊಡಲು ವ್ಯಯವಾಗುವ ಹಣದ ಮೊತ್ತವು ವಿದ್ಯಾರ್ಥಿಗಳು ಕೊಡುವ ಶುಲ್ಕಕ್ಕಿಂತ ಭಾರೀ ದೊಡ್ಡದು. ಈ ಹೆಚ್ಚಿನ ಹಣ ಬರುವುದಾದರೂ ಎಲ್ಲಿಂದ? ಕಾಲೇಜುಗಳಿಗೆ ಮತ್ತು ಉನ್ನತ ಶಿಕ್ಷಣವನ್ನೊದಗಿಸುವ ಸಂಸ್ಥೆಗಳಿಗೆ ಭಾರೀ ಮೊತ್ತದ ಹಣವನ್ನು ಕೊಡುವ ಸರ್ಕಾರಕ್ಕೆ ಅವುಗಳಿಂದ ಕೆಲವು ವಿಚಾರಗಳನ್ನು ಅಪೇಕ್ಷಿಸುವ ಎಲ್ಲ ಹಕ್ಕೂ ಇದೆ. ಸಮಾಜದ ಎಲ್ಲರಿಗೂ ಶಿಕ್ಷಣದಲ್ಲಿ ಸಮಾನಾವಕಾಶ ದೊರೆಯಬೇಕು ಎಂಬ ಕರಾರಿನೊಂದಿಗೆ ಮಾತ್ರವೇ ಸರ್ಕಾರವು ಹಣವನ್ನು ಹೂಡುತ್ತದೆ. ಅಂದರೆ ಶಿಕ್ಷಣ ಎನ್ನುವುದು ಒಂದು ಸಾಮಾಜಿಕ ಆಸ್ತಿ. ಅದು ಖಾಸಗಿ ಸವಲತ್ತಲ್ಲ.ಉನ್ನತ ಶಿಕ್ಷಣದಿಂದ ಸಮಾಜದ ದೊಡ್ಡ ಭಾಗವೊಂದನ್ನು ಹೊರಗಿಡಲಾಗಿದೆ ಎಂಬುದು ನಮ್ಮನ್ನು ಕಾಡಬೇಕು. ಇವತ್ತಿಗೂ ನಮ್ಮಲ್ಲಿ ಉನ್ನತ ಶಿಕ್ಷಣವನ್ನು ಪಡೆಯುವುದು ಪ್ರತಿಶತ ಸುಮಾರು 15ರಷ್ಟು ಜನರು ಮಾತ್ರ. ಅಂದರೆ ನೂರು ಜನರಿಗೆ ಅವಕಾಶ ಸಿಗಬೇಕಾದಲ್ಲಿ ಅದು ಹದಿನೈದು ಜನರಿಗೆ ಮಾತ್ರ ಸಿಗುತ್ತಿದೆ. ನಮ್ಮ ದೇಶದ ಜನಸಂಖ್ಯೆಯಲ್ಲಿ ಸುಮಾರು ಅರ್ಧದಷ್ಟು ಮಹಿಳೆಯರಿದ್ದಾರೆ. ಆದರೆ ಉನ್ನತ ಶಿಕ್ಷಣದಲ್ಲಿ ಮಾತ್ರ ಪುರುಷರಿಗೆ ಹೋಲಿಸಿದರೆ ಮಹಿಳೆಯರ ಸಂಖ್ಯೆ ಗಣನೀಯವಾಗಿ ಸಣ್ಣದು. ಉನ್ನತ ಶಿಕ್ಷಣದ ಅವಕಾಶ ಮಹಿಳೆಯರಿಗೆ ಯಾಕೆ ಸಿಗಬಾರದು? ಮಹಿಳೆಯರು ಓದನ್ನು ಮುಂದುವರಿಸಲು ಪ್ರೋತ್ಸಾಹ ನೀಡದಂತಹ ಸಮಾಜದಲ್ಲಿ ನಾವಿದ್ದೇವೆ. ಈ ಒತ್ತಡವು ಮಹಿಳೆಯರಿಗೆ ಅವರ ಕುಟುಂಬದಿಂದ, ಅಧ್ಯಾಪಕರಿಂದ ಮತ್ತು ಸಹಪಾಠಿಗಳಿಂದಲೂ ಉಂಟಾಗುತ್ತದೆ. ಹಾಗಿದ್ದಾಗ ಮಹಿಳೆಯರಿಗೆ ಯಾರಾದರೂ ಹೆಚ್ಚಿನ ಸಹಕಾರವನ್ನು, ರಕ್ಷಣೆಯನ್ನು ಒದಗಿಸಲೇಬೇಕು. ಅದೇ ರೀತಿ ಹಲವು ತಲೆಮಾರುಗಳಿಂದ ಶಿಕ್ಷಣಕ್ಕೆ ಅವಕಾಶ ಸಿಗದ ಸಮುದಾಯಗಳಿಗೂ ಈ ರಕ್ಷಣೆಯು ಅಗತ್ಯ.ಮೀಸಲಾತಿಯು ಅನ್ಯಾಯವೇ?

ಮೀಸಲಾತಿಯ ವಿರುದ್ಧ ಮಾತನಾಡುವವರು ತಮ್ಮ ವಾದದಲ್ಲಿ ನ್ಯಾಯದ ಪರಿಕಲ್ಪನೆಯನ್ನು ಬಳಸಿಕೊಳ್ಳುತ್ತಾರೆ ಎಂಬುದೊಂದು ವಿಚಿತ್ರ. ಕೆಲವು ಜನರಿಗೆ ಹೆಚ್ಚಿನ ಸೌಲಭ್ಯವನ್ನು ಒದಗಿಸುವುದು ಅನ್ಯಾಯವೆಂದು ಅವರು ವಾದಿಸುತ್ತಾರೆ. ನಮ್ಮ ಪೂರ್ವಜರು ಮಾಡಿದ ಪಾಪಕ್ಕೆ ನಾವು ಹೊಣೆಗಾರರಲ್ಲ ಎಂಬ ವಾದವನ್ನೂ ಮಂಡಿಸುತ್ತಾರೆ. ಅವರ ವಾದದ ಹುರುಳು ಏನೆಂದರೆ, ಹಿಂದಿನ ಕಾಲದಲ್ಲಿ ಉಚ್ಚ ಜಾತಿಯವರು ತಪ್ಪು ಮಾಡಿದ್ದರೆ ಅದಕ್ಕೆ ಈಗಿನವರು ಏಕೆ ಬೆಲೆಯನ್ನು ತೆರಬೇಕು ಎಂಬುದು.ಮೀಸಲಾತಿ ವಿರೋಧದ ಹಿಂದಿನ ನಂಬಿಕೆಗಳಲ್ಲಿ ಮೇಲಿನ ವಾದ ಬಹಳ ಮುಖ್ಯವಾದುದು. ಹೀಗೆ ವಾದಿಸುವವರು ಪಕ್ಷಪಾತದ ಪ್ರಶ್ನೆಯನ್ನೇ ಪರಿಗಣಿಸಿರುವುದಿಲ್ಲ. ಒಬ್ಬರಿಗೆ ಸಲ್ಲಬೇಕಾದದ್ದು ಸಲ್ಲದೆ ಇದ್ದಾಗ, ಅವರ ಪಡೆಯಬೇಕಾದ ಹಕ್ಕನ್ನು ಕಸಿದುಕೊಂಡಾಗ ಮಾತ್ರ ಪಕ್ಷಪಾತದ ಪ್ರಶ್ನೆ ಏಳುತ್ತದೆ. ಆದರೆ ಎಂಜಿನಿಯರಿಂಗ್ ಅಥವ ಮೆಡಿಕಲ್ ಕಾಲೇಜುಗಳಲ್ಲಿನ ಸೀಟು ಯಾರದ್ದಾದರೂ ಹಕ್ಕಾಗುವುದು ಹೇಗೆ? ಕಾಲೇಜಿನ ಸೀಟಿನ ಮೇಲೆ ನಮಗಿರುವುದು ಹಕ್ಕಲ್ಲ, ಬಯಕೆ ಮಾತ್ರ. ತಮಗಿಂತ ಕಡಿಮೆ ಅಂಕಗಳನ್ನು ಹೊಂದಿದವರಿಗೆ ಸೀಟು ಸಿಕ್ಕಿತು, ನಮಗೆ ಸಿಗಲಿಲ್ಲ; ನಮ್ಮನ್ನು ಅಲ್ಲಿ ಸಮಾನವಾಗಿ ನೋಡಲಿಲ್ಲ ಎಂಬುದು ಮೀಸಲಾತಿ ವಿರೋಧಿಗಳ ಆರೋಪ. ಆದರೆ ಹಲವು ಸೌಲಭ್ಯಗಳನ್ನು ಬಳಸಿಕೊಂಡ ಸಮುದಾಯಗಳ ವಿದ್ಯಾರ್ಥಿಗಳು ಈ ಅಸಮಾನ ಸಮಾಜದಲ್ಲಿ ಊರ್ಜಿತಗೊಂಡಿರುವ ಹೊತ್ತಿನಲ್ಲಿಯೇ ಇದ್ದಕಿದ್ದಂತೆ ಸಮಾನತೆಯ ಮಾತನಾಡುವುದಾದರೂ ಏಕೆ? ಮೀಸಲಾತಿಯ ಉದ್ದೇಶವೇ ಈ ತಕರಾರಿಗೆ ಉತ್ತರ. ಮೀಸಲಾತಿ ಎನ್ನುವುದು ಹಿಂದೆ ಸಮಾಜ ಹೇಗಿತ್ತು ಅನ್ನುವುದನ್ನು ಹೇಳುತ್ತಿಲ್ಲ. ಬದಲಿಗೆ ಅದು ವರ್ತಮಾನದ ಸಮಸ್ಯೆಗಳನ್ನು ಗಮನದಲ್ಲಿ ಇಟ್ಟುಕೊಂಡಿದೆ. ಅಂದರೆ ಈ ಹೊತ್ತಿನಲ್ಲಿ ಸಮಾಜದಲ್ಲಿರುವ ಅಸಮಾನತೆಯನ್ನು ನಿವಾರಿಸುವ ಕೆಲಸ. ಅದನ್ನು ಇನ್ನೊಂದು ಬಗೆಯಲ್ಲಿಯೂ ಹೇಳಬಹುದು- ಹಿಂದೆ ಜಾತಿ ಆಧಾರಿತ ಶೋಷಣೆಯು ನಡೆದೇ ಇಲ್ಲ ಅಂದುಕೊಂಡರೂ ಇಂದಿನ ಸಮಾಜದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಮುದಾಯಗಳ ನಡುವೆ ಅಸಮತೋಲನವಿದ್ದರೆ ಮೀಸಲಾತಿಯನ್ನು ಜಾರಿಗೊಳಿಸಬೇಕಾಗಬಹುದು.ಮೀಸಲಾತಿ ವಿರೋಧಿಗಳ ವಾದದಲ್ಲಿರುವ ಮತ್ತೊಂದು ತಪ್ಪು ತಿಳಿವಳಿಕೆಯೆಂದರೆ ಮೀಸಲಾತಿಯನ್ನು ದಂಡನೆಯೊಂದಿಗೆ ಹೋಲಿಸುವುದು. ದಂಡನೆಯೆಂದರೆ ಮಾಡಿದ ತಪ್ಪಿಗೆ ನೀಡುವ ಶಿಕ್ಷೆ. ಹಿಂದೆಂದೋ ಮಾಡಿದ ಶಿಕ್ಷೆಗೆ ನಮಗೆ ಈಗ ಏಕೆ ದಂಡಿಸುತ್ತೀರಿ ಎಂದು ಮೀಸಲಾತಿ ವಿರೋಧಿಗಳು ಕೇಳುತ್ತಾರೆ. ಅದಕ್ಕೆ ಉತ್ತರ ಸರಳ. ಮೀಸಲಾತಿ ಎಂಬುದು ದಂಡನೆ ಅಲ್ಲವೇ ಅಲ್ಲ. ಹಿಂದೆ ಸೌಲಭ್ಯಗಳನ್ನು ಬಳಸಿಕೊಂಡ ಸಮುದಾಯಗಳನ್ನು ಅವರ ಹಿಂದಿನ ತಪ್ಪುಗಳಿಗಾಗಿ ದಂಡಿಸುವುದಿಲ್ಲ. ಬದಲಿಗೆ ಮೀಸಲಾತಿಯು ಇಂದು ನಡೆಯುತ್ತಿರುವ ತಪ್ಪುಗಳನ್ನು ಮಾತ್ರ ಸರಿಪಡಿಸುತ್ತದೆ. ಇದು ಮುಂದುವರಿದ ಜಾತಿಗಳಿಗೆ ಸಂಬಂಧಿಸಿದ್ದಲ್ಲ. ಮೀಸಲಾತಿ ಯಾರಿಗೂ ಶಿಕ್ಷೆಯಲ್ಲ. ಅದು ಈ ಹಿಂದೆ ಯಾರಿಗೆ ಸೌಲಭ್ಯಗಳು ದೊರೆತಿಲ್ಲವೋ ಅವರೊಂದಿಗೆ ಸಂಪನ್ಮೂಲಗಳನ್ನು ಹಂಚಿಕೊಳ್ಳುವ ಮಾರ್ಗ ಮಾತ್ರ.ತಮ್ಮೆಲ್ಲ ವಾದದ ಕೇಂದ್ರದಲ್ಲಿ ಮುಂದುವರಿದ ಜಾತಿಯವರಿಗೆ ಏನಾಗುತ್ತಿದೆ ಎಂಬುದನ್ನು ಮಾತ್ರ ಇಟ್ಟುಕೊಂಡು, ಅವರಿಗೆ ಅನ್ಯಾಯವಾಗುತ್ತಿದೆ ಎಂದು ಬಿಂಬಿಸುವುದು ಮೀಸಲಾತಿ ವಿರೋಧಿಗಳ ಚಾಲಾಕಿನ ತಂತ್ರ. ನಿಜವಾಗಿಯೂ ಈ ವಾದದ ಕೇಂದ್ರದಲ್ಲಿರಬೇಕಾದವರು ಶಿಕ್ಷಣ ವಂಚಿತರು. ಹಾಗಾದರೆ ಅವರು ಈ ಚಾಲಾಕಿತನವನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ? ಸಮರ್ಥನೆ ಸಾಧ್ಯವಾಗುವುದು ಅವರು ಹುಟ್ಟು ಹಾಕುವ ಮೆರಿಟ್ ಎಂಬ ಜಂತುವಿನ ಮೂಲಕ.ಮೆರಿಟ್‌ನ ಮೆರಿಟ್

ನಾವು ಕಲಿಯಬೇಕಾದ ಮೊದಲ ಪಾಠವೆಂದರೆ `ಮೆರಿಟ್' ಎಂಬುದು ನಮ್ಮ ಸುತ್ತಮುತ್ತಲಿನ ಆಗುಹೋಗುಗಳ ಒಂದು ಉತ್ಪನ್ನ ಮಾತ್ರ. ಹುಟ್ಟಿನಿಂದಲೇ ಅಸಾಮಾನ್ಯ ಸಾಮರ್ಥ್ಯವನ್ನು ಪಡೆದ ಮಕ್ಕಳ ಉದಾಹರಣೆ ಅಲ್ಲೊಂದು ಇಲ್ಲೊಂದು ಸಿಗಬಹುದು. ಆದರೆ ಅದೇ ಉಳಿದ ಎಲ್ಲ ಜನರ ಪಾಲಿಗೂ ಸತ್ಯ ಎಂದು ತಿಳಿಯಬಾರದು. ಮೆರಿಟ್ ಎನ್ನುವುದು ಕೌಶಲವೂ ಅಲ್ಲ, ಏನೋ ಒಂದನ್ನು ಮಾಡಬಹುದಾದ ಸಾಮರ್ಥ್ಯವೂ ಅಲ್ಲ. ವಿದ್ಯಾರ್ಥಿನಿಯೊಬ್ಬಳು ಗಣಿತದಲ್ಲಿ ಸಾಮರ್ಥ್ಯ ಗಳಿಸಿದ್ದಾಳೆ ಎಂದು ನಾವು ಹೇಳಿದ ಮಾತ್ರಕ್ಕೆ ಆಕೆಗೆ ಗಣಿತದಲ್ಲಿ ಮೆರಿಟ್ ಇದೆ ಎಂದು ಅರ್ಥವಲ್ಲ. ಒಬ್ಬಳು ಚೆನ್ನಾಗಿ ನರ್ತಿಸಿದರೆ ಅವಳಿಗೆ ನರ್ತನದಲ್ಲಿ ಮೆರಿಟ್ ಇದೆ ಎಂದು ನಾವು ಹೇಳುವುದಿಲ್ಲ. ಹಾಗಿದ್ದಾಗ, ಮೆರಿಟ್ ಇರುವ ವಿದ್ಯಾರ್ಥಿಗಳಿಗೆ ಅವಕಾಶವನ್ನು ಕೊಡಲಿಲ್ಲ ಎಂಬ ಆರೋಪವನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು?ಮೇಲ್ನೋಟಕ್ಕೆ ಇದು ಸರಳ. ಯಾವ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕವು ದೊರೆತಿರುತ್ತದೆಯೋ ಅವರು ಮೆರಿಟ್ ಹೊಂದಿದವರು ಎಂದು ಹೇಳಲಾಗುತ್ತದೆ. ಆದರೆ ಮೆರಿಟ್ ಎನ್ನುವುದು ಅಂಕ ಗಳಿಕೆಗಿಂತ ತೀರಾ ವಿಶಾಲವಾದ ವಿಚಾರ. ಮೆರಿಟ್ ಇರುವ ವ್ಯಕ್ತಿಗೆ ಹೆಚ್ಚಿನ ಅಂಕಗಳಿಸುವುದು ಅನಿವಾರ್ಯವಾಗಿರುವ ಹೊತ್ತಿಗೇ ಅದರೊಂದಿಗೆ ಹಲವು ವಿಚಾರಗಳು ತಳುಕು ಹಾಕಿಕೊಳ್ಳುತ್ತದೆ. ಮೆರಿಟ್ ಎನ್ನುವುದು ಪರೀಕ್ಷೆಯಲ್ಲಿ ಪಡೆದ ಅಂಕಕ್ಕೆ ಮಾತ್ರ ಸೀಮಿತವಾಗಲು ಸಾಧ್ಯವಿಲ್ಲ. ಮೆರಿಟ್ ಇಲ್ಲದಂತಹ ವಿದ್ಯಾರ್ಥಿಗಳು ಕೂಡಾ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿಬಿಡಬಹುದು. 94% ಪಡೆದ ವಿದ್ಯಾರ್ಥಿನಿಗಿಂತ 95% ಪಡೆದ ವಿದ್ಯಾರ್ಥಿನಿ ಹೆಚ್ಚು ಮೆರಿಟ್ ಹೊಂದಿದವಳು ಎಂದು ನಾವೆಲ್ಲರೂ ಒಪ್ಪಿಕೊಳ್ಳಬಹುದೇ? ಇಲ್ಲ, ಒಬ್ಬ ವಿದ್ಯಾರ್ಥಿನಿಗಿಂತ ಮತ್ತೊಬ್ಬ ವಿದ್ಯಾರ್ಥಿನಿಗೆ ಹೆಚ್ಚು ಅಂಕಗಳು ದೊರೆತಿವೆ ಎಂಬುದನ್ನು ಮಾತ್ರ ನಾವು ಒಪ್ಪಿಕೊಳ್ಳಬಹುದು. ಮೆರಿಟ್ ಎನ್ನುವುದು ಅಂಕಗಳಿಗಿಂತ ಹೆಚ್ಚು ಸಂಕೀರ್ಣವಾದದ್ದು, ಅದಕ್ಕೆ ಪರೀಕ್ಷೆಯಲ್ಲಿ ಪಡೆದ ಅಂಕಗಳಿಗಿಂತ ಹೆಚ್ಚಿನ ಮಾನದಂಡಗಳಿವೆ.ಉದಾಹರಣೆಗೆ ಜಗತ್ತಿನ ಹಲವು ವಿಶ್ವವಿದ್ಯಾಲಯಗಳಲ್ಲಿ ಮೆರಿಟ್ ಅನ್ನು ಹೇಗೆ ವ್ಯಾಖ್ಯಾನಿಸುತ್ತಾರೆ ಎಂಬುದನ್ನು ನಾವು ನೋಡಬಹುದು. ಭಾರತದಲ್ಲಿ ಮೀಸಲಾತಿ ಇರುವುದರಿಂದಲೇ ನಾವು ವಿದೇಶಕ್ಕೆ ಹೋಗಬೇಕಾದ ಅನಿವಾರ್ಯತೆ ಉಂಟಾಗುತ್ತದೆ ಎಂದು ಹೇಳುವ ಮೀಸಲಾತಿ ವಿರೋಧಿಗಳು ಗಮನಿಸಲೇಬೇಕಾದ ವಿಚಾರವಿದು. ಈ ರೀತಿ ಮಾತನಾಡುವ ಹೆಚ್ಚಿನ ವಿದ್ಯಾರ್ಥಿಗಳು ಹೋಗಬಯಸುವ ಯಾವುದೇ ಅಮೇರಿಕನ್ ವಿಶ್ವವಿದ್ಯಾಲಯವು ಹೇಗಿರುತ್ತದೆ? ಆ ದೇಶದಲ್ಲಿನ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿಯೂ ತಮ್ಮ ಹಿಂದಿನ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದವರಿಗೆ ಸೀಟು ಸಿಗದೇ ಕಡಿಮೆ ಅಂಕ ಪಡೆದವರಿಗೆ ಸೀಟು ಸಿಕ್ಕಿರುವ ಹಲವು ಪ್ರಸಂಗಗಳಿವೆ. ಇದು ಸಾಧ್ಯವಾಗುವುದು ಆದರೂ ಹೇಗೆ? ಅಮೇರಿಕಾದ ವಿಶ್ವವಿದ್ಯಾಲಯಗಳೂ ಮೆರಿಟ್ ಆಧಾರ ದಲ್ಲಿಯೇ ಸೀಟುಗಳನ್ನು ಹಂಚುತ್ತವೆ. ಆದರೆ ಅಲ್ಲಿ ಯಾವುದೋ ಒಂದು ಪರೀಕ್ಷೆಯಲ್ಲಿ ಪಡೆದ ಅಂಕ ಮಾತ್ರ ಗಣನೆಗೆ ಬರುವುದಿಲ್ಲ. ಬದಲಿಗೆ, ಅಲ್ಲಿ ಮೆರಿಟ್ ಎನ್ನುವುದು ಹಲವು ಗುಣಗಳ ಸಮಷ್ಠಿಗೆ ಸಂಬಂಧಿಸಿದ್ದು. ಹಾಗಾಗಿ ಒಬ್ಬ ವಿದ್ಯಾರ್ಥಿ ಕಡಿಮೆ ಅಂಕಗಳನ್ನು ಪಡೆದಿದ್ದರೂ ಚೆನ್ನಾಗಿ ಹಾಡುವುದಾದರೆ, ಒಳ್ಳೆಯ ಲೇಖಕ ಅಥವಾ ಲೇಖಕಿಯಾಗಿದ್ದರೆ ಅಥವ ಸಮಾಜದ ಒಳಿತಿಗಾಗಿ ದುಡಿದಿದ್ದರೆ ಸೀಟು ಸಿಗುತ್ತದೆ. ಅದೇ ಹೊತ್ತಿಗೆ ಆ ವಿದ್ಯಾರ್ಥಿಗಿಂತ ಹೆಚ್ಚು ಅಂಕಗಳನ್ನು ಪಡೆದವರಿಗೆ ಸೀಟು ಸಿಗುವುದಿಲ್ಲ. ಹಾಗಾಗಿ ಈ ಮೀಸಲಾತಿ ವಿರೋಧಿಗಳು ಓದಲೆಂದು ಅಮೇರಿಕಾಕ್ಕೆ ಹೋದಾಗ ಅವರು ಮೆರಿಟ್‌ನ ಬಗ್ಗೆ ಭಾರತಕ್ಕಿಂತ ಹೆಚ್ಚು ಸಂಕೀರ್ಣ ನಿಯಮಗಳನ್ನು ಹೊಂದಿದ ವ್ಯವಸ್ಥೆಯೊಂದರೊಳಗೆ ಸೇರಿಕೊಳ್ಳುತ್ತಾರೆ. ಅವರು ಲಿಂಗ ಮತ್ತು ಜನಾಂಗಕ್ಕೆ ಸಂಬಂಧಿಸಿದಂತೆ ಬೇರೆ ರೀತಿಯ ಸಾಮಾಜಿಕ ಸಮಾನತೆಯನ್ನು ಅನುಸರಿಸುವ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುತ್ತಾರೆ. ಅವರು ಅಮೇರಿಕಾದಲ್ಲಿ ಯಾವುದನ್ನು ಹೊಗಳುತ್ತಾರೋ ಅದೇ ವ್ಯವಸ್ಥೆಯು ಭಾರತದಲ್ಲಿ ಅವರಿಗೆ ಬೇಡವಾಗುತ್ತದೆ ಎಂಬುದೊಂದು ವ್ಯಂಗ್ಯ!ಭಾರತದಲ್ಲಿನ ಪರೀಕ್ಷಾ ಪದ್ಧತಿಗೂ ಮೆರಿಟ್‌ಗೂ ಇರುವ ಸಂಬಂಧ ತೀರಾ ತೆಳುವಾದದ್ದು. ಪರೀಕ್ಷೆಗಳಿರುವುದು ಕೆಲವೇ ರೀತಿಯ ಕೌಶಲಗಳು ಮತ್ತು ನಿರ್ದಿಷ್ಟ ಸಾಮರ್ಥ್ಯಗಳನ್ನು ಪರೀಕ್ಷಿಸಲು ಮಾತ್ರ. ಯಾವಾಗ ಪರೀಕ್ಷೆಗಳಲ್ಲಿ ಕೆಲವು ರೀತಿಯ ಪ್ರಶ್ನೆಗಳನ್ನು ಮಾತ್ರ ಕೇಳಲಾಗುತ್ತದೆಯೋ ಆಗ ಅದಕ್ಕೂ ಮೆರಿಟ್‌ಗೂ ಇದ್ದ ಸಂಬಂಧವೂ ಪೂರ್ತಿ ನಾಶವಾಗುತ್ತದೆ. ಉದಾಹರಣೆಗೆ, ಲಕ್ಷಾಂತರ ಅಭ್ಯರ್ಥಿಗಳು ಬರೆಯುವ ಐಐಟಿ ಪ್ರವೇಶ ಪರೀಕ್ಷೆ, ಸಿಇಟಿ ಮುಂತಾದವುಗಳಲ್ಲಿ ಇರುವ ಪ್ರಶ್ನೆಗಳು ಗಣಿತ, ಭೌತಶಾಸ್ತ್ರ ಮುಂತಾದ ವಿಷಯಗಳಿಗೆ ಸಂಬಂಧಿಸಿದ್ದು. ಅದನ್ನು ಬಿಟ್ಟು ಬೇರೆ ಯಾವ ಪ್ರಶ್ನೆಗಳನ್ನೂ ಅಲ್ಲಿ ಏಕೆ ಕೇಳುವುದಿಲ್ಲ? ಅಭ್ಯರ್ಥಿಗಳಿಗೆ ಇಟ್ಟಿಗೆ, ಮಣ್ಣು, ಸಿಮೆಂಟುಗಳನ್ನು ಕೊಟ್ಟು ಗೋಡೆಯೊಂದನ್ನು ಕಟ್ಟಲು ಕೇಳುವುದು ಕೂಡಾ ಒಂದು ಪ್ರಶ್ನೆಯಾಗಬಹುದಲ್ಲವೇ? ಅಥವ ಹಾಳಾದ ಬೈಸಿಕಲ್ಲೊಂದನ್ನು ಅವರಿಗೆ ಕೊಟ್ಟು ಅದನ್ನು ರಿಪೇರಿ ಮಾಡಲು ಕೇಳಬಹುದಲ್ಲವೇ? ನಮ್ಮ ದೇಶದ ರಸ್ತೆಗಳ ಬದಿಯ ಪಂಚರ್ ಶಾಪಿನಲ್ಲಿ ದುಡಿಯುವ ಹುಡುಗ ಮಾಡುವಂತಹ ಸಣ್ಣ ರಿಪೇರಿಯು ನಮ್ಮ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬೃಹತ್ ಸಮಸ್ಯೆಯಾಗಿ ಗೋಚರಿಸಬಹುದು. ಯಾಕೆ ಒಂದು ರೀತಿಯ ಪರೀಕ್ಷೆಯನ್ನು ಮಾತ್ರ ಮೆರಿಟ್‌ನ ಮಾನದಂಡವಾಗಿ ಪರಿಗಣಿಸಲಾಗುತ್ತದೆ? ಈ ರೀತಿಯ ಪರೀಕ್ಷೆಗಳಿಂದ ಯಾವ ರೀತಿಯ ಜನರಿಗೆ ಉಪಯೋಗವಾಗುತ್ತದೆ? ನಮ್ಮಲ್ಲಿ ಪಟಪಟನೆ ಇಂಗ್ಲಿಷ್ ಮಾತನಾಡಲು ಬರದ, ಗಣಿತದ ಸಮಸ್ಯೆಗಳನ್ನು ಗಡಿಬಿಡಿಯಲ್ಲಿ ಬಿಡಿಸಲಾಗದ ಎಷ್ಟೋ ಬುದ್ಧಿವಂತ ವಿದ್ಯಾರ್ಥಿ ವಿದ್ಯಾರ್ಥಿನಿಯರಿದ್ದಾರೆ. ಆದರೆ ನಮ್ಮ ಹೆಚ್ಚಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗಮನಿಸಲಾಗುವುದು ಅತ್ಯಂತ ವೇಗವಾಗಿ ಗಣಿತದ ಸಮಸ್ಯೆಗಳನ್ನು ಬಿಡಿಸಬಲ್ಲ ಸಾಮರ್ಥ್ಯವನ್ನು ಮಾತ್ರ. ಗಡಿಬಿಡಿಯಲ್ಲಿ ಗಣಿತವನ್ನು ಮಾಡುವುದಕ್ಕೂ ಮತ್ತು ಮೆರಿಟ್‌ಗೂ ಶಿಕ್ಷಣಕ್ಕೂ ಒಳ್ಳೆಯ ಪ್ರಜೆಗಳಾಗುವುದಕ್ಕೂ ಯಾವ ಸಂಬಂಧವಿದೆ?ಪರೀಕ್ಷೆಯ ಅಂಕ ಮತು ಮೆರಿಟ್‌ಗಳು ಒಂದೇ ಅಲ್ಲ, ಒಂದೇ ಆಗಲೂ ಬಾರದು ಎಂಬುದನ್ನು ನೀವು ಒಪ್ಪುತ್ತೀರಿ ಎಂದುಕೊಳ್ಳುತ್ತೇವೆ. ಪರೀಕ್ಷೆಗಳಲ್ಲಿ ಸೈದ್ಧಾಂತಿಕ ಪರೀಕ್ಷೆಗೂ ಪ್ರಾಯೋಗಿಕ ಪರೀಕ್ಷೆಗೂ ಬೇರೆ ಬೇರೆ ಅಂಕಗಳಿರುತ್ತದೆ. ಆದರೆ ಅಂತಿಮವಾಗಿ ಅಂಕಗಳು ಪ್ರಕಟವಾದಾಗ ಸೈದ್ಧಾಂತಿಕ ಪರೀಕ್ಷೆ ಮತ್ತು ಪ್ರಯೋಗಗಳ ಅಂಕಗಳನ್ನು ಯಾಕೆ ಒಟ್ಟುಗೂಡಿಸುತ್ತೀರಿ ಎಂದು ಯಾವ ವಿದ್ಯಾರ್ಥಿಯೂ ಕೇಳುವುದಿಲ್ಲ. ಈ ಮಾದರಿಯಲ್ಲಿಯೇ ಸರ್ಕಾರವು ಪರೀಕ್ಷೆಗಳ ಅಂಕಗಳಿಗೆ ಕೆಲವು ಬೇರೆ ಅಂಕಗಳನ್ನು ಕೂಡಿಸುತ್ತದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಿನ್ನೆಲೆಯನ್ನು ಆಧರಿಸಿ ಈ ಅಂಕಗಳನ್ನು ಸೇರಿಸಲಾಗುತ್ತದೆ. ವಿದ್ಯಾರ್ಥಿಯೊಬ್ಬ ಚಾರಿತ್ರಿಕವಾಗಿ ಶಿಕ್ಷಣದಿಂದ ವಂಚಿತನಾಗಿರುವ ಸಮುದಾಯವೊಂದರಿಂದ ಬಂದಿದ್ದರೆ ಆ ಗುಣಕ್ಕಾಗಿ ಅವನಿಗೆ ಕೆಲವು ಅಂಕಗಳನ್ನು ಸೇರಿಸಲಾಗುತ್ತದೆ. ಅಭ್ಯರ್ಥಿಯು ಮಹಿಳೆ ಎಂದು ಅಥವ ಪರಿಶಿಷ್ಟ ಜಾತಿ ಅಥವ ಪಂಗಡಗಳಿಗೆ ಸೇರಿರುವರೆಂದು ಕೆಲವು ಅಂಕಗಳನ್ನು ಸೇರಿಸಬಹುದು. ಮೆರಿಟ್ ಎನ್ನುವುದು ಪರೀಕ್ಷೆಯ ಅಂಕಗಳಿಗಿಂತ ಹೆಚ್ಚಿನದ್ದು, ಬೇರೆ ರೀತಿಯದ್ದು ಎಂಬುದನ್ನು ಸ್ಪಷ್ಟಪಡಿಸುವ ಸರ್ಕಾರದ ರೀತಿ ಇದು. ಸರ್ಕಾರವು ಮೆರಿಟ್ ಪಡೆದುಕೊಳ್ಳುವುದು ಮೀಸಲಾತಿಯನ್ನು ನೀಡುವುದರ ಮುಖಾಂತರ. ಮೀಸಲಾತಿಯ ನಿರ್ವಹಣೆಯಲ್ಲಿ ಸಮಸ್ಯೆಗಳು ಇಲ್ಲದಿಲ್ಲ. ಆದರೆ ಆ ಸಮಸ್ಯೆ ಗಳನ್ನು ಮುಂದು ಮಾಡಿ ಕೊಂಡು ಮೀಸಲಾತಿ ಒದಗಿಸುವ ನ್ಯಾಯ ವನ್ನು ನಾವು ಕಡೆಗಣಿಸ ಲಾಗುವುದಿಲ್ಲ. ಈ ಸಮಸ್ಯೆಗಳನ್ನು ಬಗೆಹರಿಸಲು ನಾವು ಪ್ರಯತ್ನಿಸಬಹುದು ಆದರೆ ಮೀಸಲಾತಿಯನ್ನೇ ಅನ್ಯಾಯ ಎಂದು ಕರೆಯುವುದರಿಂದ ಈ ಸಮಸ್ಯೆಗಳು ಪರಿಹಾರ ಆಗುವುದಿಲ್ಲ. ಅಷ್ಟೇ ಅಲ್ಲ, ಅಸಮಾನತೆ ಇರುವ ಸಮಾಜದಲ್ಲಿ ಮೀಸಲಾತಿಯ ತತ್ವಕ್ಕೊಂದೇ ನ್ಯಾಯವನ್ನು ಒದಗಿಸಲು ಸಾಧ್ಯ.ಬಡವರಿಗಷ್ಟೇ ಮೀಸಲಾತಿಯೇ?

ಮೀಸಲಾತಿ ವಿರೋಧಿಗಳು ಇನ್ನೂ ಎರಡು ವಿಚಾರಗಳನ್ನು ಪ್ರಮುಖವಾಗಿ ಹೇಳುತ್ತಾರೆ. ಮೊದಲನೆಯದಾಗಿ ಮೀಸಲಾತಿ ಪಡೆಯಬಹುದಾದ ಸಮುದಾಯಗಳಲ್ಲಿನ ಶ್ರೀಮಂತರ ಮಕ್ಕಳು ಮೀಸಲಾತಿ ಯನ್ನು ಬಳಸಿಕೊಳ್ಳ ಬಾರದು. ಎರಡನೆ ಯದಾಗಿ ಮೀಸಲಾತಿಯ ಪರಿಧಿಯಲ್ಲಿ ಇರದ ಸಮುದಾಯಗಳ ಬಡವರ ಮಕ್ಕಳಿಗೂ ಮೀಸಲಾತಿ ಸಿಗುವಂತೆ ಆಗಬೇಕು. ಅಂದರೆ ಈ ವಾದವು ಮೀಸಲಾತಿಯನ್ನು ಜಾತಿಯ ಬದಲಿಗೆ ವರ್ಗದೊಟ್ಟಿಗೆ ತಳುಕು ಹಾಕುತ್ತದೆ. ಆದರೆ ಮೊದಲನೆಯದಾಗಿ, ಮೀಸಲಾತಿ ಪಡೆಯ ಬಹುದಾದ ಸಮುದಾಯಗಳಿಂದ ಬಂದೂ ಮೀಸಲಾಗಿರುವ ಸೀಟುಗಳನ್ನು ಬಳಸಿಕೊಳ್ಳ ದಿರುವ ಅಭ್ಯರ್ಥಿಗಳ ಸಂಖ್ಯೆ ದೊಡ್ಡದೇ ಇದೆ. ಇವರಲ್ಲಿ ಎಷ್ಟು ಜನರು ಮೀಸಲಾತಿಯನ್ನು ಬಳಸಿಕೊಳ್ಳದೇ ಜನರಲ್ ಕೋಟಾದಲ್ಲಿಯೇ ಸೀಟನ್ನು ಪಡೆದಿದ್ದಾರೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು.ಎರಡನೆಯದಾಗಿ, ಮೀಸಲಾತಿಯು ಶ್ರೀಮಂತಿಕೆ-ಬಡತನಕ್ಕೆ ಸಂಬಂಧಿಸಿದ್ದಲ್ಲ ಬದಲಿಗೆ ಶಿಕ್ಷಣದ ಲಭ್ಯತೆಗೆ ಸಂಬಂಧಿಸಿದ್ದು. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಎಲ್ಲ ಸಮುದಾಯಗಳಿಗೂ ಸಮಾನ ಪ್ರಾತಿನಿಧ್ಯವನ್ನು ಒದಗಿಸಬೇಕು ಎಂದಿದ್ದರೆ ಶ್ರೀಮಂತಿಕೆ ಬಡತನಗಳನ್ನು ಪರಿಗಣಿಸದೆಯೇ ಅವಕಾಶಗಳನ್ನು ನೀಡಬೇಕಾಗುತ್ತದೆ. ಹೀಗಾದರೆ ಎಲ್ಲರೂ ಉಪಯೋಗಿಸುವ ಉದಾಹರಣೆ, ಬಡ ಬ್ರಾಹ್ಮಣರ ಕತೆ ಏನು? ಅವರ ಮಕ್ಕಳಿಗೆ ಮೀಸಲಾತಿಯ ಸವಲತ್ತು ದೊರೆಯಬೇಡವೇ? ಬಡವರಿಗೆ ಮತ್ತು ಅನನುಕೂಲ ಪರಿಸ್ಥಿತಿಯಲ್ಲಿರುವವರಿಗೆ ಸವಲತ್ತುಗಳು ದೊರೆಯುವಂತಾಗಬೇಕು, ಅವರಿಗೆ ಶಿಕ್ಷಣ ಸಿಗಬೇಕು ಎಂಬುದರ ಬಗ್ಗೆ ಯಾವ ಅನುಮಾನಗಳೂ ಇಲ್ಲ. ಏಕೆಂದರೆ ಶಿಕ್ಷಣವು ಸಂಪಾದನೆಗೂ ಹೆದ್ದಾರಿ. ನ್ಯಾಯಯುತ ಸಮಾಜವು ಬಡವರು ಶ್ರೀಮಂತರೆನ್ನದೇ ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಬೇಕು. ಆದರೆ ಬಡ ಬ್ರಾಹ್ಮಣ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ದೊರೆಯಬೇಕಾದ ಬೆಂಬಲವು ದೇಶದಾದ್ಯಂತ ಇರುವ ಬಡ ವಿದ್ಯಾರ್ಥಿಗಳನ್ನು ಬೆಂಬಲಿಸುವ ವ್ಯವಸ್ಥೆಯ ಭಾಗವಾಗಬೇಕು. ಮೀಸಲಾತಿಗೂ ಬಡತನಕ್ಕೂ ನೇರಾನೇರ ಸಂಬಂಧವಿಲ್ಲ. ಶಿಕ್ಷಣವು ಯಾರಿಗೆ ಲಭ್ಯವಿರಲಿಲ್ಲವೋ ಅಂಥವರಿಗೆ ಸೂಕ್ತ ಪ್ರಾತಿನಿಧ್ಯವನ್ನೊದಗಿಸುವುದು ಮೀಸಲಾತಿಯ ಉದ್ದೇಶ. ಬಡ ಬ್ರಾಹ್ಮಣರಿಗೆ ಶಿಕ್ಷಣ ದೊರೆಯುವಂತಾಗಲು ಸರ್ಕಾರವು ಖಂಡಿತಾ ಬೆಂಬಲಿಸಬೇಕು. ಆದರೆ ಮೀಸಲಾತಿ ಯೋಜನೆಯೇ ಅದನ್ನು ಮಾಡಬೇಕು ಎಂದು ನಾವು ತಪ್ಪಾಗಿ ಅಪೇಕ್ಷಿಸಬಾರದು. ಮೀಸಲಾತಿ ಇರುವುದು ಶಿಕ್ಷಣ ಕ್ಷೇತ್ರದಲ್ಲಿ ಎಲ್ಲ ಸಮುದಾಯಗಳಿಗೂ ಸಮಾನ ಪ್ರಾತಿನಿಧ್ಯ ಸಿಗುವಂತೆ ನೋಡಿಕೊಳ್ಳಲು ಮಾತ್ರ.ಹಲವು ವರ್ಷಗಳ ಕಾಲ ಐಐಟಿ ಮಂತಾದ ಸಂಸ್ಥೆಗಳಲ್ಲಿ ಶಿಕ್ಷಣವನ್ನು ಸಬ್ಸಿಡೈಸ್ ಮಾಡುವ ಮುಖಾಂತರ ನಾವು ಮೆರಿಟ್‌ವಂತರೆಂಬ ಹಣೆಪಟ್ಟಿಯನ್ನು ಹೊತ್ತುಕೊಂಡ ದೊಡ್ಡ ಸಂಖ್ಯೆಯ ಜನರನ್ನು ಉತ್ಪಾದಿಸಿದ್ದೇವೆ. ಅದರಲ್ಲಿ ಹೆಚ್ಚಿನವರು ಮುಂದುವರೆದ ಜಾತಿಗೆ ಸೇರಿದವರು. ಅವರ ಶಿಕ್ಷಣವೆಲ್ಲವೂ ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದ್ದು. ಈ ಶಿಕ್ಷಣವು ಅವರನ್ನು ಸತ್ಪ್ರಜೆಗಳನ್ನಾಗಿ ಮಾಡಿದೆಯೇ, ಒಳ್ಳೆಯ ಮನುಷ್ಯರನ್ನಾಗಿಸಿದೆಯೇ? ಈ ವಿದ್ಯಾರ್ಥಿಗಳಿಗೆ ಯಾವುದೋ ಒಂದು ಶಿಸ್ತಿನಲ್ಲಿ ಮಾತ್ರ ಯೋಚಿಸಲು ಮಾತ್ರ ಕಲಿಸಲಾಗುತ್ತದೆ. ಮೆರಿಟ್‌ನ ಮೇಲಿನ ಆಸೆಗಾಗಿ ಅವರನ್ನು ಕಲೆ, ಸಾಹಿತ್ಯ, ಸಂಗೀತ ಮುಂತಾದವುಗಳಿಂದ ದೂರ ಇಡಲಾಗುತ್ತದೆ. ಅವರಿಗೆ ಸಾಮಾಜಿಕ ನಡವಳಿಕೆಗಳು ಅಥವ ಸಾಮಾಜಿಕ ಜವಾಬ್ದಾರಿಗಳ ಮೂಲಭೂತ ಪಾಠಗಳನ್ನೂ ಕಲಿಸುವುದಿಲ್ಲ. ಬದುಕನ್ನು ನೈತಿಕವಾಗಿ ಬಾಳುವುದು ಹೇಗೆಂಬುದನ್ನು ಕಲಿಸುವುದಿಲ್ಲ? ಮೆರಿಟ್ ಅಂದರೆ ಇದೇನಾ? ಅದೇ ಹೊತ್ತಿಗೆ ಸರ್ಕಾರವು ಸಮಾಜಶಾಸ್ತ್ರ, ಮಾನವಿಕ ಶಾಸ್ತ್ರಗಳು, ಕಲೆ ಮುಂತಾದ ಶಿಸ್ತುಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ನೀಡುವಂತೆ ಬೆಂಬಲವನ್ನು ನೀಡುವುದಿಲ್ಲ ಎಂಬುದನ್ನೂ ನಾವು ಮರೆಯಬಾರದು.ಇವೆಲ್ಲವುಗಳ ಜೊತೆಗೆ ಸಮಾಜವು ಮೀಸಲಾತಿಯನ್ನು ಪಡೆದುಕೊಂಡವರ ಬಗ್ಗೆ ಕೆಟ್ಟ ಚಿತ್ರವೊಂದನ್ನು ರೂಪಿಸಿಬಿಟ್ಟಿದೆ. ನೀವು ಮೀಸಲಾತಿ ಪಡೆದುಕೊಂಡವರಾ ಎಂದು ವೈದ್ಯರನ್ನು ಕೇಳುವ ರೋಗಿಗಳು ಅವರು ಮೀಸಲಾತಿ ಪಡೆದುಕೊಂಡಿದ್ದೇ ಆದರೆ ಅವರಿಂದ ಚಿಕಿತ್ಸೆ ಪಡೆಯಲು ನಿರಾಕರಿಸುತ್ತಾರೆ. ತರಗತಿಯೊಂದರಲ್ಲಿ ಮೀಸಲಾತಿಯಲ್ಲಿ ಸೀಟು ಪಡೆದವರ ಬಗ್ಗೆ ಇತರ ಸಹಪಾಠಿಗಳು ಕೀಳಾಗಿ ನೋಡುತ್ತಾರೆ, ಆ ಮೂಲಕ ಸಾಮಾಜಿಕ ನ್ಯಾಯವನ್ನೊದಗಿಸುವ ವ್ಯವಸ್ಥೆಯ ಪಾಲುದಾರರಾಗಿರುವುದಕ್ಕಾಗಿ ಅವರು ತಪ್ಪಿತಸ್ಥ ಮನೋಭಾವವನ್ನು ಹೊಂದುವಂತೆ ಮಾಡುತ್ತಾರೆ.

ನಾವು ಭವಿಷ್ಯದಲ್ಲಿ ಬಯಸುವ ಭಾರತ ಈ ರೀತಿಯದ್ದೇ?ಕೊನೆಯದಾಗಿ, ಮೀಸಲಾತಿಯ ಲಾಭವನ್ನು ಪಡೆದುಕೊಂಡವರು ಅದು ತಮಗೆ ತಮ್ಮನ್ನು ಟೀಕಿಸುವವರಂತೆ ಆಗದಿರಲು ನೀಡಿದ ಅಪೂರ್ವ ಅವಕಾಶ ಎಂಬುದನ್ನು ಮನಗಾಣಬೇಕು. ಮೆರಿಟ್‌ನ ಪರಿಕಲ್ಪನೆಗೆ ಬೇರೆಯದೇ ಅರ್ಥವನ್ನು ನೀಡಲು ಅವರಿಗೆ ಸಾಧ್ಯವಿದೆ. ತಾವು ಉತ್ತಮ ಪ್ರಜೆಗಳೆಂದು ತೋರಿಸಿಕೊಳ್ಳುವ ಅವಕಾಶ ಅವರಿಗಿದೆ. ಹಾಗೆ ಮಾಡುವುದು ಅವರ ನೈತಿಕ ಕರ್ತವ್ಯ ಕೂಡಾ.

ದುಡ್ಡು ದೊರಕಿಸುವ ಮೀಸಲಾತಿ

>ಮೀಸಲಾತಿಯ ಕುರಿತ ಎಲ್ಲಾ ಚರ್ಚೆಗಳಲ್ಲಿಯೂ ಸಾಮಾಜಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಸರ್ಕಾರ ಮೀಸಲಿರಿಸುವ ಸೀಟುಗಳ ಬಗ್ಗೆ ಮಾತ್ರ ಚರ್ಚೆ ನಡೆಯುತ್ತದೆ. ಆದರೆ ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯಗಳಿಂದ ಆರಂಭಿಸಿ ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಇರುವ `ಪೇಮೆಂಟ್ ಸೀಟ್'ಗಳ ವಿಷಯದಲ್ಲಿ ಯಾರೂ ಮಾತನಾಡುವುದಿಲ್ಲ.

ಅವಕಾಶ ವಂಚಿತರಿಗಾಗಿ ಸರ್ಕಾರ ಮೀಸಲಿಡುವ ಸೀಟುಗಳಿಂದಾಗಿ ತಮ್ಮ ಅವಕಾಶವನ್ನು ಕಳೆದುಕೊಂಡೆವು ಎಂದು ಬೊಬ್ಬೆ ಹೊಡೆಯುವವರು ಪೇಮೆಂಟು ಸೀಟುಗಳಿಂದಾಗಿ ಹಣವಿಲ್ಲದವರಿಗೆ ಅವಕಾಶ ತಪ್ಪಿ ಹೋಯಿತು ಎಂದು ಹೇಳುವುದಿಲ್ಲ. ಪರಿಣತಿ ಇರಬೇಕಾದ ಕ್ಷೇತ್ರಗಳಲ್ಲಿ ಮೀಸಲಾತಿ ಇರಬಾರದು ಎಂದು ವಾದಿಸುವವರು ಆ ಕ್ಷೇತ್ರಗಳಲ್ಲಿ ಹಣಕಾಸಿನ ಅನುಕೂಲವಿರುವವರಿಗೆ ವಿಶೇಷ ಅವಕಾಶವೂ ಇರಬಾರದು ಎಂಬುದನ್ನೇಕೆ ಮರೆತುಬಿಡುತ್ತಾರೆ. ದೇವರನ್ನು ಕಾಣುವುದಕ್ಕೂ ವಿಶೇಷ ದರ್ಶನದ ಟಿಕೇಟಿರುವ ದೇಶದಲ್ಲಿ ಶೋಷಿತರಿಗೆ ಅನುಕೂಲ ಕಲ್ಪಿಸಲು ಹೊರಟಾಗ ಮಾತ್ರ ಕೆಲವರಿಗೆ ಸಮಾನತೆ ನೆನಪಾಗುವುದೇ ತಮಾಷೆಯ ಸಂಗತಿ.

-ಎಲ್. ಚಂದ್ರಶೇಖರ, ಮೈಸೂರು.


>ಅಲ್ಪಸಂಖ್ಯಾತ ಮೇಲ್ಜಾತಿಗಳು

ರಾಜಕಾರಣದಿಂದ ಆರಂಭಿಸಿ ಸರ್ಕಾರ ಉದ್ಯೋಗದ ತನಕ ಒಂದು ಕಾಲದಲ್ಲಿ ಪ್ರಬಲರಾಗಿದ್ದ ಬ್ರಾಹ್ಮಣರು ಈಗ ಆ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ. ಅನಿವಾರ್ಯವಾಗಿ ವ್ಯಾಪಾರದಿಂದ ತೊಡಗಿ ತಂತ್ರಜ್ಞಾನದ ತನಕದ ಕ್ಷೇತ್ರಗಳಲ್ಲಿ ಅವರು ಸಕ್ರಿಯರಾಗಿದ್ದಾರೆ. ಒಂದು ವೇಳೆ ಸಮಾನ ಅವಕಾಶಕ್ಕಾಗಿಯೇ ಮೀಸಲಾತಿ ಇದೆ ಎಂಬುದಾದರೆ ರಾಜಕೀಯ ಕ್ಷೇತ್ರದಲ್ಲಿ ಬ್ರಾಹ್ಮಣರಿಗೆ ಕೆಲ ಮಟ್ಟಿಗಿನ ಪ್ರಾತಿನಿಧ್ಯವನ್ನು ಮೀಸಲಾತಿಯ ಅನ್ವಯ ನೀಡಬೇಕು.

ಈ ಕಾಲದಲ್ಲಿ ಮೇಲ್ಜಾತಿಗಳೆಂದರೆ ಸಂಖ್ಯೆಯಲ್ಲಿ ದೊಡ್ಡದಾಗಿರುವವರದ್ದು ಮಾತ್ರ. ಕರ್ನಾಟಕದ ರಾಜಕಾರಣವನ್ನು ಲಿಂಗಾಯತರು ಮತ್ತು ಒಕ್ಕಲಿಗರು ನಿಯಂತ್ರಿಸವಂತೆ ಇನ್ನಾರಿಗಾದರೂ ನಿಯಂತ್ರಿಸಲು ಸಾಧ್ಯವೇ? ಇವರ ನಂತರದ ಸಾಲಿನಲ್ಲಿ ಬರುವವರು ಕುರುಬರು, ಈಡಿಗರು, ದಲಿತರು ಹೀಗೆ ಪಟ್ಟಿ ಮುಂದುವರಿಯುತ್ತದೆ. ಈ ಎಲ್ಲಾ ಸಮುದಾಯಗಳಷ್ಟೇ ಸಂಖ್ಯೆಯಲ್ಲಿ ಪ್ರಬಲವಾಗಿದ್ದರೂ ಮುಸ್ಲಿಮರಿಗಿನ್ನೂ ರಾಜಕೀಯದ ಮೇಲೆ ಭಾರೀ ಪರಿಣಾಮವನ್ನು ಮೂಡಿಸಲು ಸಾಧ್ಯವಾಗಿರುವಂತೆ ಕಾಣಿಸುವುದಿಲ್ಲ. ಇಂಥದ್ದೊಂದು ಪರಿಸ್ಥಿತಿ ಇರುವಾಗ ಚಾರಿತ್ರಿಕವಾಗಿ `ಮೇಲ್ಜಾತಿ' ಎನಿಸಿಕೊಂಡಿದ್ದ ಯಾವ ಸಮುದಾಯವೂ ಈಗಿನ ಕಾಲದಲ್ಲಿ `ಮೇಲ್ಜಾತಿ' ಆಗಿರಲು ಸಾಧ್ಯವಿಲ್ಲ.

-ಕೆ. ರಮಾನಂದ, ಬೆಂಗಳೂರು.

ಪ್ರತಿಕ್ರಿಯಿಸಿ (+)