ಮಂಗಳವಾರ, ಮೇ 17, 2022
26 °C

ಮೆಲಾಸ್ಮಾ ಮನೆ ಮದ್ದು

ಡಾ. ಪ್ರಾಂಜಲ್ ಶಂಷೇರ್ Updated:

ಅಕ್ಷರ ಗಾತ್ರ : | |

ನಿಮ್ಮ ಗಲ್ಲ, ಮೂಗು, ಹಣೆ ಮತ್ತು ತುಟಿಯ ಮೇಲ್ಭಾಗದಲ್ಲಿ ಕಪ್ಪಾದ ಒರಟು ಕಲೆಗಳು ಮೂಡಿರುವುದಕ್ಕೆ ಕಾರಣ ಏನಿರಬಹುದು ಎಂದು ಚಿಂತಿಸುತ್ತಿದ್ದೀರಾ? ಅದು ಮೆಲಾಸ್ಮಾ. ಇದು ಯಾರಿಗೆ ಬೇಕಾದರೂ ಬರಬಹುದು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರಲ್ಲಿ, ಅದರಲ್ಲೂ ಗರ್ಭಿಣಿಯರಲ್ಲಿ ಮೆಲಾಸ್ಮಾ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಇದನ್ನು `ಪ್ರೆಗ್ನೆನ್ಸಿ ಮಾಸ್ಕ್' ಎಂದು ಸಹ ಕರೆಯುತ್ತಾರೆ.ವಿಚಿತ್ರವೆಂದರೆ, ವೈದ್ಯಕೀಯ ಕ್ಷೇತ್ರದ ಪರಿಣತರಿಗೂ ಮೆಲಾಸ್ಮಾಗೆ ನಿರ್ದಿಷ್ಟ ಕಾರಣ ಏನೆಂಬುದು ತಿಳಿದಿಲ್ಲ. ಬಹುಶಃ ಹಾರ್ಮೋನ್‌ಗಳು (ಈಸ್ಟ್ರೋಜನ್ ಮತ್ತು ಪ್ರೊಜೆಸ್ಟರಾನ್) ಇದಕ್ಕೆ ಪ್ರಮುಖ ಕಾರಣ ಇರಬಹುದು ಎಂದು ಪರಿಣತರು ನಂಬಿದ್ದಾರೆ. ತಮ್ಮ ಜೀವನದ ಯಾವುದೇ ಹಂತದಲ್ಲಿ ಮೌಖಿಕ (ಓರಲ್) ಗರ್ಭ ನಿರೋಧಕಗಳನ್ನು ತೆಗೆದುಕೊಂಡಿರುವ ಮತ್ತು ಮುಟ್ಟು ನಿಲ್ಲುವ ಕಾಲದಲ್ಲಿರುವ ಮಹಿಳೆಯರು ಬಹುವಾಗಿ ಮೆಲಾಸ್ಮಾಗೆ ತುತ್ತಾಗುತ್ತಾರೆ.ಹಾಗಿದ್ದರೂ ಈ ಸಮಸ್ಯೆ ಯಾರಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದು. ಮುಖ್ಯವಾಗಿ ಕಪ್ಪು ತ್ವಚೆಯ ಮಹಿಳೆಯರು ಮೆಲಾಸ್ಮಾದ ತೊಂದರೆಯನ್ನು ಹೆಚ್ಚಾಗಿ ಎದುರಿಸುತ್ತಾರೆ. ಇದು ಬಹುತೇಕ ಮುಖದ ಮೇಲೆ ಕಾಣಿಸಿಕೊಳ್ಳುತ್ತದೆ ಮತ್ತು ಒಂದು ರೀತಿಯ ಚಿತ್ರದಂತೆ ಗೋಚರಿಸುತ್ತದೆ.ಸಂತಸದ ವಿಷಯವೆಂದರೆ, ನಿಮ್ಮ ಹಾರ್ಮೋನುಗಳು ಯಥಾಸ್ಥಿತಿಗೆ ಮರಳಿದಾಗ ಮೆಲಾಸ್ಮಾ ಮರೆಯಾಗುತ್ತದೆ. ಹಾಗಿದ್ದರೂ ಇದು ತಾತ್ಕಾಲಿಕ ಮಾತ್ರ. ಏಕೆಂದರೆ ಜೀವನದ ಯಾವುದೇ ಹಂತದಲ್ಲಿ ಬೇಕಾದರೂ ನಿಮ್ಮ ಹಾರ್ಮೋನುಗಳಲ್ಲಿ ಅಸಮತೋಲನ ಉಂಟಾದರೆ ಮೆಲಾಸ್ಮಾ ಮತ್ತೆ ಕಾಣಿಸಿಕೊಳ್ಳುತ್ತದೆ. ಹಾಗೇ, ನಮ್ಮ ದೇಹದಲ್ಲಿನ ಹಾರ್ಮೋನುಗಳ ಚಟುವಟಿಕೆ ನಮ್ಮ ನಿಯಂತ್ರಣವನ್ನು ಮೀರಿದ್ದು ಎಂಬ ಮಾತಿದೆ. ಆದರೂ ಕೆಲವು ಪಥ್ಯ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ದೇಹದ ಅಪಾಯಕಾರಿ ಚಟುವಟಿಕೆಗಳನ್ನು ನಿಯಂತ್ರಿಸಬಹುದು.ಗೃಹ ಪರಿಹಾರಗಳು

ನಿಮ್ಮ ತ್ವಚೆಯ ಮೇಲ್ಪದರದಲ್ಲಿ ಇರುವ ನಿರ್ಜೀವ ಜೀವಕೋಶಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ ಮುಖದ ತ್ವಚೆಯನ್ನು ಆಗಿಂದಾಗ್ಗೆ ಉಜ್ಜುತ್ತಾ ಇರಿ (ಫೇಷಿಯಲ್ ವೇಳೆ ಮಾಡುವ ರೀತಿಯಲ್ಲಿ) ಹೀಗೆ ಮಾಡುವುದರಿಂದ ನಿರ್ಜೀವ, ಹಳೆಯದಾದ ಮತ್ತು ಕಪ್ಪಾದ ತ್ವಚೆಯನ್ನು ತೊಡೆದು ಹಾಕಬಹುದು. ಅಲ್ಲದೆ ಜೀವಕೋಶಗಳ ನವೀಕರಣ ಮತ್ತು ತಾಜಾ ತ್ವಚೆಯ ಸೃಷ್ಟಿಗೆ ದಾರಿಯಾಗುತ್ತದೆ.ಸೂರ್ಯನ ಕಿರಣಗಳಿಂದ ಸಮರ್ಪಕವಾದ ರಕ್ಷಣೆಯಿಲ್ಲದೆ ಮನೆಯಿಂದ ಹೊರಗೆ ಹೋಗಬೇಡಿ. ಹಾಗೇ ಅಗತ್ಯಕ್ಕಿಂತ ಹೆಚ್ಚಾಗಿ ತ್ವಚೆಯನ್ನು ಸೂರ್ಯನ ಕಿರಣಗಳಿಗೆ ಒಡ್ಡಬೇಡಿ. ನಿಮ್ಮ ತ್ವಚೆ ಸದಾ ತೇವಾಂಶದಿಂದ ಕೂಡಿರಬೇಕಾದರೆ ಹೆಚ್ಚು ಹೆಚ್ಚು ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.ಸಿಹಿ ತಿಂಡಿಗಳು, ಎಣ್ಣೆ ಪದಾರ್ಥ, ಕರಿದ ಆಹಾರ ಮತ್ತು ಕಾರ್ಬನ್‌ಯುಕ್ತ ಅಂಶಗಳಿಂದ ಸಾಧ್ಯವಾದಷ್ಟೂ ದೂರವಿರಿ. ನಿಮ್ಮ ಆಹಾರವು ಮಸೂರ ಅವರೆ, ಕಂದು ಅಕ್ಕಿ, ಗೋಧಿ, ಆವಕಾಡೊ, ಕಿಡ್ನಿ ಬೀನ್ಸ್, ಮುಸುಕಿನ ಜೋಳ, ಅವರೆ ಕಾಳು, ಹಸಿರು ಹೂಕೋಸು, ಸೇಬು, ಬಾದಾಮಿ, ಬಾರ್ಲಿಯಂತಹ ಹೆಚ್ಚಿನ ಪ್ರಮಾಣದ ಫೈಬರ್ ಒಳಗೊಂಡ ಪದಾರ್ಥಗಳನ್ನು ಹೊಂದಿರಬೇಕು. ಈ ರೀತಿಯ ಆಹಾರಗಳು ಹೆಚ್ಚಿನ ಪ್ರಮಾಣದಲ್ಲಿ ಈಸ್ಟ್ರೋಜನ್‌ಗಳು ಸಂಗ್ರಹ ಆಗುವುದನ್ನು ತಡೆಯಬಲ್ಲವು.ನೈಸರ್ಗಿಕ ಚಿಕಿತ್ಸೆ

ನೀವು ಮೆಲಾಸ್ಮಾದಿಂದ ಬಳಲುತ್ತಿದ್ದರೆ, ಹತ್ತಿರದ ಔಷಧದ ಅಂಗಡಿಗೆ ಹೋಗಬೇಡಿ. ಬದಲಾಗಿ ನಿಮ್ಮ ಅಡುಗೆ ಮನೆಯತ್ತ ಹೆಜ್ಜೆ ಹಾಕಿ!

ಎರಡು ಟೇಬಲ್ ಚಮಚ ಕಡಲೆ ಹಿಟ್ಟು, ಒಂದು ಟೀ ಚಮಚ ಅರಿಶಿಣ, ಅರ್ಧ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಅದನ್ನು  ಮುಖದ ಮೇಲೆ ಹಚ್ಚಿಕೊಂಡು 20 ನಿಮಿಷ ಹಾಗೇ ಬಿಡಿ. ಈ ಪ್ರಕ್ರಿಯೆಯನ್ನು ವಾರದಲ್ಲಿ ಕನಿಷ್ಠ 4 ಬಾರಿ ಮಾಡಿ.ನಿಮ್ಮ ಸ್ಕ್ರಬ್ ಕ್ಲೆನ್ಸರ್ ಜೊತೆಗೆ ನಿಂಬೆ ರಸ ಅಥವಾ ಸೇಬಿನ ಪೇಸ್ಟ್‌ನ್ನೂ ಬಳಸಬಹುದು. ಈ ವೇಳೆ ನಿಮ್ಮ ತ್ವಚೆಯ ಮೇಲೆ, ಅದರಲ್ಲೂ ಕಪ್ಪು ಕಲೆಗಳು ಇರುವ ಭಾಗದಲ್ಲಿ ವೃತ್ತಾಕಾರವಾಗಿ ಉಜ್ಜಿಕೊಳ್ಳುವುದನ್ನು ಮರೆಯಬೇಡಿ. ಈ ಪ್ರಕ್ರಿಯೆಯನ್ನು ವಾರದಲ್ಲಿ ಎರಡು ಬಾರಿ ಮಾಡಿ. ಹಾಗೇ ನಿಮ್ಮ ತ್ವಚೆ ಒಣಗುವಷ್ಟು ಪ್ರಮಾಣದ ನಿಂಬೆ ರಸ ಬಳಸಬೇಡಿ.ಲೋಳೆಸರದ (ಆಲೋವೆರಾ) ರಸವು ಅಂಟಿನ ರೀತಿಯ ಪ್ಯಾಲಿಸ್ಯಾಕರೈಡ್‌ಗಳನ್ನು ಹೊಂದಿರುತ್ತದೆ. ಇದು ನಿಮ್ಮ ತ್ವಚೆಯ ಕಪ್ಪು ಕಲೆಗಳನ್ನು ಬಿಳುಪಾಗಿಸುವಲ್ಲಿ ಹೆಚ್ಚು ಪರಿಣಾಮಕಾರಿ. ಕಪ್ಪು ಕಲೆಗಳ ಮೇಲೆ ಲೋಳೆಸರವನ್ನು ಹಚ್ಚಿಕೊಳ್ಳಿ. 15 ನಿಮಿಷಗಳ ನಂತರ ಬಿಸಿ ನೀರಿನಲ್ಲಿ ತೊಳೆದುಕೊಳ್ಳಿ.

ಮತ್ತೊಂದು ಅದ್ಭುತ ಪರಿಹಾರವೆಂದರೆ, ಪುಡಿ ಮಾಡಿ ಹಾಲಿನೊಂದಿಗೆ ಬೆರೆಸಿದ ಕಿತ್ತಳೆಯ ಸಿಪ್ಪೆ. ಈ ಮಿಶ್ರಣ ತ್ವಚೆಯ ಬಣ್ಣವನ್ನು ಬದಲಿಸುತ್ತದೆ. ಮುಖಕ್ಕೆ ಹಚ್ಚಿಕೊಂಡು ಸರಿಯಾಗಿ 30 ನಿಮಿಷಗಳ ನಂತರ ಬಿಸಿ ನೀರಿನಲ್ಲಿ ತೊಳೆದುಕೊಳ್ಳಿ.ಮುಖವನ್ನು ಆಗಿಂದಾಗ್ಗೆ ಸ್ವಚ್ಛಗೊಳಿಸಿಕೊಳ್ಳಲು ವೆನಿಗರ್‌ನ್ನು ಬಳಸಬಹುದು. ಸಮ ಪ್ರಮಾಣದ ವೆನಿಗರ್ ಮತ್ತು ನೀರನ್ನು ಬೆರೆಸಿ. ಜತೆಗೆ ನೀವು ಇದನ್ನು ಟೋನರ್‌ಗೆ ಪರ್ಯಾಯವಾಗಿಯೂ ಬಳಸಬಹುದು.ಇ್ಲ್ಲಲಿ ಗಮನಿಸಬೇಕಾದ ಅಂಶವೆಂದರೆ, ಎಲ್ಲ ಮನೆ ಮದ್ದುಗಳೂ ಹೆಚ್ಚು ಸುರಕ್ಷಿತ ಎಂದು ಹೇಳಲಾಗದು. ಏಕೆಂದರೆ ಅವು ನಿಮ್ಮ ತ್ವಚೆಯ ಗುಣಕ್ಕೆ ಹೊಂದಿಕೊಳ್ಳದೆಯೂ ಇರಬಹುದು. ಹೀಗಾಗಿ ಮನೆ ಮದ್ದನ್ನು ಪ್ರಯೋಗಿಸುವ ಮುನ್ನ ನಿಮ್ಮ ಚರ್ಮದ ಅಲರ್ಜಿಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದನ್ನು ಮರೆಯದಿರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.