ಗುರುವಾರ , ಅಕ್ಟೋಬರ್ 17, 2019
26 °C

ಮೆಲ್ಬರ್ನ್‌ನಲ್ಲಿ ಹೊಳೆದ ವಿದರ್ಭ ವಜ್ರ

Published:
Updated:
ಮೆಲ್ಬರ್ನ್‌ನಲ್ಲಿ ಹೊಳೆದ ವಿದರ್ಭ ವಜ್ರ

ಕಲ್ಲಿದ್ದಲು ಗಣಿಗಾರಿಕೆಗೆ ಹೆಸರಾದ ವಿದರ್ಭ ಪ್ರದೇಶದಿಂದ ಬೆಲೆಬಾಳುವ ವಜ್ರವೊಂದು ಭಾರತ ಕ್ರಿಕೆಟ್ ತಂಡಕ್ಕೆ ಸಿಕ್ಕಿದೆ. ಆ ವಜ್ರದ ಹೆಸರು ಉಮೇಶ್ ಯಾದವ್.ಪ್ರತಿ ಗಂಟೆಗೆ 140 ಕಿಲೋಮೀಟರ್  ವೇಗದಲ್ಲಿ ಚೆಂಡನ್ನು ಸ್ವಿಂಗ್ ಮಾಡಬಲ್ಲ ಸಮರ್ಥ ಬೌಲರ್‌ನ ಪ್ರತಾಪಕ್ಕೆ  ಮೆಲ್ಬರ್ನ್‌ನಲ್ಲಿ  ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳು  ಮಂಡಿಯೂರಿದರು. ಆದರೆ ಈ ಸುವರ್ಣಾವಕಾಶವನ್ನು ಬಳಸಿಕೊಳ್ಳದ ಭಾರತ ಸೋತಿದ್ದು ಬೇರೆ ವಿಷಯ.ಪಂದ್ಯದ ಫಲಿತಾಂಶ ಏನೇ ಆದರೂ, ಇಡೀ ಭರತಖಂಡವು ಇಟ್ಟಿದ್ದ ಭರವಸೆಯನ್ನು ಮಾತ್ರ ಬಲಗೈ ವೇಗಿ ಉಮೇಶ್ ಉಳಿಸಿಕೊಂಡಿದ್ದಾರೆ. ಕಲ್ಲಿದ್ದಲು ಗಣಿಯ ಕಾರ್ಮಿಕ ತಿಲಕ್ ಅವರ ಮಗ ಉಮೇಶ್ ಪೊಲೀಸ್ ಅಧಿಕಾರಿಯಾಗುವ ಕನಸಿನೊಂದಿಗೆ ಬೆಳೆದ ಹುಡುಗ.  ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟಿದ್ದು ತಡವಾಗಿಯೇ. 19 ವರ್ಷ ವಯಸ್ಸಿನಲ್ಲಿ ಕ್ರಿಕೆಟ್‌ನತ್ತ ಆಸಕ್ತಿ ಬೆಳೆಸಿಕೊಂಡು ಅತಿ ವೇಗವಾಗಿ ರಾಜ್ಯ ತಂಡದಲ್ಲಿ ತಮ್ಮ ಸ್ಥಾನ ಪಡೆದುಕೊಂಡರು.  ದೇಶದ ತುಂಬ `ಕಿತ್ತಳೆ~ ಹಣ್ಣಿನ ಕಂಪನ್ನು ಪಸರಿಸುವ ವಿದರ್ಭ (ಮಹಾರಾಷ್ಟ್ರದ ಒಂದು ಭಾಗ) ಪ್ರದೇಶದ ಕ್ರಿಕೆಟ್ ತಂಡವು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇನ್ನೂ ಅಂಬೆಗಾಲಿಡುತ್ತಿದೆ. ಆದರೆ ಅಂತಹ ಒಂದು ತಂಡದಿಂದಲೇ ಮೇಲೆದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಉಮೇಶ್ ಸಾಧನೆ ಅಚ್ಚರಿ ಮೂಡಿಸುತ್ತದೆ.ರಟ್ಟೆಯಲ್ಲಿ ತುಂಬಿದ ಕಸುವು ಮತ್ತು ಸ್ವಿಂಗ್ ತಂತ್ರಗಾರಿಕೆಯ ಹದವಾದ ಮಿಶ್ರಣದಿಂದ ಬೌಲಿಂಗ್ ಮಾಡುತ್ತಿದ್ದ ಉಮೇಶ,  2008-09ರ ರಣಜಿ ಋತುವಿನಲ್ಲಿ ತಾವಾಡಿದ ನಾಲ್ಕು ಪಂದ್ಯಗಳಲ್ಲಿಯೇ 20 ವಿಕೆಟ್ ಕಬಳಿಸಿದರು. ಅವರ ಬೌಲಿಂಗ್ ಶೈಲಿ, ವೇಗ, ಪರಿಣಾಮಕಾರಿ ಬೌನ್ಸರ್‌ಗಳು ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸ್ಸಿಗಳ ಗಮನ ಸೆಳೆದವು. 2010ರ ಐಪಿಎಲ್‌ನಲ್ಲಿ ದೆಹಲಿ ಡೇರ್ ಡೆವಿಲ್‌ನಲ್ಲಿ ಸ್ಥಾನ ಪಡೆದ ಈ ಬೌಲರ್‌ಗೆ ಭಾರತ ತಂಡದ ಆಯ್ಕೆದಾರರ ಮನ ಗೆಲ್ಲಲು ಹೆಚ್ಚು ಸಮಯ ಹಿಡಿಯಲಿಲ್ಲ.2010ರ ಮೇ ತಿಂಗಳಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್ ಟೂರ್ನಿಗೆ ಭಾರತ ತಂಡದೊಂದಿಗೆ ವಿಮಾನ ಏರಿದರು. ಪ್ರವೀಣಕುಮಾರ್ ಗಾಯಗೊಂಡಿದ್ದರಿಂದ ಈ ಅವಕಾಶ ಉಮೇಶ್‌ಗೆ ಸಿಕ್ಕಿತ್ತು.ಅದೇ ವರ್ಷ ದಕ್ಷಿಣ ಆಫ್ರಿಕಾಕ್ಕೆ ತೆರಳಿದ ಭಾರತ ಟೆಸ್ಟ್ ತಂಡದಲ್ಲಿಯೂ ಅವರು ಸ್ಥಾನ ಗಳಿಸಿದರು. ಆದರೆ ಅಂಗಳಕ್ಕೆ ಇಳಿಯುವ ಅವಕಾಶ ಸಿಕ್ಕಿದ್ದು ಮಾತ್ರ 2011ರ ಅಕ್ಟೋಬರ್‌ನಲ್ಲಿ ದೆಹಲಿಯಲ್ಲಿ ವಿಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ.ಮೊದಲ ಟೆಸ್ಟ್‌ನಲ್ಲಿ ಎರಡು ಮತ್ತು ಎರಡನೇ ಟೆಸ್ಟ್‌ನ ಎರಡೂ ಇನಿಂಗ್ಸ್ ಸೇರಿ 7 ವಿಕೆಟ್ ಗಳಿಸಿದ್ದರಿಂದ ಆಸ್ಟ್ರೇಲಿಯಾ ವಿಮಾನದ ಟಿಕೆಟ್ ಸಿಗಲು ಪ್ರಮುಖ ಕಾರಣವಾಯಿತು. ತವರು ನೆಲದಲ್ಲಿ ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ  ಮೊದಲ ಮೂರು ಪಂದ್ಯಗಳನ್ನಷ್ಟೇ ಆಡಿದ್ದರು.ಕಟಕ್ ಪಂದ್ಯದಲ್ಲಿ ಕೊನೆಯ ವಿಕೆಟ್‌ಗೆ ವರುಣ್ ಆ್ಯರನ್ ಜೊತೆಗೆ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿ ಭಾರತಕ್ಕೆ ಪಂದ್ಯ ಜಯಿಸುವಲ್ಲಿ ನೆರವಾದ ಉಮೇಶ್, ವಿಶಾಖಪಟ್ಟಣದಲ್ಲಿ ಮೂರು ವಿಕೆಟ್ ಕಬಳಿಸಿ ವಿಂಡೀಸ್‌ಗೆ ಪೆಟ್ಟು ನೀಡಿದರು.ಅಹಮದಾಬಾದಿನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ಅವರದ್ದಾಗಿರಲಿಲ್ಲ. ಆದರೆ ಮುಂದಿನ ಎರಡು ಪಂದ್ಯಗಳನ್ನು ಅವರು ಆಡಲಿಲ್ಲ. ನೇರವಾಗಿ ಆಸ್ಟ್ರೇಲಿಯಾಕ್ಕೆ ತೆರಳಿ ಅಭ್ಯಾಸ ನಡೆಸಿದರು.ಅಲ್ಲಿಯ ಪಿಚ್‌ಗಳ ಮೇಲೆ ತಮ್ಮ ವೇಗದ ಆಸ್ತ್ರಗಳನ್ನು ಪ್ರಯೋಗಿಸುವಲ್ಲಿ ಅವರು ಸಫಲರಾಗಿದ್ದಾರೆ. ವಿದೇಶಿ ನೆಲದಲ್ಲಿ ತಾವಾಡಿದ ಮೊದಲ       ಟೆಸ್ಟ್‌ನಲ್ಲಿಯೇ ಒಟ್ಟು ಏಳು ವಿಕೆಟ್ ಗಳಿಸಿ ಮಿಂಚಿದ್ದಾರೆ. ಅದರಲ್ಲೂ ಎರಡನೇ ಇನಿಂಗ್ಸ್‌ನಲ್ಲಿ (70ಕ್ಕೆ4) ಅವರ ಪ್ರದರ್ಶನವು ಅತ್ಯುತ್ತಮವಾಗಿತ್ತು.ಆಸೀಸ್ ಮಾಜಿ ಬೌಲರ್ ಗ್ಲೆನ್ ಮೆಕ್‌ಗ್ರಾ ಅವರಂತೆ ಆಗುವ ಕನಸು ಕಾಣುತ್ತಿರುವ ಉಮೇಶ್, ಆಸ್ಟ್ರೇಲಿಯಾ ನೆಲದಲ್ಲಿಯೇ  ಪ್ಯಾಟಿಸನ್, ಬೆನ್ ಹಿಲ್ಫೆನಾಸ್ ಅವರಿಗೆ ಸರಿಸಾಟಿಯಾಗಿ ಬೌಲಿಂಗ್ ಮಾಡಿದರು.`ಅನುಭವಿ ಜಹೀರ್ ಖಾನ್ ಮಾರ್ಗದರ್ಶನದಲ್ಲಿ ಬೌಲಿಂಗ್ ಮಾಡುವುದೇ ಒಂದು ವಿಶಿಷ್ಟ ಅನುಭವ~ ಎಂದು ಆಸೀಸ್‌ಗೆ ತೆರಳುವ ಮುನ್ನವೇ ಉಮೇಶ್ ಹೇಳಿದ್ದರು. ಅದರಂತೆ ಗಾಯದಿಂದ ಚೇತರಿಸಿಕೊಂಡು ಬಂದಿರುವ ಜಹೀರ್‌ಗೆ ಉತ್ತಮ ಸಾಥ್ ನೀಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಭವಿಷ್ಯದ ಭರವಸೆಯಾಗಿಯೂ ಅವರು ಕಾಣುತ್ತಿದ್ದಾರೆ.

Post Comments (+)