ಮೇಘನಾ ವಿಲಾಸ

6

ಮೇಘನಾ ವಿಲಾಸ

Published:
Updated:
ಮೇಘನಾ ವಿಲಾಸ

`ನಾಯಕಿ ಪಾತ್ರವೆಂದರೆ ಕೇವಲ ಗ್ಲಾಮರಸ್‌ಗೆ ಸೀಮಿತವಲ್ಲ. ಅದರಲ್ಲಿ ನಮ್ಮ ಅಭಿನಯದ ಸಾಮರ್ಥ್ಯ ತೋರಲು ಅವಕಾಶವೂ ಇರಬೇಕು. ಅಂತಹ ಚಿತ್ರಗಳ ನಿರೀಕ್ಷೆಯಲ್ಲೇ ಇರುವವಳು ನಾನು. ಈಗ ಅದಕ್ಕೊಂದು ಪರಿಪೂರ್ಣ ಎನಿಸುವಂತಹ ವೇದಿಕೆ ಸಿಕ್ಕಿದೆ~- ಉದ್ವೇಗ ಹಾಗೂ ಸಂಭ್ರಮ ಬೆರೆತ ಸ್ವರದಲ್ಲಿ ಮಾತನಾಡಿದರು ನಟಿ ಮೇಘನಾ ಗಾಂವ್ಕರ್.`ಮೈಲಾರಿ~ ಚಂದ್ರು ನಿರ್ದೇಶನದ `ಚಾರ್‌ಮಿನಾರ್~ಗೆ ಮೇಘನಾ ನಾಯಕಿ. `ನೆನಪಿರಲಿ~ ಪ್ರೇಮ್‌ಗೆ ಜೋಡಿಯಾಗಿ ನಟಿಸುತ್ತಿರುವ ಅವರು `ಸಿನಿಮಾ ರಂಜನೆ~ಯೊಂದಿಗೆ ಸಿನಿ ಬದುಕಿನ ಕಹಾನಿಯನ್ನು ಹಂಚಿಕೊಂಡರು.

`ನಮ್ ಏರಿಯಾದಲ್ಲಿ ಒಂದಿನ~, `ವಿನಾಯಕ ಗೆಳೆಯರ ಬಳಗ~ ಮತ್ತು `ತುಗ್ಲಕ್~ ಚಿತ್ರಗಳ ಮೂಲಕ ಚಿತ್ರರಂಗ ಗುರುತಿಸುವ ನಾಯಕಿಯಾಗಿ ಬೆಳೆದ ಮೇಘನಾಗೆ ಹೇಳಿಕೊಳ್ಳುವಂತಹ ಅವಕಾಶ ಬರಲಿಲ್ಲವೇ? ಎಂದು ಕೇಳಿದರೆ- `ಅವಕಾಶಗಳು ಬೇಕಾದಷ್ಟು ಬಂದಿದ್ದವು. ಆದರೆ ಸಿಕ್ಕ ಪಾತ್ರವನ್ನೆಲ್ಲಾ ಒಪ್ಪಿಕೊಳ್ಳುವುದು ನನ್ನ ಜಾಯಮಾನವಲ್ಲ. ಪಾತ್ರಕ್ಕೆ ಮಹತ್ವವಿರಬೇಕು. ಮೇಲಾಗಿ ಅಭಿನಯಕ್ಕೆ ಅವಕಾಶವಿರಬೇಕು. ನಟನೆ ಮೂಲಕವೇ ನನ್ನನ್ನು ಗುರುತಿಸುವಂತಾಗಬೇಕು~ ಎಂದರು.`ನಮ್ ಏರಿಯಾದಲ್ಲಿ ಒಂದಿನ~ ಚಿತ್ರದಲ್ಲಿನ ನಟನೆ ನೋಡಿಯೇ ಚಂದ್ರು ತನ್ನನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಖುಷಿ ಅವರದು. `ಚಾರ್‌ಮಿನಾರ್~ ಚಿತ್ರದಲ್ಲಿ ಆಗಷ್ಟೇ ಕಾಲೇಜು ಮೆಟ್ಟಿಲೇರುವ ಹುಡುಗಿಯಾಗಿ, ಪದವಿ ವಿದ್ಯಾರ್ಥಿನಿಯಾಗಿ, ಬಳಿಕ ಪ್ರೌಢ ಯುವತಿಯಾಗಿ, ಹೀಗೆ ವಿವಿಧ ವಯಸ್ಸಿನ ಪಾತ್ರಗಳನ್ನು ಅವರು ನಿರ್ವಹಿಸುತ್ತಿದ್ದಾರೆ. ಇದು ತುಂಬಾ ಸವಾಲಿನ ಪಾತ್ರ. ಈ ರೀತಿಯ ವೈವಿಧ್ಯಮಯ ಪಾತ್ರ ಲಭಿಸುವುದು ತುಂಬಾ ವಿರಳ. ಕಥೆಯಂತೂ ಅದ್ಭುತವಾಗಿದೆ. ಚಂದ್ರು ಅವರಂತಹ ನಿರ್ದೇಶಕರ ಜೊತೆ ಕೆಲಸ ಮಾಡುವುದು ನನ್ನ ಸೌಭಾಗ್ಯ ಎನ್ನುತ್ತಾರೆ.ಅಂದಹಾಗೆ, ತುಂಬಾ ಬದ್ಧತೆ ಬಯಸುವ ಪಾತ್ರಕ್ಕೆ ಅವರು ಒಗ್ಗಿಕೊಳ್ಳಲು ತಯಾರಿ ನಡೆಸುತ್ತಿದ್ದಾರಂತೆ. ದೇಹ ಸ್ವರೂಪದ ಬದಲಾವಣೆಗೆ ಯೋಗ, ಜಿಮ್‌ಗಳ ಮೊರೆ ಹೊಕ್ಕಿದ್ದಾರೆ.ಚಿಕ್ಕಂದಿನಿಂದಲೂ ಚಿತ್ರಗಳನ್ನು ನೋಡುತ್ತಲೇ ಬೆಳೆದ ಮೇಘನಾರಲ್ಲಿ ಮಾಲಾಶ್ರೀಯಂತೆ ನಟಿಯಾಗಬೇಕು ಎಂಬ ಕನಸು ಮೊಳಕೆಯೊಡೆದಿತ್ತು. ಅಲ್ಲದೆ ನೃತ್ಯ, ಸಣ್ಣ ಪುಟ್ಟ ಪ್ರಹಸನಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ಅವರಲ್ಲಿ ಇದ್ದ ಪ್ರತಿಭೆಗೆ ಪ್ರೋತ್ಸಾಹವೂ ಸಿಕ್ಕಿತ್ತು. ಆದರೆ ಕಾಲೇಜು ಮೆಟ್ಟಿಲೇರುವಾಗ ಅನಿಸಿದ್ದು ಒಳ್ಳೆಯ ಚಿತ್ರ ಮಾಡಬೇಕೆಂದು. ಹೀಗಾಗಿ ಆದರ್ಶ ಫಿಲ್ಮ್ ಇನ್‌ಸ್ಟಿಟ್ಯೂಟ್‌ಗೆ ಅವರು ಸೇರಿದ್ದು ನಿರ್ದೇಶನದ ಕಲಿಕೆಗೆ. ಅವರನ್ನು ನೋಡಿದವರೆಲ್ಲಾ `ನೋಡಲು ಚೆನ್ನಾಗಿದ್ದೀಯ, ಧ್ವನಿಯೂ ಚೆನ್ನಾಗಿದೆ. ನಟನೆ ಮಾಡು~ ಎಂದು ಹುರಿದುಂಬಿಸಿದರು.ಕಾಲಕ್ರಮೇಣ ನಟಿಯಾಗುವ ಹಂಬಲವೂ ಚಿಗುರೊಡೆಯಿತು. ರಿಯಾಲಿಟಿ ಷೋ ಒಂದನ್ನು ನಡೆಸಿಕೊಡುತ್ತಿದ್ದಾಗ ನಿರ್ದೇಶಕ ಅರವಿಂದ್ ಕೌಶಿಕ್ ಕರೆ ಮಾಡಿ ತಮ್ಮ ಚಿತ್ರದಲ್ಲಿ ನಟಿಸುವಂತೆ ಆಹ್ವಾನವಿತ್ತರು. ಹೀಗೆ ಮೇಘನಾಗೆ ಬಣ್ಣದ ಲೋಕದ ಪ್ರವೇಶಕ್ಕೆ ದಾರಿ ಮಾಡಿಕೊಟ್ಟಿದ್ದು `ನಮ್ ಏರಿಯಾದಲ್ಲಿ ಒಂದಿನ~.`ನಮ್ ಏರಿಯಾ...~ ಮತ್ತು `ವಿನಾಯಕ ಗೆಳೆಯರ ಬಳಗ~ ಚಿತ್ರಗಳಲ್ಲಿ ಅವರ ಪಾತ್ರವನ್ನು ನೋಡಿ ಈಕೆ ಸಂಪ್ರದಾಯಸ್ಥ ಪಾತ್ರಗಳಿಗೇ ಸರಿ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು. ಹೀಗಾಗಿ `ತುಗ್ಲಕ್~ ಚಿತ್ರದಲ್ಲಿ ಪಾಶ್ಚಾತ್ಯ ಉಡುಪು ಧರಿಸಿ ಈ ರೀತಿಯೂ ಕಾಣಿಸಿಕೊಳ್ಳಬಲ್ಲೆ ಎಂದು ಮನದಟ್ಟು ಮಾಡಿದರಂತೆ.

 

ನಾನು 21ನೇ ಶತಮಾನದ ಆಧುನಿಕ ಹೆಣ್ಣು. ಗ್ಲಾಮರಸ್ ಪಾತ್ರಗಳಿಗೆ ಒಪ್ಪದಿದ್ದರೆ ಹೇಗೆ. ನಾನು ನಿಜಜೀವನದಲ್ಲಿ ಇರುವುದೂ ಗ್ಲಾಮರಸ್ ಆಗಿಯೇ. ಆದರೆ ಸುಮ್ಮನೆ ಬಂದು ಹೋಗುವ ಪಾತ್ರವಾದರೆ ನಮ್ಮ ಪ್ರತಿಭೆಗೆ ಅರ್ಥವಿರುವುದಿಲ್ಲ. ಪಾತ್ರದಲ್ಲಿ ಅಭಿನಯಕ್ಕೆ ಅವಕಾಶ ಬೇಕೇ ಬೇಕು ಎನ್ನುತ್ತಾರೆ. ಅವರು ಪಾಲಿಸಿಕೊಂಡು ಬಂದಿರುವ ನೀತಿಯದು.ಮುಂದಿನ ದಿನಗಳಲ್ಲಿ ದೊಡ್ಡ ಆಫರ್ ಬಂದರೆ ಬೇರೆ ಭಾಷೆ ಚಿತ್ರಗಳಲ್ಲಿ ನಟಿಸಲು ಸಿದ್ಧ. ಆದರೆ ಕನ್ನಡಕ್ಕೆ ಮೊದಲ ಆದ್ಯತೆ. ನಟಿಸಿರುವ ಸಿನಿಮಾಗಳು ಕಡಿಮೆ. ಹೀಗಾಗಿ ನಟಿಯಾಗಿ ನಾನು ತೃಪ್ತಳಾಗಿಲ್ಲ. `ಚಾರ್‌ಮಿನಾರ್~ ಬಳಿಕ ಅವಕಾಶಗಳ ಬಾಗಿಲು ತೆರೆದುಕೊಳ್ಳುತ್ತದೆ. ಕನ್ನಡದಲ್ಲಿ ಭದ್ರವಾಗಿ ನೆಲೆಯೂರುವ ಕನಸು ನನಸಾಗಲಿದೆ ಎಂದು ಅವಕಾಶಗಳ ಮಳೆಯನ್ನು ಎದುರು ನೋಡುತ್ತಿದ್ದಾರೆ ಮೇಘನಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry