ಬುಧವಾರ, ಏಪ್ರಿಲ್ 21, 2021
31 °C
ಮಡುಗಟ್ಟಿದ ಪೋಷಕರ ದುಃಖ

ಮೇಜರ್ ಸಂದೀಪ್ ಪುತ್ಥಳಿ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಒಂದು ಕಡೆ ದೇಶಭಕ್ತಿಯ ಭಾವ... ಇನ್ನೊಂದು ಕಡೆ ದುಃಖ ಮಡುಗಟ್ಟಿದ ಸಂದರ್ಭ... ಅಪ್ಪನ ಕಣ್ಣಿನಲ್ಲಿ ಮಗನ ಬಗ್ಗೆ ಹೆಮ್ಮೆ..., ಅಮ್ಮನ ಕಣ್ಣಿನಲ್ಲಿ ಹೆಮ್ಮೆಯ ಜತೆಗೆ ಮಗನ ಕಳೆದುಕೊಂಡ ನೋವು ಕಣ್ಣೀರಿನಲ್ಲಿ ಹರಿದು ಅಲ್ಲಿದ್ದವರಲ್ಲಿ ಏನೋ ಒಂದು ತರಹ ಸಂಕಟ....

ಮುಂಬೈ ತಾಜ್ ಹೋಟೆಲ್ ದಾಳಿಯ ಕಾರ್ಯಾಚರಣೆ ವೇಳೆಯಲ್ಲಿ ವೀರ ಮರಣವನ್ನಪ್ಪಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಶಿಲಾ ಪುತ್ಥಳಿಯನ್ನು ಸೋಮವಾರ ನಗರದ ರಾಮಮೂರ್ತಿನಗರ ಸಿಗ್ನಲ್ ಬಳಿ ಅನಾವರಣ ಸಂದರ್ಭದಲ್ಲಿ ಈ ಸನ್ನಿವೇಶ ಕಂಡುಬಂದಿತು. ಈ ಪುತ್ಥಳಿಯನ್ನು ಯತೀಶ್ ಪ್ರಸಾದ್ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿದೆ.ತಂದೆ ಉನ್ನಿಕೃಷ್ಣನ್ ಮಗನ ಪುತ್ಥಳಿಗೆ ಮಾಲಾರ್ಪಣೆ ಮಾಡುವುದನ್ನು ನಯವಾಗಿ ನಿರಾಕರಿಸಿ, `ನನ್ನ ಮಗ ನಮ್ಮ ಪಾಲಿಗೆ ಸತ್ತಿಲ್ಲ. ಅವನಿನ್ನೂ ನಮ್ಮ ಮನಸ್ಸಿನಲ್ಲಿ ಜೀವಂತವಾಗಿದ್ದಾನೆ. ಅವನು ದೇಶಕ್ಕಾಗಿ ವೀರ ಮರಣವನ್ನು ಹೊಂದಿದ್ದಾನೆ. ಇಡೀ ಜನಮಾನಸದಲ್ಲಿ ಅವನ ಸಾಧನೆ, ವೀರತ್ವ, ಅವನ ನೆನಪು ಚಿರಸ್ಥಾಯಿಯಾಗಿರುತ್ತದೆ' ಎಂದು ಹೇಳಿದ ಮಾತುಗಳು ಅಲ್ಲಿದ್ದವರ ಮನದಲ್ಲಿ ಅಭಿಮಾನವನ್ನು ಹುಟ್ಟಿಸಿತು.ಮಗನನ್ನು ನೆನೆದ ಅವರು, ಕೊನೆ ಗಳಿಗೆಯಲ್ಲಿ ಅವನ ಜತೆಗಿದ್ದ ಅಖಿಲೇಶ್ ಹೇಳಿದ ಮಾತುಗಳು, `ನಾನು ಮಾತ್ರ ಮುಂದೆ ಹೋಗುತ್ತೇನೆ. ನೀವು ಯಾರೂ ಬರುವುದು ಬೇಡ. ದೇಶಕ್ಕಾಗಿ ಪ್ರಾಣ ಹೋಗುವುದಾದರೆ ನನ್ನದು ಮಾತ್ರ ಹೋಗಲಿ' ಎಂದು ಹೇಳಿದ ಸಂದೀಪ್ ಕೊನೆಯ ಮಾತುಗಳನ್ನು ಅವನು ನೆನಪಿಸಿಕೊಂಡು ಆತನ ಸಾವಿಗೆ ತಾನೇ ಕಾರಣನಾದೆನೆಂದು ಕೊರಗುತ್ತಾನೆ. ಅಂದು ಅವನನ್ನು ತಡೆದು ತಾನೇ ಮುಂದೆ ಹೋಗಿದ್ದರೆ, ಸಂದೀಪ್ ಜೀವ ಉಳಿಯುತ್ತಿತ್ತು' ಎಂದು ಕೊರಗಿದ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ನನ್ನ ಮಗನ ಬಗ್ಗೆ ಇನ್ನು ಹೆಮ್ಮೆಪಡುವಂತಾಗುತ್ತದೆ ಎಂದು ನೆನಪಿಸಿಕೊಂಡರು.ಅಮ್ಮ ಧನಲಕ್ಷ್ಮಿ ಉನ್ನಿಕೃಷ್ಣನ್ ಏನೂ ಮಾತನಾಡದೆ, ಮಗನ ಶಿಲಾ ಪುತ್ಥಳಿಯ ಮುಂದೆ ನೆನೆದು ಕಣ್ಣೀರನ್ನು ಇಟ್ಟಿದ್ದು ಒಂದು ಕ್ಷಣ ಅಲ್ಲಿದ್ದವರ ಮನಸ್ಸನ್ನು ಕಲಕಿತು.

ಶಾಸಕ ನಂದೀಶ್ ರೆಡ್ಡಿ ಮಾತನಾಡಿ, `ಸಂದೀಪ್ ಉನ್ನಿಕೃಷ್ಣನ್ ಅಂತಹ ವೀರರು ಈ ದೇಶಕ್ಕೆ ಲಕ್ಷ ಸಂಖ್ಯೆಯಲ್ಲಿ ಬೇಕಾಗಿದ್ದಾರೆ. ಇನ್ನು ಮುಂದೆ ರಾಮಮೂರ್ತಿನಗರ ಸಿಗ್ನಲ್‌ಗೆ ಮೇಜರ್ ಸಂದೀಪ್ ಉನ್ನಿಕೃಷ್ಣನ್ ವೃತ್ತವೆಂದು ನಾಮಕರಣ ಮಾಡಲಾಗುವುದು' ಎಂದರು.`ಸಂದೀಪ್ ಉನ್ನಿಕೃಷ್ಣನ್ ದೇಶ ಭಕ್ತಿಯನ್ನು ಮೆರೆದು ದೇಶಕ್ಕಾಗಿ ಪ್ರಾಣವನ್ನು ತೆತ್ತಿದ್ದಾರೆ. ಈ ಭೂಮಿ ಇರುವವರೆಗೂ ಅವರ ನೆನಪು ಚಿರಸ್ಥಾಯಿಯಾಗಿರುತ್ತದೆ' ಎಂದು ಹೇಳಿದರು.ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಮಾತನಾಡಿ, `ಸಂದೀಪ್ ಉನ್ನಿಕೃಷ್ಣನ್ ಅವರ ಪುತ್ಥಳಿಯು ಬೆಂಗಳೂರಿನಲ್ಲಿ ಅನಾವರಣಗೊಂಡ ಮೊದಲ ಪುತ್ಥಳಿಯಾಗಿದೆ. ಬರೀ ಪುತ್ಥಳಿ ಅನಾವರಣದಿಂದ ನಮ್ಮ ಕರ್ತವ್ಯ ಮುಗಿಯುವುದಿಲ್ಲ. ಬದಲಿಗೆ ದೇಶಕ್ಕಾಗಿ ಮಡಿದವರ ಕುಟುಂಬದವರ ಬಗ್ಗೆ ಪ್ರೀತಿ, ಕಾಳಜಿ ಮತ್ತು ಅಭಿಮಾನದಿಂದ ನೋಡಿಕೊಳ್ಳುವುದು ಕೂಡ ಎಲ್ಲರ ಕರ್ತವ್ಯವಾಗಿದೆ' ಎಂದರು.`ಸಂದೀಪ್ ಅವರಂತಹ ವೀರರು ಪ್ರತಿ ಮನೆಯಲ್ಲಿಯೂ ಬೇಕಾಗಿದ್ದಾರೆ. ದೇಶದ ಶಾಂತಿಯನ್ನು ಭಂಗ ಮಾಡಲು ಹೊರಟಿರುವ ಶತ್ರುಗಳಿಗೆ ಬುದ್ಧಿ ಕಲಿಸಲು ಇಂತವರು' ಎಂದು ಹೇಳಿದರು.

`ದೇಶಾಭಿಮಾನಕ್ಕೆ ಕಿರು ಕಾಣಿಕೆ'

`ಸಂದೀಪ್ ಉನ್ನಿಕೃಷ್ಣನ್  ಅವರು ನಮ್ಮ ದೇಶಕ್ಕಾಗಿ ಪ್ರಾಣತೆತ್ತು ನಾಲ್ಕು ವರ್ಷವಾಯಿತು. ಅವರ ದೇಶಾಭಿಮಾನಕ್ಕೆ ಏನಾದರೂ ಕಿರು ಕಾಣಿಕೆಯನ್ನು ನೀಡಬೇಕೆಂಬ ಹಂಬಲವಿತ್ತು. ಅದಕ್ಕಾಗಿ ಸಂದೀಪ್ ಉನ್ನಿಕೃಷ್ಣನ್ ಅವರ ಪುತ್ಥಳಿಯನ್ನು ಸ್ಥಾಪಿಸಲಾಗಿದೆ. ಒಟ್ಟು ಹಣ ಎಪ್ಪತ್ತು ಸಾವಿರ ರೂಪಾಯಿ ಖರ್ಚಾಗಿದೆ. ಮೂರ್ತಿಗೆ ಮೂವತ್ತೈದು ಸಾವಿರ ರೂಪಾಯಿ ತಗುಲಿದೆ'

-ಎಚ್.ಪಿಲ್ಲಯ್ಯ, ಯತೀಶ್ ಪ್ರಸಾದ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.