ಶನಿವಾರ, ಜುಲೈ 24, 2021
22 °C

ಮೇಣಬಸದಿಯ ನಟರಾಜನ ಮೂರ್ತಿ ದುರಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾದಾಮಿ: ಚಾಲುಕ್ಯರ ಕಾಲದ ಐತಿಹಾಸಿಕ ಸ್ಮಾರಕವಾದ ಮೊದಲನೆಯ ಗುಹಾಂತರ ದೇವಾಲಯದ ಮುಖಮಂಟಪದ ಬಲಕ್ಕಿರುವ ನಟರಾಜನ ಮೂರ್ತಿಯನ್ನು ಭಾರತೀಯ ಪುರಾತತ್ವ ಇಲಾಖೆಯಿಂದ ದುರಸ್ತಿ ಕಾರ್ಯ ನಡೆಯಿತು.ಭಾರತೀಯ ಪುರಾತತ್ವ ಇಲಾಖೆಯ ಮೂರ್ತಿ ಶಿಲ್ಪ ತಜ್ಞ ಆರ್.ಎಸ್. ತ್ರಯಂಬಕೇಶ್ವರ, ನಟರಾಜನ ಮೂರ್ತಿಯು ಶಿಥಿಲವಾಗದಂತೆ ಹಾಗೂ ಕಲ್ಲು ಬಿರುಕು ಬಿಡದಂತೆ ಎರಡು ದಿನಗಳವರೆಗೆ ದುರಸ್ತಿಯನ್ನು ನಡೆಸಿದರು.ಎಪಾಕ್ಸಿ ಎಂಬ ರಸಾಯನವನ್ನು ಮೂರ್ತಿಯ ಪಕ್ಕದ ಶಿಲೆಗೆ ಇಂಜಕ್ಷನ್ ಕೊಡಲಾಯಿತು. ಇದರಿಂದ ಕಲ್ಲು ಸಂಪೂರ್ಣ ಗಟ್ಟಿಯಾಗಿ ಬಿಗಿಯಿತು. ನಂತರ ಚಾಲುಕ್ಯರು ನಿರ್ಮಿಸಿದ ಭವ್ಯವಾದ ನಟರಾಜನ ಮೂರ್ತಿಯು ಇತಿಹಾಸದ ನೆನಪಾಗಿ ಉಳಿಯುವಂತೆ ಮಾಡಿದರು.ಸುಮಾರು 5ರಿಂದ 6ನೆಯ ಶತಮಾನದಲ್ಲಿ ಚಾಲುಕ್ಯ ಕಲಾವಿದರು ಮರಳುಶಿಲೆಯ ಅಖಂಡ ಕಲ್ಲಿನಲ್ಲಿ ಮೂರ್ತಿಯನ್ನು ಅರಳಿಸಿದ್ದಾರೆ. ಬಾದಾಮಿಯ ಕಲ್ಲು ಮರಳು ಶಿಲೆ ಇರುವುದರಿಂದ ಗಾಳಿ, ಮಳೆ ಹಾಗೂ ಬಿಸಿಲಿಗೆ ಕೆಲವು ಮೂರ್ತಿಗಳು ಸವೆದು ಶಿಥಿಲಗೊಂಡಿವೆ. ಪ್ರಾಚೀನ ಸ್ಮಾರಕಗಳಲ್ಲಿ 18ಕೈಗಳ ಆಕರ್ಷಕ ನಾಟ್ಯಭಂಗಿಯ ನಟರಾಜನ ಮೂರ್ತಿ ಬಾದಾಮಿಯಲ್ಲಿ ಮಾತ್ರ ಇದೆ ಎಂಬುದು ತಜ್ಞರ ಅನಿಸಿಕೆ.ಮೊದಲನೆಯ ಗುಹೆಯ ಬಲಭಾಗದಲ್ಲಿ ಕೊನೆಯ ಅಂಚಿನಲ್ಲಿ ನಟರಾಜನ ಮೂರ್ತಿಯನ್ನು ಪೂರ್ವ ದಿಕ್ಕಿಗೆ ಚಾಲುಕ್ಯ ಕಲಾವಿದರು ಶಿಲೆಯಲ್ಲಿ ಅರಳಿಸಲಾಗಿದೆ. ಬಿಸಿಲು,ಮಳೆಗೆ ಕತ್ತಿನ ಕೆಳ ಭಾಗದಲ್ಲಿ ವೃತ್ತಾಕಾರವಾಗಿ ಬಿರುಕು ಬಿಟ್ಟಿತ್ತು. ಇದು ಪುರಾತತ್ವ ಇಲಾಖೆಯ ಅಧಿಕಾರಿ ಎ.ಎಂ. ಹನಗಂಡಿ ಅವರ ಗಮನಕ್ಕೆ ಬಂದಾಗ ಮೂರ್ತಿಯ ದುರಸ್ತಿ ಕಾರ್ಯವನ್ನು ಕೈಕೊಂಡಿದ್ದಾರೆ. ಸುಮಾರು 1500 ವರ್ಷಗಳ ಹಿಂದೆ ಚಾಲುಕ್ಯ ಕಲಾವಿದರು ರೂಪಿಸಿದ ನಟರಾಜನ ಮೂರ್ತಿಯನ್ನು ಈಗ ಮತ್ತೆ ದುರಸ್ತಿ ಕೈಕೊಳ್ಳಲಾಗಿದೆ.ಮಳೆ, ಬಿಸಿಲು ಹಾಗೂ ಗಾಳಿಗೆ ಶಾಸನದ ಅಕ್ಷರಗಳು ಮಸುಕು ಆಗದಂತೆ ಈ ಮೊದಲು ಭಾರತೀಯ ಪುರಾತತ್ವ ಇಲಾಖೆಯು ಬೃಹತ್ ಕಲ್ಲು ಬಂಡೆಯ ಮೇಲಿರುವ ತ್ರಿಪದಿಯಲ್ಲಿರುವ ಕಪ್ಪೆ ಅರಭಟ್ಟನ ಶಾಸನವನ್ನು ವಾಟರ್ ಪ್ರೂಫ್ ಕಲರಿಂಗ್ ಮೂಲಕ  ಸಂರಕ್ಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.