ಭಾನುವಾರ, ಜನವರಿ 26, 2020
28 °C

ಮೇತ್ರೆ ಕುಂಚದಲ್ಲಿ ಅರಳುವ ಶಿಲ್ಪಕಲಾ ವೈಭವ

ಪ್ರಜಾವಾಣಿ ವಾರ್ತೆ / – ಮಾಣಿಕ ಆರ್‌.ಭುರೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ಇಲ್ಲಿನ ಬಸವೇಶ್ವರ ಚಿತ್ರಕಲಾ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ ಸುಮತಿ ಎಸ್. ಮೇತ್ರೆ ಹಳೆ ಕಾಲದ ಶಿಲ್ಪವೈಭವವನ್ನು ಕುಂಚದ ಮೂಲಕ ಅರಳಿಸುವಲ್ಲಿ ಪ್ರಾವೀ­ಣ್ಯತೆ ಗಳಿಸಿದ್ದಾಳೆ. ಹೊಯ್ಸಳರ ಕಾಲದ ಶಿಲ್ಪ ಕಲಾಕೃತಿಯೊಂದನ್ನು ಚುಕ್ಕೆಗಳ ಮೂಲಕ ರಚಿಸಿ ಅದಕ್ಕೆ ರಾಷ್ಟ್ರಮಟ್ಟದ ಬಹುಮಾನ ಸಹ ಪಡೆದಿದ್ದಾಳೆ.ಬೀದರ್‌ ಜಿಲ್ಲೆಯಲ್ಲಿ ದೃಶ್ಯಮಾಧ್ಯ­ಮಕ್ಕೆ ಸಂಬಂಧಿಸಿದ ಚಟುವಟಿಕೆಗಳು ನಡೆಯುವುದು ಕಡಿಮೆ. ಆದರೂ, ಚಿತ್ರಕಲೆ ಕಲಿಸುವ ಕೆಲ ಸಂಸ್ಥೆಗಳು ಹುಟ್ಟಿಕೊಂಡಿದ್ದರ ಪರಿಣಾಮವಾಗಿ ಈಚೆಗೆ ಅತ್ಯುತ್ತಮ ಕಲಾವಿದರು ಹೊರಹೊಮ್ಮುತ್ತಿದ್ದಾರೆ.ಸುಮತಿ ಮೇತ್ರೆ ಇಂಥ ಅಪರೂ ಪದ ಕಲಾವಿದರಲ್ಲಿ ಒಬ್ಬಳಾಗಿ ದ್ದಾಳೆ, ತಂದೆ ಸುಭಾಷ ಮೇತ್ರೆ ಶಿಕ್ಷಕರಾಗಿದ್ದಾರೆ.  ಈಕೆ ಎಲ್ಲ ಪ್ರಕಾರದ ಚಿತ್ರ ರಚಿಸುವು­ದನ್ನು ಕರಗತ ಮಾಡಿಕೊಂಡಿದ್ದಾಳೆ. ಬಣ್ಣ ಮತ್ತು ರೇಖೆಗಳ ಮೂಲಕ ಸಮಾಜದಲ್ಲಿನ ಆಗುಹೋಗುಗಳನ್ನು ಪ್ರಭಾವ ಪೂರ್ಣವಾಗಿ ಬಿಂಬಿಸುತ್ತಾಳೆ. ತನ್ನ ಕಲ್ಪನೆ, ಭಾವನೆ ಮತ್ತು ಯೋಚ­ನೆಗೆ ಮೂರ್ತ ರೂಪ ಕೊಡುವಲ್ಲಿ ಈಕೆ ಸಿದ್ಧಹಸ್ತಳಾಗಿದ್ದಾಳೆ.‘ಹಿಂದಿನ ಕಾಲದ ಶಿಲ್ಪವೈಭವವನ್ನು ಕ್ಯಾನ್ವಾಸ್ ಮೇಲೆ ಮೂಡಿಸುವುದು ನನಗೆ ಎಲ್ಲಕ್ಕಿಂತ ಪ್ರಿಯವಾದದ್ದು’ ಎನ್ನುವ ಈಕೆ, ಶರಣರ ವಚನಗಳ ಭಾವ ಬಿಂಬಿಸುವ ಚಿತ್ರಗಳನ್ನೂ ಬಿಡಿಸಿದ್ದಾಳೆ. ಇಲ್ಲಿನ ಬಸವ ಮಹಾಮನೆ ಆವರಣದಲ್ಲಿನ ಶಿಲ್ಪಕಲೆ ಮತ್ತು 108 ಅಡಿ ಎತ್ತರದ ಬಸವಣ್ಣನವರ ಪ್ರತಿಮೆಯ ಕುರಿತು ಲಘು ಪ್ರಬಂಧ ಸಹ ರಚಿಸಿದ್ದಾಳೆ. ಇದಕ್ಕಾಗಿ ಈಚೆಗೆ  ಬಸವಧರ್ಮ ಪೀಠದ ವತಿಯಿಂದ  ಸನ್ಮಾನಿಸಲಾಗಿತ್ತು.ಮಧ್ಯಪ್ರದೇಶದ ಉಜ್ಜೈನಿಯಲ್ಲಿ ನಡೆದ 13 ನೇ ಕಲಾವರ್ತ ರಾಷ್ಟ್ರೀಯ ಕಲಾ ಉತ್ಸವದಲ್ಲಿ ಭಾಗವಹಿಸಿ  ಸುಮತಿ ಮೇತ್ರೆ ಚಿನ್ನದ ಪದಕ ಪಡೆದಿದ್ದಾಳೆ. ಅಂಚೆ ಕಚೇರಿಯಿಂದ ಹಮ್ಮಿಕೊಂಡ ಬೀದರ್‌ ಜಿಲ್ಲಾ ಮಟ್ಟದ ಸ್ಪರ್ಧೆ­ಯಲ್ಲೂ  ಬಹುಮಾನ ಪಡೆದಿದ್ದಾಳೆ. ಕಳೆದ ವರ್ಷ ವಿಜಾಪುರದ ಸಿದ್ಧೇಶ್ವರ ಕಲಾ ಮಂದಿರದಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನೂ ನಡೆಸಿದ್ದಾಳೆ.

ಹಂಪಿಯಲ್ಲಿನ ನುಡಿ ಹಬ್ಬ, ಬೆಂಗಳೂ­ರಿನ ಚಿತ್ರಸಂತೆ, ಇಂದೋರನ ಅಂತರ್ ರಾಷ್ಟ್ರೀಯ ಕಲಾ ಉತ್ಸವ, ಬೀದರ್‌ನಲ್ಲಿ ಲಲಿತಕಲಾ ಅಕಾಡೆಮಿ ವತಿಯಿಂದ ಹಮ್ಮಿಕೊಂಡ ತಿಂಗಳ ಕಲಾ ಪ್ರದರ್ಶನ, ವಚನ ವಿಜಯೋತ್ಸವ ಮತ್ತು ಬಸವಕಲ್ಯಾಣದಲ್ಲಿನ ಬಸವ ಉತ್ಸವದಲ್ಲಿನ ಚಿತ್ರಕಲಾ ಪ್ರದರ್ಶನ­ದಲ್ಲಿ ಈಕೆಯ ಕಲಾಕೃತಿಗಳು ಪ್ರದರ್ಶನಗೊಂಡಿವೆ.

– ಮಾಣಿಕ ಆರ್‌.ಭುರೆ

ಪ್ರತಿಕ್ರಿಯಿಸಿ (+)