ಶನಿವಾರ, ನವೆಂಬರ್ 23, 2019
17 °C
ಮುಖ್ಯ ಚುನಾವಣಾಧಿಕಾರಿ ಅನಿಲ್‌ಕುಮಾರ್ ಝಾ

ಮೇಯರ್ ಆಯ್ಕೆಗೆ ಅಡ್ಡಿ ಇಲ್ಲ

Published:
Updated:

ಬೆಂಗಳೂರು: ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ - ಉಪ ಮೇಯರ್ ಚುನಾವಣೆಗೆ ಅಡ್ಡಿಯಾಗುವುದಿಲ್ಲ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನಿಲ್‌ಕುಮಾರ್ ಝಾ ತಿಳಿಸಿದರು.ಮೇಯರ್- ಉಪ ಮೇಯರ್ ಚುನಾವಣೆಯನ್ನು ಸಕಾಲದಲ್ಲಿ ನಡೆಸಬಹುದು ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ ಎಂದು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ರಾಜ್ಯ ಮುಖ್ಯ ಚುನಾವಣಾ ಆಯುಕ್ತರು ಮೇಯರ್ ಆಯ್ಕೆಗೆ ಹಸಿರು ನಿಶಾನೆ ತೋರಿದ್ದರೂ ಬಿಬಿಎಂಪಿ ಆ ಪ್ರಕ್ರಿಯೆ ಆರಂಭಿಸಲು ಇನ್ನೂ ಹಿಂದು-ಮುಂದು ನೋಡುತ್ತಿದೆ.`ರಾಜ್ಯ ಮುಖ್ಯ ಚುನಾವಣಾ ಆಯುಕ್ತರು ಮೇಯರ್ ಆಯ್ಕೆ ಪ್ರಕ್ರಿಯೆಗೆ ವಿಧಾನಸಭಾ ಚುನಾವಣೆಯಿಂದ ಯಾವುದೇ ಅಡ್ಡಿಯಿಲ್ಲ' ಎಂದು ಹೇಳಿದ್ದು ನಮ್ಮ ಗಮನಕ್ಕೂ ಬಂದಿದೆ. ನಾವು ಕೋರಿದ ಮಾಹಿತಿಗೆ ಅಲ್ಲಿಂದ ಇದುವರೆಗೆ ಯಾವುದೇ ಲಿಖಿತ ಆದೇಶ ಬಂದಿಲ್ಲ. ಅಲ್ಲಿಯವರೆಗೆ ನಾವು ಯಾವುದೇ ನಿರ್ಧಾರಕ್ಕೆ ಬರುವಂತಿಲ್ಲ' ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.`ಚುನಾವಣಾ ಆಯೋಗದಿಂದ ಈ ಸಂಬಂಧ ಅಧಿಕೃತ ಆದೇಶ ಬಂದರೆ, ಪ್ರಾದೇಶಿಕ ಆಯುಕ್ತರಿಗೆ ಈ ಕುರಿತು ಮಾಹಿತಿ ನೀಡಿ, ಮೇಯರ್ ಆಯ್ಕೆ ಪ್ರಕ್ರಿಯೆ ಆರಂಭಿಸುವಂತೆ ಕೇಳಿಕೊಳ್ಳಲಾಗುವುದು' ಎಂದು ಅವರು ಹೇಳಿದರು. ಪೂರ್ವನಿಗದಿಯಂತೆ ಏಪ್ರಿಲ್ ಅಂತ್ಯದೊಳಗೆ ಬಿಬಿಎಂಪಿ ಹೊಸ ಮೇಯರ್ ಅವರನ್ನು ಕಾಣಬೇಕಿದೆ.

ಮೇಯರ್ ಡಿ.ವೆಂಕಟೇಶಮೂರ್ತಿ ಸ್ವತಃ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುವ ಕಾರಣ ಆಯ್ಕೆ ಪ್ರಕ್ರಿಯೆಯಲ್ಲಿ ಅವರು ಪಾಲ್ಗೊಳ್ಳುವಂತಿಲ್ಲ' ಎಂದು ಅಧಿಕಾರಿಗಳು ಮಾಹಿತಿ ನೀಡಿದರು.ಶುಕ್ರವಾರ ಬಿಬಿಎಂಪಿಗೆ ಲಿಖಿತ ಆದೇಶ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಪ್ರತಿಕ್ರಿಯಿಸಿ (+)