ಶನಿವಾರ, ಮೇ 15, 2021
22 °C

ಮೇಯರ್, ಉಪ ಮೇಯರ್ ಆಯ್ಕೆ: ಬಿಜೆಪಿಯಲ್ಲಿ ಭಾರಿ ಲಾಬಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಲಾಬಿ ತೀವ್ರಗೊಂಡಿದ್ದು, ಪಕ್ಷದ ನಾಯಕರಲ್ಲಿ ಭಿನ್ನಾಭಿಪ್ರಾಯ ಮೂಡಿದೆ.

ಈ ಎರಡೂ ಸ್ಥಾನಗಳಿಗೆ ಇದೇ 26ರಂದು ಚುನಾವಣೆ ನಡೆಯಲಿದೆ. ಆ ಸಂದರ್ಭದಲ್ಲೇ ಆ ಕುರಿತು ತೀರ್ಮಾನಗಳನ್ನು ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಹೇಳಿದ್ದರೂ ಲಾಬಿ ಮಾತ್ರ ತನ್ನ ತೀವ್ರತೆಯನ್ನು ಕಳೆದುಕೊಂಡಿಲ್ಲ.

ನಗರದ ಉಸ್ತುವಾರಿ ಸಚಿವರೂ ಆದ ಗೃಹ ಸಚಿವ ಆರ್.ಅಶೋಕ ಮತ್ತು ಅವರ ಬೆಂಬಲಿಗ ಶಾಸಕರು ತಮ್ಮ ಆಪ್ತರನ್ನೇ ಮೇಯರ್ ಮತ್ತು ಉಪ ಮೇಯರ್ ಮಾಡಲು ತಂತ್ರ ರೂಪಿಸುತ್ತಿದ್ದಾರೆ. ಈ ವಿಷಯದಲ್ಲಿ ಅವರು ಯಶಸ್ವಿಯಾದರೆ ಕುರುಬ ಸಮುದಾಯದ ಶಾಖಾಂಬರಿ ನಗರದ ಬಿ.ಸೋಮಶೇಖರ್ ಅವರು ಮೇಯರ್ ಹಾಗೂ ಪದ್ಮನಾಭನಗರದ ಎಲ್.ಶ್ರೀನಿವಾಸ್ ಅವರು ಉಪಮೇಯರ್ ಆಗುವುದು ಬಹುತೇಕ ಖಚಿತ.

ಆದರೆ, ಇದಕ್ಕೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರಿಂದಲೇ ತೀವ್ರ ವಿರೋಧ ಇದೆ ಎನ್ನಲಾಗಿದೆ. ಹಿರಿಯ ಸದಸ್ಯರೂ ಆದ ಕತ್ರಿಗುಪ್ಪೆ ವಾರ್ಡ್‌ನ ಡಿ.ವೆಂಕಟೇಶಮೂರ್ತಿ ಅವರನ್ನು ಮೇಯರ್ ಮಾಡಲು ಈಶ್ವರಪ್ಪ ಆಸಕ್ತಿ ತೋರಿದ್ದಾರೆ. ಹೀಗಾಗಿ ಈ ವಿಷಯದಲ್ಲಿ ಗೊಂದಲ ಉಂಟಾಗಿದೆ  ಎನ್ನಲಾಗಿದೆ.

ವೆಂಕಟೇಶಮೂರ್ತಿ ಮತ್ತು ಸೋಮಶೇಖರ್ ಇಬ್ಬರೂ ಕುರುಬ ಸಮುದಾಯಕ್ಕೆ ಸೇರಿದವರು. ಒಂದೇ ಸಮುದಾಯದ ಈ ಇಬ್ಬರ ಪರ ನಾಯಕರು ಪ್ರತ್ಯೇಕ ಲಾಬಿ ನಡೆಸುತ್ತಿದ್ದು, ಯಾರು ಈ ವಿಷಯದಲ್ಲಿ ಜಯ ಸಾಧಿಸುತ್ತಾರೆ ಎನ್ನುವುದು ಮಾತ್ರ ಕುತೂಹಲ ಕೆರಳಿಸಿದೆ.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್.ಶ್ರೀನಿವಾಸ್ ಅವರನ್ನು ಈ ಸಲ ಉಪಮೇಯರ್ ಮಾಡಬೇಕೆಂದು ಅಶೋಕ ಪಟ್ಟು ಹಿಡಿದಿದ್ದಾರೆ. ತಮ್ಮ ಕ್ಷೇತ್ರ ವ್ಯಾಪ್ತಿಯ ಒಬ್ಬರಿಗಾದರೂ ಪಾಲಿಕೆಯಲ್ಲಿ ಪ್ರಮುಖ ಸ್ಥಾನ ಕೊಡಿಸಬೇಕು ಎನ್ನುವುದು ಅವರು ಆಸೆ. ಹೀಗಾಗಿ ಅವರು ತಮ್ಮ ಆಪ್ತ ಶಾಸಕರ ಸಭೆ ಕರೆದು ಚರ್ಚೆ ಕೂಡ ನಡೆಸಿದ್ದಾರೆ.

ಈಶ್ವರಪ್ಪ ಇದೇ 15ರ ನಂತರ ಮೇಯರ್, ಉಪಮೇಯರ್ ಆಯ್ಕೆ ಸಂಬಂಧ ಅಶೋಕ ಸೇರಿದಂತೆ ನಗರದ ಎಲ್ಲ ಸಚಿವರು ಮತ್ತು ಶಾಸಕರ ಜತೆ ಮಾತುಕತೆ ನಡೆಸಲಿದ್ದಾರೆ. ಎಲ್ಲರ ಅಭಿಪ್ರಾಯ ಪಡೆದೇ ಸೂಕ್ತ ಅಭ್ಯರ್ಥಿ ಆಯ್ಕೆಗೆ ಅವರು ಒಲವು ತೋರಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.