ಗುರುವಾರ , ಜೂಲೈ 9, 2020
28 °C

ಮೇಯರ್ ವ್ಯಕ್ತಿತ್ವದ ಗುಣಗಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇಯರ್ ವ್ಯಕ್ತಿತ್ವದ ಗುಣಗಾನ

ಬೆಂಗಳೂರು: ಬಿಬಿಎಂಪಿಯಲ್ಲಿ ಗುರುವಾರ ನಡೆದ ಮೇಯರ್ ಎಸ್.ಕೆ. ನಟರಾಜ್ ಅವರ ಆಡಳಿತಾವಧಿಯ ಕೊನೆಯ ಮಾಸಿಕ ಸಭೆಯಲ್ಲಿ ಮೇಯರ್ ವ್ಯಕ್ತಿತ್ವದ ಬಗ್ಗೆ ಸದಸ್ಯರು ಪಕ್ಷಭೇದ ಮರೆತು ಗುಣಗಾನ ಮಾಡಿದರು. ಹಾಗೆಯೇ ಆಡಳಿತಾವಧಿಯಲ್ಲಿನ ವೈಫಲ್ಯಗಳು ಹಾಗೂ ಗಮನ ಹರಿಸದ ಕ್ಷೇತ್ರಗಳ ಬಗ್ಗೆ ಬೆಳಕು ಚೆಲ್ಲಿದರು.ಮೊದಲಿಗೆ ಮಾತನಾಡಿದ ವಿರೋಧಪಕ್ಷದ ನಾಯಕ ಎಂ. ನಾಗರಾಜ್, ‘ಬಿಬಿಎಂಪಿಯ ಪ್ರಥಮ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಟರಾಜ್ ಅವರು ತಮ್ಮ 11 ತಿಂಗಳ ಸಾಧನೆ ಏನು ಎಂಬುದನ್ನು ನೋಡಿಕೊಳ್ಳಬೇಕು. ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದ ಮೇಯರ್ ಬಳಿಕ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹಲವು ಆಶ್ವಾಸನೆಗಳು ಕಾರ್ಯಗತಗೊಳ್ಳಲೇ ಇಲ್ಲ. ಪಕ್ಷಾತೀತವಾಗಿರಬೇಕಾದ ನೀವು ಕೆಲವು ಸಂದರ್ಭಗಳಲ್ಲಿ ಬಿಜೆಪಿಯ ಮಹಾಪೌರರಂತೆ ವರ್ತಿಸಿದ್ದೀರಿ’ ಎಂದು ಆರೋಪಿಸಿದರು.‘ನೀವು ವಾರ್ಡ್‌ಗಳಿಗೆ ಭೇಟಿ ನೀಡಿ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಬಹುದಿತ್ತು. ಆದರೆ ಪರಿಶೀಲನಾ ಭೇಟಿಯನ್ನೇ ನಡೆಸಲಿಲ್ಲ. ನೀವು ಮುಕ್ತವಾಗಿ ಕಾರ್ಯ ನಿರ್ವಹಿಸಲು ಬಿಜೆಪಿ ಮುಖಂಡರು ಅವಕಾಶ ನೀಡಲಿಲ್ಲ. ಮುಂದೆ ಆಯ್ಕೆಯಾಗುವವರು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡುವಂತೆ ಬಿಜೆಪಿಯ ವರಿಷ್ಠರಿಗೆ ಈಗಲಾದರೂ ಮನವಿ ಮಾಡಿಕೊಳ್ಳಿ’ ಎಂದರು.ವ್ಯಕ್ತಿತ್ವದ ಮುಂದೆ ಗೌಣ: ‘ನಿಮ್ಮ ಆಡಳಿತಾವಧಿಯಲ್ಲಿ ಗಮನಾರ್ಹ ಸಾಧನೆಯಾಗಿಲ್ಲ. ಆದರೆ ನಿಮ್ಮ ಉತ್ತಮ ವ್ಯಕ್ತಿತ್ವದ ಮುಂದೆ ಅದು ಗೌಣ. ನೀವು ಭವಿಷ್ಯದಲ್ಲಿ ಶಾಸಕ, ಸಚಿವ ಸ್ಥಾನಗಳನ್ನು ಅಲಂಕರಿಸುವಂತಾಗಲಿ. ಪಾಲಿಕೆಯ ಎಲ್ಲ ವಾರ್ಡ್‌ಗಳಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಿಸಲು ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಹೇಳಿದರು.ಜೆಡಿಎಸ್ ನಾಯಕ ಪದ್ಮನಾಭರೆಡ್ಡಿ, ‘ಸರಳ- ಸಜ್ಜನಿಕೆಗೆ ಹೆಸರಾದ ಮೇಯರ್ ಅವರು ಕೆಲವೊಮ್ಮೆ ಬಿಜೆಪಿಯ ಮೇಯರ್‌ನಂತೆ ವರ್ತಿಸಿದ್ದಾರೆ. ಅಭಿವೃದ್ಧಿಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ಅವರ ಅಧಿಕಾರಾವಧಿಯನ್ನು ಎರಡು ವರ್ಷಗಳಿಗಾದರೂ ಸರ್ಕಾರ ವಿಸ್ತರಿಸಲಿದೆ ಎಂಬ ನಿರೀಕ್ಷೆ ಹುಸಿಯಾಯಿತು. ಹಾಗಾಗಿ ಅವರು ರಬ್ಬರ್ ಸ್ಟ್ಯಾಂಪ್ ಮೇಯರ್ ಎಂಬಂತೆ ಕಾರ್ಯ ನಿರ್ವಹಿಸಿದರು’ ಎಂದರು.‘ಆರ್ಥಿಕವಾಗಿ ಹಿಂದುಳಿದವರ ಆರೋಗ್ಯ ಚಿಕಿತ್ಸೆ ಸೇವೆಗೆಂದು ಸುಮಾರು 12 ಕೋಟಿ ರೂಪಾಯಿ ನೀಡುವ ಮೂಲಕ ಉದಾರತೆ ತೋರಿದ್ದೀರಿ. ಆದರೆ ಇದೇ ಹಣದಲ್ಲಿ ತಮ್ಮ ಆಡಳಿತಾವಧಿಯಲ್ಲಿ ಹೈಟೆಕ್ ಆಸ್ಪತ್ರೆಯೊಂದನ್ನು ನಿರ್ಮಿಸಿದ್ದರೆ ಜನತೆಗೆ ಅನುಕೂಲವಾಗುತ್ತಿತ್ತು. ಅನುದಾನ ನೀಡಿಕೆಯಲ್ಲೂ ತಾರತಮ್ಯ ತೋರಿದ್ದೀರಿ. ಕಾಮಗಾರಿಗಳಿಗೆ ವರ್ಕ್‌ಕೋಡ್ ನೀಡಿಕೆಯಲ್ಲಿನ ಅವ್ಯವಹಾರ ಪತ್ತೆಗೆ ಸದನ ಸಮಿತಿ ರಚಿಸುವುದಾಗಿ ಹೇಳಿದರೂ ಅದು ಕಾರ್ಯಗತವಾಗಲಿಲ್ಲ’ ಎಂದು ದೂರಿದರು.ಕಾಂಗ್ರೆಸ್‌ನ ಎನ್.ಕೆ. ಗುಣಶೇಖರ್ ಮಾತನಾಡಿ, ‘ಸೂಕ್ತ ಅಧಿಕಾರ ನೀಡಿದರಷ್ಟೇ ಮೇಯರ್ ಆದವರು ಉತ್ತಮ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯ. ಆದರೆ ಸರ್ಕಾರ ಸ್ಥಳೀಯ ಸಂಸ್ಥೆಗೆ ಹೆಚ್ಚಿನ ಅಧಿಕಾರ ನೀಡಲು ಮುಂದಾಗದ ಕಾರಣ ಒಂದು ವರ್ಷದ ಅಲ್ಪಾವಧಿಯಲ್ಲಿ ಗಣನೀಯ ಸಾಧನೆ ಮಾಡುವುದು ಸಾಧ್ಯವಾಗದ ಮಾತು’ ಎಂದರು.‘ಹಾಗಿದ್ದರೂ ಮೇಯರ್ ಅವರು ತಮಗಿರುವ ಇತಿಮಿತಿಯೊಳಗೆ ಇನ್ನಷ್ಟು ಉತ್ತಮವಾಗಿ ಕಾರ್ಯ ನಿರ್ವಹಿಸಬಹುದಿತ್ತು. ಎರಡನೇ ಬಾರಿಗೆ ಬಜೆಟ್ ಮಂಡಿಸುವ ಅವಕಾಶವಿದ್ದರೂ ಬಳಸಿಕೊಳ್ಳಲಿಲ್ಲ. ನಗರದ ಬಡವರಗೆಂದೇ ಪ್ರತ್ಯೇಕ ಆಸ್ಪತ್ರೆ ಸ್ಥಾಪಿಸಬಹುದಿತ್ತು’ ಎಂದು ಹೇಳಿದರು."ಆಡಳಿತ ಪಕ್ಷದ ನಾಯಕ ಬಿ.ಎಸ್. ಸತ್ಯನಾರಾಯಣ ಮಾತನಾಡಿ, ‘ಮೇಯರ್ ನಟರಾಜ್ ಆಡಳಿತಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಸರ್ಕಾರ ಬುಧವಾರ ರೂ 200 ಕೋಟಿ ಹಾಗೂ ಇಂದು (ಗುರುವಾರ) 100 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಿದೆ. ಆಡಳಿತಾವಧಿ ಪೂರ್ಣಗೊಳ್ಳುವುದರೊಳಗೆ ಎಲ್ಲ ವಾಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ’ ಎಂದರು.ಪಾಲಿಕೆ ಭವನ: ‘ನಗರದಲ್ಲಿ ಪಾಲಿಕೆ ಭವನ ನಿರ್ಮಾಣಕ್ಕೆ ಸದ್ಯದಲ್ಲೇ ಮೇಯರ್ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಹಾಗೆಯೇ 16 ಕಡೆಗಳಲ್ಲಿ ಸ್ವಯಂಚಾಲಿತ ಮೆಟ್ಟಿಲಿನ ವ್ಯವಸ್ಥೆಯುಳ್ಳ ಪಾದಚಾರಿ ಮೇಲುಸೇತುವೆ ಹಾಗೂ 12 ಮಾರುಕಟ್ಟೆಗಳನ್ನು ಮಾಲ್ ರೂಪದಲ್ಲಿ ನವೀಕರಿಸುವ ಕಾರ್ಯಗಳಿಗೂ ಅವರೇ ಚಾಲನೆ ನೀಡಲಿದ್ದಾರೆ’ ಎಂದು ಪ್ರಕಟಿಸಿದರು.ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಎನ್. ಸದಾಶಿವ, ‘ಪಾಲಿಕೆ ಸಭೆಗಳಲ್ಲಿ ಸಾಕಷ್ಟು ವಿಷಯಗಳ ಕುರಿತು ಆರೋಗ್ಯಕರ ಚರ್ಚೆಗೆ ವಿರೋಧ ಪಕ್ಷಗಳು ಸಹಕಾರ ನೀಡಲಿಲ್ಲ. ಇದರಿಂದ ಜನತೆಗೆ ಗಂಭೀರ ವಿಷಯಗಳ ಬಗ್ಗೆ ಮಾಹಿತಿಯೇ ದೊರೆಯಲಿಲ್ಲ. ಹಾಗಿದ್ದರೂ ಮೇಯರ್ ಅವರು ಹಲವು ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಿರುವುದು ಉತ್ತಮವಾಗಿದೆ’ ಎಂದರು.ಉಪಮೇಯರ್ ಎನ್. ದಯಾನಂದ್ ಅವರ ಕಾರ್ಯ ನಿರ್ವಹಣೆಯ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ ಸದಸ್ಯರು ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ತಮ್ಮ ಅನುದಾನ ನೀಡಬಹುದಿತ್ತು ಎಂದರು.

ಕೊನೆಗೆ ಮೇಯರ್ ಹಾಗೂ ಉಪ ಮೇಯರ್ ಮಾತನಾಡಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.