ಮೇಯಲು ವೇದಿಕೆಯಾದ ಸಮ್ಮೇಳನ ಕಾಮಗಾರಿ!

7

ಮೇಯಲು ವೇದಿಕೆಯಾದ ಸಮ್ಮೇಳನ ಕಾಮಗಾರಿ!

Published:
Updated:

ಬೆಳಗಾವಿ: ಪ್ರಸ್ತುತ ನಿಗದಿ ಪಡಿಸಿದಂತೆ ವಿಶ್ವ ಕನ್ನಡ ಸಮ್ಮೇಳನಕ್ಕೆ 27 ದಿನಗಳು ಮಾತ್ರ ಬಾಕಿ ಇವೆ. ಸಮ್ಮೇಳನದ ಪೂರ್ವಸಿದ್ಧತೆಗಳು ನಡೆಯುತ್ತಿಲ್ಲ ಎಂಬ ಕೂಗಿನ ಬೆನ್ನಲ್ಲೆ ರಸ್ತೆ ಅಗಲಗೊಳಿಸುವುದು, ಅಲ್ಲಲ್ಲಿ ಗೋಡೆಗಳ ಮೇಲೆ ಚಿತ್ರ ಬಿಡಿಸುವ ಕಾಮಗಾರಿಗಳು ಇತ್ಯಾದಿ, ಇತ್ಯಾದಿಗಳು ಶುರುವಾಗಿವೆ. ಅದನ್ನು ಪುಷ್ಟೀಕರಿಸುವ ಉದ್ದೇಶದಿಂದ ಉಸ್ತುವಾರಿ ಸಚಿವ ಉಮೇಶ ಕತ್ತಿ ಹಾಗೂ ಅಧಿಕಾರಿಗಳು ಕಾಮಗಾರಿ ವೀಕ್ಷಣೆ ನಡೆಸಿ ‘ಚಿತ್ರ’ ತೆಗೆಸಿಕೊಂಡಿದ್ದಾರೆ!ಅಂದರೆ ವಿಶ್ವಕನ್ನಡ ಸಮ್ಮೇಳನ ಪೂರ್ವಸಿದ್ಧತೆಗಳು ನಗರದಲ್ಲಿ ಆರಂಭಗೊಂಡಿವೆ ಎಂದು ಬಿಂಬಿಸುವ ಪ್ರಯತ್ನಗಳು ಪ್ರಸ್ತುತ ಚಾಲೂ ಆಗಿವೆ. ಈ ಮಧ್ಯೆ ಇದೇ ಫೆ. 28ರೊಳಗೆ ಎಲ್ಲ ಪೂರ್ವಸಿದ್ಧತಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಉಸ್ತುವಾರಿ ಸಚಿವರು ಫರ್ಮಾನು ಹೊರಡಿಸಿದ್ದಾರೆ. ಆದರೆ ಎಲ್ಲೆಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತದೆ? ಯಾವ, ಯಾವ ರಸ್ತೆಗಳನ್ನು ದುರಸ್ತಿ ಮಾಡಲಾಗುತ್ತದೆ? ಎಷ್ಟು ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತದೆ ಮಾಹಿತಿ ಮಾತ್ರ ಸಿಗುತ್ತಿಲ್ಲ.ಅಷ್ಟಕ್ಕೂ ವಿಶ್ವ ಕನ್ನಡ ಸಮ್ಮೇಳನ ಪೂರ್ವಸಿದ್ಧತಾ ಕಾಮಗಾರಿಗಳಿಗೆ ಪಾರದರ್ಶಕ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಕೆಲ ದಿನಗಳ ಹಿಂದಷ್ಟೇ ಪ್ರಕಟಿಸಿದ್ದರು. ಅದರ ಬೆನ್ನಲ್ಲೇ ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರು ಕಾಮಗಾರಿ ಕೈಗೊಳ್ಳಲು ಮೇಲಾಧಿಕಾರಿಗಳ ಅನುಮತಿ ಪಡೆಯಬೇಕಾಗದ ಅಗತ್ಯ ಇಲ್ಲ. ಸ್ಥಳೀಯ ಅಧಿಕಾರಿಗಳೇ ನಿರ್ವಹಿಸಬಹುದು ಎಂದು ಸೂಚಿಸಿದ್ದಾರೆ. ಹೀಗಾಗಿ ವಿಶ್ವ ಕನ್ನಡ ಸಮ್ಮೇಳನದ ಕಾಮಗಾರಿಗಳ ನಿರ್ವಹಣೆ ಉದ್ದೇಶದಿಂದ ಕಾದು ಕುಳಿತಿದ್ದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬಾಯಿಗೆ ‘ಸಕ್ಕರೆ’ ಹಾಕಿದಂತಾಗಿದೆ!ವಿಶ್ವ ಕನ್ನಡ ಸಮ್ಮೇಳನ ನಡೆಯಲಿರುವ ದಿನಾಂಕವನ್ನು ಎರಡು ತಿಂಗಳ ಹಿಂದೆಯೇ ಪ್ರಕಟಿಸಲಾಗಿದ್ದರೂ ಆರಂಭದಲ್ಲಿ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ತಲೆಕೆಡಿಸಿಕೊಳ್ಳಲಿಲ್ಲ. ಇಂತಹ ಸಮಾರಂಭಗಳು ಸಮೀಪಿಸುತ್ತಿದ್ದಂತೆ ಎಚ್ಚೆತ್ತುಕೊಳ್ಳುವ ಆಡಳಿತ ಇಲ್ಲಿಯೂ ‘ಹಾಗೆಯೇ’ ವರ್ತಿಸಿದೆ.ಈ ಹಿಂದೆ ಮೂರ್ನಾಲ್ಕು ಬಾರಿ ಮುಂದೂಡಲ್ಪಟ್ಟಿರುವ ವಿಶ್ವ ಕನ್ನಡ ಸಮ್ಮೇಳನ ಈ ಬಾರಿಯಾದರೂ ನಡೆಯಬೇಕು ಎಂದು ಈ ಭಾಗದ ಜನರು ಹಂಬಲಿಸುತ್ತಿದ್ದಾರೆ. ಅದರ ‘ಲಾಭ’ ಮಾಡಿಕೊಳ್ಳುವ ಉದ್ದೇಶದಿಂದ ವಿಶ್ವಕನ್ನಡ ಸಮ್ಮೇಳನ ಉಸ್ತುವಾರಿ ಸಮಿತಿ ‘ಯೋಜನೆ’ ರೂಪಿಸಿ ಕಾರ್ಯಪ್ರವೃತ್ತವಾಗಿದೆ. ಮುಂದಿನ ಎರಡು ವಾರಗಳ ಅವಧಿಯಲ್ಲಿ ಬೆಳಗಾವಿ ನಗರದಲ್ಲಿ ಕೋಟಿಗಟ್ಟಲೆ ಹಣ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ವೆಚ್ಚವಾಗಲಿದೆ.ಸಮ್ಮೇಳನ ನಿರ್ವಹಣೆಗೆ ವಿವಿಧ ಸಮಿತಿಗಳನ್ನು ರಚಿಸಿದಂತೆ ಈ ಸಂದರ್ಭದಲ್ಲಿ ಕಾಮಗಾರಿ ನಿರ್ವಹಣೆಗೂ ಪ್ರತ್ಯೇಕ ಸಮಿತಿ ರಚಿಸಿ ಆ ಮೂಲಕ ಜಾರಿಗೊಳಿಸಿದರೆ ಒಂದಿಷ್ಟು ಪಾರದರ್ಶಕ ವ್ಯವಸ್ಥೆ ಸಾಧ್ಯವಾಗಬಹುದಿತ್ತು. ಆದರೆ ಅಂತಹ ಕ್ರಮಗಳೂ ಇಲ್ಲ. ಇತ್ತ ಪಾರದರ್ಶಕ ವ್ಯವಸ್ಥೆಯೂ ಇಲ್ಲ. ತಮಗೆ ಬೇಕಾದವರಿಗೆ ಕಾಮಗಾರಿ ಗುತ್ತಿಗೆ ವಹಿಸಿಕೊಟ್ಟು ‘ಮೇಯಲು’ ವೇದಿಕೆಯನ್ನು ಸೃಷ್ಟಿಸಲಾಗಿದೆ. ಈ ‘ಸಂತೆ’ಯ ಕಾರ್ಯಚಟುವಟಿಕೆಗಳ ಬಗ್ಗೆ ಸಾರ್ವಜನಿಕರೇ ನಿಗಾವಹಿಸಿದರೆ ಏನಾದರೂ ಪ್ರಯೋಜನವಾಗಬಹುದು. ಅದಾಗದ್ದರೆ ಮತ್ತಾವ ದಾರಿಯೂ ಇಲ್ಲಿ ಕಾಣುವುದಿಲ್ಲ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry