ಮಂಗಳವಾರ, ನವೆಂಬರ್ 12, 2019
28 °C
ಹೊಸದುರ್ಗ: ವಿಜೃಂಭಣೆಯಿಂದ ಜರುಗಿದ ರಾಮದೇವರ ರಥೋತ್ಸವ

ಮೇಲುಕುಂಟೆ ರಂಗನಾಥಸ್ವಾಮಿ ರಥೋತ್ಸವ

Published:
Updated:

ಹೊಳಲ್ಕೆರೆ: ತಾಲ್ಲೂಕಿನ ಆವಿನಹಟ್ಟಿಯಲ್ಲಿ ಶುಕ್ರವಾರ ಮೇಲುಕುಂಟೆ ರಂಗನಾಥಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.ಮೊದಲು ಕಳಶಪೂಜೆ, ಈಡುಗಾಯಿ ಸೇವೆ, ಕುಂಕುಮ ಪೂಜೆ, ಧೂಳೆಡೆ ಸೇವೆಗಳು ನಡೆದವು. ನಂತರ ಭಕ್ತರು ರಥಕ್ಕೆ ಮಂಡಕ್ಕಿ, ಬಾಳೆಹಣ್ಣು ತೂರಿ ಕೈಮುಗಿದರು. ರಥವನ್ನು ಹೂವಿನ ಹಾರಗಳು, ಬಣ್ಣದ ವಸ್ತ್ರಗಳಿಂದ ಅಲಂಕರಿಸಲಾಗಿತ್ತು. ರಂಗನಾಥ ಸ್ವಾಮಿಯನ್ನು ಮೆರವಣಿಗೆಯ ಮೂಲಕ ಕರೆತಂದು ರಥದ ಮೇಲೆ ಕೂರಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸಾವಿರಾರು ಭಕ್ತರು ಅಲಂಕೃತ ರಥವನ್ನು ಪೂರ್ವಾಭಿಮುಖವಾಗಿರುವ ದೊಡ್ಡಹೊಟ್ಟೆ ರಂಗನಾಥ ಸ್ವಾಮಿಯ ಬೆಟ್ಟದ ಕಡೆಯ ಅಡಿಕೆ ತೋಟದವರೆಗೂ ಎಳೆದು ಭಕ್ತಿಭಾವ ಮೆರೆದರು.ತೋಟದಲ್ಲಿ ಸ್ವಾಮಿಗೆ ಮತ್ತೊಮ್ಮೆ ಪೂಜೆ ಸಲ್ಲಿಸಿದ ನಂತರ ಭಕ್ತರು ಜೈಕಾರಗಳೊಂದಿಗೆ ಮತ್ತೆ ಮೂಲಸ್ಥಾನದವರೆಗೂ ರಥವನ್ನು ಎಳೆದುಕೊಂಡು ಬಂದರು. ರಥೋತ್ಸವದ ನಂತರ ತೇರಿನ ಸುತ್ತ ಕುರಿ, ಮೇಕೆಗಳ ಪ್ರದಕ್ಷಿಣೆ ನಡೆಯಿತು. ದೊಡ್ಡೆಡೆ ಸೇವೆ, ಪಾನಕ-ಫಲಾಹಾರದ ಸೇವೆ, ಹೂವಿನ ಅಡ್ಡಪಲ್ಲಕ್ಕಿ ಉತ್ಸವ, ಅನ್ನ ಸಂತರ್ಪಣೆ, ಅರವಂತಿಗೆ ಸೇವೆ, ನೆಂಟರಸೇವೆ ಮತ್ತಿತರ ಪೂಜಾ ಕಾರ್ಯಗಳು ನಡೆದವು.ಪ್ರತೀ ವರ್ಷ ರಾಮನವಮಿಯಂದು ಈ ರಥೋತ್ಸವ ನಡೆಯುತ್ತದೆ. ತ್ರೇತಾಯುಗದಲ್ಲೇ ಮೇಲುಕುಂಟೆ ರಂಗನಾಥಸ್ವಾಮಿಯೂ ಜನಿಸಿದ್ದರಿಂದ ರಾಮನ ಜನ್ಮದಿನವಾದ ಶ್ರೀರಾಮ ನವಮಿಯಂದೇ ರಥೋತ್ಸವ ನಡೆಯುತ್ತದೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ. ಯುಗಾದಿಯಂದು ದೇವರನ್ನು ಹಾಲುರಾಮೇಶ್ವರ ಕ್ಷೇತ್ರಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಮೊದಲಶಾಸ್ತ್ರ ಮಾಡಲಾಗುತ್ತದೆ. ನಂತರ ರಥೋತ್ಸವದ ದಿನದವರೆಗೆ ದಿನಕ್ಕೆ ಒಂದರಂತೆ ಗರುಡ, ಶೇಷ, ನವಿಲು, ಕುದುರೆ, ಆಂಜನೇಯ ವಾಹನಗಳ ಉತ್ಸವಗಳು ನಡೆಯುತ್ತವೆ.    ಆರ್. ಗೊಲ್ಲರಹಳ್ಳಿ ಯುವಕರಿಂದ ಭಜನೆ, ತಿರುಮಲಾಪುರ ಯುವಕ ಸಂಘದಿಂದ ಕೋಲಾಟ ಪ್ರದರ್ಶನ ನಡೆಯಿತು.ರಾಮದೇವರ ರಥೋತ್ಸವ

ಹೊಸದುರ್ಗ: ಪಟ್ಟಣದ ಕೋಟೆ ಭಾಗದಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ರಾಮ ದೇವರ ರಥೋತ್ಸವ ಅಪಾರ ಭಕ್ತರ ನೇತೃತ್ವದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.ಯುಗಾದಿ ಅಮವಾಸ್ಯೆಯಿಂದ 9 ದಿನಗಳ ಕಾಲ ಗಂಗಾ ಪೂಜೆ, ವಿಶೇಷ ಅಭಿಷೇಕ, ಮಹಾ ಮಂಗಳಾರತಿ, ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದ್ದವು. ಶುಕ್ರವಾರ ಮಧ್ಯಾಹ್ನ 1ಕ್ಕೆ ದೊಡ್ಡಹೂವಿನ ಹಾರಗಳೊಂದಿಗೆ ಅಲಂಕಾರಗೊಂಡಿದ್ದ ರಥಕ್ಕೆ ರಾಮದೇವರನ್ನು ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಕೂರಿಸಿ, ಪೂಜೆ ಸಲ್ಲಿಸಲಾಯಿತು. ನಂತರ ಭಕ್ತರು ರಥವನ್ನು ಎಳೆದು ಸಂಭ್ರಮಿಸಿದರು.ಇಲ್ಲಿನ ರಾಮ ದೇವರ ರಥೋತ್ಸವವು ನೂರಾರು ವರ್ಷಗಳ ಹಿಂದಿನಿಂದಲೂ ನಡೆಯುತ್ತಿದೆ. ಸುತ್ತಮುತ್ತಲ ಗ್ರಾಮಾಂತರ ಪ್ರದೇಶದ ಸಾವಿರಾರು ಭಕ್ತರು ಬಿಸಿಲಿನ ಝಳವನ್ನೂ ಲೆಕ್ಕಿಸದೇ ಈ ವೈಭವದ ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸುತ್ತಾರೆ.ದೇವರ ರಥವನ್ನು ಮೂರು ಸುತ್ತು ಉರುಳಿಸುವುದು ಇಲ್ಲಿನ ವಿಶೇಷ. ನಂತರ ಬನಶಂಕರಿ ದೇವಸ್ಥಾನ ಮಾರ್ಗವಾಗಿ ಭೈರವೇಶ್ವರ ಸ್ವಾಮಿ ದೇವಸ್ಥಾನದ ವರೆಗೆ ರಥವನ್ನು ಎಳೆದು ನಂತರ ಮೂಲ ಸ್ಥಾನಕ್ಕೆ ತಲುಪಿಸುವರು.ರಾಮನ ಭಕ್ತರು ವಿಶೇಷ ಭಜನೆ ಹಾಗೂ ಭಕ್ತಿ ಗೀತೆಗಳ ಮೂಲಕ ನೃತ್ಯ ಪ್ರದರ್ಶಿಸಿದರು. ರಥೋತ್ಸವದ ಪ್ರಯುಕ್ತ ಕೋಟೆ ಭಾಗದ ಪ್ರತಿ ಮನೆಗಳಲ್ಲೂ ಮಜ್ಜಿಗೆ, ಪಾನಕ, ವಿವಿಧ ರೀತಿಯ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು. ಪ್ರತಿ ಮನೆಯೂ ಮಾವು-ಬೇವಿನ ತಳಿರು ತೋರಣ ಹಾಗೂ ವಿವಿಧ ರೀತಿಯ ರಂಗೋಲಿಯಿಂದ ಅಲಂಕರಿಸಲಾಗಿತ್ತು. ರಥೋತ್ಸವದಲ್ಲಿ ಬನಶಂಕರಿ, ಕಾಲಭೈರವೇಶ್ವರ ಹಾಗೂ ರಾಮದೇವರ ದೇವಸ್ಥಾನ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಪ್ರಮುಖ ಪಾತ್ರ ವಹಿಸಿದ್ದರು.ಆಂಜನೇಯ ರಥೋತ್ಸವ

ಚಿಕ್ಕಜಾಜೂರು: ಇಲ್ಲಿನ ಗ್ರಾಮ ದೇವರು ಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ ಶುಕ್ರವಾರ ನಡೆಯಿತು.ರಾಮ ನವಮಿಯ ದಿನವಾದ ಶುಕ್ರವಾರ ದೇವಾಲಯದಲ್ಲಿನ ಸ್ವಾಮಿಯನ್ನು ವಿವಿಧ ಆಭರಣಗಳಿಂದ ಅಲಂಕರಿಸಿ ವಿಶೇಷ ಪೂಜೆಯನ್ನು ಅರ್ಚಕ ಸೀತಾರಾಮಶಾಸ್ತ್ರಿ ನೆರವೇರಿಸಿದರು.ಬೆಳಿಗ್ಗೆಯಿಂದಲೇ ಪೂಜಾ ಕಾರ್ಯಗಳು ಆರಂಭಗೊಂಡವು. ಉತ್ಸವ ಮೂರ್ತಿಯನ್ನು  ಪಲ್ಲಕ್ಕಿಯಲ್ಲಿ ಕೂರಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.ಶನಿವಾರ ಮುಂಜಾನೆ 5.30ಕ್ಕೆ ಸ್ವಾಮಿಯ ರಥೋತ್ಸವ, ಮಧ್ಯಾಹ್ನ 12ಕ್ಕೆ ಮುಳ್ಳು ಪಲ್ಲಕ್ಕಿ ಹಾಗೂ ಎದುರುಗತ್ತಿ ಪವಾಡ ನಡೆಯಲಿದೆ.

ಪ್ರತಿಕ್ರಿಯಿಸಿ (+)