ಭಾನುವಾರ, ಮೇ 16, 2021
22 °C

ಮೇಲುಸೇತುವೆಗೆ ಮೇಲ್ಛಾವಣಿ ಹೊದಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಬಸ್ ನಿಲ್ದಾಣ, ಕೆಂಪೇಗೌಡನಗರ ಸಾರಿಗೆ ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಗಳು ಮೆಜೆಸ್ಟಿಕ್‌ನಲ್ಲಿ ಒಂದೇ ಭಾಗದಲ್ಲಿವೆ. ಅವುಗಳಿಗೆ ತಲುಪಲು ಸುರಂಗ ಸೇತುವೆಗಳನ್ನು ನಿರ್ಮಿಸಲಾಗಿದೆ.ಕೇಂದ್ರ ಬಸ್ ನಿಲ್ದಾಣ, ನಗರ ಬಸ್ ನಿಲ್ದಾಣಗಳಲ್ಲಿ ಬಸ್‌ಗಳ ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ಪ್ರಯಾಣಿಕರು ವಿವಿಧ ಪ್ಲಾಟ್‌ಫಾರ್ಮ್‌ಗಳಿಗೆ ಹೋಗಿ ಬರಲು ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಪ್ಲಾಟ್‌ಫಾರ್ಮ್‌ಗಳಿಗೆ ಹೋಗಲು ಮೇಲುಸೇತುವೆ ನಿರ್ಮಿಸಲಾಗಿದೆ. ಈ ಸೇತುವೆ ಬಸ್ ನಿಲ್ದಾಣದ ಎರಡೂ ಭಾಗಗಳಿಗಿರುವ ರಸ್ತೆ ಮುಖಾಂತರ ವಿವಿಧ ಪ್ಲಾಟ್‌ಫಾರ್ಮ್ ತಲುಪಲು ವಯೋವೃದ್ಧರು, ಗರ್ಭಿಣಿಯರು, ಮಕ್ಕಳಿಗೆ ತುಂಬಾ ಅನುಕೂಲಕರವಾಗಿದೆ.ಬೇಸಿಗೆ ಹಾಗೂ ಮಳೆಗಾಲದಲ್ಲಿ ಮೇಲುಸೇತುವೆಯ ಮೇಲ್ಭಾಗದಲ್ಲಿ ಛಾವಣಿ ಇರದ ಕಾರಣ ಸೇತುವೆ ಬಳಸುವ ಪ್ರಯಾಣಿಕರಿಗೆ ಬಿಸಿಲು ಹಾಗೂ ಮಳೆಯಿಂದಾಗಿ ತುಂಬಾ ತೊಂದರೆಯಾಗುತ್ತಿದೆ. ಮೇಲು ಸೇತುವೆಗಳನ್ನು ಸರ್ವಋತುಗಳಲ್ಲೂ ಸದುಪಯೋಗ ಮಾಡಿಕೊಳ್ಳಲು ಅದನ್ನು ಸೂಕ್ತ ರೀತಿಯಲ್ಲಿ ಬಳಸಲು ಸೇತುವೆಗೆ ಮೇಲ್ಛಾವಣಿ ನಿರ್ಮಿಸುವುದು ಅವಶ್ಯಕ. ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ಆದರೂ ಉಪಯೋಗವಾಗಿಲ್ಲ.ಜನಪ್ರತಿನಿಧಿಗಳು, ಜನಪರ ಕಾಳಜಿ ಹೊಂದಿರುವ ಸಂಘಟನೆಗಳು ಈ ಕುರಿತು ಜಾಗೃತರಾಗಿ ಮೇಲುಸೇತುವೆಗೆ ಛಾವಣಿಯನ್ನು ನಿರ್ಮಿಸಲು ಸಂಬಂಧಪಟ್ಟ ಅಧಿಕಾರಿಗಳ ಮನ ಒಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಇದರಿಂದಾಗಿ ಪ್ರಯಾಣಿಕರಿಗೆ ನೆರಳು ಹಾಗೂ ಮಳೆಯಿಂದ ರಕ್ಷಣೆ ಸಿಗುತ್ತದೆ.

-ಬಸವರಾಜ ಹುಡೇದಗಡ್ಡಿಕಾಳಸಂತೆಯಲ್ಲಿ ಸಿನಿಮಾ ಟಿಕೆಟ್


ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳನ್ನು ವೀಕ್ಷಿಸುವವರ ಸಂಖ್ಯೆ ಕಡಿಮೆಯಾಗುತ್ತಿರುವ ಈ ದಿನಮಾನದಲ್ಲಿ ಹೊಸ ಕನ್ನಡ ಚಿತ್ರಗಳನ್ನು ನೋಡಲು ಹೋದರೆ ಅರ್ಧಗಂಟೆ ಮುಂಚೆಯೇ ಟಿಕೆಟ್ ಸಿಗುವುದಿಲ್ಲ. `ಸೋಲ್ಡ್ ಔಟ್' ಬೋರ್ಡ್ ನೇತುಹಾಕಿರುತ್ತಾರೆ.ಅಂದರೆ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿರುವುದಿಲ್ಲ, ಬದಲಿಗೆ ಕಾಳಸಂತೆಯಲ್ಲಿ (ಬ್ಲಾಕ್)ಮಾರುವವರಿಗೆ ಇಂತಿಷ್ಟು ಕಮಿಷನ್ ನೀಡುವಂತೆ ಮಾತನಾಡಿಕೊಂಡು ಥಿಯೇಟರ್‌ನವರೇ ಕೊಟ್ಟಿರುತ್ತಾರೆ ಎಂಬ ಆರೋಪಗಳಿವೆ. ಅವರು ಎಂಬತ್ತು ರೂಪಾಯಿ ಟಿಕೆಟ್‌ಗೆ ರೂ.120ರಿಂದ 150ರವರೆಗೆ ಮಾರುತ್ತಾರೆ. ಅಲ್ಲದೆ ಸಿನಿಮಾ ನೋಡಲು ಬರುವವರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ.ಇತ್ತೀಚೆಗೆ ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್‌ಗೆ `ಬುಲ್ ಬುಲ್' ಹಾಗೂ ವೀರೇಶ್ ಚಿತ್ರಮಂದಿರದಲ್ಲಿ `ಕಡ್ಡಿಪುಡಿ' ಚಿತ್ರಗಳನ್ನು ವೀಕ್ಷಿಸಲು ಹೋದಾಗ ಆದ ಅನುಭವಗಳಿವು. ರಾಜ್ಯದಲ್ಲೇ ಕನ್ನಡ ಸಿನಿಮಾಗಳನ್ನು ವೀಕ್ಷಿಸುವವರ ಸಂಖ್ಯೆ ಕಡಿಮೆಯಾಗುತ್ತಿರುವಾಗ ಇಂಥ ಬ್ಲಾಕ್ ಟಿಕೆಟ್‌ಗಳನ್ನು ಮಾರುವವರನ್ನು ನಿಯಂತ್ರಿಸಬೇಕಿದೆ. ಇನ್ನಾದರೂ ಥಿಯೇಟರ್‌ಗಳ ಮಾಲೀಕರು ಹಾಗೂ ಪೊಲೀಸರು ಎಚ್ಚೆತ್ತುಕೊಂಡು ಇಂಥ ಮಾರಾಟಗಾರರನ್ನು ನಿಯಂತ್ರಿಸಬೇಕು.

-ವರದರಾಜ್, ಶಿವನಹಳ್ಳಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.