ಮಂಗಳವಾರ, ಜೂನ್ 22, 2021
22 °C

ಮೇಲು-ಕೀಳು ಭೇದವಿಲ್ಲ

ಪ್ರಜಾವಾಣಿ ವಾರ್ತೆ ಕಾಶೀನಾಥ ಬಿಳಿಮಗ್ಗದ Updated:

ಅಕ್ಷರ ಗಾತ್ರ : | |

ಮುಂಡರಗಿ: ಮೇಲು ಕೀಳೆಂಬ ತಾರತಮ್ಯವನ್ನು ಹೊಡೆದೋಡಿಸುವ ನಿಟ್ಟಿನಲ್ಲಿ ಮುಂಡರಗಿ ಪಟ್ಟಣದ ಲಕ್ಷ್ಮಿಕನಕನರಸಿಂಹ ದೇವಸ್ಥಾನ ಒಂದು ಉತ್ತಮ ಉದಾಹರಣೆಯಾಗಿದೆ.ಪಟ್ಟಣದ ವಿ.ಎಲ್.ನಾಡಗೌಡರ (ಮುಂಡರಗಿ ಮಂಡಗೈ ಭೀಮರಾಯನ ವಂಶಜರು) ಮೇಲುಸ್ತುವಾರಿಯಲ್ಲಿ ಪ್ರತಿವರ್ಷ ಹೋಳಿ ಹುಣ್ಣಿಮೆ ನಂತರ ಜರುಗುವ ಜಾತ್ರಾ ಮಹೋತ್ಸವದಲ್ಲಿ ದಲಿತರನ್ನು ಒಳಗೊಂಡಂತೆ ಎಲ್ಲ ಜಾತಿಯ ಜನರು ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳುತ್ತಾರೆ. ಆ ಮೂಲಕ ಲಕ್ಷ್ಮಿಕನಕ ನರಸಿಂಹ ಜಾತ್ರೆಯನ್ನು ಜಾತ್ಯತೀತ ಜಾತ್ರೆ ಯನ್ನಾಗಿ ಮಾರ್ಪಡಿಸಿದ್ದಾರೆ.ಮಹಾರಥೋತ್ಸವದ ಹಿಂದಿನ ದಿನ ಮುಂಜಾನೆ ಬ್ರಾಹ್ಮಣರು ಲಕ್ಷ್ಮಿ ಕನಕನರಸಿಂಹನಿಗೆ ಪೂಜೆ ಸಲ್ಲಿಸಿ ಆರತಿ ಬೇಳಗುತ್ತಾರೆ. ಸಂಜೆ ನಾಲ್ಕು ಗಂಟೆಗೆ ಕುರುಬರು, ಆರೇರು ಮತ್ತಿತರ ಜಾತಿಯ ಜನರು ಪೂಜೆ ಸಲ್ಲಿಸಿ ಆರತಿ ಬೆಳಗುತ್ತಾರೆ.ಮಹಾರಥೋತ್ಸವದ ದಿವಸ ಮುಂಜಾನೆ ಎಂಟು ಗಂಟೆಗೆ ಕನಕ ರಾಯನ ಗುಡ್ಡಕ್ಕೆ ತೆರಳುವ ದಲಿತರು ಲಕ್ಷ್ಮಿಕನಕ ನರಸಿಂಹನಿಗೆ ಪೂಜೆ ಸಲ್ಲಿಸಿ ವಿಶೇಷವಾದ ಗರುಡಾರುತಿ (ಕೆಲವರು ಇದಕ್ಕೆ ಗಂಡಾರುತಿ ಎಂತಲೂ ಕರೆಯುತ್ತಾರೆ) ಬೆಳಗುತ್ತಾರೆ. ದಲಿತರು ಗರುಡಾರುತಿ ಬೆಳಗಿದ ನಂತರವೇ ದೇವರನ್ನು ಗರ್ಭ ಗುಡಿಯಿಂದ ಹೊರಗೆ ತಂದು ನಂತರದ ಧಾರ್ಮಿಕ ಕಾರ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಮುಂಜಾನೆ ಪಟ್ಟಣದ ದಲಿತ ಕೇರಿಯಲ್ಲಿರುವ ಮಜ್ಜೂರಮ್ಮದ ದೇವ ಸ್ಥಾನದಲ್ಲಿ ಜಮಾಯಿಸುವ ದಲಿತರು ಸಕಲ ಮಂಗಳವಾದ್ಯಗಳೊಂದಿಗೆ ಗರುಡಾರತಿ ಸಮೇತ ಮೆರವಣಿಗೆಯ ಮೂಲಕ ಕನಕಪ್ಪನ ಗುಡ್ಡಕ್ಕೆ ತೆರಳುತ್ತಾರೆ. ಅಲ್ಲಿ ಗಂಡು ಹೆಣ್ಣೆಂಬ ಭೇದವಿಲ್ಲದೆ ಎಲ್ಲರೂ ಪೂಜೆ ಸಲ್ಲಿಸಿ ಗರುಡಾರುತಿ ಬೆಳಗುತ್ತಾರೆ. ದಲಿತರು ಗರುಡಾರುತಿ ಬೆಳಗಿದ ನಂತರವೇ ಇನ್ನುಳಿದ ಅಂದಿನ ಧಾರ್ಮಿಕ ಚಟುವಟಿಕೆಗಳು ಪ್ರಾರಂಭವಾಗುತ್ತವೆ.`ಲಕ್ಷ್ಮಿಕನಕನರಸಿಂಹನಿಗೆ ಎಲ್ಲ ಜಾತಿಗಳೂ ಒಂದೇ. ಆ ಕಾರಣದಿಂದ ನಾವು ತಲೆ ತಲಾಂತರದಿಂದ ಜಾತ್ರಾ ಮಹೋತ್ಸವದ ವಿವಿಧ ಧಾರ್ಮಿಕ ಆಚರಣೆಗಳನ್ನು ಯಾವುದೇ ಜಾತಿ ಭೇದವೆಣಿಸದೆ ಎಲ್ಲರೂ ಪಾಲ್ಗೊಳ್ಳು ವಂತೆ ನೋಡಿಕೊಳ್ಳುತ್ತೇವೆ~ ಎನು ತ್ತಾರೆ ಜಾತ್ರೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಭೀಮರಾಯನ ವಂಶಜರಾದ ವಿ.ಎಲ್.ನಾಡಗೌಡರ.`ಎಲ್ಲ ಗುಡ್ಯಾಗೂ ನಾವು ಹೊರಗ ನಿಂತ ದೇವ್ರಿಗೆ ಶರಣ ಮಾಡ್ತಿವ್ರಿ, ಪೂಜಾ ಗೀಜಾ ಏನು ಮಾಡೋದಿಲ್ರಿ. ಆದ್ರ ಇಲ್ಲಿ ಮಾತ್ರ ಹಳೆ ಕಾಲ್ದಾಗಿಂದ ನಾವ್ ಸ್ವತಃ ಕನಕಪ್ಪಗ ಗಂಡಾರತಿ ಬೆಳಗತೇವ್ರಿ. ದೇವ್ರೇನು ಎಲ್ಲ ಕಡಿಗೆ ಅದಾನ್ರಿ, ಆದ್ರ ಇಲ್ಲಿ ನಾವು ಸ್ವತಃ ಆರತಿ ಬೆಳಗಾದು ಭಾಳ ಸಂತೋಷ ಆಕೈತ್ರಿ~ ಎಂದು ದಲಿತ ಮಹಿಳೆ ದುರುಗವ್ವ ಹರಿಜನ ಪ್ರಜಾವಾಣಿಯೊಂದಿಗೆ ಸಂತಸ ಹಂಚಿಕೊಂಡಳು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.