ಮೇಲ್ಮಟ್ಟದಲ್ಲೇ ದುಡ್ಡು ಹೊಡೆಯುವ ಸ್ಕೀಂ

7
ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಶಾಸಕ ಶಾಂತನಗೌಡ ಉವಾಚ

ಮೇಲ್ಮಟ್ಟದಲ್ಲೇ ದುಡ್ಡು ಹೊಡೆಯುವ ಸ್ಕೀಂ

Published:
Updated:

ಹೊನ್ನಾಳಿ: ತಾಲ್ಲೂಕು ಪಂಚಾಯ್ತಿ ಸಭಾಂಗಣ(ಸಾಮರ್ಥ್ಯಸೌಧ)ದಲ್ಲಿ ಬುಧವಾರ ಶಾಸಕ ಡಿ.ಜಿ.ಶಾಂತನಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಕೃಷಿ ಇಲಾಖೆ ವಿವಿಧ ಪರಿಕರಗಳಿಗೆ ನೀಡುವ ಸಹಾಯಧನದ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯಿತು.ಶಾಸಕ ಡಿ.ಜಿ.ಶಾಂತನಗೌಡ ಹಾಗೂ ಸಹಾಯಕ ಕೃಷಿ ನಿದೇರ್ಶಕ ಡಾ.ಎಚ್‌.ಆರ್‌.ರೇವಣಸಿದ್ದನಗೌಡ ಮಧ್ಯೆ ನಡೆದ ಚರ್ಚೆಯ ಪೂರ್ಣ ಪಾಠ ಇಲ್ಲಿದೆ.ಶಾಸಕ ಡಿ.ಜಿ.ಶಾಂತನಗೌಡ: ಕೃಷಿ ಪರಿಕರಗಳಿಗೆ ಸರ್ಕಾರ ಎಷ್ಟು ಸಹಾಯಧನ ನೀಡುತ್ತದೆ?ಸಹಾಯಕ ಕೃಷಿ ನಿದೇರ್ಶಕ ಡಾ.ಎಚ್‌.ಆರ್‌.ರೇವಣಸಿದ್ದನಗೌಡ: ಸರ್‌, ಒಂದೊಂದು ಪರಿಕರಕ್ಕೆ ಬೇರೆ ಬೇರೆ ಪ್ರಮಾಣದಲ್ಲಿ ಸಹಾಯಧನ ನೀಡಲಾಗುತ್ತದೆ. ಅದನ್ನು ನಿಗದಿಪಡಿಸುವುದು ನಾವಲ್ಲ. ರಾಜ್ಯಮಟ್ಟದಲ್ಲಿಯೇ ಅದನ್ನು ನಿಗದಿಪಡಿಸುತ್ತಾರೆ.ಶಾಂತನಗೌಡ: ಫಲಾನುಭವಿ ರೈತರಿಂದ ಪಡೆದ ಹಣಕ್ಕೆ ರಸೀದಿ ನೀಡುತ್ತೀರಾ?ರೇವಣಸಿದ್ದನಗೌಡ: ಇಲ್ಲ ಸರ್, ದೊಡ್ಡ ಪ್ರಮಾಣದಲ್ಲಿ ಕೃಷಿ ಪರಿಕರಗಳನ್ನು ರಾಜ್ಯಮಟ್ಟದಲ್ಲಿಯೇ ಖರೀದಿಸುವ ಕಾರಣ ಬಿಲ್‌ ನೀಡುವ ವ್ಯವಸ್ಥೆ ಇಲ್ಲ. ಕೃಷಿ ಪರಿಕರಗಳ ಖರೀದಿ ಮತ್ತು ದರದ ಬಗ್ಗೆ ಜಂಟಿ ಕೃಷಿ ನಿರ್ದೇಶಕರಿಗೂ ಮಾಹಿತಿ ಇರುವುದಿಲ್ಲ. ದರ ನಿಗದಿ, ಖರೀದಿ ಸೇರಿದಂತೆ ಎಲ್ಲವನ್ನೂ ರಾಜ್ಯಮಟ್ಟದಲ್ಲಿಯೇ ಮಾಡುವುದರಿಂದ ನಮಗೆ ಏನೂ ಗೊತ್ತಾಗುವುದಿಲ್ಲ. ರೈತರು ಅಪೇಕ್ಷಿಸಿದರೆ, ರಾಜ್ಯಮಟ್ಟದಲ್ಲಿ ಖರೀದಿಸಿರುವ ಬಿಲ್‌ನ ಪ್ರತಿಯನ್ನು ನೀಡಲಾಗುವುದು.ಶಾಂತನಗೌಡ: ಸರಿ ಬಿಡಿ. ಇದೆಲ್ಲಾ ಮೇಲ್ಮಟ್ಟದ ವ್ಯವಹಾರ. ‘ಮೇಲ್ಮಟ್ಟದಲ್ಲೇ ದುಡ್ಡು ಹೊಡೆಯುವ ಒಂದು ಉತ್ತಮ ಸ್ಕೀಂ’ ಎನ್ನುತ್ತಿದ್ದಂತೆ ಇಡೀ ಸಭೆ ನಗೆಗಡಲಲ್ಲಿ ತೇಲಿತು.ಕಳಪೆ ಬಿತ್ತನೆ ಬೀಜ ವಿತರಣೆಯಿಂದಾಗಿ ಮೆಕ್ಕೆಜೋಳದ ಬೆಳೆ ಹಾಳಾಗಿದೆ. ರೈತರು ತೀವ್ರ ನಷ್ಟ ಅನುಭವಿಸುವಂತಾಗಿದೆ ಎಂದು ಸದಸ್ಯರಾದ ಬಿ.ಜಿ.ಕಾಂತರಾಜ್‌, ಟಿ.ಎಸ್‌.ಕೃಷ್ಣಪ್ಪ, ರಮೇಶ್‌ ದಾಸಳ್ಳಿ, ಎಚ್‌.ಎಂ.ಗಿರೀಶ್‌ ಆಕ್ರೋಶ ವ್ಯಕ್ತಪಡಿಸಿದರು.ನ್ಯಾಮತಿ ಕ್ಷೇತ್ರದ ಸದಸ್ಯೆ ಭಾರತೀ ಚಂದ್ರಶೇಖರ್‌ ಮಾತನಾಡಿ, ನ್ಯಾಮತಿ ಗ್ರಾಮ ಪಂಚಾಯ್ತಿಯಲ್ಲಿ ಪಿಡಿಒ ವಿಜಯ್‌ಕುಮಾರ್‌ ಸೇರಿದಂತೆ ಯಾವುದೇ ಸಿಬ್ಬಂದಿ ಜನಪ್ರತಿನಿಧಿಗಳಿಗೆ ಗೌರವ ನೀಡುವುದಿಲ್ಲ. ನ್ಯಾಮತಿಯ ಶಿವಾನಂದಪ್ಪ ಬಡಾವಣೆಯಲ್ಲಿ ವಿದ್ಯುತ್‌ ಸೌಲಭ್ಯ ಇಲ್ಲದೇ ಸಾರ್ವಜನಿಕರು ಪರದಾಡುತ್ತಿದ್ದ ಸಮಯದಲ್ಲಿ ತಾವು ಪಿಡಿಒ ಸಂಪಕಿರ್ಸಲು ಪ್ರಯತ್ನಿಸಿದರೆ, ಮೊಬೈಲ್‌ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಹೀಗಾದರೆ ನಾವು ಜನತೆಗೆ ಏನೆಂದು ಉತ್ತರ ನೀಡಬೇಕು ಎಂದು ಪ್ರಶ್ನಿಸಿದರು.ತಾಲ್ಲೂಕು ಪಂಚಾಯ್ತಿ ಇಒ ಎಚ್‌.ಹುಲಿರಾಜ್‌ ಮಾತನಾಡಿ, ಈ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ಸಭೆಗೆ ತಿಳಿಸಿದರು.ಸಹಾಯಕ ತೋಟಗಾರಿಕಾ ನಿರ್ದೇಶಕ ಚನ್ನವೀರಪ್ಪ ಮಾತನಾಡಿ, ರೈತರು ತೋಟಗಾರಿಕಾ ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಬೇಕು. ಹೈಬ್ರಿಡ್‌ ತಳಿ ಟೊಮ್ಯಾಟೋ ಬೆಳೆದರೆ ಪ್ರತಿ ಹೆಕ್ಟೇರ್‌ಗೆ ` 28ಸಾವಿರ ಸಹಾಯಧನ ನೀಡಲಾಗುತ್ತದೆ. ಇದೇ ರೀತಿ, ವಿವಿಧ ತರಕಾರಿಗಳ ಬಿತ್ತನೆ ಬೀಜಗಳನ್ನು ವಿತರಿಸಲಾಗುವುದು. ತಾಲ್ಲೂಕು ಪಂಚಾಯ್ತಿ ಸದಸ್ಯರು ಶಿಫಾರಸು ಮಾಡಿದರೆ ಸೌಲಭ್ಯ ನೀಡುವುದಾಗಿ ತಿಳಿಸಿದರು.ಸಾಮಾಜಿಕ ಅರಣ್ಯ ಅಧಿಕಾರಿ ವಿಜಯ್‌ಕುಮಾರ್‌ ಇಲಾಖೆಯ ವತಿಯಿಂದ ಹಮ್ಮಿಕೊಂಡಿರುವ ಅರಣ್ಯೀಕರಣದ ಬಗ್ಗೆ ವಿವರಿಸಿದರು. ಸದಸ್ಯರೆಲ್ಲರೂ ಇದಕ್ಕೆ ಒಕ್ಕೊರಲ ವಿರೋಧ ವ್ಯಕ್ತಪಡಿಸಿದರು. ಸಸಿ ನೆಟ್ಟಿರುವುದು ಕೇವಲ ಪುಸ್ತಕದಲ್ಲಿ ಮಾತ್ರ ದಾಖಲಾಗಿದೆ. ಸ್ಥಳದಲ್ಲಿ ಗಿಡಗಳೇ ಇರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರಭಾವತಿ ಬಾಯಿ ಜುಂಜಾನಾಯ್ಕ, ಉಪಾಧ್ಯಕ್ಷೆ ವಿಶಾಲಾಕ್ಷಮ್ಮ ಆಲ್ಬರ್ಟ್ ಹಾಗೂ  ಎಲ್ಲಾ ಕ್ಷೇತ್ರಗಳ ತಾಲ್ಲೂಕು ಪಂಚಾಯ್ತಿ ಸದಸ್ಯರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry