ಶುಕ್ರವಾರ, ಆಗಸ್ಟ್ 23, 2019
21 °C
ಜನಪ್ರತಿನಿಧಿಗಳ ವಿರುದ್ಧ ಸುಪ್ರೀಂಕೋರ್ಟ್ ತೀರ್ಪು

ಮೇಲ್ಮನವಿ, ತಿದ್ದುಪಡಿಗೆ ಸರ್ಕಾರ ನಿರ್ಧಾರ

Published:
Updated:

ನವದೆಹಲಿ (ಪಿಟಿಐ, ಐಎಎನ್‌ಎಸ್): ಅಪರಾಧ ಹಿನ್ನೆಲೆಯ ಜನಪ್ರತಿನಿಧಿಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪುನರ್‌ಪರಿಶೀಲನೆಗೆ ಸರ್ಕಾರ ಮೇಲ್ಮನವಿ ಸಲ್ಲಿಸಲಿದ್ದು, ಜೊತೆಗೆ ಈಗಿರುವ ಕಾನೂನಿಗೆ ತಿದ್ದುಪಡಿ ಮಾಡುವ ಮೂಲಕ `ಶಾಸಕಾಂಗ ಪರಿಹಾರ' ಕಂಡುಕೊಳ್ಳಲು ನಿರ್ಧರಿಸಿದೆ ಎಂದು ಕೇಂದ್ರ ಕಾನೂನು ಸಚಿವ ಕಪಿಲ್ ಸಿಬಲ್ ತಿಳಿಸಿದರು.`ಶಿಕ್ಷೆಗೆ ಒಳಗಾಗುವ ಸಂಸದರು ಮತ್ತು ಶಾಸಕರನ್ನು ಸದನದಿಂದ ತಕ್ಷಣ ಅನರ್ಹಗೊಳಿಸಲು ಮತ್ತು ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧಿಸಲು ಸುಪ್ರೀಂಕೋರ್ಟ್ ನೀಡಿರುವ ಎರಡು ಆದೇಶಗಳ ಕುರಿತು ಚರ್ಚಿಸುವ ಮತ್ತು ಕೆಲವು ಪ್ರಮುಖ ಅಂಶಗಳನ್ನು ಕೋರ್ಟ್ ಕಡೆಗಣಿಸಿರುವುದನ್ನು ಮೇಲ್ಮನವಿಯಲ್ಲಿ ಗಮನಕ್ಕೆ ತರುವ ಬಗ್ಗೆ ಸರ್ಕಾರ ಚಿಂತಿಸಿದೆ. ಇದಲ್ಲದೆ, ಸಂಸತ್‌ನಲ್ಲಿ ತಿದ್ದುಪಡಿ ಮಸೂದೆ ಮಂಡಿಸುವ ಮೂಲಕ ಈಗಿನ ಕಾನೂನಿಗೆ ತಿದ್ದುಪಡಿ ತಂದು, `ಶಾಸಕಾಂಗ ಪರಿಹಾರ' ಹುಡುಕಿಕೊಳ್ಳಲು ಸರ್ಕಾರ ಬಯಸಿದೆ ಎಂದು ಹೇಳಿದರು.`ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ವಿವಿಧ ರಾಜಕೀಯ ಪಕ್ಷಗಳ ಜೊತೆ ಮಾತುಕತೆ ನಡೆದಿದ್ದು, ಯಾವುದೇ ನಿರ್ಧಾರವನ್ನು ಒಮ್ಮತದ ಆಧಾರದಲ್ಲಿ ಕೈಗೊಳ್ಳಲಾಗುತ್ತದೆ' ಎಂದು ಸಚಿವರು ಶುಕ್ರವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು. ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕುಗಳ (ಆರ್‌ಟಿಐ) ಕಾಯ್ದೆಯಿಂದ ಹೊರಗಿಡಲು ಕೇಂದ್ರ ಸಂಪುಟ ನಿರ್ಧರಿಸಿರುವುದನ್ನು ಸಿಬಲ್ ಬಲವಾಗಿ ಸಮರ್ಥಿಸಿಕೊಂಡರು.

ಸಾರ್ವಜನಿಕ ಆಡಳಿತಗಾರರಾಗಿ ಸರ್ಕಾರದಿಂದ ಅಪಾರ ಹಣ ಸ್ವೀಕರಿಸುವ ಆರು ರಾಷ್ಟ್ರೀಯ ಪಕ್ಷಗಳನ್ನು ಆರ್‌ಟಿಐ ವ್ಯಾಪ್ತಿಗೆ ಒಳಪಡಿಸುವ ಕೇಂದ್ರ ಮಾಹಿತಿ ಆಯೋಗದ (ಸಿಐಸಿ) ಆದೇಶದ ಬಗ್ಗೆ ಪ್ರಸ್ತಾಪಿಸಿ, ಇದು ಜಾರಿಯಾದಲ್ಲಿ ಯಾವ ರಾಜಕೀಯ ಪಕ್ಷವೂ ಕೆಲಸ ಮಾಡುವುದು ಕಷ್ಟ ಎಂದು ನುಡಿದರು.ಸಿಐಸಿ ಆದೇಶದ ಪ್ರಕಾರ, ರಾಜಕೀಯ ಪಕ್ಷಗಳು ತಮ್ಮ ಲೆಕ್ಕಪತ್ರ ಮತ್ತು ಇತರ ವಿವರಗಳನ್ನು ಅದರ ಮುಂದೆ ಘೋಷಿಸಬೇಕಿದೆ. ಆದರೆ ರಾಜಕೀಯ ಪಕ್ಷಗಳು ತಾವು ಪಡೆಯುವ ಕೊಡುಗೆಗಳ ವಿವರವನ್ನು ಈಗಾಗಲೇ ಚುನಾವಣಾ ಆಯೋಗಕ್ಕೆ ನೀಡುತ್ತಿವೆ. ಜೊತೆಗೆ ಅಧಿಕಾರಿಗಳಿಗೆ ಭಿನ್ನವಾಗಿ ಚುನಾವಣೆಯಲ್ಲಿ ಜನರ ಬಳಿಗೆ ಹೋಗಿ, ಮತ ಯಾಚಿಸುತ್ತವೆ ಎಂದು ಅವರು ಸ್ಮರಿಸಿದರು.ರಾಜಕೀಯ ಪಕ್ಷಗಳನ್ನು ಆರ್‌ಟಿಐ ಕಾಯ್ದೆಯಿಂದ ಹೊರಗಿಡಲು ಮತ್ತು ಯಾವುದೇ ರಾಜಕೀಯ ಪಕ್ಷಕ್ಕೂ ಸಿಐಸಿ ಆದೇಶ ಜಾರಿ ಕಡ್ಡಾಯವಲ್ಲ ಎಂದು ಕೇಂದ್ರ ನಿರ್ಣಯ ಕೈಗೊಂಡಿರುವ ಬಗ್ಗೆ ಸಚಿವರು ಪ್ರತಿಕ್ರಿಯಿಸಿದರು.  ಸಿಐಸಿ ಆದೇಶದ ವಿರುದ್ಧ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸುವ ಮತ್ತು ಆರ್‌ಟಿಐ ಕಾಯ್ದೆಗೆ ತಿದ್ದುಪಡಿ ತರುವ ಎರಡು ಪರ್ಯಾಯ ಮಾರ್ಗಗಳು ಸರ್ಕಾರದ ಮುಂದಿವೆ ಎಂದರು.

ಆರ್‌ಟಿಐ ಕಾರ್ಯಕರ್ತರ ಆಕ್ಷೇಪ

ರಾಜಕೀಯ ಪಕ್ಷಗಳನ್ನು ಪಾರದರ್ಶಕ ಕಾನೂನಿನಿಂದ ಹೊರಗಿಡಲು ಕೇಂದ್ರ ಸಂಪುಟ ತೀರ್ಮಾನಿಸಿರುವುದನ್ನು ಆರ್‌ಟಿಐ ಕಾಯ್ದೆ ಜಾರಿಗೆ ಹೋರಾಡಿದ ಕಾರ್ಯಕರ್ತರು ವಿರೋಧಿಸಿದ್ದಾರೆ. ಸರ್ಕಾರದ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮತ್ತು ಅದನ್ನು ಕೂಡಲೇ ವಾಪಸ್ ಪಡೆಯುವಂತೆ ಆಗ್ರಹಿಸಿ ಈ ತಿಂಗಳ 6ರಂದು ಇಲ್ಲಿನ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಅವರು ತೀರ್ಮಾನಿಸಿದ್ದಾರೆ. ಇದಲ್ಲದೆ, ಆಯಾ ರಾಜ್ಯಗಳಲ್ಲೂ ಕೇಂದ್ರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

Post Comments (+)