ಗುರುವಾರ , ಜನವರಿ 30, 2020
19 °C
ಚರ್ಚೆಗೆ ಸಿಗದ ಅವಕಾಶ: ಎಸ್‌ಪಿ ಅಡ್ಡಿ

ಮೇಲ್ಮನೆಯಲ್ಲಿ ಪರಿಷ್ಕೃತ ಲೋಕಪಾಲ ಮಸೂದೆ ಮಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಭ್ರಷ್ಟಾಚಾರ ತಡೆಯುವ ಉದ್ದೇಶದ ಲೋಕಪಾಲ ಮಸೂದೆಯನ್ನು ಕೆಲ ತಿದ್ದುಪಡಿಗ­ಳೊಂದಿಗೆ ಶುಕ್ರವಾರ ರಾಜ್ಯಸಭೆಯಲ್ಲಿ ಮಂಡಿಸಲಾಯಿತು. ಆದರೆ ಯುಪಿಎ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡುತ್ತಿ­ರುವ ಸಮಾಜವಾದಿ ಪಕ್ಷ (ಎಸ್‌ಪಿ) ಸದನದಲ್ಲಿ ತೀವ್ರ ಗದ್ದಲ ಉಂಟು ಮಾಡಿದ್ದರಿಂದಾಗಿ ಮಸೂದೆ ಮೇಲೆ ಚರ್ಚೆ ನಡೆಯಲೇ ಇಲ್ಲ.

ಸದನದಲ್ಲಿ ಕೇಂದ್ರದ ಸಿಬ್ಬಂದಿ ಖಾತೆ ರಾಜ್ಯ ಸಚಿವ ವಿ. ನಾರಾಯಣ ಸ್ವಾಮಿ ಮಸೂದೆ ಮಂಡಿಸಿ, ಚರ್ಚೆಗೆ ಸಹಕರಿಸು­ವಂತೆ ಸಂಸದರನ್ನು ವಿನಂತಿಸಿಕೊಂಡರು ‘ಆದರೆ ಈಗಿರುವ ರೂಪದಲ್ಲಿ ಮಸೂದೆ ಅಂಗೀಕಾರಕ್ಕೆ ಅವಕಾಶ ನೀಡು­ವುದಿಲ್ಲ. ಇದು ಪೊಲೀಸ್‌ ರಾಜ್‌ಗೆ ಕಾರಣವಾಗಬಹುದು’

 ಎಂದು ಎಸ್‌ಪಿ ಸಂಸದರು ಗದ್ದಲ ಆರಂಭಿ­ಸಿದರು. ಇದರ ನಡುವೆಯೇ, ಆಂಧ್ರ ವಿಭಜನೆ ವಿರೋಧಿಸಿ ಟಿಡಿಪಿ ಸಂಸದರು ಕೋಲಾಹಲ ಎಬ್ಬಿಸಿದರು. ಹೀಗಾಗಿ ಮಸೂದೆ ಮೇಲಿನ ಚರ್ಚೆ ಸಾಧ್ಯವಾಗಲಿಲ್ಲ.ರಾಜಕೀಯ ಪಕ್ಷಗಳಲ್ಲಿ ತೀವ್ರ ಭಿನ್ನಾಭಿಪ್ರಾಯ ಇದ್ದುದರಿಂದ ಮೂಲ ಮಸೂದೆ 2011ರ ಡಿಸೆಂಬರ್‌ನಿಂದ ರಾಜ್ಯಸಭೆಯಲ್ಲಿ ಅಂಗೀಕಾರವಾಗದೆ ಉಳಿದಿದೆ. ಅದಕ್ಕೆ ಲೋಕಸಭೆ ಆಗ ಅಂಗೀಕಾರ ನೀಡಿತ್ತು.ರಾಜ್ಯಸಭೆಯಲ್ಲಿ ಯುಪಿಎಗೆ ಬಹುಮತ ಇಲ್ಲ. ಅಲ್ಲದೆ ಪ್ರತಿಪಕ್ಷಗಳು ಮಸೂದೆ ಪರಿಷ್ಕರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಹೀಗಾಗಿ ಈಗ ಪರಿಷ್ಕೃತ ಮಸೂದೆ ಮಂಡಿಸಲಾಗಿತ್ತು. ಈ ಮಸೂದೆ ಒಂದು ವೇಳೆ 

ರಾಜ್ಯಸಭೆಯಲ್ಲಿ ಅಂಗೀಕಾರಗೊಂಡರೆ ಮತ್ತೆ ಲೋಕಸಭೆಯ ಮುಂದೆ ಹೋಗಬೇಕು.ಬಿಜೆಪಿ ಆಕ್ಷೇಪಗಳು: ಮಸೂದೆಯ ಕೆಲವು ಅಂಶಗಳಿಗೆ ಪ್ರತಿಪಕ್ಷ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಸಿಬಿಐಯ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸಂಸ್ಥೆಗಳನ್ನು ಹೊರತುಪಡಿಸಿ, ಸರ್ಕಾರದ ಅನುದಾನ ಪಡೆಯದ ಸಂಸ್ಥೆಗಳನ್ನೂ ಲೋಕಪಾಲ ವ್ಯಾಪ್ತಿಗೆ ತಂದಿರುವ ಅಂಶಗಳು ಬಿಜೆಪಿಯ ಅಸಮಾಧಾನಕ್ಕೆ ಕಾರಣವಾಗಿವೆ.ಲೋಕಪಾಲ ತನಿಖೆಗೆ ಆದೇಶಿಸಿದ ಪ್ರಕರಣಗಳ ತನಿಖಾಧಿಕಾರಿಯನ್ನು ಲೋಕಪಾಲದ ಅನುಮತಿ ಇಲ್ಲದೆ ವರ್ಗಾಯಿಸಬಾರದು ಎಂಬುದು ಬಿಜೆಪಿಯ ಆಗ್ರಹ.ಜೋಕ್‌ಪಾಲ’

‘ಲೋಕಪಾಲ ಮಸೂದೆ ಹೆಸ­ರಲ್ಲಿ ಯುಪಿಎ ಸರ್ಕಾರ ಜೋಕ್‌­ಪಾಲ ಮಸೂದೆ ಅಂಗೀಕರಿ­ಸಲು ಯತ್ನಿಸು­ತ್ತಿದೆ. ಇದು ದೇಶದ್ರೋಹ’ ಎಂದು ಆಮ್‌ ಆದ್ಮಿ ಪಕ್ಷ ಹೇಳಿದೆ.
ನಿರಶನ ನಿಲ್ಲದು’

ಜನ ಲೋಕಪಾಲ ಮಸೂದೆ ಅಂಗೀಕಾರಕ್ಕೆ ಆಗ್ರಹಿಸಿ ಭ್ರಷ್ಟಾಚಾರ ವಿರೋಧಿ ಹೋರಾಟ­ಗಾರ ಅಣ್ಣಾ ಹಜಾರೆ ನಡೆಸುತ್ತಿರುವ ನಿರಶನ ಶುಕ್ರವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಸಂಸತ್ತಿ­ನಲ್ಲಿ ‘ಜನಲೋಕಪಾಲ’ ಮಸೂದೆ  ಅಂಗೀಕಾರವಾಗುವ ತನಕ ನನ್ನ ನಿರಶನ ನಿಲ್ಲಿಸುವುದಿಲ್ಲ ಎಂದು ಅಣ್ಣಾ ಹಜಾರೆ ಶುಕ್ರವಾರ ಪುನರುಚ್ಚರಿಸಿದ್ದಾರೆ.

ಪ್ರತಿಕ್ರಿಯಿಸಿ (+)