ಮೇಲ್ಮನೆಯಲ್ಲೂ ಪ್ರತಿಧ್ವನಿ: ಪ್ರತಿಪಕ್ಷಗಳ ಧರಣಿ

7

ಮೇಲ್ಮನೆಯಲ್ಲೂ ಪ್ರತಿಧ್ವನಿ: ಪ್ರತಿಪಕ್ಷಗಳ ಧರಣಿ

Published:
Updated:

ಬೆಂಗಳೂರು: `ಬ್ಲೂ ಫಿಲಂ~ ಪ್ರಕರಣದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದು ಪ್ರತಿಪಕ್ಷಗಳು ಧರಣಿ ನಡೆಸಿದ್ದರಿಂದ ವಿಧಾನ ಪರಿಷತ್ತಿನ ಕಲಾಪವನ್ನು ಬುಧವಾರ ಎರಡು ಬಾರಿ ಮುಂದೂಡಲಾಯಿತು.

ಸದನ ಆರಂಭವಾಗುತ್ತಿದ್ದಂತೆಯೇ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು.ಮೋಟಮ್ಮ ಮಾತನಾಡಲು ಪ್ರಾರಂಭಿಸುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರು ಸರ್ಕಾರದ ವಿರುದ್ಧ `ಶೇಮ್ ಶೇಮ್~ ಎಂದು ಘೋಷಣೆ ಕೂಗಿದರು. ಅತ್ತ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಮುರುಗೇಶ ನಿರಾಣಿ, ವಿ. ಸೋಮಣ್ಣ, ಬಸವರಾಜ ಬೊಮ್ಮಾಯಿ, ಎಸ್.ಎ. ರಾಮದಾಸ್ ಕೂಡ ಏರಿದ ದನಿಯಲ್ಲಿ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದರು. ಇದರಿಂದ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದನ್ನು ಗಮನಿಸಿದ ಸಭಾಪತಿ ಡಿ.ಎಚ್. ಶಂಕರಮೂರ್ತಿ ಎದ್ದು ನಿಂತು, `ದಯಮಾಡಿ ಎಲ್ಲರೂ ಕುಳಿತುಕೊಳ್ಳಿ. ನನಗೇ ಮಾತನಾಡಲು ಅವಕಾಶ ನೀಡದಿದ್ದರೆ ಸದನ ಹೇಗೆ ನಡೆಸಲಿ? ನಾನು ಕೈಮುಗಿದು ಹೋಗುತ್ತೇನೆ. ಆಮೇಲೆ ನೀವೇ ಸದನ ನಡೆಸಿಕೊಳ್ಳಿ~ ಎಂದು ಖಾರವಾಗಿ ಹೇಳಿದರು.ನಂತರ ಸರ್ಕಾರದ ಪರವಾಗಿ ಹೇಳಿಕೆ ನೀಡಲು ಸಚಿವ ಕಾಗೇರಿ ಅವರಿಗೆ ಸಭಾಪತಿ ಅವಕಾಶ ನೀಡಿದರು. ಬಳಿಕ ಮೋಟಮ್ಮ ಅವರಿಗೂ ಮಾತನಾಡಲು ಅವಕಾಶ ಮಾಡಿಕೊಟ್ಟರಾದರೂ ವಿಸ್ತೃತ ಚರ್ಚೆಗೆ ಅವಕಾಶ ನೀಡಲಿಲ್ಲ. ಒಂದು ಹಂತದಲ್ಲಿ ಕಾಂಗ್ರೆಸ್‌ನ ವಿ.ಆರ್. ಸುದರ್ಶನ್ ಅವರು ಅಶ್ಲೀಲ ಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಉತ್ತರಿಸುವ ನೈತಿಕ ಹಕ್ಕು ಕಳೆದುಕೊಂಡಿದೆ ಎಂದು ಟೀಕಿಸಿದರು. ಅವರ ಹೇಳಿಕೆಗೆ ಕೆಲ ಸಚಿವರು ಆಕ್ಷೇಪಿಸಿದರು.ರಾಜಕೀಯ ದುರ್ಲಾಭ ಪಡೆಯಲು ಪ್ರತಿಪಕ್ಷಗಳು ವಿಷಯವನ್ನು ಬಳಸಿಕೊಳ್ಳುತ್ತಿವೆ ಎಂದು ಕಾಗೇರಿ ಟೀಕಿಸಿದರೆ, ಸಚಿವ ಬಸವರಾಜ ಬೊಮ್ಮಾಯಿ ಆಂಧ್ರದ ರಾಜ್ಯಪಾಲರಾಗಿದ್ದ ಎನ್.ಡಿ. ತಿವಾರಿ ಅವರ ಲೈಂಗಿಕ ಹಗರಣದ ಬಗ್ಗೆ ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.ಮೋಟಮ್ಮ ಅವರಿಗೆ ವಿಸ್ತೃತ ಚರ್ಚೆಗೆ ಅವಕಾಶ ನೀಡಲಿಲ್ಲ ಎಂದು ಪ್ರತಿಭಟಿಸಿ ಕಾಂಗ್ರೆಸ್ ಸದಸ್ಯರು ಸಭಾಪತಿಗಳ ಪೀಠದ ಮುಂಭಾಗಕ್ಕೆ ತೆರಳಿ ಧರಣಿ ನಡೆಸಿದರು. ಜೆಡಿಎಸ್ ಸದಸ್ಯರೂ ಕಾಂಗ್ರೆಸ್ ಸದಸ್ಯರನ್ನು ಹಿಂಬಾಲಿಸಿದರು. ಪ್ರತಿಪಕ್ಷಗಳ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಗದ್ದಲವೆಬ್ಬಿಸಿದ್ದರಿಂದ ಸಭಾಪತಿಗಳು ಸದನವನ್ನು ಮಧ್ಯಾಹ್ನ 3ಕ್ಕೆ ಮುಂದೂಡಿದರು. ನಂತರ ಮತ್ತೆ ಸದನ ಆರಂಭವಾದಾಗಲೂ ಪ್ರತಿಪಕ್ಷಗಳು ತಮ್ಮ ಪಟ್ಟು ಸಡಿಲಿಸದೆ ಪ್ರತಿಭಟನೆ ಮುಂದುವರಿಸಿದ್ದರಿಂದ ಕಲಾಪವನ್ನು 4.30ಕ್ಕೆ ಮುಂದೂಡಲಾಯಿತು.ಸಂಜೆ 5.15ಕ್ಕೆ ಮತ್ತೆ ಕಲಾಪ ಆರಂಭವಾದಾಗ ಧರಣಿ ಮುಂದುವರಿಯಿತು. ಕೆಲ ಕಾಲದ ನಂತರ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸದನಕ್ಕೆ ಬಂದರು. ಪ್ರತಿಪಕ್ಷಗಳ ಸದಸ್ಯರು ಮುಖ್ಯಮಂತ್ರಿಯವರ ಹೇಳಿಕೆಗೆ ಒತ್ತಾಯಿಸಿದವು. ಧರಣಿ ಹಿಂದಕ್ಕೆ ಪಡೆದರೆ ಹೇಳಿಕೆ ನೀಡುವುದಾಗಿ ಮುಖ್ಯಮಂತ್ರಿ ತಿಳಿಸಿದರು. ಬಳಿಕ ಎಲ್ಲ ಸದಸ್ಯರು ಧರಣಿ ಹಿಂದಕ್ಕೆ ಪಡೆದರು. ಮಂಗಳವಾರ ವಿಧಾನಸಭೆಯಲ್ಲಿ ನಡೆದ ವಿದ್ಯಮಾನ ಕುರಿತು ಸ್ಪೀಕರ್ ಅವರು ತನಿಖಾ ಸಮಿತಿ ರಚಿಸಿರುವುದನ್ನು ಪ್ರಕಟಿಸಿದ ಸದಾನಂದ ಗೌಡ, ಪ್ರಕರಣದಿಂದ ತಮಗೆ ನೋವು ಉಂಟಾಗಿದೆ ಎಂದರು. ಮೂವರು ಸಚಿವರ ರಾಜೀನಾಮೆಗೆ ಸೀಮಿತವಾಗಿ ಪ್ರತಿಪಕ್ಷಗಳ ಸದಸ್ಯರಿಗೆ ಮಾತನಾಡಲು ಅವಕಾಶ ನೀಡಲು ಒಪ್ಪಿಕೊಂಡರು.ಮೋಟಮ್ಮ ಅವರು ಮಾತು ಆರಂಭಿಸಿ, ಹಿಂದಿನ ಕೆಲ ಘಟನೆಗಳನ್ನು ಪ್ರಸ್ತಾಪಿಸಲು ಮುಂದಾದರು. ಅದಕ್ಕೆ ಆಡಳಿತ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಆಗ ಮತ್ತೆ ಕೋಲಾಹಲ ಸೃಷ್ಟಿಯಾಯಿತು. ಬಳಿಕ ಸುದರ್ಶನ್ ಮಾತನಾಡಿ, ಸರ್ಕಾರದ ರಾಜೀನಾಮೆಗೆ ಆಗ್ರಹಿಸಿದರು.ಆಗ ಮಾತಿನ ಚಕಮಕಿ ಹೆಚ್ಚಾಗಿ ಗದ್ದಲದ ವಾತಾವರಣ ಉಂಟಾಯಿತು. ಚರ್ಚೆಗೆ ಅಡ್ಡಿಪಡಿಸಿದ ಆಡಳಿತ ಪಕ್ಷ ಸದಸ್ಯರ ವರ್ತನೆಯನ್ನು ಖಂಡಿಸಿ ಪ್ರತಿಪಕ್ಷಗಳ ಸದಸ್ಯರು ಮತ್ತೆ ಧರಣಿ ಆರಂಭಿಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ತರುವ ಪ್ರಯತ್ನ ವಿಫಲವಾದಾಗ, ಸಭಾಪತಿಯವರು ಕಲಾಪವನ್ನು ಗುರುವಾರಕ್ಕಮುಂದೂಡಿದರು.

 

`ನೈತಿಕ ಅಧಃಪತನದ ಸೂಚನೆ~

ಬೆಂಗಳೂರು:  ಸದನದಲ್ಲಿ ಮೂವರು ಮಾಜಿ ಸಚಿವರು `ಬ್ಲೂ ಫಿಲಂ~ ವೀಕ್ಷಿಸಿದ ಘಟನೆ ನೈತಿಕ ಅಧಃಪತನದ ಸೂಚನೆ ಎಂದು ಜೆಡಿಎಸ್‌ನ ಹಿರಿಯ ಸದಸ್ಯ ಎಂ.ಸಿ. ನಾಣಯ್ಯ ವಿಧಾನ ಪರಿಷತ್ತಿನಲ್ಲಿ ವಿಷಾದಿಸಿದರು.

`ಕಾನೂನು ರೂಪಿಸುವ ನಾವೇ ಸದನದಲ್ಲಿ ನಿಯಮ ಉಲ್ಲಂಘಿಸುತ್ತಿರುವುದು ನೋವಿನ ಸಂಗತಿ. ಇದು ಕೇವಲ ಆಡಳಿತ ಅಥವಾ ವಿರೋಧ ಪಕ್ಷಗಳ ಘನತೆ ಪ್ರಶ್ನೆ ಅಲ್ಲ. ಇಡೀ ಸದನದ ಘನತೆ, ಸಾರ್ವಭೌಮತೆಯನ್ನೇ ಜನ ಪ್ರಶ್ನೆ ಮಾಡುವಂತಾಗಿದೆ~ ಎಂದು ನೊಂದು ನುಡಿದರು

ಕೂದಲೆಳೆ ಅಂತರದಲ್ಲಿ ಪಾರು

ಇನ್ನೂ ಕೆಲ ಸಚಿವರು ಸದನದಲ್ಲಿ `ಬ್ಲೂ ಫಿಲಂ~ ವೀಕ್ಷಣೆಯಲ್ಲಿ ಭಾಗಿಯಾಗಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕಿ ಮೋಟಮ್ಮ ಅವರು ಬುಧವಾರ ವಿಧಾನ ಪರಿಷತ್‌ನಲ್ಲಿ ಪರೋಕ್ಷವಾಗಿ ಹೇಳಿದರು.ಘಟನೆ ಕುರಿತು ಚರ್ಚೆಗೆ ಅವಕಾಶ ಕೋರಿ ಮಾತನಾಡುತ್ತಿದ್ದ ಅವರು ಒಂದು ಹಂತದಲ್ಲಿ, `ಇನ್ನೂ ಕೆಲವರು ಇದರಲ್ಲಿದ್ದರಂತೆ~ ಎಂದರು. ಆಗ ಕಾಂಗ್ರೆಸ್‌ನ ಹಿರಿಯ ಸದಸ್ಯ ವೀರಣ್ಣ ಮತ್ತಿಕಟ್ಟಿ ಅವರು, `ಉಮೇಶ್ ಕತ್ತಿ ಇಲ್ಲೇ ಇದ್ದರು. ಅಲ್ಲಿಗೆ ಹೋಗದೇ ತಪ್ಪಿಸಿಕೊಂಡರು~ ಎಂದು ಕತ್ತಿ ಅವರನ್ನು ಛೇಡಿಸಿದರು.ಕಣ್ಣೀರಿಟ್ಟ ಶಾಸಕರು
ತಲೆದಂಡಕ್ಕೆ ಒಳಗಾದ ಸಚಿವರು ಮಧ್ಯಾಹ್ನ ವಿಧಾನಸೌಧದಲ್ಲಿ ನಡೆದ ಪಕ್ಷದ ಶಾಸಕರ ಸಭೆಯಲ್ಲಿ ಕಣ್ಣೀರಿಟ್ಟ ಪ್ರಸಂಗವೂ ನಡೆದಿದೆ. `ಮೊಬೈಲ್‌ನಲ್ಲಿದ್ದ ವಿಡಿಯೊ ತುಣುಕು ನೋಡಿದ್ದೇ ದೊಡ್ಡ ತಪ್ಪಾಯಿತು. ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ಆಗಿದೆ ಎಂದು ಸವದಿ, ಪಾಟೀಲ ಅವರು ಕಣ್ಣೀರಿಟ್ಟರು.

ಬೊಮ್ಮಾಯಿ ದ್ವಿಪಾತ್ರಸಚಿವ ಬಸವರಾಜ ಬೊಮ್ಮಾಯಿ ದ್ವಿಪಾತ್ರ ನಿರ್ವಹಿಸುತ್ತಿದ್ದಾರೆಯೇ? ಮುಖ್ಯಮಂತ್ರಿ ಕುರ್ಚಿಯನ್ನು `ಹೈಜಾಕ್~ ಮಾಡಲು ಪ್ರಯತ್ನಿಸುತ್ತಿದ್ದಾರೆಯೇ?- ಹೀಗೆ ವಿಧಾನ ಪರಿಷತ್‌ನಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಎದುರಿನಲ್ಲೇ ಬೊಮ್ಮಾಯಿ ಅವರನ್ನು ಪ್ರಶ್ನಿಸಿದ ಮೋಟಮ್ಮ, ಆಡಳಿತ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿದರು. ಚರ್ಚೆಗೆ ಅವಕಾಶ ಕೋರಿ ಮಾತನಾಡುತ್ತಿದ್ದ ವೇಳೆ ಪ್ರತಿಪಕ್ಷಗಳಿಗೆ ಉತ್ತರ ನೀಡಲು ಬೊಮ್ಮಾಯಿ ಪದೇ ಪದೇ ಎದ್ದು ನಿಲ್ಲುತ್ತಿದ್ದರು.`ನಾನು ಒಂದೇ ಪಾತ್ರ ಮಾಡುತ್ತಿದ್ದೇನೆ. ಮುಖ್ಯಮಂತ್ರಿ ಕುರ್ಚಿಯನ್ನು `ಹೈಜಾಕ್~ ಮಾಡುತ್ತಿಲ್ಲ ಎಂದು ಬೊಮ್ಮಾಯಿ ಪ್ರತಿಕ್ರಿಯಿಸಿದರು.ಕಿತ್ತೂರ್, ಘಾಳಪ್ಪ...

ದೇವರಾಜ ಅರಸು ಸಂಪುಟದಲ್ಲಿ ಪೌರಾಡಳಿತ ಸಚಿವರಾಗಿದ್ದ ಆರ್.ಡಿ.ಕಿತ್ತೂರ ಮತ್ತು ಪಶುಸಂಗೋಪನೆ ಸಚಿವರಾಗಿದ್ದ ದೇವೇಂದ್ರಪ್ಪ ಘಾಳಪ್ಪ ಅವರು ಲೈಂಗಿಕ ಹಗರಣದಲ್ಲಿ ಸಿಲುಕಿ ರಾಜೀನಾಮೆ ನೀಡಿದ್ದರು.

ಮುಂದುವರಿದ ಸಚಿವರ ತಲೆದಂಡ

ಬೆಂಗಳೂರು:  ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲೇ ಶುರುವಾದ ಸಚಿವರ ತಲೆದಂಡ ಪ್ರಕ್ರಿಯೆ ಮುಖ್ಯಮಂತ್ರಿ ಬದಲಾವಣೆಯಾದ ನಂತರವೂ ಮುಂದುವರಿದಿದೆ.ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಎಂಟು ಮಂದಿ ಸಚಿವರ ರಾಜೀನಾಮೆ ಪಡೆಯಲಾಗಿತ್ತು.

ಲೈಂಗಿಕ ಹಗರಣದಲ್ಲಿ ಸಿಲುಕಿದ ಕಾರಣಕ್ಕೆ ಎಚ್.ಹಾಲಪ್ಪ, ವೈದ್ಯಕೀಯ ಆಸ್ಪತ್ರೆಗಳ ಸಿಬ್ಬಂದಿ ನೇಮಕ ಹಗರಣದಲ್ಲಿ ರಾಮಚಂದ್ರಗೌಡ, ಕೆಐಎಡಿಬಿ ಹಗರಣದಲ್ಲಿ ಕಟ್ಟಾಸುಬ್ರಹ್ಮಣ್ಯ ನಾಯ್ಡು ರಾಜೀನಾಮೆ ನೀಡಿದ್ದರು.`ಆಪರೇಷನ್ ಕಮಲ~ದಿಂದಾಗಿ ಬಿಜೆಪಿ ಸೇರಿದ ಉಮೇಶ್ ಕತ್ತಿ ಅವರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಎಸ್. ಕೆ.ಬೆಳ್ಳುಬ್ಬಿ; ವಿ.ಸೋಮಣ್ಣ ಅವರಿಗಾಗಿ ವಿ.ಎಸ್.ಕೃಷ್ಣಯ್ಯ ಶೆಟ್ಟಿ ಅವರ ರಾಜೀನಾಮೆ ಪಡೆಯಲಾಯಿತು. ಉಪ ಚುನಾವಣೆಯಲ್ಲಿ ಸೋತು ರಾಜೀನಾಮೆ ನೀಡಿದ್ದ ಸೋಮಣ್ಣ ವಿಧಾನ ಪರಿಷತ್‌ಗೆ ಆಯ್ಕೆಯಾದ ನಂತರ ಮತ್ತೆ ಸಂಪುಟಕ್ಕೆ ಸೇರಿದರು. ಅದೇ ರೀತಿ ಬಳ್ಳಾರಿಯ ರೆಡ್ಡಿಗಳ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ ಶೋಭಾ ಕರಂದ್ಲಾಜೆ ಸಹ ಪುನಃ ಸಂಪುಟಕ್ಕೆ ಸೇರ್ಪಡೆಯಾದರು.ಸಂಪುಟ ಪುನರ್‌ರಚನೆ ವೇಳೆ ಅರವಿಂದ ಲಿಂಬಾವಳಿ, ಶಿವನಗೌಡ ನಾಯಕ್, ಗೂಳಿಹಟ್ಟಿ ಶೇಖರ್ ಸ್ಥಾನ ಕಳೆದುಕೊಂಡರು. 2010ರ ಅಕ್ಟೋಬರ್‌ನಲ್ಲಿ ಬಿಜೆಪಿಯ ಕೆಲ ಶಾಸಕರು, ಪಕ್ಷೇತರರು ಬಂಡಾಯ ಎದ್ದ ಸಂದರ್ಭದಲ್ಲಿ ಪಕ್ಷೇತರರನ್ನು ಕೈಬಿಡಲಾಗಿತ್ತು.

 

ರಾಜೀನಾಮೆ ನೀಡಿದ ಸಚಿವರು

*ಎಸ್.ಕೆ.ಬೆಳ್ಳುಬ್ಬಿ

*ಎಸ್.ಎನ್.ಕೃಷ್ಣಯ್ಯಶೆಟ್ಟಿ

* ಕೆ.ಎಸ್.ಈಶ್ವರಪ್ಪ

*ರಾಮಚಂದ್ರಗೌಡ

* ಎಚ್.ಹಾಲಪ್ಪ

*ಕಟ್ಟಾ ಸುಬ್ರಹ್ಮಣ್ಯ ನಾಯ್ಡು

* ಲಕ್ಷ್ಮಣ ಸವದಿ

*ಸಿ.ಸಿ.ಪಾಟೀಲ

* ಜೆ.ಕೃಷ್ಣ ಪಾಲೆಮಾರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry