ಬುಧವಾರ, ಮೇ 12, 2021
18 °C

ಮೇಲ್ಮನೆಯಲ್ಲೂ ಬಿಜೆಪಿ ಸಭಾತ್ಯಾಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಮುಖ ಪ್ರತಿಪಕ್ಷವಾದ ಬಿಜೆಪಿ ಸದಸ್ಯರ ಸಭಾತ್ಯಾಗದ ನಡುವೆಯೇ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯವನ್ನು ಬುಧವಾರ ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಲಾಯಿತು.ಸಂಜೆ ಸದನಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಸದಸ್ಯರು ಪ್ರಸ್ತಾಪಿಸಿದ ವಿಷಯಗಳಿಗೆ ಉತ್ತರ ನೀಡಿದರು. ಮುಖ್ಯಮಂತ್ರಿಯವರ ಉತ್ತರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಡಿ.ವಿ.ಸದಾನಂದ ಗೌಡ ಅವರು, ಹಿಂದಿನ ಬಿಜೆಪಿ ಸರ್ಕಾರದ ಕುರಿತು ರಾಜ್ಯಪಾಲರು ಮಾಡಿರುವ ಟೀಕೆಗೆ ಸಂಬಂಧಿಸಿದ ಅಂಶಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿದರು.ಆದರೆ, ರಾಜ್ಯಪಾಲರ ಭಾಷಣವನ್ನು ಸಮರ್ಥಿಸಿಕೊಂಡ ಸಿದ್ದರಾಮಯ್ಯ, `ಬಿಜೆಪಿಯವರು ಈಗ ಏಕೆ ವಿರೋಧ ಪಕ್ಷದ ಸಾಲಿನಲ್ಲಿ ಕುಳಿತಿದ್ದಾರೆ ಎಂಬುದನ್ನು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಅಕ್ರಮ ಗಣಿಗಾರಿಕೆ, ಭ್ರಷ್ಟಾಚಾರ, ಮಂತ್ರಿಗಳೇ ಜೈಲಿಗೆ ಹೋಗಿದ್ದು ಮತ್ತಿತರ ಘಟನೆಗಳನ್ನು ಆಧರಿಸಿ ಅವರು ಹಿಂದಿನ ಸರ್ಕಾರದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದೆಲ್ಲವೂ ನಡೆದಿರುವುದೇ ನಿಜವಾದ ಮೇಲೆ, ಭಾಷಣವನ್ನು ತಿದ್ದುಪಡಿ ಮಾಡಲು ಆಗದು' ಎಂದರು.ನಂತರವೂ ಬಿಜೆಪಿ ಸದಸ್ಯರು ಪಟ್ಟು ಸಡಿಲಿಸಲಿಲ್ಲ. ಪಂಜಾಬ್ ವಿಧಾನ ಪರಿಷತ್‌ನಲ್ಲಿ ಹಿಂದೆ ರಾಜ್ಯಪಾಲರು ಮಾಡಿದ್ದ ಭಾಷಣಕ್ಕೆ ತಿದ್ದುಪಡಿ ತಂದಿರುವ ಘಟನೆಯನ್ನು ಉಲ್ಲೇಖಿಸಿದ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿ ಸ್ವಾಮಿ, `ಇಲ್ಲಿಯೂ ಅದೇ ಮಾದರಿಯಲ್ಲಿ ತಿದ್ದುಪಡಿ ಮಾಡಬೇಕು. ರಾಜ್ಯಪಾಲರನ್ನು ರಾಜಕೀಯ ಉದ್ದೇಶಕ್ಕೆ ದುರ್ಬಳಕೆ ಮಾಡಿಕೊಳ್ಳಬಾರದು' ಎಂದು ಆಗ್ರಹಿಸಿದರು. ಸರ್ಕಾರ ತಮ್ಮ ಬೇಡಿಕೆಗೆ ಮಣಿಯುವುದಿಲ್ಲ ಎಂಬುದನ್ನು ಅರಿತ ಸದಾನಂದ ಗೌಡ ಅವರು, ಪಕ್ಷದ ಎಲ್ಲ ಸದಸ್ಯರೊಂದಿಗೆ ಸದನದಿಂದ ಹೊರ ನಡೆದರು. ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ವಾಕ್ಸಮರವೂ ನಡೆಯಿತು. ನಂತರ ಜೆಡಿಎಸ್ ಸದಸ್ಯರ ಪ್ರಸ್ತಾಪಿಸಿದ್ದ ಕೆಲ ವಿಷಯಗಳಿಗೆ ಮುಖ್ಯಮಂತ್ರಿಯವರು ಸ್ಪಷ್ಟನೆ ನೀಡಿದರು.ವರದಿ ಜಾರಿಗೆ ಕ್ರಮ: ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ಸಲ್ಲಿಸಿರುವ ವರದಿಯ ಶಿಫಾರಸುಗಳನ್ನು ಜಾರಿ ಮಾಡಬೇಕು ಎಂಬ ಜೆಡಿಎಸ್‌ನ ಎಂ.ಸಿ.ನಾಣಯ್ಯ ಅವರ ಬೇಡಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, `ವರದಿಯನ್ನು ಇನ್ನೂ ನಮ್ಮ ಸರ್ಕಾರ ನೋಡಿಲ್ಲ. ವರದಿಯಲ್ಲಿನ ಎಲ್ಲ ಶಿಫಾರಸುಗಳನ್ನೂ ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು' ಎಂದರು. ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿರುವ 130 ಅಧಿಕಾರಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿರುವ ಕಡತಗಳು ಸರ್ಕಾರದಲ್ಲಿ ಬಾಕಿ ಇವೆ ಎಂಬ ಪ್ರಸ್ತಾಪಕ್ಕೆ ಉತ್ತರಿಸಿ, ಈ ಕುರಿತು ಪರಿಶೀಲನೆ ನಡೆಸಿ ಆರೋಪಪಟ್ಟಿ ಸಲ್ಲಿಕೆಗೆ ಅನುಮತಿ ನೀಡಲು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಆರಂಭವಾಗಿದೆ ಎಂಬ ಬಿಜೆಪಿ ಸದಸ್ಯರ ಟೀಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, `ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಗುಂಪುಗಾರಿಕೆ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ. ಬಿಜೆಪಿಯವರು ಅವರ ಸರ್ಕಾರದ ಅವಧಿಯನ್ನು ನೆನಪಿಸಿಕೊಂಡು ಈ ರೀತಿ ಹೇಳುತ್ತಿದ್ದಾರೆ' ಎಂದು ತಿರುಗೇಟು ನೀಡಿದರು.ಮುಖ್ಯಮಂತ್ರಿಯವರು ಸ್ಪಷ್ಟನೆ ನೀಡಿದ ಬಳಿಕ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯವನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.ಉಭಯ ಸದನಗಳು ಮುಂದಕ್ಕೆ

ಬೆಂಗಳೂರು
: ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯವನ್ನು ಅಂಗೀಕರಿಸಿದ ಬಳಿಕ ವಿಧಾನಮಂಡಲದ ಉಭಯ ಸದನಗಳನ್ನೂ ಅನಿರ್ದಿಷ್ಟ ಅವಧಿಗೆ ಮುಂದೂಡಲಾಯಿತು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಮಧ್ಯಾಹ್ನ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಕುರಿತ ಚರ್ಚೆಗೆ ಉತ್ತರಿಸಿದರು. ಬಳಿಕ ನಿರ್ಣಯವನ್ನು ಅಂಗೀಕರಿಸಲಾಯಿತು. ರಾತ್ರಿ 8 ಗಂಟೆಗೆ ಕಲಾಪ ಅಂತ್ಯಗೊಳಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, ಸದನದ ಕಲಾಪವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದರು. ವಿಧಾನ ಪರಿಷತ್‌ನಲ್ಲಿ ವಂದನಾ ನಿರ್ಣಯ ಅಂಗೀಕಾರ ಆಗುವಾಗ ರಾತ್ರಿ 9 ಗಂಟೆ ಮೀರಿತ್ತು. ಬಳಿಕ ಸದನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿರುವುದಾಗಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಪ್ರಕಟಿಸಿದರು. ಈ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ 11 ದಿನಗಳ ಕಾಲ ಮತ್ತು ವಿಧಾನ ಪರಿಷತ್‌ನಲ್ಲಿ 8 ದಿನಗಳ ಕಾಲ ಕಲಾಪ ನಡೆದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.